ಹೆಳವನಕಟ್ಟೆ ಗಿರಿಯಮ್ಮ

ಹೆಳವನಕಟ್ಟೆ ಗಿರಿಯಮ್ಮನವರು ಹರಿದಾಸ ಸಾಹಿತ್ಯಲೋಕದಲ್ಲಿ ಕಾಣಬರುವ ವಿಶಿಷ್ಟ ಸಾಹಿತಿ.
ಹೆಳವನಕಟ್ಟೆ ಗಿರಿಯಮ್ಮನವರು ಕ್ರಿಶ. 1750ರ ಸುಮಾರಿಗೆ ಜೀವಿಸಿದ್ದರು. ಇವರ ತವರೂರು ಹಾವೇರಿ ಜಿಲ್ಲೆಯ ರಾಣಿಬೆನ್ನೂರು. ತಾಯಿ ತುಂಗಮ್ಮ. ತಂದೆ ಬಿಷ್ಟಪ್ಪ ಜೋಯಿಸರು. ಈ ದಂಪತಿಗಳಿಗೆ ದೀರ್ಘ ಕಾಲದ ನಂತರ, ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಬಳಿಕ, ಹೆಣ್ಣು ಮಗುವಿನ ಜನನವಾಯಿತು. ತಿಮ್ಮಪ್ಪನ ಅನುಗ್ರಹದ ಸಂಕೇತವಾಗಿ ಮಗುವಿಗೆ ಗಿರಿಯಮ್ಮ ಎಂದು ಹೆಸರನ್ನಿಟ್ಟರು.
ಚಿಕ್ಕಂದಿನಿಂದಲೂ ಗಿರಿಯಮ್ಮ ಸ್ತೋತ್ರಪಾಠಗಳಲ್ಲಿ, ಪೂಜಾಕಾರ್ಯದಲ್ಲಿ ಆಸಕ್ತಳಾಗಿದ್ದಳು. ಈಕೆಗೆ 4 ವರ್ಷ ವಯಸ್ಸಾದಾಗ ತಾಯಿ ತೀರಿಕೊಂಡರು. ತಾಯಿಯ ಹಿಂದೆಯೆ ತಂದೆ ಸಹ ಗತಿಸಿದರು. ಗಿರಿಯಮ್ಮ ಚಿಕ್ಕಮ್ಮ, ಚಿಕ್ಕಪ್ಪರ ವಾತ್ಸಲ್ಯದ ಆಶ್ರಯದಲ್ಲಿ ಬೆಳೆದಳು. ಬೆಳೆಯುತ್ತಿದ್ದಂತೆ ಗಿರಿಯಮ್ಮ ದೇವರ ಹಾಡುಗಳನ್ನು ಹಾಡುತ್ತ ನರ್ತಿಸುವದರಲ್ಲಿ ಪರವಶಳಾಗತೊಡಗಿದಳು. ತನ್ನ ಬಳಗದವರೊಂದಿಗೆ ಇವಳೊಮ್ಮೆ ಮಲೇಬೆನ್ನೂರಿಗೆ ಹೋದಾಗ ಅಲ್ಲಿಯ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದಳು. ಉಡುಪಿ ಯಾತ್ರೆಗೆಂದು ಆ ಮಾರ್ಗವಾಗಿ ಹೋಗುತ್ತಿದ್ದ ಗೋಪಾಲದಾಸರ ಅಕಸ್ಮಾತ್ ದರ್ಶನ ಹಾಗೂ ಅನುಗ್ರಹ ಈ ಬಾಲೆಗೆ ಆಯಿತು.ಆ ಕಾಲದ ಸಂಪ್ರದಾಯದಂತೆ ಗಿರಿಯಮ್ಮನವರ ಮದುವೆ ಬಾಲ್ಯದಲ್ಲೆ, ಮಲೇಬೆನ್ನೂರಿನ ಶ್ಯಾನುಭೋಗರಾದ ಕೃಷ್ಣಪ್ಪನವರ ಮಗ ತಿಪ್ಪರಸನೊಡನೆ ಜರುಗಿತು. ಗಿರಿಯಮ್ಮನ ಮನಸ್ಸು ರಂಗನಾಥಸ್ವಾಮಿಯಲ್ಲಿಯೆ ನಿಂತುಹೋಗಿತ್ತು. ಆಕೆ ಲೌಕಿಕ ಸಂಸಾರಕ್ಕೆ ವಿಮುಖರಾಗಿದ್ದರು. ಪತಿ ತಿಪ್ಪರಸ ಆಕೆಯ ಮನಸ್ಸನ್ನು ಅರಿತಿದ್ದರಿಂದ ವಿರೋಧವಾಗಿ ನಡೆಯಲಿಲ್ಲ. ಆದರೆ ಅತ್ತೆಯ ಕಾಟ ದಿನೇ ದಿನೇ ಹೆಚ್ಚಾಗತೊಡಗಿತು. ಕೊನೆಗೊಮ್ಮೆ ಗಿರಿಯಮ್ಮನವರೇ ಸ್ವತಃ ತಿಪ್ಪರಸನಿಗೆ ಕನ್ಯೆ ಹುಡುಕಿ ಎರಡನೆಯ ಮದುವೆ ಮಾಡಿಸಿದರು.
ಗಿರಿಯಮ್ಮನವರ ಸಾಧನೆ ಮುಂದುವರಿಯುತ್ತಿದ್ದಂತೆ ಹೆಳವನಕಟ್ಟೆಗೆ ರಂಗನಾಥಸ್ವಾಮಿಯ ದರ್ಶನಕ್ಕೆ ಬರುತ್ತಿದ್ದವರು ಈಕೆಯ ಭಕ್ತರಾಗತೊಡಗಿದರು. ಗಿರಿಯಮ್ಮನ ಕರುಣೆಯಿಂದ ರೋಗ ನಿವಾರಣೆ ಮೊದಲಾದ ಪರಿಹಾರ ದೊರೆಯುತ್ತವೆ
ಎಂದು ಜನ ನಂಬತೊಡಗಿದರು.
ಮೊದಲೊಮ್ಮೆ ಉಡುಪಿಗೆ ಹೋಗುತ್ತಿದ್ದಾಗ ದರ್ಶನವಿತ್ತ ಗೋಪಾಲದಾಸರು ಮತೊಮ್ಮೆ ಅದೇ ಮಾರ್ಗವಾಗಿ ಉಡುಪಿಗೆ ಹೋಗುತ್ತಿರುವಾಗ ಗಿರಿಯಮ್ಮನವರಿಗೆ ಬಾಲಗೋಪಾಲನ ವಿಗ್ರಹ ನೀಡಿ ಆಶೀರ್ವದಿಸಿದರು. “ಹೆಳವನಕಟ್ಟೆ ರಂಗ”ನ ಅಂಕಿತದಲ್ಲಿ ದೇವರ ನಾಮಗಳನ್ನು ರಚಿಸಲು ಸೂಚಿಸಿದರು.
ಮಂತ್ರಾಲಯದ ಮಠಾಧೀಶ್ವರರಾದ ಶ್ರೀ ಸುಮತೀಂದ್ರರು ಮಲೇಬೆನ್ನೂರಿಗೆ ಬಂದಾಗ ಗಿರಿಯಮ್ಮನ ಕೆಲವು ವಿರೋಧಿಗಳು ಈಕೆಗೆ ಸ್ವಾಮಿಗಳು ತೀರ್ಥ ಕೊಡಲು ವಿರೋಧಿಸಿದರು. ಸ್ವಾಮಿಗಳು ಅದನ್ನು ಲೆಕ್ಕಿಸದೆ ಗಿರಿಯಮ್ಮನವರಿಗೆ ಮರ್ಯಾದೆ ನೀಡಿದರು.
ರಂಗನಾಥಸ್ವಾಮಿಯ ಬೆರಳ ಉಂಗುರ ಕಾಣೆಯಾದಾಗ ಗುಬ್ಬಿಯ ಮೂಲಕ ಅದನ್ನು ಮರಳಿ ಪಡೆದದ್ದು, ಮೃತ ಶಿಶುವನ್ನು ಬದುಕಿಸಿದ್ದು, ಕುರುಡು ಬಾಲಕನಿಗೆ ದೃಷ್ಟಿದಾನ ಮಾಡಿದ್ದು ಮೊದಲಾದ ಪವಾಡಗಳ ಕಥೆಗಳು ಗಿರಿಯಮ್ಮನವರ ಕುರಿತು ಪ್ರಚಲಿತವಿದೆ. ಆ ಪ್ರದೇಶದಲ್ಲಿ ಒಮ್ಮೆ ಭೀಕರ ಬರಗಾಲ ಬಂದಿದ್ದು ಅವರ ಒಂದು ಹಾಡಿನಲ್ಲಿ ತಿಳಿದು ಬರುತ್ತದೆ. ಗಿರಿಯಮ್ಮನವರು ಭಕ್ತಿಯಿಂದ ಹಾಡಿ ಮಳೆ ಬಂತು ಎಂಬ ಕಥೆಯೂ ಪ್ರಚಲಿತವಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಎಂ. ಎಸ್. ಸುಬ್ಬುಲಕ್ಷ್ಮಿ

