ಬಾಲ್ಯ ವಿವಾಹ ಪ್ರಕರಣ: ವರನ ತಂದೆ, ತಾಯಿಗೆ ನಿರೀಕ್ಷಣಾ ಜಾಮೀನು ಮಂಜೂರು

ಬೆಂಗಳೂರು ಜೂ.3. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಒಂದು ವರ್ಷದ ಹಿಂದೆ ನಡೆದ ಬಾಲ್ಯ ವಿವಾಹ ಪ್ರಕರಣವೊಂದರಲ್ಲಿ ವರನ ತಂದೆ ಮತ್ತು ತಾಯಿಗಳಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಹಾಗಾಗಿ ತಮ್ಮ ಪುತ್ರನಿಗೆ 11 ವರ್ಷದ ಬಾಲಕಿಯೊಂದಿಗೆ ಬಾಲ್ಯ ವಿವಾಹ ಮಾಡಿದ್ದಾರೆಂಬ ಆರೋಪ ಹೊತ್ತಿರುವ ದಂಪತಿ ಸದ್ಯ ಬಂಧನ ಭೀತಿಯಿಂದ ಪಾರಾಗಿದ್ದಾರೆ.

ಪಾತಪಾಳ್ಯ ಹೋಬಳಿಯ ನಂದಪ್ಪಗಾರಪಲ್ಲಿ ಗ್ರಾಮದ ಗುಳ್ಳಪ್ಪ ಮತ್ತು ಲಕ್ಷ್ಮೀದೇವಮ್ಮ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾ.ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯಪೀಠ ಮಾನ್ಯ ಮಾಡಿದೆ. ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, “ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಯಾವುದೇ ಆರೋಪಗಳು ಇಲ್ಲದಿರುವ ಕಾರಣ, ದಂಪತಿಗೆ ನಿರೀಕ್ಷಣಾ ಜಾಮೀನು ನೀಡಬಹುದಾಗಿದೆ” ಎಂದು ನ್ಯಾಯಾಲಯ ಹೇಳಿದೆ.

“ಪ್ರಕರಣದ ವಾಸ್ತವಿಕ ಅಂಶಗಳು ಮತ್ತು ದಾಖಲೆಗಳನ್ನು ಗಮನಿಸಿದರೆ ಪ್ರಕರಣದ ಅಪರೂಪದ ಸಂಗತಿಗಳ ಬಗ್ಗೆ ನೋಡಿದರೆ, ದಂಪತಿಗಳ ವಿರುದ್ಧ ದೂರು ನೀಡಿರುವುದು ಶಾಲೆಯ ಮುಖ್ಯೋಪಾಧ್ಯಾಯರು, ಅಪ್ರಾಪ್ತ ಬಾಲಕಿಯ ಪೋಷಕರಲ್ಲ. ಜೊತೆಗೆ ಆ ಬಾಲಕಿಯನ್ನು ಲೈಂಗಿಕ ಅತ್ಯಾಚಾರಕ್ಕೆ ಗುರಿಪಡಿಸಿದ್ದಾರೆನ್ನುವ ಯಾವುದೇ ಗಂಭೀರ ಆರೋಪಗಳಿಲ್ಲದ ಕಾರಣ ಸಿಆರ್ ಪಿಸಿ ಸೆಕ್ಷನ್ 438 ಅಡಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದಾಗಿದೆ” ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 376 (2)(ಐ)(ಎನ್ ) (ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ), ಸೆಕ್ಷನ್ 5 (ಎಲ್ ) ಅಡಿ (ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ, ಪೋಸ್ಕೋ ಕಾಯಿದೆ ಸೆಕ್ಷನ್ 5 ಮತ್ತು 6 ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಸೆಕ್ಷನ್ 9 ಮತ್ತು 10ರಡಿ ಆರೋಪಗಳನ್ನು ಹೊರಿಸಲಾಗಿತ್ತು.

