ಭಾರತದಲ್ಲಿ ಚಳಿ ಕೊರೆಯುತ್ತಿದೆ.

ಭಾರತದಲ್ಲಿ ಚಳಿ ಕೊರೆಯುತ್ತಿದೆ. ಅದರಲ್ಲೂ ಉತ್ತರ ಭಾರತವಂತೂ ಶೀತಕ್ಕೆ ತತ್ತರಿಸಿ ಹೋಗುತ್ತಿದೆ. ತಾಪಮಾನ ಮೈನಸ್​​ ಡಿಗ್ರಿ ಸೆಲ್ಸಿಯಸ್​​ನಲ್ಲಿ ದಾಖಲಾಗುತ್ತಿದೆ. ಜನ ಮನೆಯಿಂದ ಹೊರಬರಲಾಗದೆ ಕಷ್ಟಪಡುತ್ತಿದ್ದಾರೆ. ನಗರಗಳಲ್ಲಿ ಫೂಟ್​ಪಾತ್​​ ಮೇಲೆಲ್ಲ ಬೆಂಕಿ ಹಾಕಿಕೊಂಡು ಕಾಯಿಸುತ್ತಿದ್ದಾರೆ.

ಭಾರತದಲ್ಲಿ ಈ ಪರಿಸ್ಥಿತಿ ಇರುವಾಗ ಇಡೀ ಭೂಮಿಯಲ್ಲೇ ಅತ್ಯಂತ ಶೀತ ಪ್ರದೇಶ ಎಂದು (ಕು)ಖ್ಯಾತಿ ಪಡೆದ   ನಗರದಲ್ಲಿ ಈಗೆಷ್ಟು ಚಳಿ ಬೀಳುತ್ತಿರಬಹದು? ಅಷ್ಟಕ್ಕೂ ಭೂಮಿ ಮೇಲಿನ ಅತ್ಯಂತ ತಂಪು ವಾತಾವರಣ ಇರುವ ಸ್ಥಳ ಯಾವುದು?

ರಷ್ಯಾದ ಸೈಬೀರಿಯಾದಲ್ಲಿರುವ ಯಾಕುಟ್ಸ್ಕ್ ಎಂಬ ನಗರ ಇಡೀ ಪ್ರಪಂಚದಲ್ಲೇ ಅತ್ಯಂತ ಶೀತನಗರ ಎನ್ನಿಸಿಕೊಂಡಿದೆ. ಇದು ಮಾಸ್ಕೋದಿಂದ ಪೂರ್ವಕ್ಕೆ ಸುಮಾರು 5000 ಕಿಮೀ ದೂರದಲ್ಲಿ ಇದೆ. ಇಲ್ಲೀಗ ಮೈನಸ್​ 50 ಡಿಗ್ರಿ ಸೆಲ್ಸಿಯಸ್​ ಚಳಿ ಬೀಳುತ್ತಿದೆಯಂತೆ. ಇಲ್ಲಿ ತಾಪಮಾನ ಸಾಮಾನ್ಯವಾಗಿ ಯಾವಾಗಲೂ ಮೈನಸ್​ 40 ಡಿಗ್ರಿ ಸೆಲ್ಸಿಯಸ್​​ಗಿಂತಲೂ ಕಡಿಮೆ ಇರುತ್ತದೆ. ಆದರೆ ಈ ಸಲ ಎಲ್ಲ ದಾಖಲೆಗಳನ್ನೂ ಮುರಿದು -50 ಡಿಗ್ರಿ ಸೆಲ್ಸಿಯಸ್​​ಗೆ ಇಳಿದಿದೆ ಎಂದು ಹವಾಮಾನ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಇಲ್ಲಿ ಸದಾ ಚಳಿಯೇ ಇರುವುದರಿಂದ ಅಲ್ಲಿನ ನಿವಾಸಿಗಳಿಗೆ ಒಂದು ಹಂತದಲ್ಲಿ ರೂಢಿಯಾಗಿದೆ. ಆದರೂ ಹೀಗೆ ಚಳಿಯ ಪ್ರಮಾಣ ಜಾಸ್ತಿಯಾಗುತ್ತಿರುವಾಗ ಅವರೂ ತೀವ್ರ ತೊಂದರೆಗೆ ಒಳಗಾಗುತ್ತಿದ್ದಾರೆ. ಅಡಿಯಿಂದ ಮುಡಿಯವರೆಗೆ ಪೂರ್ತಿಯಾಗಿ ಬಟ್ಟೆ ಧರಿಸಿದರೂ ಚಳಿಯೆಂಬುದು ಮೈಯೊಳಗೆ ನುಸುಳಿ, ಸಂಕಟ ಕೊಡುತ್ತಿದೆ. ಮನೆಯಿಂದ ಹೊರಗೆ ಬರಲಾಗುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಳ್ಳುತ್ತಿರುವುದಾಗಿ ರಾಯಿಟರ್ಸ್​ ಮತ್ತಿತರ ಮಾಧ್ಯಮಗಳು ವರದಿ ಮಾಡಿವೆ.

