Ganesha Chaturthi 2023; ಗಣೇಶ ಪೆಂಡಾಲ್ ನಿರ್ಮಾಣಕ್ಕೆ ಸೂಚನೆಗಳು

ಡಿಕೇರಿ, ಸೆಪ್ಟೆಂಬರ್ 15; ಪರಿಸರ ಸ್ನೇಹಿಯಾಗಿ ಗೌರಿ-ಗಣೇಶ ಹಬ್ಬವನ್ನು ಆಚರಿಸಲು ಎಲ್ಲರೂ ಜಿಲ್ಲಾಡಳಿತದ ಜೊತೆ ಸಹಕರಿಸಬೇಕು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಕೊಡಗು ಜಿಲ್ಲಾಡಳಿತ ಮನವಿ ಮಾಡಿದೆ.

ಕೊಡಗು ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣೇಶ ಚತುರ್ಥಿ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಗಣಪತಿ ಪೆಂಡಾಲ್ ಸ್ಥಾಪನೆ, ವಿಗ್ರಹಗಳ ವಿಸರ್ಜನೆ ಮುಂತಾದ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಸಹ ಮಾಹಿತಿ ನೀಡಲಾಯಿತು.

ಪೌರಾಯುಕ್ತ ವಿಜಯ ಮಾತನಾಡಿ, ಗೌರಿ ಹಾಗೂ ಗಣೇಶ ಹಬ್ಬದ ಪ್ರಯುಕ್ತ, ಗೌರಿ ಹಾಗೂ ಗಣೇಶ ವಿಗ್ರಹಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವ ಮೊದಲು ಉತ್ಸವ ಆಯೋಜಕರು ಗಣೇಶ ಪ್ರತಿಷ್ಠಾಪನೆಗೆ ಅಗತ್ಯವಿರುವ ಸ್ಥಳ, ಪೆಂಡಾಲ್, ವಿದ್ಯುತ್ ಸಂಪರ್ಕ ಇನ್ನು ಮುಂತಾದ ವ್ಯವಸ್ಥೆಗಳನ್ನು ಮಾಡಿಕೊಳ್ಳುವ ಮುನ್ನ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯಬೇಕು ಎಂದರು.

ದಂಡ ವಿಧಿಸುವ ಎಚ್ಚರಿಕೆ ಗೌರಿ-ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡುವವರು ವಿಷಕಾರಿ ರಾಸಾಯನಿಕ ಲೋಹದ ಲೇಪದ ಪ್ಲಾಸ್ಟರ್ ಆಫ್ ಪ್ಯಾರೀಸ್, ಪರಿಸರಕ್ಕೆ ಹಾನಿ ಮಾಡುವಂತಹ ಸಾಮಾಗ್ರಿಗಳಿಂದ ತಯಾರಿಸಿದ ವಿಗ್ರಹಗಳನ್ನು ಬಳಸದೆ ಪರಿಸರ ಸ್ನೇಹಿ ಸಾದಾ ಜೇಡಿ ಮಣ್ಣಿನಿಂದ ತಯಾರಿಸಿದ ವಿಗ್ರಹಗಳನ್ನು ಬಳಸಬೇಕು.

ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಮಾಲಿನ್ಯ ನಿಯಂತ್ರಣ ಮಂಡಳಿಯ ಜಲಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ 1974ರ ಪ್ರಕಾರ ಕಲಂ 33(ಆ)ರ ಪ್ರಕಾರ ರೂ. 10 ಸಾವಿರವರೆವಿಗೂ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಕಾರ್ಯಕ್ರಮಗಳನ್ನು ಆಯೋಜಿಸುವುದು. ನಗರಸಭೆ ವತಿಯಿಂದ ಗಣಪತಿ ವಿಗ್ರಹಗಳ ವಿಸರ್ಜನೆಗೆ ಓಂಕಾರೇಶ್ವರ ದೇವಸ್ಥಾನದ ಬಳಿ ಇರುವ ಗೌರಿ ಕೆರೆಯನ್ನು ಗುರುತಿಸಿ, ಅವಶ್ಯ ವ್ಯವಸ್ಥೆಗಳನ್ನು ಮಾಡಿದ್ದು, ಸದರಿ ಸ್ಥಳದಲ್ಲೇ ವಿಗ್ರಹಗಳನ್ನು, ಹೂವು, ಹಣ್ಣುಗಳನ್ನು ಪ್ರತ್ಯೇಕಿಸಿ ವಿಸರ್ಜಿಸಬೇಕು ಎಂದು ಸೂಚಿಸಲಾಗಿದೆ.

