ಗಯಟೆ ಸಂಸ್ಮರಣೆ

 
ಗಯಟೆ ಜರ್ಮನಿಯ ಕವಿ. ನಾಟಕಕಾರ, ವಿಮರ್ಶಕ, ಕಾದಂಬರಿಕಾರ, ವಿಜ್ಞಾನಿ, ಚಿಂತಕ, ಆಡಳಿತಗಾರ, ವಿವಿಧ ಪ್ರಕಾರಗಳಲ್ಲಿ ವಿಪುಲ ಸಾಹಿತ್ಯ ರಾಶಿಯನ್ನೇ ಸೃಷ್ಟಿಸಿದ ಮಹಾನ್ ಸಾಹಿತಿ.
ಗಯಟೆ 1749ರ ಆಗಸ್ಟ್ 28ರಂದು ಜರ್ಮನಿಯ ಫ್ರಾಂಕ್ಫರ್ಟ್ ಆನ್-ದಿ-ಮೆಯ್ನ್ ಎಂಬಲ್ಲಿ ಜನಿಸಿದ. ಶ್ರೀಮಂತ ಕುಟುಂಬಕ್ಕೆ ಸೇರಿದ್ದ ಇವನ ತಂದೆ ಜೋವಾನ್ ಕ್ಯಾಸ್ಪರ್ ಗಯಟೆ ಸುಸಂಸ್ಕೃತ ವ್ಯಕ್ತಿ. ತಾಯಿ ಕ್ಯಾಥರೀನ್ ಎಲಿಜಬೆತ್ ಟೆಕ್ಸ್ ಟರ್ ಫ್ರಾಂಕ್ ಫರ್ಟಿನ ಪೌರಾಧ್ಯಕ್ಷನ ಮಗಳು. ಸುಖಸಂತೋಷಗಳಿಂದ ತುಂಬಿದ ಶ್ರೀಮಂತ ವಾತಾವರಣದಲ್ಲಿ ಗಯಟೆಗೆ ಒಳ್ಳೆಯ ಶಿಕ್ಷಣ ದೊರೆಯಿತು.
1759ರಿಂದ ಮೂರು ವರ್ಷಗಳ ಕಾಲ ಫ್ರೆಂಚ್ ಸೈನ್ಯ ಫ್ರಾಂಕ್ಫರ್ಟನ್ನು ಮುತ್ತಿ ಆಕ್ರಮಿಸಿಕೊಂಡಿತ್ತು. ಕೋಲಾಹಲಕರವಾದ ಆ ಕಾಲದ ಹಲವು ಘಟನೆಗಳಿಂದಾಗಿ ಗಯಟೆಯ ದೃಷ್ಟಿ ವಿಶಾಲಗೊಂಡು ಮನಸ್ಸು ರಂಗಭೂಮಿಯತ್ತ ತಿರುಗುವಂತಾಯಿತು. ನ್ಯಾಯಶಾಸ್ತ್ರವನ್ನು ಓದಲೆಂದು 1765ರಲ್ಲಿ ಲೀಪ್ಜಿ಼ಗ್ಗಿಗೆ ಹೋಗಿ ಮೂರು ವರ್ಷದ ಅನಂತರ ಊರಿಗೆ ವಾಪಸಾದ. ಆಗಿನ ಅವನ ಕೆಲವು ಲೇಖನಗಳಲ್ಲಿ ರೊಕೋಕೋ ಯುಗದ ಆಡಂಬರಯುತ ಶೈಲಿ ಮತ್ತು ಅತಿರಂಜಕ ಕಲ್ಪನೆಗಳನ್ನು ಕಾಣಬಹುದು. ದೀರ್ಘಕಾಲದ ಕಾಯಿಲೆಯಿಂದ ಚೇತರಿಸಿಕೊಂಡ ಮೇಲೆ ಶಿಕ್ಷಣ ಮುಂದುವರಿಸಲೆಂದು ಸ್ಟ್ರಾಸ್ಬರ್ಗಿಗೆ ಹೋದ (1770). ಅಲ್ಲಿ ವಿದ್ಯಾಭ್ಯಾಸ ಮುಗಿಯಿತು. ಇವನಲ್ಲಿ ಅಡಗಿದ್ದ ಸಾಹಿತ್ಯಶಕ್ತಿಗೆ ಅಲ್ಲಿ ಹೆಚ್ಚಿನ ಸ್ಫೂರ್ತಿ ಸಿಕ್ಕಿತು. ಗಯಟೆ ಅಲ್ಲಿ ಹರ್ಡರ್ನನ್ನು ಭೇಟಿಯಾದ. ಹರ್ಡರನ ಪ್ರಭಾವದಿಂದಾಗಿ ಗಯಟೆಗೆ ಷೇಕ್ಸ್ಪಿಯರನ ಕೃತಿಗಳ ಪರಿಚಯವಾಯಿತು. ಗಾತಿಕ್ ವಾಸ್ತುಶಿಲ್ಪ, ಹೋಮರನ ಮಹಾಕಾವ್ಯ, ಓಸಿಯನ್ ಮುಂತಾದವನ್ನು ಓದಿದ.
