ಓಹೋ ಹಿಮಾಲಯ

 

 

ಇಂದು ಅಂತರರಾಷ್ಟ್ರೀಯ ಪರ್ವತಗಳ ದಿನ. ನಮಗೆ ಭಾರತ ಎಂಬ ಕಲ್ಪನೆ ಮೂಡುವುದೇ ದೇಶದ ಭೂಪಟದ ಶಿರೋಭಾಗವನ್ನು ವಿಶಾಲವಾಗಿ ಭವ್ಯವಾಗಿ ವ್ಯಾಪಿಸಿರುವ ಹಿಮಾಲಯ ಪರ್ವತದ ಮೂಲಕ. ಅದನ್ನು ಅಲ್ಲಲ್ಲಿ ಕಿಂಚಿತ್ತು ಕಂಡವರಿಗೂ ಹೃದಯದಲ್ಲದೇನೊ ಭಕ್ತಿ.
ಹಿಮಾಲಯವು ಭಾರತ, ಚೀನ, ನೇಪಾಲ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಸರಹದ್ದುಗಳನ್ನು ದಕ್ಷಿಣ ಏಷ್ಯದ ಉತ್ತರ ಭಾಗದಲ್ಲಿ ವ್ಯಾಪಿಸಿರುವ ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಪರ್ವತ ಶ್ರೇಣಿ. ಇದು ಮಡಿಕೆ ಪರ್ವತಗಳಿಂದ ಕೂಡಿದ್ದು ಸದಾ ಹಿಮದಿಂದಾವೃತವಾಗಿರುತ್ತದೆ. ಇದನ್ನು ಹಿಮಾಲಯ ಎಂದು ಮಾತ್ರವಲ್ಲದೆ ಹಿಮಾವನ್, ಹಿಮಾದ್ರಿ ಅಥವಾ ಹಿಮಾಚಲ್ ಎಂದು ಸಹ ಕರೆಯುವರು.
ಹಿಮಾಲಯವು ಭಾರತದ ಉತ್ತರದ ಗಡಿಯಲ್ಲಿ ಅದ್ಭುತವಾದ ಗೋಡೆಯಂತಿದ್ದು, ಅವು ಪಶ್ಚಿಮ-ಪೂರ್ವಾಭಿಮುಖವಾಗಿ ಸಿಂಧೂ ನದಿ ಕಣಿವೆಯಿಂದ ಬ್ರಹ್ಮಪುತ್ರ ನದಿ ಕಣಿವೆಯವರೆಗೆ ಸುಮಾರು 2400 ಕಿಮೀ ಉದ್ದವಾಗಿ ಅವಿಚ್ಛಿನ್ನವಾಗಿ ಹಬ್ಬಿವೆ. ದಕ್ಷಿಣ-ಉತ್ತರವಾಗಿ ಸುಮಾರು 200 ರಿಂದ 500 ಕಿಮೀಗಳು ಅಗಲವಾಗಿವೆ. ಈ ಪರ್ವತಗಳು ಸುಮಾರು 5 ಲಕ್ಷ ಚ.ಕಿಮೀ ವಿಸ್ತೀರ್ಣವುಳ್ಳ ಪ್ರದೇಶವನ್ನು ಆವರಿಸಿವೆ. ಮಧ್ಯ ಏಷ್ಯದ ಪಾಮಿರ್ ಗ್ರಂಥಿಯಿಂದ ಅನೇಕ ಪರ್ವತ ಸರಣಿಗಳು ಪ್ರಾರಂಭಗೊಂಡು ವಿವಿಧ ದಿಕ್ಕುಗಳಿಗೆ ಹರಡಿವೆ. ಹಿಮಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರ ಭಾಗಗಳಲ್ಲಿ ಅಗಲವಾಗಿದ್ದು ಪೂರ್ವಕ್ಕೆ ಹೋದಂತೆ ಕಿರಿದಾಗುತ್ತವೆ. ಈ ಪರ್ವತಗಳು ನೇಪಾಲ ವಲಯದಲ್ಲಿ ಅತ್ಯಂತ ಎತ್ತರವಾಗಿವೆ. ಭಾರತದ ಕಡೆಗೆ ಕಡಿದಾದ ಮತ್ತು ಟಿಬೆಟ್ ಕಡೆಗೆ ಇಳಿಜಾರಿನಿಂದ ಕೂಡಿವೆ.