ಗಣೇಶ ಚತುರ್ಥಿ ಆಚರಣೆ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಪ್ರತಿ ವರ್ಷ ರೂಢಿ ಸಂಪ್ರದಾಯದಂತೆ ಗಣೇಶ ಚತುರ್ಥಿ ಆಚರಿಸಿಕೊಂಡು ಬರುತ್ತಿರುವ ಹಿನ್ನಲೆಯಲ್ಲಿ ಈ ವರ್ಷವೂ ಸೆಪ್ಟೆಂಬರ್ 19ರಂದು ಹಬ್ಬವನ್ನು ನಡೆಸಲಾಗುತ್ತಿದೆ. ಬೆಳಗ್ಗೆ 9.30 ಗಂಟೆಗೆ ಗಣಪತಿ ಹೋಮ, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.

ಶ್ರೀ ತಲಕಾವೇರಿ ದೇವಾಲಯದಲ್ಲಿ ಬೆಳಗ್ಗೆ 9.30 ಗಂಟೆಗೆ ಗಣಪತಿ ಹೋಮ, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಭಕ್ತಾದಿಗಳು ದೇವಾಲಯಗಳಲ್ಲಿ ನಡೆಯಲಿರುವ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಆಡಳಿತಾಧಿಕಾರಿಗಳ ಪರವಾಗಿ ಮನವಿ ಮಾಡಲಾಗಿದೆ.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, “ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಆ ನಿಟ್ಟಿನಲ್ಲಿ ಕಾನೂನು ಮತ್ತು ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಏನಾದರೂ ಸಮಸ್ಯೆಗಳು ಇದ್ದಲ್ಲಿ ಗಮನಕ್ಕೆ ತರುವಂತೆ” ಸಲಹೆ ನೀಡಿದರು.

“ಬ್ಯಾನರ್ ಮತ್ತು ಪೋಸ್ಟರ್ ಅಳವಡಿಸಲು ಸ್ಥಳೀಯ ಸಂಸ್ಥೆ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಧ್ವನಿವರ್ಧಕ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿಯಮಗಳನ್ನು ಪಾಲಿಸಬೇಕು. ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕ ಬಳಸಬಾರದು” ಎಂದು ಗಣೇಶ ಕೂರಿಸುವ ಸಂಘಟನೆಗಳಿಗೆ ಸೂಚನೆ ನೀಡಲಾಯಿತು.

ಮಡಿಕೇರಿ ನಗರಸಭೆ ಸದಸ್ಯ ಅರುಣ್ ಶೆಟ್ಟಿ ಮಾತನಾಡಿ, “ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಗರದ ಗಣಪತಿ ಬೀದಿಯಿಂದ ಮಹದೇವ ಪೇಟೆ ಮತ್ತು ಬನ್ನಿ ಮಂಟಪದವರೆಗೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದನ್ನು ನಿಯಂತ್ರಣ ಮಾಡಬೇಕು” ಎಂದು ಜಿಲ್ಲಾಡಳಿತವನ್ನು ಕೋರಿದರು.

 

Please follow and like us:

tmadmin

Leave a Reply

Your email address will not be published. Required fields are marked *

Next Post

ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ: ತಿರುಪತಿಗೆ ತೆರಳಿದ್ದ ಬೆಳಗಾವಿಯ ತಾಯಿ-ಮಗಳು ಸೇರಿ ಐವರು ಸಾವು

Fri Sep 15 , 2023
Road Accident: ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೆಳಗಾವಿ ಜಿಲ್ಲೆಯ ಐವರು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆರುಪತಿಗ ತೆರಳಿದ್ದ ಬೆಳಗಾವಿಯ ಐವರು ಸಾವು ಅನ್ನಮಯ್ಯ, ಆಂಧ್ರಪ್ರದೇಶ: ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೆವಿಪಲ್ಲಿ ತಾಲೂಕಿನ ಮಠಂಪಲ್ಲಿಯಲ್ಲಿ ಸಂಭವಿಸಿದೆ. ಅಪಘಾತದಲ್ಲಿ 11 ಜನ ಗಾಯಗೊಂಡಿದ್ದು, ನಿವಾಸಿಗಳೆಲ್ಲರೂ ಬೆಳಗಾವಿ ಜಿಲ್ಲೆಯವರು ಎಂಬ ಮಾಹಿತಿ ಲಭ್ಯವಾಗಿದೆ. ಬೆಳಗಾವಿ ಜಿಲ್ಲೆಯ ನಿವಾಸಿಗಳು ಕ್ರೂಸರ್​ ವಾಹನದ​ ಮೂಲಕ ತಿರುಪತಿ […]

Advertisement

Wordpress Social Share Plugin powered by Ultimatelysocial