ನೀರನ್ನು ಹೆಚ್ಚೆಚ್ಚು ಕಾಯಿಸಬೇಕಾದ ಅಗತ್ಯ ಇರುವುದರಿಂದ ಬಿಸಿ ನೀರಿನ ಟ್ಯಾಂಕ್​​ನ ಕೊಳವೆಗಳೆಲ್ಲ ಸ್ಫೋಟಿಸಿ ಹೋಗುತ್ತಿವೆ. ನೀರಿನ ಪೈಪ್​​ಗಳೂ ಮುರಿಯುತ್ತಿವೆ. ಪ್ರತಿಯೊಂದು ಪದಾರ್ಥಗಳೂ ಗಟ್ಟಿಯಾಗಿಬಿಡುತ್ತಿವೆ. ಸ್ಥಳೀಯ ಆಡಳಿತವೂ ಏನೂ ಮಾಡಲಾಗದ ಪರಿಸ್ಥಿತಿ ಇದೆ ಎಂದು ನಿವಾಸಿಯೊಬ್ಬ ಅಲ್ಲಿನ ಮೆಟ್ರೋ ಸುದ್ದಿಪತ್ರಿಕೆಗೆ ಹೇಳಿದ್ದಾರೆ. ಈ ಪ್ರಮಾಣದಲ್ಲಿ ಚಳಿ ಬೀಳಲು ಕಾರಣ ಮನುಷ್ಯ. ಇದು ಮನುಷ್ಯ ನಿರ್ಮಿತ ಅನಾಹುತ ಎಂದು ಯಾಕುಟ್ಸ್ಕ್​​​​ನ ಉಪ ಮೇಯರ್​​​ ವ್ಲಾಡಿಮಿರ್ ಫೆಡೋರೊವ್ ತಿಳಿಸಿದ್ದಾರೆ.

ಕರೌಲಿ: ಶಿವನ ದೇವಸ್ಥಾನದ ಗೋಡೆಗೆ ಜೆಸಿಬಿ ಡಿಕ್ಕಿ ಹೊಡೆದ ಪರಿಣಾಮ ಆ ದೇಗುಲ ಕುಸಿದು ಬಿದ್ದಿರುವ   ಘಟನೆ ರಾಜಸ್ಥಾನದ ಕರೌಲಿಯಲ್ಲಿ ನಡೆದಿದೆ. ಇಲ್ಲಿನ ಸಪೋಟರಾ ಎಂಬ ಗ್ರಾಮದಲ್ಲಿ ಇದ್ದ ಈಶ್ವರ ದೇಗುಲ ಪೂರ್ತಿಯಾಗಿ ಕುಸಿದಿದ್ದು, ಅದರ ಅವಶೇಷಗಳ ಅಡಿಯಿಂದ ಇಬ್ಬರು ಮಹಿಳೆಯರನ್ನು ಹೊರಗೆ ತೆಗೆಯಲಾಗಿದೆ. ಅವರಿಬ್ಬರೂ ಗಾಯಗೊಂಡಿದ್ದು, ಚಿಕಿತ್ಸೆಗೆ ಕಳಿಸಲಾಗಿದೆ. ಇನ್ನೂ ಕೆಲವರು ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ.