ಹಿಮಾಲಯ ಪರ್ವತ ಸಮುಚ್ಛಯವು, ಕಡಿದಾದ ಇಳಿಜಾರು, ಸದಾಹಿಮದಿಂದ ಆವೃತವಾದ ಭಾಗಗಳು, ಆಳವಾದ ಕಣಿವೆಗಳು, ಯೌವನಾವಸ್ಥೆಯ ನದಿಗಳು, ಸಂಕೀರ್ಣವಾದ ಭೂಗರ್ಭದ ರಚನೆ ಮತ್ತು ಉತ್ತಮವಾದ ಸಮಶೀತೋಷ್ಣ ವಲಯದ ಸಸ್ಯವರ್ಗ ಮುಂತಾದವುಗಳನ್ನು ಉಷ್ಣವಲಯದಲ್ಲಿ ಹೊಂದಿದೆ.
ಹಿಮಾಲಯ ಸರಣಿಯ ಪರ್ವತಗಳು ಒಂದಕ್ಕೊಂದು ಸರಪಳಿಯಂತೆ ಬೆಸೆದು ಎತ್ತರವಾಗಿವೆ. ಸು. 14 ಪರ್ವತಗಳು ಸರಾಸರಿ ಸಮುದ್ರಮಟ್ಟದಿಂದ 8000 ಮೀಟರ್ಗಳಿಗಿಂತ ಎತ್ತರವಾಗಿಯೂ ಸು. 20 ಪರ್ವತಗಳು 7500 ಮೀಗಿಂತ ಎತ್ತವಾಗಿಯೂ ಸುಮಾರು 94 ಪರ್ವತಗಳು 7300 ಮೀ ಗಿಂತಲೂ ಎತ್ತರವಾಗಿ ಇವೆ.
ಹಿಮಾಲಯ ಪರ್ವತದ ಉಗಮದ ಬಗ್ಗೆ ಹಲವಾರು ಸಂಶೋಧಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಅವರಲ್ಲಿ ಸ್ಪೇಟ್, ಡಿ.ಎನ್. ವಾಡಿಗರ್, ಎಂ.ಎಸ್. ಕೃಷ್ಣನ್ ಮತ್ತು ವ್ಯಾಗರ್ ಮೊದಲಾದವರು ಸೇರಿದ್ದಾರೆ. ಹಿಮಾಲಯ ಪ್ರದೇಶವು ಸು. 120 ಮಿಲಿಯನ್ ವರ್ಷಗಳ ಹಿಂದೆ ಟಿಥಿಸ್ ಎಂಬ ವಿಶಾಲವಾದ ಸಾಗರ ಒಂದರ ಭಾಗವಾಗಿದ್ದಿತು. ಮಯೋಸೆನ್ ಭೂ ಯುಗದಲ್ಲಿ ಟಿಥಿಸ್ ಸಾಗರದ ಉತ್ತರದಲ್ಲಿದ್ದ ಅಂಗಾರ ಮತ್ತು ದಕ್ಷಿಣದಲ್ಲಿದ್ದ ಗೊಂಡ್ವಾನ ಭೂ ಭಾಗಗಳ ಒತ್ತಡದಿಂದಾಗಿ ಸಾಗರ ತಳದ ಶಿಲಾಸ್ತರಗಳು ಮೇಲಕ್ಕೆ ಮಡಿಕೆಗೊಳ್ಳುವ ಮೂಲಕ ಹಿಮಾಲಯ ಪರ್ವತಗಳು ನಿರ್ಮಾಣಗೊಂಡಿತೆಂದು ಭೂಗರ್ಭಶಾಸ್ತ್ರಜ್ಞರ ಅಭಿಪ್ರಾಯ.
