ಘಂಟಸಾಲ ಚಲನಚಿತ್ರರಂಗದ ಮಹಾನ್ ಗಾಯಕರು. ಕಂಚುಕಂಠದ ಅವರ ಧ್ವನಿ ಅಮರವಾದದ್ದು.

 

 

ಹಿಂದಿನ ಪೀಳಿಗೆಯವರಲ್ಲಿ ಘಂಟಸಾಲ ಅವರ ಹಾಡುಗಳನ್ನು ಕೇಳದವರೇ ವಿರಳ. ಅಂದಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಪ್ರಾರಂಭ ಆಗುತ್ತಿದ್ದುದೇ ಘಂಟಸಾಲ ಅವರು ಹಾಡಿದ ಭಕ್ತಿಗೀತೆ “ನಮೋ ವೆಂಕಟೇಶ ನಮೋ ತಿರುಮಲೇಶ” ಎಂಬ ಹಾಡಿನಿಂದ. ಯಾವುದೇ ಗಣೇಶನ ಹಬ್ಬ ಬಂದರೆ ಘಂಟಸಾಲ ಹಾಡಿರುವ ಹಂಸಧ್ವನಿ ರಾಗದ “ವಾತಾಪಿ ಗಣಪತಿಂ ಭಜೇಹಂ” ಇರಲೇಬೇಕು. ತಿರುಪತಿಗೆ ಹೋದರೆ ಏಳೇಳು ಬೆಟ್ಟಗಳಲ್ಲೂ ಹೋದ ಹೋದೆಡೆಗಳಲ್ಲೆಲ್ಲಾ ಘಂಟಸಾಲ ಧ್ವನಿಯೇ ಮಾರ್ದನಿಸುತ್ತಿರುತ್ತದೆ.
ಘಂಟಸಾಲ 1922ರ ಡಿಸೆಂಬರ್ 4ರಂದು ಆಂಧ್ರಪ್ರದೇಶದ ಕೃಷ್ಣಾಜಿಲ್ಲೆಯ ಚೌಟಿಪಲ್ಲಿ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಸೂರ್ಯನಾರಾಯಣರಾವ್ ಪ್ರಸಿದ್ಧ ಗಾಯಕರು. ತಮ್ಮ 12ನೇ ವಯಸ್ಸಿಗೇ ತಂದೆಯನ್ನು ಕಳೆದುಕೊಂಡ ಘಂಟಸಾಲ ಬೆಳೆದಿದ್ದು ಚಿಕ್ಕಪ್ಪ ರಾಮಯ್ಯನ ಆಶ್ರಯದಲ್ಲಿ. ಸಂಗೀತದಲ್ಲಿದ್ದ ಆಸಕ್ತಿ ಇವರನ್ನು ಕಲಿಕೆಗೆ ಅವಕಾಶವಿಲ್ಲದ ಚಿಕ್ಕಪ್ಪನ ಮನೆಯಿಂದ ವಿಜಯನಗರಿಗೆ ಓಡಿಹೋಗುವಂತೆ ಪ್ರೇರೇಪಿಸಿತು. ಅಲ್ಲಿ ಸಂಗೀತಶಾಲೆಗೆ ಸೇರಿ, ಕಠಿಣ ಪರಿಶ್ರಮ ನಡೆಸಿ, ’ಸಂಗೀತ ವಿದ್ವಾನ್’ ಪದವಿ ಗಳಿಸಿದರು. ಆ ವೇಳೆಗೆ ದೇಶಾದ್ಯಂತ ಹಬ್ಬಿದ್ದ ‘ಕ್ವಿಟ್ ಇಂಡಿಯಾ ಚಳಿವಳಿ’ಗೆ ಸೇರಿ, 18 ತಿಂಗಳ ಸೆರೆಮನೆವಾಸ ಅನುಭವಿಸಿದರು. ಸೆರೆಮನೆಯಲ್ಲಿ ಪರಿಚಿತರಾದ ಸಮುದ್ರಾಲಾರಿಂದ ಚಿತ್ರರಂಗದತ್ತ ಒಲವು ಬೆಳೆಯಿತು.
