ಹಳೇ ಮೈಸೂರು ಭಾಗದಲ್ಲಿ ಕಾಳ್ಗಿಚ್ಚು ಆತಂಕ ದೂರ!

ಎಲ್ಲೆಡೆ ಉಷ್ಣಮಾರುತದ ಅಬ್ಬರ ಮುಂದುವರಿದಿದ್ದು, ತೀವ್ರ ಬಿಸಿಲು, ಸೆಖೆ ಜನರನ್ನು ಹೈರಾಣ ಮಾಡಿದೆ. ಆದರೆ ಉತ್ತಮ ಮಳೆ ಸುರಿದಿರುವುದರಿಂದ ಹಳೇ ಮೈಸೂರು ಭಾಗದ ಅರಣ್ಯಗಳಿಗೆ ಬೆಂಕಿ ಆತಂಕ ದೂರವಾಗಿದ್ದು, ವನ್ಯಜೀವಿಗಳಿಗೆ ನೆಮ್ಮದಿ ತಂದಿದೆ.

ಪ್ರತಿವರ್ಷ ತೀವ್ರವಾಗಿ ಬೆಂಕಿ ಆತಂಕ ಎದುರಿಸುವ ಬಂಡೀಪುರ, ನಾಗರಹೊಳೆ, ಬಿಆರ್‌ಟಿ ಮತ್ತು ಮಲೆಮಹದೇಶ್ವರ ವನ್ಯಜೀವಿಧಾಮಗಳ ವ್ಯಾಪ್ತಿಯಲ್ಲಿ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದು, ಹಲವೆಡೆ ಹಸಿರು ಕಂಗೊಳಿಸುತ್ತಿದೆ. ಕಾಡುಗಳಲ್ಲಿ ಆನೆ, ಜಿಂಕೆ, ಕಾಟಿ, ಕಡವೆಯಂಥ ಪ್ರಾಣಿಗಳು ಗುಂಪುಗುಂಪಾಗಿ ಮೇಯುವ ದೃಶ್ಯ ಕಣ್ಮನ ತಣಿಸುತ್ತಿದೆ.

ಈ ವರ್ಷ ಯಾವುದೇ ಕಾಳ್ಗಿಚ್ಚು ಬೀಳದಿರುವುದು ಮತ್ತು ಮುಂದಿನ ದಿನಗಳಲ್ಲಿಯೂ ಅಂತಹ ಆತಂಕ ಇಲ್ಲ ಎಂದು ಅರಣ್ಯ ಇಲಾಖೆ ಸದ್ಯ ನಿಟ್ಟುಸಿರು ಬಿಟ್ಟಿದೆ. ಇದು ಇತ್ತೀಚಿನ ಐದಾರು ವರ್ಷಗಳಲ್ಲಿ ಬಹುಬೇಗ ಬೆಂಕಿ ಅವಧಿ ಮುಗಿದ ದಾಖಲೆಯಾಗಿದೆ. ಸಾಮಾನ್ಯವಾಗಿ ಪ್ರತಿ ವರ್ಷ ನವೆಂಬರ್‌ನಿಂದ ಅರಣ್ಯ ಸಿಬ್ಬಂದಿ ಕಾಡಿನಲ್ಲಿ ಫೈರ್‌ಲೈನ್ ಮಾಡಲು ಪ್ರಾರಂಭಿಸುತ್ತಿದ್ದರು. ಜನವರಿಯಿಂದ ಏಪ್ರಿಲ್‌ವರೆಗೂ ಬೆಂಕಿ ಅವಧಿ ಇರುತ್ತಿತ್ತು. ಅಲ್ಲಿಯವರೆಗೆ ಕಾಳ್ಗಿಚ್ಚು ಬೀಳದಂತೆ ಅರಣ್ಯ ಇಲಾಖೆ ಕಣ್ಗಾವಲು ಇಟ್ಟುಕೊಂಡು ಕಾಯಬೇಕಾಗುತ್ತಿತ್ತು. ಆದರೆ ಈ ವರ್ಷ ಫೆಬ್ರವರಿ ಹೊತ್ತಿಗೆ ಬೆಂಕಿಯ ಅವಧಿ ಪ್ರಾರಂಭವಾಯಿತು. ವರುಣನ ಕೃಪೆಯಿಂದ ಮಾರ್ಚ್ ಮಧ್ಯಭಾಗದ ಹೊತ್ತಿನಿಂದ ಮಳೆ ಆಗಾಗ ಬೀಳಲು ಪ್ರಾರಂಭವಾಯಿತು. ಪರಿಣಾಮ, ನೆಲದಲ್ಲಿ ಹುಲ್ಲು ಚಿಗುರಿ, ಅರಣ್ಯದಲ್ಲಿ ಹಸಿರು ಮೂಡಲು ಪ್ರಾರಂಭಿಸಿದೆ. ಜತೆಗೆ, ಸಣ್ಣಪುಟ್ಟ ಕೆರೆಗಳಲ್ಲಿ ನೀರು ಸಂಗ್ರಹವಾಗುತ್ತಿದೆ. ಆದ್ದರಿಂದ ಏಪ್ರಿಲ್ ‘ಬೆಂಕಿ ಅವಧಿ’ ಬೇಗ ಮುಕ್ತಾಯವಾಗಿದೆ.

ಬಂಡೀಪುರ, ನಾಗರಹೊಳೆ ಮುಂತಾದ ಕಡೆ ಅರಣ್ಯದ ಬೆಂಕಿ ಆತಂಕದ ಹಿನ್ನೆಲೆಯಲ್ಲಿ ವರ್ಷದ ಕೊನೆಗೆ ಬೆಂಕಿ ವಾಚರ್‌ಗಳನ್ನು ತಾತ್ಕಾಲಿಕವಾಗಿ ನೇಮಿಸಿಕೊಂಡರೆ, ಏಪ್ರಿಲ್ ಕೊನೆಯ ತನಕ ಉಳಿಸಿಕೊಳ್ಳುತ್ತಿದ್ದರು. ಆದರೆ ಈ ವರ್ಷ ಮಳೆ ಚೆನ್ನಾಗಿ ಆದ ಕಾರಣ ಬೆಂಕಿ ವಾಚರ್‌ಗಳ ಸೇವೆಯನ್ನು ಮಾ.31ಕ್ಕೆ ಕೊನೇ ಮಾಡಲಾಗಿದೆ. ಜತೆಗೆ, ಅಲ್ಲಲ್ಲಿ ಅಗ್ನಿಶಾಮಕ ವಾಹನಗಳನ್ನು ನಿಲ್ಲಿಸಿಕೊಳ್ಳಲಾಗುತ್ತಿತ್ತು. ಕಾಡಂಚಿನ ಗ್ರಾಮಗಳಲ್ಲಿ ಬೀದಿ ನಾಟಕಗಳ ಮೂಲಕ ಅರಿವು ಮೂಡಿಸಲಾಗುತ್ತಿತ್ತು. ಅರಣ್ಯಾಧಿಕಾರಿಗಳಿಂದ ಹಿಡಿದು ಸೆಲಬ್ರಿಟಿ ತನಕ ಕಾಳ್ಗಿಚ್ಚಿನ ವಿರುದ್ಧ ಜಾಗೃತಿ ಮೂಡಿಸುತ್ತಿದ್ದರು. ಈ ವರ್ಷ ಅಂತಹ ಪ್ರಮೇಯವೇ ಬರಲಿಲ್ಲ.

ಸದ್ಯ ಬಂಡೀಪುರ ವ್ಯಾಪ್ತಿಯಲ್ಲಿ ಕುಂದಕೆರೆ ಒಂದನ್ನು ಬಿಟ್ಟು ಬಹುತೇಕ 12 ವಲಯಗಳಲ್ಲಿ ಮಳೆಯಾಗಿದ್ದು, ನುಗು ನದಿಗೆ ಕಾಡಿನಿಂದ ನೀರು ಹರಿದು ಬರುತ್ತದೆ. ಆದರೆ ಕೇರಳ ಭಾಗದಿಂದ ನೀರು ಬೇಕಿದ್ದು, ಅಲ್ಲಿಂದಲೂ ಒಳಹರಿವು ಹೆಚ್ಚಾದರೆ ಅನುಕೂಲ. ಬಿಆರ್‌ಟಿ ಅರಣ್ಯ ಪ್ರದೇಶದಲ್ಲೂ ಅರಣ್ಯ ಹಸಿರು ಚಿಗುರಿದೆ.