ಸರ್ ಸಿಡ್ನಿ ಬುರ್ರೇಡ್ರವರು ಹಿಮಾಲಯದ ಒಟ್ಟು ಉದ್ದ ಹಾಗೂ ಅಲ್ಲಿ ಕಂಡುಬರುವ ನದಿಕಣಿವೆಯನ್ನು ಆಧರಿಸಿ ನಾಲ್ಕು ಪ್ರಮುಖ ವಿಭಾಗಗಳಾಗಿ ವಿಂಗಡಿಸಿದ್ದಾರೆ.
ಪಂಜಾಬ್ ಹಿಮಾಲಯ: ಸಿಂಧೂ ಮತ್ತು ಸಟ್ಲೇಜ್ ನದಿಯ ಒಟ್ಟು 560 ಕಿಮೀ ಉದ್ದವಾದ ಪ್ರದೇಶವನ್ನು ಪಂಜಾಬ್ ಹಿಮಾಲಯವೆಂದು ಕರೆಯುವರು. ಇದು ವಿಸ್ತಾರವಾದ ಜಮ್ಮು ಮತ್ತು ಕಾಶ್ಮೀರ, ಹಿಮಾಚಲಪ್ರದೇಶ ಮುಂತಾದವುಗಳನ್ನೂ ಒಳಗೊಂಡಿರುವುದರಿಂದ ಕಾಶ್ಮೀರ ಮತ್ತು ಹಿಮಾಚಲ್ ಹಿಮಾಲಯಗಳೆಂದು ಕರೆಯಲಾಗಿದೆ. ಇಲ್ಲಿ ಕಾರಕೋರಮ್, ಲಡಕ್, ಪಿರ್ ಪಂಜಾಲ್, ಜಾಷರ್ ಮತ್ತು ಧಾವ್ಲೂ ದಾರ್ ಪರ್ವತ ಸರಣಿಗಳು ಕಂಡುಬರುತ್ತವೆ. ಇಲ್ಲಿ 3444 ಮೀ. ಎತ್ತರದ ಜೋಜಿಲಾ ಮಾರ್ಗ ಉತ್ತಮವಾಗಿದೆ. ಇಲ್ಲಿ ದಿಬ್ಬಗಳು, ಸರೋವರಗಳು, ಕಣಿವೆಗಳು ಕಂಡುಬರುತ್ತವೆ.
ಕುಮಾವೋನ್ ಹಿಮಾಲಯ: ಇದು ಉತ್ತರ ಪ್ರದೇಶದ ಉತ್ತರದಲ್ಲಿದ್ದು ಸಟ್ಲೀಜ್ನಿಂದ ಕಾಳಿನದಿಯವರೆಗೆ ಹರಡಿದ್ದು ಸು. 38000 ಚ.ಕಿಮೀ. ಕ್ಷೇತ್ರವನ್ನು ಆವರಿಸಿದೆ. ಇಲ್ಲಿ ಅನೇಕ ಎತ್ತರವಾದ ಶಿಖರಗಳಿವೆ. ಉದಾ: ನಂದಾದೇವಿ, ಕಾಮೆಟ್, ಬದ್ರಿನಾಥ್, ಕೇದಾರ್ನಾಥ್, ನಂದಾಕೋಲ್, ಗಂಗೋತ್ರಿ ಅಲ್ಲದೆ ಅನೇಕ ಸರೋವರಗಳು ಮತ್ತು ಗಿರಿಧಾಮಗಳು ಕಂಡುಬರುತ್ತವೆ. ಗಿರಿಧಾಮಗಳಲ್ಲಿ ಡೆಹರಾಡೂನ್, ನೈನಿಥಾಲ್, ಮುಸ್ಸೂರಿ ಮತ್ತು ಭೀಮತಾಲ್ಗಳು ಪ್ರಮುಖವಾದವು.