ಆಕಾಶವಾಣಿಯಲ್ಲಿ ಹಾಡುವ ಅವಕಾಶ ಸಿಕ್ಕಿತಾದರೂ, ಎಚ್ಎಂವಿ ಸಂಸ್ಥೆ ಧ್ವನಿ ಸರಿಯಿಲ್ಲವೆಂದು ಘಂಟಸಾಲ ಅವರನ್ನು ತಿರಸ್ಕರಿಸಿತು. ನಂತರ ಘಂಟಸಾಲ ಪ್ರಭಾತ್ ಫಿಲಂಸ್‌ನ ತೆಲುಗು ಚಿತ್ರ ’ಸೀತಾರಾಮ ಜನನಂ’ ಮೂಲಕ ಹಿನ್ನೆಲೆ ಗಾಯಕರಾಗಿ ಚಿತ್ರರಂಗಕ್ಕೆ ಪದಾರ್ಪಣ ಮಾಡಿದರು. ಭಾಗ್ಯಚಕ್ರ ಚಿತ್ರದ ‘ದೇವಾ ನಿನ್ನ ರಾಜ್ಯದ ನ್ಯಾಯವಿದೇನಾ’ ಇವರು ಹಾಡಿದ ಮೊದಲ ಕನ್ನಡ ಚಿತ್ರಗೀತೆ.ಘಂಟಸಾಲ ಅವರ ಜನಪ್ರಿಯ ಹಾಡುಗಳು ಕನ್ನಡದಲ್ಲೂ ಅಪಾರ. ಅವುಗಳಲ್ಲಿ ಹಲವನ್ನು ಹೆಸರಿಸುವುದಾದರೆ ‘ಶಿವಶಂಕರಿ ಶಿವಾನಂದನ ಲಹರಿ’, ‘ಸ್ವಾಭಿಮಾನದ ನಲ್ಲೆ, ಸಾಕು ಸಂಯಮ ಬಲ್ಲೆ’, ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮತದಲ್ಲಿ ಮೇಲ್ಯಾವುದೋ’, ‘ಏನಿದೀ ಗ್ರಹಚಾರವೋ ಏನಿದೀ ವನವಾಸವೋ’, ‘ಹೇ ಚಂದ್ರಚೂಡ ಮದನಾಂತಕಾ ಶೂಲಪಾಣೆ’, ‘ಬಾಳೊಂದು ನಂದನ ಅನುರಾಗ ಬಂಧನ’, ‘ದೇವಾ ದರುಶನವ ನೀಡೆಯಾ’, ‘ತಾಯಿ ತಂದೆಯ ಸೇವೆಯಾ ಯೋಗ’, ‘ಮೆಲ್ಲುಸಿರೀ ಸವಿ ಗಾನ’, ‘ಯಾವಕವಿಯ ಶೃಂಗಾರ ಕಲ್ಪನೆಯೋ’, ‘ಈ ದೇಹದಿಂದ ದೂರನಾದೆ ಏಕೆ ಆತ್ಮನೇ’, ‘ಯಾರಿಗೆ ಯಾರುಂಟು ಎರವಿನ ಸಂಸಾರ’, ‘ಏನೋ ಎಂತೋ, ಜುಂ ಎಂದಿತು ತನುವು’, ‘ವಿವಾಹ ಭೋಜನವಿದು ವಿಚಿತ್ರ ಭಕ್ಷ್ಯಗಳಿವು’, ‘ಆಹಾ ನನ್ನ ಮದುವೆಯಂತೆ, ಓಹೋ ನನ್ನ ಮದುವೆಯಂತೆ’, ‘ಹನುಮನ ಪ್ರಾಣ ಪ್ರಭೋ ರಘುರಾಮ’ ಹೀಗೆ ಬಹಳಷ್ಟು ಹಾಡುಗಳನ್ನು ಹೆಸರಿಸಬಹುದು. ಅವರ ಕಂಚು ಕಂಠದ ಎತ್ತರದ ದ್ವನಿಯ ಮಾಧುರ್ಯದ ಹಾಡುಗಳನ್ನು ಸವಿಯುವುದು ಆಹ್ಲಾದಕರ ಅನುಭವ.