ಕೆ. ಎಸ್. ಎಲ್. ಸ್ವಾಮಿ ನಿರ್ಮಾಪಕ.

ಕೆ. ಎಸ್. ಎಲ್. ಸ್ವಾಮಿ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಗಾಯಕರಾಗಿ, ಕೆಲವೊಮ್ಮೆ ನಟರಾಗಿ, ಚಿತ್ರಸಾಹಿತಿಗಳಾಗಿ, ಜೊತೆಗೆ ಕನ್ನಡ – ಸಂಸ್ಕೃತ ವಿದ್ವಾಂಸರಾಗಿ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟರಾಗಿದ್ದವರು.
ಕಿಕ್ಕೇರಿ ಶಾಮಣ್ಣ ಲಕ್ಷ್ಮೀನರಸಿಂಹಸ್ವಾಮಿ ಅವರು 1939ರ ಫೆಬ್ರವರಿ 21ರಂದು ಮೈಸೂರಿನಲ್ಲಿ ಜನಿಸಿದರು. ಅವರದ್ದು ಸಂಪ್ರದಾಯಸ್ಥ ಪುರೋಹಿತರ ಮನೆ. ಮೈಸೂರಿನಲ್ಲಿಯೇ ವಿದ್ಯಾರ್ಜನೆ ನಡೆಯಿತು. ವಿಜ್ಞಾನ ಪದವೀಧರರಾಗುವ ಮೊದಲೇ ಅವರಲ್ಲಿ ಚಿತ್ರರಂಗದ ಕುರಿತು ಒಲವು-ಆಕರ್ಷಣೆಗಳು ಮೂಡಿದ್ದವು.ಸ್ವಾಮಿ ಅವರು ‘ರತ್ನಮಂಜರಿ’ ಚಿತ್ರದಲ್ಲಿ ಸಣ್ಣ ಪಾತ್ರವೊಂದರ ನಿರ್ವಹಣೆ ಮಾಡಿ ಚಿತ್ರರಂಗ ಪ್ರವೇಶಿಸಿದರು. ನಟನಾಗುವ ಹಂಬಲ ಹೊತ್ತು ಮದರಾಸಿಗೆ ಪ್ರಯಾಣ ಮಾಡಿದ ಅವರು ಜಿ.ವಿ.ಅಯ್ಯರ್ ಅವರ ‘ತಾಯಿಕರುಳು’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾದರು. ಕೆ.ಎಸ್.ಎಲ್.ಸ್ವಾಮಿ ಕೆಲಕಾಲ ಎಂ. ಆರ್. ವಿಠಲ್, ಕಣಗಾಲ್ ಪ್ರಭಾಕರಶಾಸ್ತ್ರಿಯವರ ಜೊತೆ ಸಹಾ ಕೆಲಸ ಮಾಡಿದರು. ಸಾಹಿತ್ಯ ರಚನೆಯಲ್ಲೂ ಪರಿಣತಿ ಪಡೆದರು.1966ರಲ್ಲಿ ತೆರೆಕಂಡ ‘ತೂಗುದೀಪ’ ಕೆ. ಎಸ್. ಎಲ್. ಸ್ವಾಮಿ ನಿರ್ದೇಶನದ ಮೊದಲ ಚಿತ್ರ. ನಟ ಉದಯಕುಮಾರ್ ಅವರು ಇವರಿಗಿಟ್ಟ ಹೆಸರು ರವೀ. ತೂಗುದೀಪದಲ್ಲಿ ಇವರು ಅಭಿನಯಿಸಿದ್ದಲ್ಲದೆ ಶ್ರೀನಿವಾಸ್ ಎಂಬ ನಟನನ್ನೂ ಪರಿಚಯಿಸಿದರು. ಅವರು ತೂಗುದೀಪ ಶ್ರೀನಿವಾಸ್ ಎಂದೇ ಖಳನಟನಾಗಿ ಖ್ಯಾತರಾದರು.