ಅರ್ಜಿದಾರರ ಪರ ವಕೀಲರು, ಬಾಲ್ಯ ವಿವಾಹ ನಿಷೇಧ ಕಾಯಿದೆಯಡಿ ಅರ್ಜಿದಾರರ ಮೇಲಿನ ಆರೋಪ ಗಂಭೀರವಲ್ಲ, ಒಂದು ವೇಳೆ ಶಿಕ್ಷೆಯಾದರೂ ಅದು ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆಗೆ ಅವಕಾಶವಿಲ್ಲ. ಅಪ್ತಾಪ್ತ ಬಾಲಕಿಯರ ಪೋಷಕರು ದೂರು ನೀಡಿಲ್ಲ, ಹಾಗಾಗಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕೆಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ:

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಹೋಬಳಿಯ ನಂದಪ್ಪಗಾರಪಲ್ಲಿ ಒಂದು ವರ್ಷದ ಹಿಂದೆ ನಡೆದ ಬಾಲ್ಯ ವಿವಾಹ ಪ್ರಕರಣ ವರದಿಯಾಗಿತ್ತು. ಅದರಲ್ಲಿ 11 ವರ್ಷದ ಬಾಲಕಿಯನ್ನು ಗ್ರಾಮದ ಗುಳ್ಳಪ್ಪ ಮತ್ತು ಲಕ್ಷ್ಮೀದೇವಮ್ಮ ದಂಪತಿ ತಮ್ಮ ಪುತ್ರನಿಗೆ ವಿವಾಹ ಮಾಡಿಸಿದ್ದಾರೆಂದು ಶಾಲೆಯ ಮುಖ್ಯೋಪಾದ್ಯಾಯ ಆದಿನಾರಾಯಣಪ್ಪ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಗುಡಿಬಂಡೆ ಪೊಲೀಸರು ತನಿಖೆ ಕೈಗೊಂಡಿದ್ದರು. ಗುಳ್ಳಪ್ಪ ಮತ್ತು ಲಕ್ಷ್ಮೀದೇವಮ್ಮ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು, ಆದರೆ ಈ ಬಗ್ಗೆ ಬಾಲಕಿಯ ಪೋಷಕರೇ ಯಾವುದೇ ದೂರು ನೀಡಿರಲಿಲ್ಲ. ಆದರೂ ಪ್ರಕರಣದಲ್ಲಿ ಪೊಲೀಸರು ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದು ವಿಚಾರಣಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಆ ನ್ಯಾಯಾಲಯ ಪರಿಗಣಿಸಿರಲಿಲ್ಲ. ಹಾಗಾಗಿ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯಸಭಾ ಚುನಾವಣೆಗೆ ಈಗ ಮತದಾನ ಅನಿವಾರ್ಯ; ವಿಪ್ ಜಾರಿ ಮಾಡಿದ ಕಾಂಗ್ರೆಸ್

Fri Jun 3 , 2022
ಬೆಂಗಳೂರು : ನಾಮಪತ್ರ ವಾಪಾಸ್ ಪಡೆಯುವುದಕ್ಕೆ ಕೊನೆಯ ದಿನವಾದ ಶುಕ್ರವಾರ ಕಾಂಗ್ರೆಸ್ ಇಟ್ಟ ಹೆಜ್ಜೆ ಹಿಂಪಡೆಯದೇ ಇರುವುದರಿಂದ ರಾಜ್ಯಸಭಾ ಚುನಾವಣೆಗೆ ಈಗ ಮತದಾನ ಅನಿವಾರ್ಯವಾಗಿದೆ.ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಲೆಹರ್ ಸಿಂಗ್, ಕಾಂಗ್ರೆಸ್ ನ ಜೈರಾಂ‌ ರಮೇಶ್, ಮನ್ಸೂರ್ ಅಲಿಖಾನ್ ಹಾಗೂ ಜೆಡಿಎಸ್ ನ ಕುಪ್ಪೇಂದ್ರ ರೆಡ್ಡಿ ಈಗ ಕಣದಲ್ಲಿ ಇದ್ದಾರೆ. ಜೆಡಿಎಸ್ ಗೆ ಚೆಕ್ ಮೇಟ್ ಕೊಡುವುದಕ್ಕಾಗಿಯೇ ಕಾಂಗ್ರೆಸ್ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿಖಾನ್ ಅವರನ್ನು ಕಣಕ್ಕೆ ಇಳಿಸಿದೆ. […]

Advertisement

Wordpress Social Share Plugin powered by Ultimatelysocial