ಕಬಿನಿ ಅರಣ್ಯ ಪ್ರದೇಶದ ಹಸಿರಿನ ಹಿನ್ನೆಲೆಯಲ್ಲಿ ವನ್ಯಪ್ರೇಮಿ ದಿನೇಶ್ ಛಲವಾದಿ ಹುಲಿಗಳ ಚಿತ್ರ ಸೆರೆ ಹಿಡಿದಿರುವುದು.ಕಬಿನಿ ಒಳಹರಿವು ಹೆಚ್ಚಳ: ಕಳೆದ ವಾರದಲ್ಲಿ ಕೇರಳದ ವಯನಾಡು ಭಾಗದಲ್ಲಿ ಕೆಲವು ದಿನಗಳಿಂದ ಒಳ್ಳೆಯ ಮಳೆಯಾಗಿದೆ. ಹೀಗೆಯೇ ಮುಂದುವರಿದರೆ ಗಡಿಯಲ್ಲಿರುವ ಬಂಡೀಪುರ ವ್ಯಾಪ್ತಿಯ ಮೂಲೆಹೊಳೆ, ಗುಂಡ್ರೆ, ನಾಗರಹೊಳೆಯ ಡಿ.ಬಿ.ಕುಪ್ಪೆ ಮತ್ತು ನಾಗರಹೊಳೆ ವ್ಯಾಪ್ತಿಯಲ್ಲಿ ತಂಪಿನ ವಾತಾವರಣ ನಿರ್ಮಾಣವಾಗಲಿದೆ. ಜತೆಗೆ, ಕಳೆದ ವಾರ ಉತ್ತಮ ಮಳೆಯಾಗಿದ್ದು, ಕಬಿನಿ ಹಿನ್ನೀರನ್ನೇ ಅವಲಂಬಿಸಿರುವ ನಾಗರಹೊಳೆ ಮತ್ತು ಬಂಡೀಪುರ ಭಾಗದ ವನ್ಯಜೀವಿಗಳಿಗೆ ತುಸು ನೆಮ್ಮದಿ ತರಲಿದೆ. 2284 ಅಡಿ ಗರಿಷ್ಠ ಮಟ್ಟ ಹೊಂದಿರುವ ಕಬಿನಿ ಜಲಾಶಯದಲ್ಲಿ ಮೇ 10ರಂದು 2260.86 ಅಡಿ ನೀರಿದ್ದು, 413 ಕ್ಯೂಸೆಕ್ ಒಳಹರಿವಿತ್ತು. 2021ರಲ್ಲಿ ಇದೇ ದಿನ 507 ಕ್ಯೂ., 2020ರಲ್ಲಿ 253 ಕ್ಯೂ., 2019ರಲ್ಲಿ 1553 ಕ್ಯೂ. ಮತ್ತು 2018ರಲ್ಲಿ 350 ಕ್ಯೂಸೆಕ್ ಇತ್ತು.

ಚಾಮುಂಡಿಬೆಟ್ಟಕ್ಕೂ ಇಲ್ಲ ಆತಂಕ: ಮೈಸೂರು ನಗರಕ್ಕೆ ಹೊಂದಿಕೊಂಡಿರುವ ಚಾಮುಂಡಿಬೆಟ್ಟಕ್ಕೆ ಸಾಮಾನ್ಯವಾಗಿ ಪ್ರತಿವರ್ಷ ಬೆಂಕಿ ಕಾಟ ಇದ್ದೇ ಇತ್ತು. ಆದರೆ ಈ ವರ್ಷ ಬೇಗ ಫೈರ್‌ಲೈನ್ ಮಾಡಿದ್ದರಿಂದ ಮತ್ತು ಉತ್ತಮ ಮಳೆಯಾಗಿದ್ದರಿಂದ ಹಸಿರು ಚಿಗುರೊಡೆದು ಕಾಳ್ಗಿಚ್ಚಿನ ಆತಂಕ ಇಲ್ಲವಾಗಿದೆ. ಮಹದೇಶ್ವರ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದು ಬೆಂಕಿ ಆತಂಕ ಇಲ್ಲ ಎಂದು ಡಿಸಿಎಫ್ ಏಡುಕೊಂಡಲು ತಿಳಿಸಿದ್ದಾರೆ.

