ಐಸಾಕ್ ನ್ಯೂಟನ್ ಪ್ರಪಂಚದ ಸಾರ್ವಕಾಲಿಕ ಸರ್ವಶ್ರೇಷ್ಠ ವಿಜ್ಞಾನಿಗಳ ಪೈಕಿ

 ನಿಸರ್ಗದ ಬಲಗಳಲ್ಲಿ ಸಾಂಗತ್ಯವನ್ನು ಕಂಡುಕೊಂಡು ಅವನ್ನು ಸುಭದ್ರ ಹಾಗೂ ಸುವ್ಯಾಖ್ಯಿತ ಗಣಿತ ಚೌಕಟ್ಟಿನ ಒಳಗೆ ಕ್ರಮಬದ್ದವಾಗಿ ವಿವರಿಸಿ ತನ್ಮೂಲಕ ವಿಶ್ವವಿದ್ಯಮಾನಗಳಿಗೆ ಖಚಿತ ಅರ್ಥವನ್ನು ನೀಡಿದ ಯುಗಪ್ರವರ್ತಕ ಮಹಾಪುರುಷ, ಪ್ರಯೋಗಪಟು, ಸಿದ್ಧಾಂತ ಪರಿಣತ, ಯಂತ್ರ ವಿಜ್ಞಾನಿ ಹಾಗೂ ಶ್ರೇಷ್ಠ ಕಲಾವಿದ.
ಇತಿಹಾಸದ ವಿರಳ ಮತ್ತು ವಿಶೇಷ ಪರ್ವಬಿಂದುವಿನಲ್ಲಿ ನ್ಯೂಟನ್ನನ ಅವತಾರವಾಯಿತು. ನ್ಯೂಟನ್ಪೂರ್ವ ದಿನಗಳಲ್ಲಿ ಆನುಭವಿಕ ಪ್ರಪಂಚದ ಸೃಷ್ಟಿ ಮರ್ಮವನ್ನು ರೂಪಿಸುವ ಸುವ್ಯವಸ್ಥಿತ ಮತ್ತು ಸ್ವಯಂಪೂರ್ಣ ತಾತ್ತ್ವಿಕ ಪ್ರಕ್ರಮ ಯಾವುದೂ ಇರಲಿಲ್ಲ. ಆದರೆ ಅಂಥ ತತ್ತ್ವವೊಂದನ್ನು ಶೋಧಿಸಲು ಕೊಪರ್ನಿಕಸ್ (1473-1543), ಕೆಪ್ಸರ್ (1571-1630), ಗೆಲಿಲಿಯೊ(1564-1642)ಮೊದಲಾದ ವಿಜ್ಞಾನಿಗಳು ಶಿಲಾನ್ಯಾಸಮಾಡಿ ಅಡಿಪಾಯ ಕಟ್ಟಿದರು. ಈ ಭದ್ರತಳಪಾಯದ ಮೇಲೆ ಸೃಷ್ಟಿಮರ್ಮದ ತಾತ್ತ್ವಿಕ ಸೌಧವನ್ನು ರಚಿಸಿದ್ದೇ ನ್ಯೂಟನ್ನನ ಮಹಾಸಾಧನೆ.
ಲಗ್ರಾಂಜ್ ಎಂಬ ಗಣಿತಜ್ಞ ಹೀಗೆ ಹೇಳಿದ್ದಾನೆ. ಇಡೀ ವಿಶ್ವದ ರಚನೆಯನ್ನು ಕಂಡುಕೊಳ್ಳುವುದು ಒಂದು ಸಲ ಮಾತ್ರ ಸಾಧ್ಯ. ಅದು ಸಿದ್ಧಿಸಿದ್ದು ನ್ಯೂಟನ್ನನಿಗೆ ಮಾತ್ರ; ಆದ್ದರಿಂದ ಅವನು ಅದೃಷ್ಟಶಾಲೀ. ಆದರೆ ಇದು ನ್ಯೂಟನ್ ಆವಿಷ್ಕರಿಸಿದ ಗುರುತ್ವ ಸೂತ್ರ ಹಾಗೂ ಚಲನನಿಯಮಗಳು ಅಲ್ಪವೇಗದ ಚಲನೆಗಳಿಗೆ ಮಾತ್ರ ಅನ್ವಯಿಸುವುವು. ಎಂದೂ ಬೆಳಕಿನ ವೇಗದಂಥ ಅತಿ ವೇಗದ ಚಲನೆಗಳಿಗೆ ಅನ್ವಯಿಸುವುದಿಲ್ಲ. ಎಂದೂ ಈ ನಿಯಮಗಳಿಗೆ ಮೂಲಾಧಾರಗಳಾದ ರಾಶಿ, ಆಕಾಶ ಮತ್ತು ಕಾಲ ಇವುಗಳ ಸ್ವರೂಪವನ್ನು ಕುರಿತಂತೆ ನ್ಯೂಟನ್ನನಿಗೆ ಇದ್ದ ಭಾವನೆಗಳು ಅಸಾಧು ಎಂದೂ ಪ್ರಸಕ್ತ ಶತಮಾನದಲ್ಲಿ ಐನ್ ಸ್ಟೈನ್ ಮಂಡಿಸಿದ ಸಾಪೇಕ್ಷತಾ ಸಿದ್ಧಾಂತದಿಂದ ತಿಳಿದಿದೆ. ಆದರೆ ಚಲನೆಯ ವಿಚಾರವಾಗಿ ನ್ಯೂಟನ್ ಮಾಡಿದ ಸಂಶೋಧನೆ ಸಾಪೇಕ್ಷತೆಗೆ ವೇದಿಕೆ ಒದಗಿಸಿತು ಎಂಬುದಾಗಿ ಖುದ್ದು ಐನ್ ಸ್ಟೈನ್ ಹೇಳಿದ್ದಾರೆ.
