ಜಸ್ಪಾಲ್ ಭಟ್ಟಿ

ಜಸ್ಪಾಲ್ ಭಟ್ಟಿ
ನಾನು ಕಿರುತೆರೆ ಕಾರ್ಯಕ್ರಮಗಳನ್ನು ಇಷ್ಟಪಟ್ಟು ನೋಡುತ್ತಿದ್ದ ದಿನಗಳಲ್ಲಿ ಜನಪ್ರಿಯರಾಗಿದ್ದ ನನ್ನ ಮೆಚ್ಚಿನ ಕಲಾವಿದರಲ್ಲಿ ಜಸ್ಪಾಲ್ ಭಟ್ಟಿ ಒಬ್ಬರು.
ಜಸ್ಪಾಲ್ ಭಟ್ಟಿ ಅವರು ಜನಿಸಿದ ದಿನ ಮಾರ್ಚ್ 3, 1955. ಅವರು ಶುದ್ಧ ಹಾಸ್ಯದ ಮೂಲಕ ಜನಸಾಮಾನ್ಯರ ನೋವುನಲಿವುಗಳನ್ನು ವ್ಯಕ್ತಪಡಿಸಿದ ಪ್ರತಿಭಾವಂತ ಕಲಾವಿದ.
‘ಫ್ಲಾಪ್ ಶೋ’ ಹಾಗೂ ‘ಉಲ್ಟಾ ಪಲ್ಟಾ’ ಮುಂತಾದ ದೂರದರ್ಶನ ಸರಣಿ ಕಾರ್ಯಕ್ರಮಗಳ ಮೂಲಕ ಇಡೀ ದೇಶವನ್ನೇ ನಗೆ ಅಲೆಯಲ್ಲಿ ತೇಲಿಸಿದ ಜಸ್ಪಾಲ್ ಭಟ್ಟಿ ಅವರಲ್ಲಿ ಹಾಸ್ಯ ಪ್ರಜ್ಞೆ ರಕ್ತಗತವಾಗಿತ್ತು. ವೃತ್ತಿಯಲ್ಲಿ ಎಲೆಕ್ಟ್ರಿಕ್ ಎಂಜಿನಿಯರ್ ಆಗಿದ್ದರೂ, ಜಸ್ಪಾಲ್ ಭಟ್ಟಿ ಕಲೆಯತ್ತ ಮುಖಮಾಡಿ ನಿಂತರು. ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಜಸ್ಪಾಲರಿಗೆ ನಾಟಕಗಳತ್ತ ಅಪಾರ ಒಲವಿತ್ತು. ಎಂಜಿನಿಯರಿಂಗ್ ಪದವಿ ಪಡೆದ ಬಳಿಕ ಸ್ವಲ್ಪ ಕಾಲ ಅವರು ಪಂಜಾಬಿ ಪತ್ರಿಕೆಯೊಂದಕ್ಕೆ ವ್ಯಂಗ್ಯಚಿತ್ರಕಾರನಾಗಿ ದುಡಿದರು. 80ರ ದಶಕದಲ್ಲಿ ದೂರದರ್ಶನದಲ್ಲಿ ಜನಪ್ರಿಯಗೊಂಡ ‘ಉಲ್ಟಾ ಪಲ್ಟಾ’ ಜಸ್ಪಾಲ್ ಭಟ್ಟಿ ಅವರ ಪ್ರಥಮ ಕಿರುತೆರೆ ಪ್ರವೇಶ. ಪ್ರಚಲಿತದಲ್ಲಿನ ಅನೇಕ ಸಾಮಾಜಿಕ ವಿಷಯ-ವಿವಾದಗಳನ್ನು ವಿಡಂಬನಾತ್ಮಕವಾಗಿ ತೆರೆದಿಟ್ಟ ಈ ಕಾರ್ಯಕ್ರಮ ಜಸ್ಪಾಲರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು.