ಗಯಟೆ 1771-75ರವರೆಗಿನ ಅವಧಿಯಲ್ಲಿ ಫ್ರಾಂಕ್ಫರ್ಟಿನಲ್ಲಿ ವಕೀಲನಾಗಿ ಕೆಲಸ ಮಾಡಿದ. ಆಗ ಬರೆದ ಗಾಟ್ಸ್ ಫನ್ ಬರ್ಲಿಷಿಂಗನ್ ಎಂಬ ನಾಟಕ ವಿಶೇಷ ಖ್ಯಾತಿ ತಂದಿತು. ಸಾರೋಸ್ ಆಫ್ ವರ್ದರ್ (ಡೈ ಲೇಡನ್ ಡೇಯ್ ಯಂಗನ್ ವರ್ದರ್) ಎಂಬ ಕಾದಂಬರಿ (1774) ಕವಿಯ ಹೆಸರು ಯುರೋಪಿನಲ್ಲೆಲ್ಲ ಹರಡುವಂತೆ ಮಾಡಿತು. 1775ರಲ್ಲಿ ಗಯಟೆ ವೈಮರ್ಗೆ ಹೋದ. ಪ್ರಶಾಂತವಾದ ಆ ಪುಟ್ಟ ಸಂಸ್ಥಾನದ ವಾತಾವರಣದಿಂದಾಗಿ ಆತನ ಬಹುಮುಖ ಪ್ರತಿಭೆ ವಿಕಾಸವಾಯಿತು. ಸುಮಾರು ಹನ್ನೊಂದು ವರ್ಷ ಕಾಲ ಆ ರಾಜ್ಯದ ಮುಖ್ಯಾಧಿಕಾರಿಯಾಗಿ ಕೆಲಸ ಮಾಡಿ, ವೈವಿಧ್ಯಮಯವಾದ ಅಪೂರ್ವ ಅನುಭವಗಳನ್ನು ಆತ ಮೈಗೂಡಿಸಿಕೊಂಡ. ಚಾರ್ಲೆಟ್ ಫನ್ ಸ್ಟೈನ್ ಎಂಬಾಕೆಯ ಪ್ರಭಾವದಿಂದ ಗಯಟೆ ಸುಸಂಸ್ಕೃತ ವ್ಯಕ್ತಿಯಾದ. ಕಲೆ, ವಿಜ್ಞಾನ ಮೊದಲಾದ ಹಲವು ವಿಷಯಗಳಲ್ಲಿ ಇವನ ಅಭಿರುಚಿ ಬೆಳೆಯಿತು. 1786-88ರವರೆಗೆ ಇಟಲಿಯಲ್ಲಿ ಪ್ರವಾಸ ಮಾಡಿ ಕ್ಲಾಸಿಕಲ್ ಇಟಲಿಯ ಕಲಾವೈಭವವನ್ನು ಕಣ್ಣಾರೆ ಕಂಡುಬಂದ. ಹರ್ಡರನ ಪ್ರಭಾವ, ಷೇಕ್ ಸ್ಪಿಯರನ ಕಾವ್ಯ ಮತ್ತು ಕ್ಲಾಸಿಕಲ್ ಇಟಲಿಯ ಕಲಾಸಂಪತ್ತು-ಇವು ಇವನ ವ್ಯಕ್ತಿತ್ವದ ಎರಡು ಬೇರೆ ಬೇರೆ ಮುಖಗಳ ವಿಕಸನಕ್ಕೆ ನೆರವಾದವು. 1790ರಲ್ಲಿ ತಾನು ಹದಿನೇಳು ವರ್ಷಗಳು ವಿವಾಹವಿಲ್ಲದೆ ಸಹಜೀವನ ನಡೆಸುತ್ತಿದ್ದಾಕೆ ಕ್ರಿಸ್ಟಿಯಾನ್ ವಲ್ಪಿಯಸ್ ಎಂಬುವಳನ್ನು ಮದುವೆಯಾದ. ವೈಮರ್ಗೆ ಹಿಂದಿರುಗಿದ ಮೇಲೆ ರಾಜ್ಯ ಅಧಿಕಾರ ಪದವಿಯನ್ನು ಬಿಟ್ಟುಕೊಟ್ಟ. 1791-1817ವರೆಗೆ ವೈಮರ್ ರಂಗಭೂಮಿಯ ಮೇಲ್ವಿಚಾರಣೆ ವಹಿಸಿಕೊಂಡು ಕೆಲಸ ಮಾಡಿದ. ಆ ಕಾಲದಲ್ಲಿ ಷಿಲ್ಲರನೊಡನೆ ಅತಿ ನಿಕಟವಾದ ಸ್ನೇಹ ಬೆಳೆಯಿತು.
ಗಯಟೆಯ ‘ಗಾಟ್ಸ್ ಫನ್ ಬರ್ಲಿಷಿಂಗನ್ (1773) ಎಂಬುದು ಐತಿಹಾಸಿಕ ನಾಟಕ. ಇದರಲ್ಲಿ ರೆಫರ್ಮೇಷನ್ ಕಾಲದ ಸ್ವಾತಂತ್ರ್ಯ ವೀರಯೋಧನೊಬ್ಬನ ಕಥೆಯಿದೆ. ಈ ನಾಟಕ ಜರ್ಮನಿಯ ರಂಗಭೂಮಿಗೆ ಹೊಸ ತಿರುವನ್ನು ಕೊಟ್ಟ ಕೃತಿ. ‘ಡೈಲೇಡನ್ ಡೇಯ್ ಯುಂಗನ್ ವರ್ದರ್’ (1774) ಗಯಟೆಯ ಕೀರ್ತಿ ಯುರೋಪಿನಲ್ಲೆಲ್ಲ ಹರಡುವಂತೆ ಮಾಡಿದ ದುರಂತ ಕಾದಂಬರಿ. ‘ಎಗ್ಮಾಂಟ್’ (1787) ಫೌಸ್ಟ್ ನಾಟಕದ ಮೊದಲ ಭಾಗಕ್ಕೆ ಬೀಜಾಂಕುರವಾದಂತೆ ಕಾಣುವ ಒಂದು ಅಪೂರ್ಣ ಕೃತಿಯನ್ನು (ಉರ್ ಫೌಸ್ಟ್) ಬರೆಯುತ್ತಿದ್ದ ಕಾಲದಲ್ಲಿ ಗಯಟೆ ರಚಿಸಿದ ಐತಿಹಾಸಿಕ ನಾಟಕ. ‘ಇಫಿಜೆನಿ ಆಫ್ ಟಾರಿಸ್’ (1787) ಗಯಟೆಯ ಕೃತಿಗಳಲ್ಲಿ ಅತ್ಯಂತ ಪರಿಪೂರ್ಣವೂ ದೋಷರಹಿತವೂ ಆದುದೆಂದು ಹೇಳುವುದುಂಟು. ಗ್ರೀಕ್ ಶಿಲ್ಪಕಲೆಯಲ್ಲಿ ತಾನು ಮೆಚ್ಚಿಕೊಂಡ ಸಂಯಮವನ್ನಿಲ್ಲಿ ಕವಿ ಸಾಧಿಸಿದ್ದಾನೆ.