ನ್ಯೂಟನ್ ಹಾಗೂ ಆತನ ಸಮಕಾಲೀನ ಲೈಪ್ ನಿಟ್ಸ್ ಉಪಜ್ಞಿಸಿದ ಕಲನಶಾಸ್ತ್ರದ ಹೊಸ ಹತ್ಯಾರಿನಿಂದ ಗಣಿತವಿಜ್ಞಾನ ಪ್ರಗತಿಗೆ ಅಪಾರ ಲಾಭವಾಗಿದೆ. ವಿಜ್ಞಾನದ ಹಲವಾರು ಶಾಖೆಗಳಲ್ಲಿ ನ್ಯೂಟನ್ನನ ಅಸೀಮ ಮೇಧಾಶಕ್ತಿ ಹರಿದು ಹೊಸ ಸಂಗತಿಗಳು ಬೆಳಕಿಗೆ ಬಂದಿವೆ. ನಿಸರ್ಗ ಅವನೆದುರು ತೆರೆದಿಟ್ಟ ಪುಸ್ತಕದಂತೆ ಇತ್ತು. ಅದನ್ನು ಆತ ಅನಾಯಾಸವಾಗಿ ಓದಬಲ್ಲವನಾಗಿದ್ದ. ಪ್ರಯೋಗಗಳಲ್ಲಿ ನಿಪುಣ ತತ್ತ್ವದಲ್ಲಿ ವೇತ್ತ. ಯಂತ್ರ ನಿರ್ಮಾಣದಲ್ಲಿ ಸಮರ್ಥ ಮತ್ತು ವಿಷಯ ನಿರೂಪಣೆಯಲ್ಲಿ ಕಲೆಗಾರ–ಇವನೇ ನ್ಯೂಟನ್.
ಇಂಗ್ಲೆಂಡಿನ ದೇಶದ ಲಿಂಕನ್ಶೈರಿನ ಗ್ರ್ರಾಂಥಮ್ ಪಟ್ಟಣದ ಬಳಿ ಇರುವ ವೂಲ್ಸ್ ತೋರ್ಪ್ ಎಂಬ ಚಿಕ್ಕ ಗ್ರಾಮದಲ್ಲಿ 1642ರ ಡಿಸಂಬರ್ 25ರಂದು ಐಸಾಕ್ ನ್ಯೂಟನ್ನನ ಜನನವಾಯಿತು. ಕ್ರಿಶ್ಚನರಿಗೆ ಪವಿತ್ರವಾದ ಕ್ರಿಸ್ಮಸ್ ದಿನದಂದು ಈ ಮಹಾಮೇಧಾವಿ ಹುಟ್ಟಿದ್ದು ಮತ್ತು ಕಾಲಾಂತರದಲ್ಲಿ ಪ್ರಪಂಚಕ್ಕೆ ಬೆಳಕು ಬೀರಿದ್ದು ಒಂದು ಯೋಗಾಯೋಗ. ನ್ಯೂಟನ್ನನ ತಂದೆ ಒಬ್ಬ ಜಮೀನುದಾರ. ಆದರೆ ತನ್ನ ಮಗ ಹುಟ್ಟುವ ಮೊದಲೇ ಆತ ತೀರಿಹೋಗಿದ್ದ. ಬಸುರಿಗೆ ಇನ್ನೂ ಒಂಬತ್ತು ತಿಂಗಳು ತುಂಬುವ ಮೊದಲೇ ತಾಯಿ ಈ ಮಗುವನ್ನು ಹೆಡೆದಳು. ಹೀಗೆ ಅಕಾಲದಲ್ಲಿ ಅನಾಥವಾಗಿ ಈ ಮಗುವನ್ನು ಹಡೆದಳು. ಹೀಗೆ ಆಕಾಲದಲ್ಲಿ ಅನಾಥವಾಗಿ ಹುಟ್ಟಿ ಮಗು ಕೃಶವಾಗಿಯೂ ದುರ್ಬಲವಾಗಿಯೂ ಇದ್ದುದು ಸ್ವಾಭಾವಿಕವೇ. ಆಗ ಅವನನ್ನು ಅಳತೆಯ ಅರ್ಧ ಸೇರಿನೊಳಗೆ ಹುದುಗಿಸಿಡಬಹುದಾಗಿತ್ತು ಎಂದು ಅವನ ತಾಯಿ ಹೇಳುತ್ತಿದ್ದುದಿತ್ತು. ಮಗುವಿಗೆ ತ್ರಾಣದಾಯಕ ಔಷಧಿಯನ್ನು ತರಲೆಂದು ಔಷಧಿ ಅಂಗಡಿಗೆ ಹೋಗಿ ಬಂದ ಇಬ್ಬರು ಮಹಿಳೆಯರು ತಾವು ಮರಳುವ ತನಕವೂ ಶಿಶು ಉಳಿದಿರಲಾರದೆಂದೇ ಭಾವಿಸಿದ್ದರು. ಆದರೆ ಹಾಗಾಗದೇ ಇನ್ನೂ ಬದುಕಿದ್ದ ಶಿಶುವನ್ನು ಕಂಡ ಅವರ ವಿಸ್ಮಯ ಹೇಳತೀರದು. ಮಗುವಿನ ಆಯಾ ಪರಿಮಿತಿ ಎಂಬತ್ತೈದು ವರ್ಷಗಳೆಂದಾಗಲಿ ಅದು ಅಗಾಧ ವಿಶ್ವಕ್ಕೆ ಭಾಷ್ಯಬರೆಯಬಲ್ಲಂಥ ಮಹಾ ಮೇಧಾವಿಯಾಗುವುದೆಂದಾಗಲಿ ಆಗ ಯಾರೂ ಊಹಿಸಿಯೂ ಇರಲಾರರು. ಎರಡು ವರ್ಷಗಳ ತರುವಾಯ ನ್ಯೂಟನ್ನನ ತಾಯಿ ಪುನರ್ವಿವಾಹವಾಗಿ ಬೇರೆಮನೆ ಹೂಡಿದ್ದರಿಂದ ಇವನು ಅಜ್ಜಿಯ ಆಸರೆ ಪಡೆದ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಹಿರಿಯ IPS ಅಧಿಕಾರಿ ಅಮರ್ ಕುಮಾರದ ಪಾಂಡೆ ನಿವೃತ್ತಿ ಹಿನ್ನಲೆ.

Mon Dec 26 , 2022
ಹಿರಿಯ IPS ಅಧಿಕಾರಿ ಅಮರ್ ಕುಮಾರದ ಪಾಂಡೆ ನಿವೃತ್ತಿ ಹಿನ್ನಲೆ ಡಿಸೆಂಬರ್ 31 ರಂದು ನಿವೃತ್ತಿ ಹಿನ್ನಲೆ ಇಂದು ಕೋರಮಂಗಲ ಕೆ ಎಸ್ ಆರ್ ಪಿ ಮೈದಾನದಲ್ಲಿ ಪೇರ್ ವೇಲ್ ಪರೇಡ್ 1989 ಬ್ಯಾಚನ IPS ಅಧಿಕಾರಿ (ಬಿಹಾರ ಮೂಲದವರ) ಪ್ರಸ್ತುತ ಅಗ್ನಿಶಾಮಕ ದಳ DGP ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಮರ್ ಕುಮಾರ್ ಪಾಂಡೆ ಪೇರ್ ವೇಲ್ ಪರೇಡ್ ನಲ್ಲಿ DGIGP ಪ್ರವೀಣ್ ಸೂದ್, ಸೇರಿ ಪೊಲೀಸ್ ಅಧಿಕಾರಿಗಳು ಭಾಗಿ […]

Advertisement

Wordpress Social Share Plugin powered by Ultimatelysocial