ಐಎಎಸ್ ಅಧಿಕಾರಿಗಳ ತನಿಖೆಗೆ ಬಿತ್ತು ಬ್ರೇಕ್

ಬೆಂಗಳೂರು, ಮೇ 30: ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಮಂಜೂರಾದ ಹಣವನ್ನು ನಕಲಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ಹಣ ನಷ್ಟ ಉಂಟು ಮಾಡಿದ ಪ್ರಕರಣದಲ್ಲಿ ಐಎಎಸ್ ಅಧಿಕಾರಿಗಳ ವಿರುದ್ಧ ಎಸಿಬಿ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.

ಇದರಿಂದಾಗಿ ಆರೋಪ ಎದುರಿಸುತ್ತಿರುವ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಸೇರಿದಂತೆ ಮೂವರು ಅಧಿಕಾರಿಗಳಿಗೆ ಸದ್ಯಕ್ಕೆ ಭ್ರಷ್ಟಚಾರ ನಿಗ್ರಹ ದಳದ (ಎಸಿಬಿ) ವಿಶೇಷ ನ್ಯಾಯಾಲಯದ ತನಿಖಾ ಅದೇಶದಿಂದ ರಿಲೀಫ್ ಸಿಕ್ಕಿದೆ.

ಎಸಿಬಿ ಕೋರ್ಟ್ ಆದೇಶ ರದ್ದು ಕೋರಿ ಈ ಹಿಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಮಿತಾ ಪ್ರಸಾದ್ (ನಿವೃತ್ತ ಐಎಎಸ್) ಮತ್ತು ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಮತ್ತು ರಾಜ್ಯ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹಾಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಸೋಮವಾರ ಈ ಮೂವರ ಅರ್ಜಿಗಳ ವಿಚಾರಣೆ ನಡೆಸಿ, ಅರ್ಜಿದಾರರ ವಿರುದ್ಧದ ಎಸಿಬಿ ತನಿಖೆ ಮತ್ತು ಮುಂದಿನ ಎಲ್ಲಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿತು. ಅಲ್ಲದೆ, ಪ್ರತಿವಾದಿಗಳಾದ ಹಲಸೂರುಗೇಟ್ ಠಾಣಾ ಪೊಲೀಸರು, ಎಸಿಬಿ ಮತ್ತು ಖಾಸಗಿ ದೂರುದಾರ ಎಸ್.ನಾರಾಯಣ ಸ್ವಾಮಿಗೆ ತುರ್ತು ನೋಟಿಸ್ ಜಾರಿ ಮಾಡಿದರು.

ಅರ್ಜಿದಾರರ ಆಕ್ಷೇಪವೇನು?

ಅರ್ಜಿದಾರರ ಪರ ವಕೀಲರು, ಅರ್ಜಿದಾರರ ವಿರುದ್ಧ ಯಾವುದೇ ಆರೋಪ ಇಲ್ಲದಿದ್ದರೂ ಖಾಸಗಿ ದೂರು ಸಲ್ಲಿಸಲಾಗಿದೆ. ದೂರು ದಾಖಲಿಸಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿಲ್ಲ. ಇದೇ ಪ್ರಕರಣ ಸಂಬಂಧ ಹಲಸೂರು ಠಾಣಾ ಪೊಲೀಸರು ಎರಡು ಬಾರಿ ತನಿಖೆ ನಡೆಸಿ,ಆರ್‌ಡಿಪಿಆರ್ ಕಾರ್ಯದರ್ಶಿ ಡಾ.ಬೋರೇಗೌಡ, ಗ್ರಾಮೀಣ ನೀರು ಸರಬರಾಜು ವಿಭಾಗದ ಉಪ ಕಾರ್ಯದರ್ಶಿ ರಾಮಕೃಷ್ಣ, ರಾಷ್ಟ್ರೀಕೃತ ಬ್ಯಾಂಕ್‌ವೊಂದರ ವ್ಯವಸ್ಥಾಪಕ ಸೀಲಂ ಗಿರಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದು, ಪ್ರಕರಣ ವಿಚಾರಣಾ ಹಂತದಲ್ಲಿದೆ ಎಂದರು.