ತಿರುಮಲ ತಿರುಪತಿ ದೇವಸ್ಥಾನವನ್ನು ನೆನೆದಾಗಲೆಲ್ಲ ಘಂಟಸಾಲ ಅವರ ಹೆಸರೂ ನೆನಪಾಗುತ್ತದೆ. ಅವರು ಹಾಡಿದ ತಿರುಮಲ ಒಡೆಯ ಶ್ರೀನಿವಾಸನ ಕುರಿತ ಒಂದೊಂದು ಹಾಡೂ ಅನರ್ಘ್ಯ ರತ್ನಗಳು. ಭಗವದ್ಗೀತೆಯನ್ನು ಮನೆ ಮನೆಗೂ ತಮ್ಮ ಸುಶ್ರಾವ್ಯ ಧ್ವನಿಯಲ್ಲಿ ತಲುಪಿಸಿದವರಲ್ಲಿ ಘಂಟಸಾಲ ಮೊದಲಿಗರು. ಅದೇ ರೀತಿ ರಾಮದಾಸರ ಕೃತಿ, ಜಯದೇವ ಕವಿಯ ಅಷ್ಟಪದಿ ಹೀಗೆ ಅಸಂಖ್ಯಾತ ಶಾಸ್ತ್ರೀಯ ಹಾಡುಗಳು ಕೂಡ ಘಂಟಸಾಲ ಅವರ ಧ್ವನಿಯಲ್ಲಿ ಜನಮಾನಸಕ್ಕೆ ಹತ್ತಿರದಲ್ಲಿ ನಿಂತವು.ಘಂಟಸಾಲ ಕನ್ನಡದಲ್ಲಿ 6೦ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ಹಾಡಿದ್ದಾರೆ. ವೀರಕೇಸರಿ, ವಾಲ್ಮೀಕಿ ಮುಂತಾದ ಚಿತ್ರಗಳಿಗೆ ಸಂಗೀತ ಸಹಾ ನೀಡಿದ್ದಾರೆ. ಕನ್ನಡ, ತೆಲುಗು ಮುಂತಾದ 8 ಭಾಷೆಗಳಲ್ಲಿ ಒಟ್ಟು 10,000ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ಹಾಡಿ, 87 ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ತೆಲುಗಿನ ‘ಜಗಮೇ ಮಾಯಾ’ ಸಾರ್ವಕಾಲಿಕವಾಗಿ ಪ್ರಸಿದ್ಧ ಹಾಡು.
ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ತಿರುಪತಿ ದೇವಸ್ಥಾನದ ಮೊದಲ ಆಸ್ಥಾನ ವಿದ್ವಾಂಸ ಎಂಬ ಹೆಗ್ಗಳಿಕೆ ಘಂಟಸಾಲ ಅವರಿಗೆ ಸಂದ ಪ್ರಮುಖ ಗೌರವಗಳು. ಇವೆಲ್ಲಕ್ಕೂ ಮಿಗಿಲಾಗಿ ಚಲನಚಿತ್ರದ ಹಾಡುಗಳನ್ನು, ಭಕ್ತಿ ಗೀತೆಗಳನ್ನು ಸಂಗೀತ ಜ್ಞಾನ ಇದ್ದವರು, ಇಲ್ಲದವರೂ ಹೀಗೆ ಎಲ್ಲರೂ ಅನುಭಾವಿಸುವಂತೆ ಮಾಡಿದ ಕೀರ್ತಿಗೆ ಅವರು ಎಂದೆಂದೂ ಭಾಜನರು.ಘಂಟಸಾಲ ಅವರು 1974ರ ಫೆಬ್ರುವರಿ 11ರಂದು ಈ ಲೋಕವನ್ನಗಲಿದರು. ಅವರು ಹಾಡಿದ ಹಾಡುಗಳು ಮತ್ತು ಅವರ ಹೆಸರು ಚಿರಸ್ಮರಣೀಯ. ಈ ಮಹಾನ್ ಚೇತನಕ್ಕೆ ನಮಸ್ತೇ, ನಮಸ್ತೇ, ನಮೋನ್ನಮಃ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೃಷ್ಣ ಸರ್ ಅವರ್‌ ಹತ್ತಿರ ನಾನೊಂದು ಬಿಳಿ ಹಾಳೆ ಆಗಿಬಿಟ್ಟೆ

Wed Feb 16 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial