ಫಯಾಜ್ ಖಾನ್ ಸಂಗೀತದ ಮಹಾನ್ ಪ್ರತಿಭೆ.

ಫಯಾಜ್ ಖಾನ್ ಸಂಗೀತದ ಮಹಾನ್ ಪ್ರತಿಭೆ. ಅವರು ಸಾರಂಗಿ ವಾದನ, ತಬಲ ಹಾಗೂ ಗಾಯನ – ಈ ಮೂರು ಪ್ರಕಾರಗಳಲ್ಲೂ ಪ್ರಭುತ್ವ ಪಡೆದಿದ್ದಾರೆ.ಫಯಾಜ್ ಖಾನರು 1968ರ ಫೆಬ್ರುವರಿ 17ರಂದು ಧಾರವಾಡದಲ್ಲಿ ಜನಿಸಿದರು. ಅವರ ತಂದೆ ಉಸ್ತಾದ್ ಅಬ್ದುಲ್ ಖಾದರ್ ಖಾನ್. ತಾಯಿ ಜೈತುನ್‌ಬಿ ಅವರು. ಫಯಾಜ್ ಖಾನರಿಗೆ ತಂದೆಯೇ ಮೊದಲ ಗುರು. ಫಯಾಜ್ ಖಾನರ ತಾತ ಉಸ್ತಾದ್ ಷೇಕ್ ಅಬ್ದುಲ್ಲ ಅವರು ಹೈದರಾಬಾದಿನ ನವಾಬರ ಆಸ್ಥಾನದಲ್ಲಿ ಸಾರಂಗಿ ವಾದಕರಾಗಿ ಪ್ರಸಿದ್ಧಿ ಪಡೆದಿದ್ದರು. ಇಂದಿನ ದಿನದಲ್ಲೂ ಸಾರಂಗಿ ವಾದನ ಕಲೆಯನ್ನು ಜೀವಂತವಾಗಿರಿಸಿರುವವರಲ್ಲಿ ಫಯಾಜ್ ಖಾನ್ ಪ್ರಮುಖರು.ಫಯಾಜ್ ಖಾನರು ಪದ್ಮಭೂಷಣ ಖ್ಯಾತಿಯ ಸಾರಂಗಿ ವಾದಕ ಪಂ. ರಾಮನಾರಾಯಣರಿಂದ ಸಾರಂಗಿ ವಾದನ ಕಲಿತರು. ತಬಲಾ ವಾದನದಲ್ಲೂ ಫಯಾಜ್ ಖಾನರದು ಅದ್ಭುತ ಪ್ರತಿಭೆ. ಅವರು ಧಾರವಾಡದ ತಬಲ ವಾದಕರಾದ ಪಂ. ಬಸವರಾಜ ಬೆಂಡಿಗೇರಿಯವರಲ್ಲಿ ತಬಲ ಕಲಿಕೆಯ ಸಾಧನೆ ಮಾಡಿದರು. ಸಾರಂಗಿ ವಾದನ ಮತ್ತು ಅವರ ತಬಲಾ ವಾದನ ಪ್ರತಿಭೆಯ ಜೊತೆಗೆ ಗಾಯನದಲ್ಲೂ ಅಪ್ರತಿಮ ಪ್ರಭುತ್ವ ಸುಶ್ರಾವ್ಯತೆಗಳನ್ನು ಹೊರಹೊಮ್ಮಿಸುವ ಫಯಾಜ್ ಖಾನರ ಸಂಗೀತವೆಂದರೆ ಜನ ಎಲ್ಲೆಡೆ ಮುಗಿಬೀಳುತ್ತಾರೆ.ಉಸ್ತಾದ್ ಫಯಾಜ್ ಖಾನರಿಗೆ ಸಂದಿರುವ ಪ್ರಶಸ್ತಿ ಗೌರವಗಳು ಹಲವಾರು. ಎ.ಐ.ಆರ್.ನಿಂದ ರಾಷ್ಟ್ರೀಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗದಗ್‌ನ ಪುಟ್ಟರಾಜ ಕೃಪಾ ಭೂಷಣ ಪ್ರಶಸ್ತಿ, ಸಿತಾರ್ ವಾದಕ ಉಸ್ತಾದ್ ಹಮೀದ್ ಖಾನ್ ಸ್ಮರಣಾರ್ಥ ಸಂಗೀತ ಸಾಧಕ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಅವರಿಗೆ ಸಂದಿವೆ.ಹಲವಾರು ಚಲನಚಿತ್ರಗಳಲ್ಲಷ್ಟೇ ಅಲ್ಲದೆ, ಪ್ರಸಿದ್ಧ ‘ಮುಕ್ತ’ ಧಾರಾವಾಹಿಯನ್ನೂ ಒಳಗೊಂಡಂತೆ ಫಯಾಜ್ ಖಾನರ ಇನಿಧ್ವನಿ ಹಲವಾರು ಕಿರುತೆರೆಯ ಧಾರಾವಾಹಿಗಳಲ್ಲೂ ಹರಿದಿದೆ. ಚಲನಚಿತ್ರಗಳಲ್ಲಿ ಎ. ಆರ್. ರೆಹಮಾನರನ್ನೂ ಒಳಗೊಂಡಂತೆ ಬಹುತೇಕ ಸಂಗೀತ ನಿರ್ದೇಶಕರಿಗೆ ಸಾರಂಗಿ ವಾದನದ ಅವಶ್ಯಕತೆ ಉಂಟಾದಾಗಲೆಲ್ಲಾ ನೆನಪಾಗುವ ಮೊದಲ ಹೆಸರು ಫಯಾಜ್ ಖಾನ್. ಫಯಾಜ್ ಖಾನರ ಪುತ್ರ ಸರ್ಫರಾಜ್ ಖಾನ್ ಸಹಾ ಸಾರಂಗಿ ವಾದನದಲ್ಲಿ ಪ್ರಮುಖ ಯುವಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.ಫಯಾಜ್ ಖಾನರ ಶಾಸ್ತ್ರೀಯ ಸಂಗೀತವನ್ನು ಆಸ್ವಾದಿಸುವುದರೊಂದಿಗೆ ಅವರ ಸುನಾದದಲ್ಲಿ ದಾಸರ ಪದಗಳು ಮತ್ತು ಶರಣರ ವಚನಗಳನ್ನು ಕೇಳುವುದೊಂದು ಅಪ್ಯಾಯಮಾನವಾದ ಅನುಭವ. ಡಾ. ಎಸ್. ಎಲ್. ಭೈರಪ್ಪನವರ ಸಂಗೀತದ ಕುರಿತಾದ ‘ಮಂದ್ರ’ ಕಾದಂಬರಿಯ ಆಸ್ವಾದನೆಗಾಗಿ ಫಯಾಜ್ ಖಾನರು ನಡೆಸಿಕೊಟ್ಟ ಮಂದ್ರ ಸಂಗೀತ ಕಾರ್ಯಕ್ರಮಗಳೂ ಸಹಾ ಸಂಗೀತ ಮತ್ತು ಸಾಹಿತ್ಯ ಪ್ರಿಯರಿಗೆ ಮುದವಾದ ಅನುಭವ ನೀಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉದ್ಯೋಗಿಗಳಿಗೆ ಸಿಹಿ ಸುದ್ದಿ,

