ಎಂ. ಎಸ್. ಸುಬ್ಬುಲಕ್ಷ್ಮಿ

ಭಕ್ತಿ ಎಂಬುದು ನಮ್ಮ ಜೀವನದಲ್ಲಿ ಪುಟ್ಟ ವಯಸ್ಸಿನಿಂದಲೇ ಅನುಭಾವಕ್ಕೆ ಬಂದ ರೀತಿಯನ್ನು ಗುರುತಿಸುವುದಾದರೆ, ಅದರ ಪ್ರಾರಂಭ ನಮ್ಮ ಮನೆಗಳ ರೇಡಿಯೋಗಳಲ್ಲಿ ಶನಿವಾರದಂದು ತಪ್ಪದೆ ಕೇಳಿಬರುತ್ತಿದ್ದ “ಕೌಸಲ್ಯಾ ಸುಪ್ರಜಾರಾಮ ಪೂರ್ವಾಸಂಧ್ಯಾ ಪ್ರವರ್ತತೆ” ಎಂಬ ಸುಶ್ರಾವ್ಯ ಸುಪ್ರಭಾತ. ಆ ಸುಂದರ ಇನಿಧ್ವನಿಯ ಮಂತ್ರಘೋಷ ನಮ್ಮನ್ನು ಎಚ್ಚರಿಸುತ್ತಿತ್ತೋ, ಇಲ್ಲ ಮತ್ತಷ್ಟು ಜೋಗುಳ ಹಾಡುತ್ತಾ ಮುದ್ದುಮಾಡುತ್ತಿತ್ತೋ, ಇಲ್ಲ ಇಂತಹ ಸುಂದರ ಇನಿಧ್ವನಿ ಕೇಳದೆ ವ್ಯರ್ಥವಾಗಿ ನಿದ್ದೆಯಲ್ಲಿ ಸಮಯ ವ್ಯಯಮಾಡುತ್ತಿದ್ದೇವೆಲ್ಲ ಎಂಬ ಭಾವ ಹುಟ್ಟಿಸುತ್ತಿತ್ತೋ; ಹೀಗೆಯೇ ಎಂದು ನಿರ್ದಿಷ್ಟವಾಗಿ ಅದರ ಜಾಡು ಗುರುತಿಸಿಕೊಳ್ಳುವುದು ಕಷ್ಟ. ಹೀಗೆ ನಮ್ಮೊಳಗಿನ ಅವ್ಯಕ್ತದ ಆ ಪರಮಾತ್ಮನನ್ನು ಮೃದುವಾಗಿ ಸ್ಪರ್ಶಿಸುತ್ತಿದ್ದ ಆ ಸುಮಧುರ ಇಂಚರವನ್ನು ಹೇಗೆ ತಾನೇ ಮರೆಯಲು ಸಾಧ್ಯ. ಈ ಮಹಾತಾಯಿಯ ಧ್ವನಿಗೆ ಓಡಿಬರದಿರಲಿಕ್ಕೆ ಆ ಪರಮಾತ್ಮನಿಗಾದರೂ ಹೇಗೆ ತಾನೇ ಸಾಧ್ಯವಿದ್ದೀತು. ಒಂದು ರೀತಿಯಲ್ಲಿ ಆ ವೈಕುಂಠಪುರವಾಸನಾದ ಶ್ರೀನಿವಾಸ ಎಂ. ಎಸ್. ಸುಬ್ಬುಲಕ್ಷ್ಮಿ ಅವರ ಭಕ್ತಿಪೂರ್ಣ ಧ್ವನಿ ತರಂಗಗಳೋಪಾದಿಯಲ್ಲಿ ಸರ್ವಹೃದಯಗಳಲ್ಲೂ ರಾರಾಜಿಸುತ್ತಿದ್ದ ಸಿರಿನಿವಾಸನೇ ಹೌದು. ಇಂದು ಈ ಮಹಾನ್ ಗಾಯಕಿಯ ಸಂಸ್ಮರಣೆ ದಿನ.