ಕಬಿನಿ ಹಿನ್ನೀರಿನಲ್ಲಿ ಹುಲ್ಲು ಚಿಗುರಿದ್ದು, ಆನೆಗಳನ್ನು ಕಾಣಬಹುದು.ಈ ಸಲ ಸಕಾಲಕ್ಕೆ ಸರಿಯಾಗಿ ಮಳೆಯಾಗಿರುವುದರಿಂದ ಬೆಂಕಿ ಆತಂಕವನ್ನು ದೂರ ಮಾಡಿದೆ. ಮೇಟಿಕುಪ್ಪೆ ವಿಭಾಗ ವ್ಯಾಪ್ತಿಯ ಮೇಟಿಕುಪ್ಪೆ, ಡಿ.ಬಿ.ಕುಪ್ಪೆ ಮತ್ತು ಅಂತರಸಂತೆ ವಲಯದಲ್ಲಿ ಉತ್ತಮ ಮಳೆಯಾಗಿದ್ದು, ಹಸಿರು ಚಿಗುರಿದೆ. ಜತೆಗೆ ಕೆರೆಕಟ್ಟೆಗಳಲ್ಲೂ ನೀರಿರುವುದರಿಂದ ಪ್ರಾಣಿಗಳಿಗೂ ಯಾವುದೇ ರೀತಿಯ ತೊಂದರೆಯಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಧ್ಯರಾತ್ರಿ ಐಎಫ್​ಎಸ್ ಅಧಿಕಾರಿ ವಿಶ್ರಾಂತಿ ಗೃಹಕ್ಕೆ ಬಂತು ಚಿರತೆ!

Fri May 13 , 2022
  ಲಖನೌ: ಪ್ರಾಣಿಗಳು ಆಗ್ಗಾಗ್ಗೆ ಮನುಷ್ಯರಿಗೆ ಎದುರಾಗುವುದು ಸಾಮಾನ್ಯ. ಆದರೆ ಒಬ್ಬರೇ ಇದ್ದಾಗ ಪ್ರಾಣಿ ಎದುರಾದರೆ ಏನಾಗಬಹುದು.ಹೀಗೊಂದು ಘಟನೆ ಇಲ್ಲಿ ನಡೆದಿದ್ದು, ರಾತ್ರಿ ವೇಳೆಯಲ್ಲಿ ಅರಣ್ಯಾಧಿಕಾರಿಗಳ ವಿಶ್ರಾಂತಿ ಗೃಹಕ್ಕೆ ಆಗಮಿಸಿದ ಚಿರತೆ ರಾಜಾರೋಷವಾಗಿ ಓಡಾಡಿರುವ ಚಿತ್ರವನ್ನು ಅಧಿಕಾರಿಯೊಬ್ಬರು ಸೆರೆ ಹಿಡಿದಿದ್ದಾರೆ. ವಿಶ್ರಾಂತಿ ಗೃಹದಲ್ಲಿದ್ದ ಐಎಫ್​ಎಸ್​ ಅಧಿಕಾರಿ ನಿವಾಸಕ್ಕೆ ಮಧ್ಯರಾತ್ರಿ ಅತಿಥಿಯೊಂದು ಆಗಮಿಸಿದೆ. ನಾವಿಬ್ಬರು ಉತ್ತಮ ಸಮಯ ಕಳೆದೆವು ಎಂದು ಚಿರತೆಯ ಚಿತ್ರ ಸಮೇತ ಟ್ವೀಟ್​ ಮಾಡಿದ್ದಾರೆ. ಉತ್ತರ ಪ್ರದೇಶದ ಖತರ್ನಿಯಾಘಾಟ್​​ […]

Advertisement

Wordpress Social Share Plugin powered by Ultimatelysocial