ದೇವಸ್ಥಾನದ ಪಕ್ಕದಲ್ಲಿ, ಪಿಡಬ್ಲ್ಯೂಡಿ ಇಲಾಖೆಯಿಂದ ಚರಂಡಿ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಅಲ್ಲಿಯೇ ಸರ್ಕಾರಿ ಅಧಿಕಾರಿಗಳೂ ಇದ್ದರು. ಈ ಚರಂಡಿ ನಿರ್ಮಾಣ ಕೆಲಸದ ನಿಮಿತ್ತ ಸ್ಥಳಕ್ಕೆ ಬಂದಿದ್ದ ಜೆಸಿಬಿ ದೇವಸ್ಥಾನದ ಗೋಡೆಗೆ ಗುದ್ದಿದೆ. ಆಗ ದೇಗುಲದ ಒಂದು ಭಾಗ ಸಂಪೂರ್ಣವಾಗಿ ಕುಸಿದಿದೆ. ಸ್ಥಳೀಯರು ಪಿಡಬ್ಲ್ಯೂಡಿ ಇಲಾಖೆಯನ್ನೇ ದೂರುತ್ತಿದ್ದಾರೆ. ದೇವಸ್ಥಾನವಿದೆ ಎಂದು ಗೊತ್ತಿದ್ದರೂ ಅಧಿಕಾರಿಗಳು ಜಾಗರೂಕತೆಯಿಂದ ಕೆಲಸ ಮಾಡಿಸಿಲ್ಲ ಎಂದು ಹೇಳುತ್ತಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.

ಕರಾಚಿ:ಭಾರತದ ಜೊತೆಗೆ ಮೂರು ಯುದ್ಧಗಳನ್ನು ನಮ್ಮ ದೇಶ ನಡೆಸಿದ್ದು, ಪಾಠ ಕಲಿತಿದ್ದೇವೆ. ಹೆಚ್ಚಿನ ಯಾತನೆ, ಬಡತನ ಮತ್ತು ನಿರುದ್ಯೋಗ ಮಾತ್ರವೇ ನಮಗೆ ಅದರಿಂದ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ನಿರ್ಣಾಯಕ, ಮುಕ್ತ ಮಾತುಕತೆ ನಡೆಸಲು ಇಚ್ಛಿಸುತ್ತೇನೆ ಎಂದು ಪಾಕಿಸ್ತಾನ ಪ್ರಧಾನ ಮಂತ್ರಿ ಶೆಹಬಾಜ್‌ ಶರೀಫ್‌ ಅವರು ಹೇಳಿದ್ದಾರೆ.

ಅಲ್‌ ಅರಬಿಯಾ ಎಂಬ ಅಂತಾರಾಷ್ಟ್ರೀಯ ಅರೇಬಿಕ್‌ ನ್ಯೂಸ್‌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ. ನಮ್ಮ ದೇಶ ಆರ್ಥಿಕ ದುಃಸ್ಥಿತಿಯತ್ತ ಜಾರುತ್ತಿದ್ದು, ಜಗತ್ತಿನ ಮುಂದೆ ಭಿಕ್ಷಾಪಾತ್ರೆ ಹಿಡಿದು ನಿಂತಿದ್ದೇವೆ; ಇನ್ನೊಂದು ಕಡೆ ಭಾರತ ದಿನದಿಂದ ದಿನಕ್ಕೆ ಪ್ರಗತಿ ಸಾಧಿಸುತ್ತಿದೆ ಎಂದು ಪಾಕಿಸ್ತಾನದ ಪ್ರಮುಖ ದಿನಪತ್ರಿಕೆ ಇತ್ತೀಚೆಗೆ ಬರೆದ ಕೆಲವೇ ದಿನಗಳ ಅಂತರದಲ್ಲಿ ಈ ಸಂದರ್ಶನ ಪ್ರಕಟವಾಗಿದೆ.

ʼʼಭಾರತದ ಪ್ರಧಾನಿ ಹಾಗೂ ಅಲ್ಲಿನ ಆಡಳಿತಕ್ಕೆ ನನ್ನ ಸಂದೇಶ ಏನೆಂದರೆ, ನಾವು ಜತೆಗೆ ಕೂತು ಕಾಶ್ಮೀರ ಸಮಸ್ಯೆಯಂಥ ವಿಚಾರಗಳನ್ನು ಪ್ರಾಮಾಣಿಕ ಹಾಗೂ ನಿರ್ಣಾಯಕ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳೋಣ. ಇದು ಶಾಂತಿಯುತ ಬದುಕು ಕಂಡುಕೊಳ್ಳಲು, ಪ್ರಗತಿ ಸಾಧಿಸಲು, ಜಗಳದ ಮೂಲಕ ನಮ್ಮ ಸಮಯ ಮತ್ತು ಆಸ್ತಿಗಳನ್ನು ನಾಶ ಮಾಡಿಕೊಳ್ಳದಿರಲು ಇದು ಅಗತ್ಯʼʼ ಎಂದು ಶೆಹಬಾಜ್‌ ಶರೀಫ್‌ ಹೇಳಿದ್ದಾರೆ.