ಏನಿದು ಪ್ರಕರಣ?

ಸಾಮಾಜಿಕ ಕಾರ್ಯಕರ್ತ ಎಸ್.ನಾರಾಯಣ ಸ್ವಾಮಿ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ ಹಾಗೂ ರಾಜ್ಯ ಜಲ ಮತ್ತು ನೈರ್ಮಲ್ಯ ಮಿಷನ್ ಯೋಜನೆಯಡಿ ಮಂಜೂರಾಗಿದ್ದ ಹಣವನ್ನು2011ರಿಂದ 2015ರ ನಡುವೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿರುವ ನಿವೃತ್ತ ಐಎಎಸ್ ಅಧಿಕಾರಿ ಅಮಿತ್ ಪ್ರಸಾದ್, ಟಿ.ಎಂ.ವಿಜಯಭಾಸ್ಕರ್, ಡಾ.ಇ.ವಿ.ರಮಣರೆಡ್ಡಿ ಅವರು ದುರುಪಯೋಗ ಪಡಿಸಿಕೊಂಡಿದ್ದಾರೆ. ನೂರಾರು ನಕಲಿ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ಆದೇಶಿಸಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಎಸಿಬಿ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಿದ್ದರು.

ಅಮಿತ್ ಪ್ರಸಾದ್ 104 ಬ್ಯಾಂಕ್ ಖಾತೆ ತೆರೆಯಲು ಅಕ್ರಮ ಆದೇಶಿಸಿದ್ದರು. ಡಾ.ಇ.ವಿ. ರಮಣ ರೆಡ್ಡಿ ನಕಲಿ ಖಾತೆಗಳಿಗೆ ಖಜಾನೆಯಿಂದ 257 ಕೋಟಿ ಹಣ ವರ್ಗಾಯಿಸಲು ಆದೇಶಿಸಿದ್ದರು. ಟಿ.ಎಂ. ವಿಜಯ ಭಾಸ್ಕರ್ ಅವರು, ಹೆಚ್ಚುವರಿ ವಿನಿಯೋಗ ಪ್ರಮಾಣ ಪತ್ರಗಳಿಗೆ ಸಹಿ ಹಾಕಿ ಅಕ್ರಮ ಎಸಗಿದ್ದಾರೆ ಎಂದು ಖಾಸಗಿ ದೂರಿನಲ್ಲಿ ಆರೋಪಿಸಿದ್ದರು.

ಇದೇ ವರ್ಷ ಏ.18ರಂದು 23ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ (ಎಸಿಬಿ ವಿಶೇಷ ಕೋರ್ಟ್) ಅರ್ಜಿದಾರರ ವಿರುದ್ಧ ತನಿಖೆ ನಡೆಸಿ ನಾಲ್ಕು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಎಸಿಬಿ ತನಿಖಾಧಿಕಾರಿಗಳಿಗೆ ನಿರ್ದೇಶಿಸಿ ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಮೆಟ್ಟಿಲೇರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಿಕೆಶಿ ದೆಹಲಿ ಫ್ಲ್ಯಾಟ್​ನಲ್ಲಿ ಸಿಕ್ಕಿರುವ 8.5 ಕೋಟಿ ರೂ, ಇಂದು ವಿಚಾರಣೆ

Tue May 31 , 2022
ನವದೆಹಲಿ(ಮೇ 31): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (KPCC President DK Shivakumar) ಅವರು ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (Enforcement Directorate) ಆರೋಪ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದಲ್ಲಿ (Enforcement Directorate Special Court) ವಿಚಾರಣೆ ನಡೆಸಲಿದೆ. ನ್ಯಾಯಾಧೀಶ ವಿಕಾಸ್ ದುಲ್ ನೇತೃತ್ವದ ಏಕಸದಸ್ಯ ಪೀಠದಲ್ಲಿ ಇಂದು ದೆಹಲಿಯ ಸಬ್ದರಜಂಗ್ ಎನ್ಕ್ಲೇವ್ ಪ್ಲ್ಯಾಟ್ ನಲ್ಲಿ ಆದಾಯ ತೆರಿಗೆ ಇಲಾಖೆ […]

Advertisement

Wordpress Social Share Plugin powered by Ultimatelysocial