ಭಕ್ತಿ, ಮಾಧುರ್ಯ, ಸೂಕ್ಷ್ಮತೆಗಳ ವಿಚಾರ ನೆನೆದಾಗಲೆಲ್ಲ, “ಓ ಹಾಗೆಂದರೆ ಅದು ಒಂದು ಗಂಭೀರ ಸ್ವರೂಪದ್ದಿರಬೇಕು, ಅದು ಹೊರಗೇಳದ ಅಂತರ್ಧ್ವನಿಯಾಗಿ ಎಲ್ಲೋ ಸುಪ್ತವಾಗಿ ಅಡಗಿರುವಂತದ್ದು” ಮುಂತಾದ ಭಾವಗಳು ನನ್ನಲ್ಲಿ ಒಮ್ಮೊಮ್ಮೆ ಬಂದು ಹೋಗಿರುವುದುಂಟು. ಹೀಗೆ ಅನಿಸಿದಾಗೆಲ್ಲಾ ನಾನು ಎಂ.ಎಸ್ ಅವರನ್ನು ನೆನೆದು ಅಚ್ಚರಿ ಪಡುತ್ತೇನೆ. ಇಂಥ ಕಂಚಿನ ಕಂಠದಲ್ಲಿ, ಅಂತಹ ಏರು ಧ್ವನಿಯಲ್ಲಿ, ಇಂಥ ಸುಸ್ಪಷ್ಟತೆಯ ಶ್ರೇಷ್ಠ ಉಚ್ಚಾರಗಳಲ್ಲಿ ಭಕ್ತಿ, ಮಾಧುರ್ಯ, ಸೂಕ್ಷ್ಮತೆಗಳು ಮನೆಮಾಡಿರುವ ಆ ಪರಮಾತ್ಮನ ಲೀಲೆಯ ವೈಭೋಗವಾದರೂ ಎಂತಹ ವೈಶಿಷ್ಟ್ಯದ್ದು ಎಂದು! ಬಹುಶಃ ಅದಕ್ಕೆ ಉತ್ತರವೂ ಪರಮಾತ್ಮನೇ ಇರಬೇಕು!
ಎಂ. ಎಸ್. ಸುಬ್ಬುಲಕ್ಷ್ಮಿ 1916ರ ಸೆಪ್ಟೆಂಬರ್ 16ರಂದು ಜನಿಸಿದರು. ತನ್ನ ತಾಯಿ ಷಣ್ಮುಗವಡಿವು ಅಮ್ಮಾಳ್ ಅವರ ಕಾರ್ಯಕ್ರಮಗಳಲ್ಲಿ ಏಳೆಂಟು ವಯಸ್ಸಿನ ಬಾಲೆಯಾಗಿರುವಾಗಲೇ ಅವರು ಹಾಡಲು ಪ್ರಾರಂಭಿಸಿದ್ದರು. ಅವರು ಹತ್ತು ವರ್ಷದವರಾಗಿದ್ದಾಗಲೆ ಅವರ ಮೊದಲ ಧ್ವನಿಮುದ್ರಣ ಹೊರಬಂತು. ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರಿಂದ ಕರ್ನಾಟಕ ಸಂಗೀತವನ್ನೂ ಮತ್ತು ಪಂಡಿತ್ ನಾರಾಯಣ್ ರಾವ್ ವ್ಯಾಸ್ ಅವರಿಂದ ಹಿಂದೂಸ್ಥಾನಿ ಸಂಗೀತವನ್ನೂ ಅವರು ಕಲಿತರು. ತಮ್ಮ ಹದಿನೇಳನೇ ವಯಸ್ಸಿನಲ್ಲಿ ಮದ್ರಾಸಿನ ಸಂಗೀತ ಅಕಾಡೆಮಿಯಲ್ಲಿ ಪ್ರಥಮ ಸಂಗೀತ ಕಚೇರಿಯನ್ನು ನೀಡಿದ ಎಂ. ಎಸ್. ಅವರು ಮುಂದೆ ನೀಡಿದ ಕಚೇರಿಗಳಿಗೆ, ಹಾಡಿದ ಧ್ವನಿಸುರುಳಿಗಳಿಗೆ ಲೆಕ್ಕವೇ ಇಲ್ಲವೇನೋ. 1945ರಲ್ಲಿ ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾದ ‘ಮೀರಾ’ ಚಿತ್ರದಲ್ಲಿ ಅವರು ಪ್ರಧಾನ ಪಾತ್ರ ವಹಿಸಿದ್ದರು. ಸದಾಶಿವಮ್ ಎಂಬ ಸ್ವಾತಂತ್ರ್ಯ ಹೋರಾಟಗಾರರನ್ನು ಅವರು ಪ್ರೇಮಿಸಿ ವಿವಾಹವಾದರು.