ʼʼಎರಡೂ ದೇಶಗಳೂ ನ್ಯೂಕ್ಲಿಯರ್‌ ಪವರ್‌ಗಳು. ಹಾಗಾಗದಿರಲಿ, ಆದರೆ ಯುದ್ಧ ಸಂಭವಿಸಿದರೆ ಏನಾಯಿತೆಂದು ಹೇಳಲೂ ಯಾರೂ ಉಳಿದಿರುವುದಿಲ್ಲʼʼ ಎಂದೂ ಅವರು ಹೇಳಿದ್ದಾರೆ.‌

ಇತ್ತೀಚೆಗೆ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ನಲ್ಲಿ ಸಂಪಾದಕೀಯ ಬರೆದಿದ್ದ ಪಾಕಿಸ್ತಾನ ರಕ್ಷಣಾ ವಿಶ್ಲೇಷಣಕಾರ ಶಹಜಾದ್‌ ಚೌಧುರಿ ಅವರು, ದೇಶದ ಆರ್ಥಿಕತೆಯನ್ನು ಉಳಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಪ್ರಧಾನಿ ಗಂಭೀರವಾಗಿ ಚಿಂತಿಸಬೇಕು ಎಂದು ಕರೆ ನೀಡಿದ್ದರು. ಪರಸ್ಪರ ಶತ್ರುಗಳಾಗಿರುವ ಅಮೆರಿಕ ಹಾಗೂ ರಷ್ಯಾಗಳು ಭಾರತದ ವಿಚಾರ ಬಂದಾಗ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿರುತ್ತವೆ. ಭಾರತ ತನ್ನದೇ ಪಾಲಿಸಿಗಳು ಹಾಗೂ ಸ್ಥಿತಿಗತಿಗಳೊಂದಿಗೆ ಪ್ರಗತಿ ಹೊಂದುತ್ತಿದೆ. ಯುದ್ಧ ನಡೆಯುತ್ತಿದ್ದರೂ ರಷ್ಯಾದಿಂದ ತೈಲ ಸರಬರಾಜು ಮಾಡಿಕೊಳ್ಳುತ್ತಿದೆ. 2037ರ ಒಳಗೆ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವುದು ಭಾರತದ ಕನಸಾಗಿದೆ. ಅದನ್ನು ಆ ದೇಶ ನನಸಾಗಿಸಿಕೊಳ್ಳಬಲ್ಲದು. ಈಗಾಗಲೇ ಅದು ಬ್ರಿಟನ್‌ ಅನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೆ ಏರಿದೆ. ವಿದೇಶಿ ವಿನಿಮಯ ಮೊತ್ತವೂ 600 ಶತಕೋಟಿ ಡಾಲರ್‌ (49 ಲಕ್ಷ ಕೋಟಿ ರೂ.) ತಲುಪಿದೆ. ಆದರೆ ಪಾಕಿಸ್ತಾನದ ಬಳಿ 10.19 ಶತಕೋಟಿ ಡಾಲರ್‌ (83 ಸಾವಿರ ಕೋಟಿ ರೂ.) ವಿದೇಶಿ ವಿನಿಮಯ ಮಾತ್ರ ಇದೆ ಎಂದು ಚೌಧುರಿ ಬರೆದಿದ್ದರು.

ಇದೇ ಸಮಯದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕೂಡ, ಲಷ್ಕರೆ ತಯ್ಬಾ ಸಂಘಟನೆಯ ಉಗ್ರ ಅಬ್ದುಲ್‌ ರೆಹಮಾನ್‌ ಮಕ್ಕಿಯನ್ನು ಜಾಗತಿಕ ಉಗ್ರ ಎಂದೂ ಘೋ಼ಷಿಸಿದೆ.