Wed Dec 21 , 2022
ಭಕ್ತಿ ಎಂಬುದು ನಮ್ಮ ಜೀವನದಲ್ಲಿ ಪುಟ್ಟ ವಯಸ್ಸಿನಿಂದಲೇ ಅನುಭಾವಕ್ಕೆ ಬಂದ ರೀತಿಯನ್ನು ಗುರುತಿಸುವುದಾದರೆ, ಅದರ ಪ್ರಾರಂಭ ನಮ್ಮ ಮನೆಗಳ ರೇಡಿಯೋಗಳಲ್ಲಿ ಶನಿವಾರದಂದು ತಪ್ಪದೆ ಕೇಳಿಬರುತ್ತಿದ್ದ “ಕೌಸಲ್ಯಾ ಸುಪ್ರಜಾರಾಮ ಪೂರ್ವಾಸಂಧ್ಯಾ ಪ್ರವರ್ತತೆ” ಎಂಬ ಸುಶ್ರಾವ್ಯ ಸುಪ್ರಭಾತ. ಆ ಸುಂದರ ಇನಿಧ್ವನಿಯ ಮಂತ್ರಘೋಷ ನಮ್ಮನ್ನು ಎಚ್ಚರಿಸುತ್ತಿತ್ತೋ, ಇಲ್ಲ ಮತ್ತಷ್ಟು ಜೋಗುಳ ಹಾಡುತ್ತಾ ಮುದ್ದುಮಾಡುತ್ತಿತ್ತೋ, ಇಲ್ಲ ಇಂತಹ ಸುಂದರ ಇನಿಧ್ವನಿ ಕೇಳದೆ ವ್ಯರ್ಥವಾಗಿ ನಿದ್ದೆಯಲ್ಲಿ ಸಮಯ ವ್ಯಯಮಾಡುತ್ತಿದ್ದೇವೆಲ್ಲ ಎಂಬ ಭಾವ ಹುಟ್ಟಿಸುತ್ತಿತ್ತೋ; ಹೀಗೆಯೇ ಎಂದು […]

Advertisement

Wordpress Social Share Plugin powered by Ultimatelysocial