Fri Feb 17 , 2023
ಬೆಂಗಳೂರು:ಬಜೆಟ್‌ನಲ್ಲಿ ಉದ್ಯೋಗಿಗಳಿಗೆ ವೃತ್ತಿಪರ ತೆರಿಗೆಯಲ್ಲಿ  ಬದಲಾವಣೆ ಮಾಡಲಾಗಿದೆ. ಕಡಿಮೆ ವೇತನ ಪಡೆಯುವವರಿಗೆ ಅನುಕೂಲವಾಗುವಂತೆ, ವೃತ್ತಿಪರ ತೆರಿಗೆಯ ವಿನಾಯಿತಿಯ ಮಿತಿಯನ್ನು ಮಾಸಿಕ 15,000 ರೂ.ಗಳಿಂದ 25,000 ರೂ.ಗೆ ಏರಿಸಲಾಗಿದೆ. ಪ್ರಸ್ತುತ ಮಾಸಿಕ 15,000 ರೂ.ಗಿಂತ ಹೆಚ್ಚಿನ ವೇತನ ಪಡೆಯುವವರಿಗೆ ಮಾಸಿಕ 200 ರೂ. ವೃತ್ತಿಪರ ತೆರಿಗೆ ಇದೆ. ಇನ್ನು ಮುಂದೆ 25,000 ರೂ. ತನಕ ಸಂಬಳ ಪಡೆಯುವವರಿಗೆ ವಿನಾಯಿತಿ ಸಿಗಲಿದೆ. ಕರ ಸಮಾಧಾನ: ಜಿಎಸ್‌ಟಿ ಪೂರ್ವ ತೆರಿಗೆ ವಿವಾದಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಕರ […]

Advertisement

Wordpress Social Share Plugin powered by Ultimatelysocial