ಪೆಟ್ರೋಲ್‌ ಸಿಗುತ್ತಿಲ್ಲ, ಎಟಿಎಂಗಳೂ ಖಾಲಿ- ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾಜಿ ಕ್ರಿಕೆಟರ್‌ ಟ್ವೀಟ್‌

ಗ್ವಾಲಿಯರ್: ಕೆಸರಾಗಿದ್ದ ಯುವಕನೊಬ್ಬನ ಪಾದಗಳನ್ನು ತೊಳೆದ ಮಧ್ಯಪ್ರದೇಶದ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಅವರು, ಕೆಟ್ಟ ರಸ್ತೆಗಳಿಗಾಗಿ ಯುವಕನ ಕ್ಷಮೆ ಕೋರಿದ ಘಟನೆ ಗ್ವಾಲಿಯರ್‌ನಲ್ಲಿ ನಡೆದಿದೆ. ಇಲ್ಲಿನ ವಿನಯ್‌ನಗರ ಪ್ರದೇಶದ ರಸ್ತೆಯೊಂದರಲ್ಲಿ ಚರಂಡಿಗಾಗಿ ರಸ್ತೆ ಅಗೆಯಲಾಗಿದೆ. ಆದರೆ, ರಸ್ತೆ ರಿಪೇರಿಯನ್ನು ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಸಚಿವರು ಪರಿಶೀಲನೆ ಕಾರ್ಯ ನಡೆಸಿದ್ದರು.

ಮಧ್ಯಪ್ರದೇಶದ ಇಂಧನ ಸಚಿವರಾಗಿರುವ ತೋಮರ್ ಅವರು, ‘ಕೆಟ್ಟ ಪರಿಸ್ಥಿತಿಯಲ್ಲಿರುವ ರಸ್ತೆಗಳಿಗಾಗಿ ಜನರ ಕ್ಷಮೆ ಕೋರುತ್ತೇನೆ. ಚರಂಡಿಗಾಗಿ ರಸ್ತೆಗಳನ್ನು ಅಗೆಯಲಾಗಿದೆ. ಶೀಘ್ರವೇ ಈ ಎಲ್ಲ ರಸ್ತೆಗಳನ್ನುರಿಪೇರಿ ಮಾಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ತಮ್ಮ ಕಾರ್ಯವೈಖರಿಯಿಂದ ತೋಮರ್ ಅವರು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು, ವಿದ್ಯುತ್ ಕಂಬಗಳನ್ನು ದುರಸ್ತಿ ಮಾಡುವುದು, ರಸ್ತೆ ಗುಡಿಸುವುದರ ಮೂಲಕ ಸುದ್ದಿಯಲ್ಲಿರುತ್ತಾರೆ. ಗ್ವಾಲಿಯರ್ ರಸ್ತೆಗಳ ದುರಸ್ತಿಗಾಗಿ ಅವರು ವಿಶಿಷ್ಟ ಬೇಡಿಕೆ ಇಡುವ ಮೂಲಕ ಕಳೆದ ತಿಂಗಳು ಸದ್ದಿಯಾಗಿದ್ದರು. ಕೇಂದ್ರ ಸಚಿವ ಜ್ಯೋತಿರಾದಿತ್ಯ ಅವರಿಗೆ ಒಂದು ಜೊತೆ ಚಪ್ಪಲಿ ನೀಡುವ ಮೂಲಕ ಗಮನ ಸೆಳೆದಿದ್ದರು. ಅಲ್ಲದೇ, ರಸ್ತೆ ರಿಪೇರಿ ಆಗೋವರೆಗೂ ಚಪ್ಪಲಿ ಹಾಕುವುದಿಲ್ಲ ಎಂದು ಶಪಥ ಮಾಡಿದ್ದರು. ಮೂರು ತಿಂಗಳವರೆಗೂ ಚಪ್ಪಲಿ ಧರಿಸಿರಲಿಲ್ಲ.