ಎಂ. ಎಸ್. ಸುಬ್ಬುಲಕ್ಷ್ಮಿಯವರ ಸಂಗೀತ ಶ್ರೋತೃಗಳ ವಿಸ್ತಾರ ದೇಶ ವಿದೇಶಗಳ ಎಲ್ಲ ಎಲ್ಲೆಗಳನ್ನೂ ಮೀರಿ ಹರಿದಿದೆ. ಒಮ್ಮೆ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಉಂಥಾಟ್ ಅವರು ಸುಬ್ಬುಲಕ್ಷ್ಮಿಯವರನ್ನು ಸಭೆಗೆ ಪರಿಚಯಿಸುತ್ತಾ “ಸಂಗೀತಕ್ಕೆ ಭೌಗೋಳಿಕ ಎಲ್ಲೆಕಟ್ಟುಗಳಿಲ್ಲ. ಅದು ಸರ್ವರನ್ನೂ ರಂಜಿಸಬಲ್ಲ ವಿಶ್ವಭಾಷೆ” ಎಂದು ಹೇಳಿರುವ ಮಾತುಗಳು ಸುಬ್ಬುಲಕ್ಷ್ಮಿಯವರ ಗಾಯನದ ಸರ್ವಪ್ರಿಯತೆಯನ್ನು ಅರ್ಥಪೂರ್ಣವಾಗಿ ಸೂಚಿಸುವಂತಿದೆ. ಅವರ ಧ್ವನಿಯಲ್ಲಿ ಹರಿದ ತ್ಯಾಗರಾಜ, ದೀಕ್ಷಿತ, ತಿರುನಾಳ್, ಭಾಗವತ, ಆಳ್ವಾರ್, ಆಚಾರ್ಯ, ದಾಸವರೇಣ್ಯರ ಕೃತಿಗಳ ಸಂಖ್ಯೆ ಎಲ್ಲಾ ಎಲ್ಲೆಗಳನ್ನೂ ಮೀರಿದ್ದು. ಅವರಿಗೆ ಸಾಹಿತ್ಯ ಮತ್ತು ನಾದ ಗುಣವಿರುವುವೆಲ್ಲಾ ಯಾವುದೇ ಭಿನ್ನ ಭಾವನೆಯಿಲ್ಲದೆ ಸ್ವೀಕೃತವಾಗಿತ್ತು. ಅವರು ಯು. ಎನ್. ಜನರಲ್ ಅಸೆಂಬ್ಲಿಯಲ್ಲಿ ‘ಜಗದೊದ್ದಾರನ’, ಜಯಚಾಮರಾಜ ಒಡೆಯರ ‘ಶಿವಶಿವಭೋ’, ರಾಜಾಜಿಯವರು ಆ ಸಂದರ್ಭಕ್ಕೆ ರಚಿಸಿಕೊಟ್ಟ ಇಂಗ್ಲಿಷ್ ಗೀತೆ, ಶ್ಯಾಮಾಶಾಸ್ತ್ರಿಗಳ ‘ಸರೋದಳ ನೇತ್ರಿ’ ಮುಂತಾದ ಕೀರ್ತನೆಗಳನ್ನು ಸೇರಿಸಿ ನಡೆಸಿಕೊಟ್ಟ ಕಚೇರಿ, ಪಾಶ್ಚಾತ್ಯ ರಸಿಕರು ಮತ್ತು ವಿದ್ವಾಂಸರುಗಳನ್ನು ತಟ್ಟಿದ ಬಗೆ ಈ ಮಾತುಗಳನ್ನು ಮತ್ತಷ್ಟು ಪುಷ್ಟೀಕರಿಸುತ್ತದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಕ್ಷುಲ್ಲಕ ಕಾರಣಕ್ಕೆ ದೊಣ್ಣೆ ವಿಕೆಡ್ಗಳನ್ನಿಡಿದು ಗೂಂಡಾಗಿರಿ.

Wed Dec 21 , 2022
ಕಾಲೇಜು ವಿದ್ಯಾರ್ಥಿಗಳಿಂದ ನಡು ರಸ್ತೆಯಲ್ಲಿ ಗೂಂಡಾಗಿರಿ. ಯಲಹಂಕ ತಾಲೂಕಿನ ರಾಜಾನುಕುಂಟೆ ಬಳಿಯ ಪ್ರೆಸಿಡೆನ್ಸಿ ಕಾಲೇಜು‌ ಬಳಿ ಘಟನೆ. ಕೈನಲ್ಲಿ ವಿಕೆಟ್ ಮತ್ತು ದೊಣ್ಣೆಗಳಿಡಿದು‌ ಓಡಾಡುವ ದೃಶ್ಯ ‌ಮೊಬೈಲ್ ನಲ್ಲಿ ಸೆರೆ. ಪ್ರತಿನಿತ್ಯ ಕಾಲೇಜು ಬಳಿ ಪುಂಡ‌ ಯುವಕರಿಂದ ದಾಂದಲೆ. ವಿದ್ಯಾರ್ಥಿಗಳ ದಾಂದಲೆಗೆ ಬಿಚ್ಚಿಬಿದ್ದ ಸುತ್ತಮುತ್ತಲಿನ ಗ್ರಾಮಸ್ಥರು. ಯುವಕರು ಗೂಂಡಾಗಿರಿ ಮಾಡ್ತಿದ್ರು ರಾಜಾನುಕುಂಟೆ ಪೊಲೀಸರು ಗಪ್ ಚುಪ್. ಕಾಲೇಜು ಬಳಿ ಪ್ರತಿನಿತ್ಯ ಗಲಾಟೆಗಳಾದ್ರು ಎಚ್ಚೆತ್ತುಕೊಳ್ಳಲ್ಲ ಅಂತ ಸ್ಥಳಿಯರ ಆಕ್ರೋಶ. ಯಲಹಂಕ ತಾಲೂಕಿನ […]

Advertisement

Wordpress Social Share Plugin powered by Ultimatelysocial