‘ಉಲ್ಟಾಪಲ್ಟಾ’ದ ಅಪಾರ ಯಶಸ್ಸು ಕಂಡ ಬೆನ್ನಲ್ಲೇ ಜಸ್ಪಾಲ್ ಭಟ್ಟಿ ಅವರ ಮತ್ತೊಂದು ಕಿರುತೆರೆ ಧಾರವಾಹಿ ‘ಫ್ಲಾಪ್ ಶೋ’ ಕೂಡಾ ಸೂಪರ್ ಹಿಟ್ ಎನಿಸಿತು. ಶ್ರೀಸಾಮಾನ್ಯ ಎದುರಿಸುವ ಸಾಮಾಜಿಕ-ರಾಜಕೀಯ ಸಮಸ್ಯೆಗಳನ್ನು ಹಾಸ್ಯದ ಮೂಲಕ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಫ್ಲಾಪ್ ಶೋ ಅಪಾರವಾದ ಯಶಸ್ಸು ಕಂಡಿತು. ಇವುಗಳೆಲ್ಲದರ ಜೊತೆಗೆ ಜಸ್ಪಾಲ್ ಭಟ್ಟಿಯವರ ‘ನೋ ನಾನ್‌ಸೆನ್ಸ್ ಕ್ಲಬ್’ ಬಳಗವು ಶ್ರೀಸಾಮಾನ್ಯನ ದಿನನಿತ್ಯದ ಬವಣೆಗಳ ಬಗ್ಗೆ ಬೆಳಕು ಚೆಲ್ಲುವ ಅನೇಕ ಬೀದಿ ನಾಟಕಗಳನ್ನು ದೇಶಾದ್ಯಂತ ಪ್ರದರ್ಶಿಸಿ, ವ್ಯಾಪಕವಾಗಿ ಗಮನ ಸೆಳೆದಿತ್ತು.
ದೂರದರ್ಶನದಲ್ಲಿನ ತಮ್ಮ ಕಾರ್ಯಕ್ರಮಗಳ ಮೂಲಕ ಜಸ್ಪಾಲ್ ಭಟ್ಟಿ ಭಾರತದೆಲ್ಲೆಡೆಯಲ್ಲಿ ಮನೆಮಾತಾದರು. ಕಿರುತೆರೆಯಲ್ಲಿ ಯಶಸ್ಸಿನ ಸವಿಕಂಡ ಜಸ್ಪಾಲ್ ಭಟ್ಟಿ, ಚಿತ್ರರಂಗಕ್ಕೂ ತಮ್ಮನ್ನು ವಿಸ್ತರಿಸಿಕೊಂಡಿದ್ದರು. 1999ರಲ್ಲಿ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದ ಪಂಜಾಬಿ ಚಿತ್ರ ‘ವೊಹೌಲ್ ಠೀಕ್ ಹೈ’ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ತಾಂಡವವಾಡುತ್ತಿದ್ದ ಭ್ರಷ್ಟಾಚಾರ ಕುರಿತಾದ ಕಥಾವಸ್ತುವನ್ನೊಳಗೊಂಡಿತ್ತು. ಪೊಲೀಸ್ ಅಧಿಕಾರಿಗಳನ್ನು ಭ್ರಷ್ಟರು ಹಾಗೂ ಕುಡುಕರೆಂಬಂತೆ ಬಿಂಬಿಸುವ ಮೂಲಕ ಜಸ್ಪಾಲ್ ಭಟ್ಟಿ ಪಂಜಾಬ್‌ ಪೊಲೀಸ್ ಇಲಾಖೆಗೆ ಕಳಂಕ ತರುವ ಯತ್ನವನ್ನು ಮಾಡಿದ್ದಾರೆಂದು ಅವರ ಚಿತ್ರ ಹಲವಾರು ವಿರೋಧಗಳನ್ನೂ ಎದುರಿಸಬೇಕಾಯಿತು. ಇಷ್ಟಾದರೂ ಸರಳವಾದ ಕಥೆ ಹಾಗೂ ಚುರುಕುತನದ ನಿರೂಪಣೆಯಿಂದಾಗಿ ಈ ಚಿತ್ರ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿ, ಗಲ್ಲಾಪಟ್ಟಿಗೆಯಲ್ಲಿ ಭರ್ಜರಿ ಗಳಿಕೆಯನ್ನು ಕಂಡಿತು.
ಆನಂತರ ಹಲವಾರು ಪಂಜಾಬಿ ಚಿತ್ರಗಳಲ್ಲಿ ನಟಿಸಿದ ಜಸ್ಪಾಲ್ ಭಟ್ಟಿ ನಿರಂತರವಾಗಿ ಚಿತ್ರಪ್ರೇಕ್ಷಕರ ಒಲವನ್ನು ಹೆಚ್ಚಿಸಿಕೊಂಡರಲ್ಲದೆ, ಹಲವಾರು ಹಿಂದೀ ಚಿತ್ರಗಳಲ್ಲೂ ಮಿಂಚಿದರು. ಮೌಸಮ್, ಫನಾ, ಕುಚ್ ನ ಕಹೋ, ತುಜೆ ಮೇರಿ ಕಸಮ್, ಕೊಯಿ ಮೇರೆ ದಿಲ್ ಸೆ ಪೂಚೆ, ಹಮಾರ ದಿಲ್ ಅಪ್ ಕೆ ಪಾಸ್ ಹೆ, ಕಾರ್ತೂಸ್ ಜಸ್ಪಾಲ್ ಅಭಿನಯದ ಕೆಲವು ಬಾಲಿವುಡ್ ಚಿತ್ರಗಳು. ಕಿರುತೆರೆಯಲ್ಲಂತೂ ಜಸ್ಪಾಲ್ ಭಟ್ಟಿಯಷ್ಟು ಜನಪ್ರಿಯತೆ ಗಳಿಸಿದ ಹಾಸ್ಯ ತಾರೆಯರು ತುಂಬಾ ವಿರಳ. ಅವರ ‘ಅಂಡರ್‌ಗ್ರೌಂಡ್ ಸಿಂಗರ್ಸ್’, ‘ಕ್ಯಾಮೆರಾ ಜರ್ಕ್ಸ್’ ಹಾಗೂ ‘ಜಾರಿಂಗ್ ಮ್ಯೂಸಿಕ್’ ಕಾಮಿಡಿ ಶೋಗಳನ್ನು ಈಗಲೂ ರಸಿಕರು ಸ್ಮರಿಸುತ್ತಿರುತ್ತಾರೆ.