ಶ್ರೀನಗರ:ಜಮ್ಮು-ಕಾಶ್ಮೀರದ ಬುದ್ಗಾಮ್​​ ಜಿಲ್ಲೆಯಲ್ಲಿ ಇಂದು ಮುಂಜಾನೆ ಇಬ್ಬರು ಉಗ್ರರನ್ನು ಭದ್ರತಾ ಪಡೆ ಸಿಬ್ಬಂದಿ ಹತ್ಯೆಗೈದಿದ್ದಾರೆ. ಬುದ್ಗಾಮ್​​​ನಲ್ಲಿರುವ ನ್ಯಾಯಾಲಯ ಸಂಕೀರ್ಣದ ಸಮೀಪ ಭದ್ರತಾ ಪಡೆ ಸಿಬ್ಬಂದಿ, ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದರು. ಇನ್ನೂ ಆ ಪ್ರದೇಶವನ್ನು ರಕ್ಷಣಾ ಪಡೆ ಸಿಬ್ಬಂದಿ ಸುತ್ತುವರಿದಿದ್ದಾರೆ. ಅಲ್ಲಿ ಅಡಗಿರುವ ಭಯೋತ್ಪಾದಕರನ್ನು ಸೆರೆಹಿಡಿಯಲು ಕಾರ್ಯಾಚರಣೆ ಮುಂದುವರಿದಿದೆ.

ಉಗ್ರರನ್ನು ಹತ್ಯೆ ಮಾಡಿದ ಬಗ್ಗೆ ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ. ‘ಆ ಭಾಗದಲ್ಲಿ ಉಗ್ರರು ಇದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸೈನಿಕರು ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿದ್ದರು. ಆ ಪ್ರದೇಶಕ್ಕೆ ಬಂದ ಎಲ್ಲ ಅನುಮಾನಾಸ್ಪದ ವಾಹನಗಳನ್ನೂ ತಪಾಸಣೆ ಮಾಡಲಾಗಿದೆ. ಈ ವೇಳೆ ಉಗ್ರರು ಗುಂಡುಹಾರಿಸಿ ಪ್ರತಿರೋಧ ವ್ಯಕ್ತಪಡಿಸಿದರು. ಆಗ ರಕ್ಷಣಾ ಪಡೆಗಳೂ ಗುಂಡು ಹಾರಿಸಿವೆ. ಇದರಲ್ಲಿ ಇಬ್ಬರು ಉಗ್ರರು ಹತ್ಯೆಗೀಡಾಗಿದ್ದಾರೆ’ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್​ ಮಾಡಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಕ್ರಮ ಮಧ್ಯ ತಡೆಯುವಂತೆ ಅಬಕಾರಿ ಇಲಾಖೆಗೆ ಮಹಿಳೆಯರಿಂದ ಮುತ್ತಿಗೆ

Tue Jan 17 , 2023
ಬಸವನ ಬಾಗೇವಾಡಿ ತಾಲೂಕಿನ ಬೇನಾಳ (ಎನ್ ಹೆಚ್) ಗ್ರಾಮದ ಮಹಿಳೆಯರಿಂದ ಪ್ರೊಟೆಸ್ಟ್.ಅಬಕಾರಿ ಇಲಾಖೆ ಮುಂದೆ ಕುಳಿತು ಕಣ್ಣೀರಿಟ್ಟ ಮಹಿಳೆಯರು.ಮಹಿಳೆಯರ ನೋವಿಗೆ ಕ್ಯಾರೆ ಎನ್ನದ ಅಬಕಾರಿ ಇಲಾಖೆಯ ಅಧಿಕಾರಿಗಳು.ಗ್ರಾಮದಲ್ಲಿ ಐದಾರು ಅಕ್ರಮ ಮಧ್ಯ ಅಂಗಡಿ ಇದ್ದು ಇದರಿಂದ ನಮ್ಮ ಗಂಡಂದಿರು ದಿನಾಲೂ ಕುಡಿದು ಬಂದು ನಮಗೆ ಹೊಡೆದು ಬಗೆದು ಮಾಡುತ್ತಿದ್ದಾರೆ ಕಿರುಕುಳ ಕೊಡುತ್ತಿದ್ದಾರೆ.ನಮ್ಮ ಗಂಡಂದಿರು ದಿನನಿತ್ಯ ಕುಡಿದು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿತ್ತು ಹೊಡೆದು ಬಡಿದು ಮಾಡುತ್ತಿದ್ದಾರೆ.ನಾವು ದಿನಾಲು ಕೂಲಿ ನಾಲಿ […]

Advertisement

Wordpress Social Share Plugin powered by Ultimatelysocial