ನೇಪಾಲ ಹಿಮಾಲಯ: ಇದು ಕಾಳಿನದಿಯಿಂದ ಟಿಸ್ತಾ ನದಿಯವರೆಗೆ ಸುಮಾರು 800 ಕಿಮೀ. ಉದ್ದವಾಗಿದ್ದು 1.19ಲಕ್ಷ ಚ.ಕಿಮೀ. ಪ್ರದೇಶವನ್ನಾವರಿಸಿದೆ. ಈ ಭಾಗದಲ್ಲಿ ಅನೇಕ ಎತ್ತರವಾದ ಶಿಖರಗಳು ಇವೆ. ಉದಾ: ಧವಳಗಿರಿ, ಅನ್ನಪೂರ್ಣ, ಮೊನಸ್ಲು, ಮೌಂಟ್ ಎವರೆಸ್ಟ್, ಮಾಕೂಲು, ಕಾಂಚನಜುಂಗ ಮುಂತಾದವು. ಸಿಕ್ಕಿಂ ಶ್ರೇಣಿಯು ಇಲ್ಲಿಯೇ ಕಂಡುಬರುತ್ತದೆ. ಇವುಗಳಲ್ಲದೆ ಡಾರ್ಜಿಲಿಂಗ್ ಹಿಮಾಲಯಗಳು ಪಶ್ಚಿಮ ಬಂಗಾಲ ಮತ್ತು ಭೂತಾನ ಹಿಮಾಲಯಗಳು ಹಂಚಿಕೆಯಾಗಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಸುಜಾತಾ ನನಗೆ ಇಷ್ಟವಾದ ಕಲಾವಿದೆಯರಲ್ಲಿ ಒಬ್ಬರು

Sun Dec 25 , 2022
  ಸುಜಾತಾ ನನಗೆ ಇಷ್ಟವಾದ ಕಲಾವಿದೆಯರಲ್ಲಿ ಒಬ್ಬರು. ಸಂತಸ, ದುಃಖ, ಪ್ರೀತಿ, ಭಾವುಕತೆ, ಇತ್ಯಾದಿಗಳನ್ನು ತಮ್ಮ ಕಣ್ಗಳಲ್ಲಿ, ಮುಖಚರ್ಯೆಯಲ್ಲಿ, ಆಡಂಬರವಿಲ್ಲದ ಸುಸಂಸ್ಕೃತ ಸಂಯಮದ ಹಾವಭಾವಗಳಲ್ಲಿ ಅಭಿವ್ಯಕ್ತಿಸುತ್ತಿದ್ದ ಕಲಾವಿದೆ ಈಕೆ. ಸುಜಾತಾ 1952ರ ಡಿಸೆಂಬರ್ 10ರಂದು ಶ್ರೀಲಂಕಾದಲ್ಲಿದ್ದ ಮಲಯಾಳಿ ಕುಟುಂಬದಲ್ಲಿ ಜನಿಸಿದರು. ಶ್ರೀಲಂಕಾದಲ್ಲಿ ಬಾಲ್ಯ ಕಳೆದು 15ನೇ ವಯಸ್ಸಲ್ಲಿ ಕೇರಳಕ್ಕೆ ವಲಸೆ ಬಂದರು. ಶಾಲೆಯಲ್ಲಿದ್ದಾಗಲೇ ನಟನೆ ಇವರಿಗೆ ಇಷ್ಟವಾಗಿತ್ತು. ಕೇರಳಕ್ಕೆ ಬಂದ ಹೊಸತರಲ್ಲೇ ‘ಎರ್ನಾಕುಲಂ ಜಂಕ್ಷನ್’ ಎಂಬ ಮಲಯಾಳದ ಚಿತ್ರದಲ್ಲಿ ನಟಿಸಿದರು. […]

Advertisement

Wordpress Social Share Plugin powered by Ultimatelysocial