‘ಟಾರ್ಕ್ವಾಟೋ ಟ್ಯಾಸೋ’ (1790)
ಎಂಬ ಐದು ಅಂಕಗಳ ಈ ನಾಟಕದಲ್ಲಿ ಗಯಟೆ ವೈಮರ್ ರಾಜನ ಆಸ್ಥಾನದಲ್ಲಿ ಕಂಡುಂಡ ವೈಯಕ್ತಿಕ ಅನುಭವಗಳನ್ನು ಕಂಡರಿಸಿದ್ದಾನೆ. ವಿಲ್ಹೆಲ್ಮ್ ಮೈಸ್ಟರ್ಸ್ ಅಪ್ರೆಂಟಿಸ್ಷಿಪ್ (1795-96) ಕೃತಿಯಲ್ಲಿ ಇಟಲಿಯ ಪ್ರವಾಸದಿಂದ ಗಯಟೆ ವೈಮರ್ಗೆ ಹಿಂದಿರುಗಿದ ಮೇಲೆ ಸುಮಾರು 25 ವರ್ಷ ವೈಮರ್ ಥಿಯೇಟರಿನ ನಿರ್ದೇಶನಕ್ಕಾಗಿ ಕೆಲಸಮಾಡಿದ ಅನುಭವಗಳು ಇವೆ. ಅತ್ಯದ್ಭುತ ಕಾವ್ಯಸಂಪತ್ತಿನಿಂದ ತುಂಬಿದ ಈ ಮಹಾಕೃತಿಯಲ್ಲಿ ಗಯಟೆ ವೈವಿಧ್ಯಮಯ ಕಾವ್ಯರೂಪಗಳನ್ನು ಬಳಸಿದ್ದಾನೆ.. ಇದಕ್ಕೆ ಚಿರಂತನ ಅಭಿವ್ಯಕ್ತಿ ಕೊಟ್ಟ ಫೌಸ್ಟ್ ವಿಶ್ವಸಾಹಿತ್ಯದ ಒಂದು ಅಮೃತ ಕೃತಿ.
ಪ್ರಪಂಚದ ಅದ್ವಿತೀಯ ಸಾಹಿತಿಗಳಲ್ಲೊಬ್ಬನಾದ ಗಯಟೆ ತನ್ನ ವೈಜ್ಞಾನಿಕ ಕೃತಿಗಳನ್ನು ಕುರಿತು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಅವನ ವೈಜ್ಞಾನಿಕ ವಿಚಾರಗಳೆಲ್ಲವನ್ನೂ ಆಧುನಿಕ ವಿಜ್ಞಾನಿಗಳು ಒಪ್ಪಿಕೊಂಡಿಲ್ಲ. ಆದರೆ ತಾನೇ ನಡೆಸಿದ ಸಂಶೋಧನೆಗಳ ಫಲವಾಗಿ ಅವನು ಪ್ರತಿಪಾದಿಸಿದ ಕೆಲವು ಸಂಶೋಧನಾತ್ಮಕ ವಿಚಾರಗಳನ್ನು ವಿಜ್ಞಾನಿಗಳು ಸ್ವೀಕರಿಸಿ ಅವನಿಗೆ ಸಲ್ಲಬೇಕಾದಷ್ಟು ಅಗ್ರಮಾನ್ಯತೆ ಕೊಟ್ಟಿದ್ದಾರೆ.
1800-1832ರವರೆಗೆ ಗಯಟೆ ಅಪೂರ್ವ ಕೀರ್ತಿ, ಗೌರವಗಳಿಗೆ ಭಾಜನನಾಗಿ ಯುರೋಪಿನ ಅತ್ಯಂತ ಗಣ್ಯಸಾಹಿತಿ ಎನಿಸಿಕೊಂಡ. ಈ ಸುಮಾರಿನಲ್ಲೇ ತನ್ನ ಮೇರುಕೃತಿ ಫೌಸ್ಟ್ ನಾಟಕದ ಎರಡನೆಯ ಭಾಗವನ್ನು ತಿದ್ದಿ ಬರೆದು, ತಾನು ಸಾಯುವ ಒಂದು ವರ್ಷಕ್ಕೆ ಮೊದಲು ಅದನ್ನು ಮುಗಿಸಿದ, 1832ರ ಮಾರ್ಚ್ 22ರಂದು ಈತ ತೀರಿಕೊಂಡಾಗ ಯುರೋಪಿನ ಒಬ್ಬ ಯುಗಪುರುಷ ಕಣ್ಮರೆಯಾದಂತಾಯಿತು.
Please follow and like us:

Leave a Reply

Your email address will not be published. Required fields are marked *

Next Post

ಸಂಕ್ಷಿಪ್ತ ಭಾವ ಅರ್ಜುನನು ವಿರಾಟನ ಗೋವುಗಳನ್ನು ಸೆರೆಯಿಂದ ಬಿಡಿಸಿದ್ದು.

Fri Mar 25 , 2022
  ಯುದ್ಧಕ್ಕೆ ಸಿದ್ಧನಾಗಿ ಬಂದ ಅರ್ಜುನನನ್ನು ಕಂಡ ದ್ರೋಣರು ಭೀಷ್ಮನಿಗೆ ತಮ್ಮ ಕಡೆ ಆಗುತ್ತಿರುವ ಅಪಶಕುನಗಳ ಬಗ್ಗೆ ಹೇಳಿದರು. ನಾವು ಗೋವುಗಳನ್ನು ಸೆರೆ ಹಿಡಿದದ್ದೇ ತಪ್ಪು. ಈಗ ಪಾರ್ಥ ಬಂದಿದ್ದಾನೆ ಎಂದು ಚಿಂತಿತರಾದರು. ಆಗ ಕರ್ಣನು ಅವರನ್ನು ಮೂದಲಿಸಿದನು. ಪಾರ್ಥನನ್ನು ಹೊಗಳಿದ್ದು ಅವನಿಗೆ ಹಿಡಿಸಲಿಲ್ಲ. ಇವರುಗಳನ್ನು ಅವನು ಖೂಳರು, ದುಶ್ಚರಿತರು ಎಂದು ಬಯ್ದನು. ಆಗ ಕೋಪಗೊಂಡ ಕೃಪಾಚಾರ್ಯರು ಕರ್ಣನ ಮೇಲೆ ಹರಿಹಾಯ್ದರು. ಅದಕ್ಕೆ ಅವನು ನೀವುಗಳೇನಿದ್ದರೂ ಯಜ್ಞ, ಪೂಜೆ, ಹೋಮ […]

Advertisement

Wordpress Social Share Plugin powered by Ultimatelysocial