ಜಸ್ಪಾಲ್ ಭಟ್ಟಿಯವರ ಪತ್ನಿ ಸವಿತಾ ಕೂಡಾ ತಮ್ಮ ಪತಿಯೊಂದಿಗೆ ಅನೇಕ ಕಾರ್ಯಕ್ರಮಗಳಲ್ಲಿ ಅಭಿನಯಿಸಿ ಭೇಷ್ ಎನಿಸಿಕೊಂಡಿದ್ದರು. 2012 ಅಕ್ಟೋಬರ್ 25ರಂದು ಜಸ್ಪಾಲ್ ಭಟ್ಟಿ ಅಪಘಾತದಿಂದ ನಿಧನರಾದಾಗ ಅವರಿಗೆ ಇನ್ನೂ 57ರ ವಯಸ್ಸು. ತಮ್ಮ ನಿರ್ದೇಶನ ಹಾಗೂ ಅಭಿನಯದ ‘ಪವರ್‌ಕಟ್’ ಎಂಬ ಪಂಜಾಬಿ ಹಾಸ್ಯ ಚಿತ್ರದ ಪ್ರಚಾರ ಕಾರ್ಯದ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಅವರು ಈ ಅಪಘಾತಕ್ಕೀಡಾಗಿದ್ದು ದುರ್ದೈವ. ತಮ್ಮ ಪ್ರತಿಭೆ ಮತ್ತು ಕ್ರಿಯಾಶೀಲತೆಗಳಿಂದ ಜಸ್ಪಾಲ್ ಭಟ್ಟಿ ತಮ್ಮ ಅಭಿಮಾನಗಳ ಹೃದಯದಲ್ಲಿ ನವುರಾದ ನೆನಪನ್ನು ಅಳಿಯದಂತೆ ಉಳಿಸಿ ಹೋಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಮಾರವ್ಯಾಸನ ರ್ಣಾಟ ಭಾರತ ಕಥಾಮಂಜರಿ

Thu Mar 3 , 2022
ಕರ್ಣಾಟ ಭಾರತ ಕಥಾಮಂಜರಿ ಅರಣ್ಯಪರ್ವ – ಹನ್ನೊಂದನೆಯ ಸಂಧಿ ಸೂ. ಭೀಮ ಕೊಂದನು ಕಲಿ ಜಟಾಸುರ ನಾ ಮಹಾ ಮಣಿಮಾನನನು ಬಳಿ ಕೀ ಮಹೀತಳಕಿಳಿದು ಕಂಡನು ಪಾರ್ಥ ನಗ್ರಜನ ಕೇಳು ಜನಮೇಜಯಯುಧಿಷ್ಠಿರ ನೋಲಗದೊಳುತ್ಪಾತ ಶತವಿವ ರಾಲಿಗಳನಂಜಿಸಿದವತಿ ರ೦ಜಿಸಿದವದುಭುತವ ಕೇಳಿದನಿದೇನೆಂದು ವರ ವಿ ಪ್ರಾಳಿಯನು ದೌಮ್ಯಾದಿ ಋಷಿಗಳು ಹೇಳಿದರು ತಚ್ಛಕುನ ಸಂಗತಿಗಳ ಫಲೋತ್ತರವ ೧ ಸರಸಸೌಗಂಧಿಕದ ಪುಸ್ಪೋ ತ್ತರಕೆ ಪವನಜ ಹೋದನೆಂಬುದ ನರಸಿಯಿಂದರಿದವನಿಪತಿ ಪೂರಾಯ ದುಗುಡದಲಿ ನರನ ಹದನೇನೋ ವೃಕೋದರ ನಿರವು […]

Advertisement

Wordpress Social Share Plugin powered by Ultimatelysocial