ನಲವತ್ತೊಂಭತ್ತು ಚಿತ್ರಗಳನ್ನು ನಿರ್ದೇಶಿಸಿದ್ದ ರವೀ ಅವರು ಸ್ವತಃ ಒಂಭತ್ತು ಚಿತ್ರಗಳನ್ನು ತಾವೇ ನಿರ್ಮಿಸಿದ್ದರು. ಇವರ ತಾರಾ ಪತ್ನಿ ಬಿ.ವಿ.ರಾಧಾ ಅವರು ನಾಲ್ಕು ಚಿತ್ರಗಳ ನಿರ್ಮಾಪಕಿಯಾಗಿದ್ದರು. ರವೀ ಅವರ ನಿರ್ದೇಶನದ ‘ಮಲಯ ಮಾರುತ’ ಸಂಗೀತ ಪ್ರಧಾನ ಸಿನಿಮಾ ಸ್ಕೋಪ್ ಚಿತ್ರ. ಸಂಗೀತ ಸಂಯೋಜಕ ವಿಜಯಭಾಸ್ಕರ್ ಅವರಿಗೆ ಈ ಚಿತ್ರದ ಸಂಗೀತಕ್ಕೆ ರಾಷ್ಟ್ರೀಯ ಮಟ್ಟದ ‘ಸುರ್ ಸಿಂಗಾರ್’ ಪ್ರಶಸ್ತಿ ಸಂದಿತು. ನಿರ್ದೇಶಕ ಪುಟ್ಟಣ್ಣಕಣಗಾಲ್ ಅವರು ರವಿ ಅವರಿಗಾಗಿ ‘ಶುಭಮಂಗಳ’ ಚಿತ್ರವನ್ನು ನಿರ್ದೇಶಿಸಿದರು. ಪುಟ್ಟಣ್ಣನವರ ನಿಧನದ ನಂತರ ಅಪೂರ್ಣವಾಗಿದ್ದ ‘ಮಸಣದ ಹೂವು’ ಮತ್ತು ಬಹಳ ವರ್ಷಗಳ ಹಿಂದೆ ಆರಂಭಗೊಂಡು ನಿಂತುಹೋಗಿದ್ದ ‘ಸಾವಿರ ಮೆಟ್ಟಿಲು’ ಚಿತ್ರಗಳನ್ನು ರವೀ ಅವರು ನಿರ್ದೇಶಿಸಿ, ಚಿತ್ರವನ್ನು ಬಿಡುಗಡೆಗೆ ಅಣಿ ಮಾಡಿಕೊಟ್ಟರು. ರವೀಯವರು ನಿರ್ದೇಶಿಸಿದ ಮಕ್ಕಳ ಚಿತ್ರ ‘ಜಂಬೂಸವಾರಿ’ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಯನ್ನು ಪಡೆಯಿತು. ‘ಹರಕೆಯ ಕುರಿ’ ಅತ್ಯುತ್ತಮ ಕಥಾ ಚಿತ್ರವೆಂದು 1992ರಲ್ಲಿ ರಾಷ್ಟ್ರೀಯ ರಜತಕಮಲ ಪ್ರಶಸ್ತಿ ಪಡೆಯಿತು. ಅಲ್ಲದೆ ಫ್ರಾಂಕ್ಫರ್ಟ್, ಇರಾನ್ ಇಟಲಿ, ಚಿಕಾಗೋ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿತ್ತು.ಕೆ. ಎಸ್. ಎಲ್. ಸ್ವಾಮಿ ಅವರ ಚಿತ್ರಗಳ ವಸ್ತುಗಳು ವೈವಿಧ್ಯಮಯವಾಗಿದ್ದವು. ಅರಿಶಿನ ಕುಂಕುಮ ತ್ಯಾಗಮಯಿ ಮಹಿಳೆಯ ಕತೆ. ‘ಭಾಗ್ಯಜ್ಯೊತಿ’ಗೆ ವರ್ಗಸಂಘರ್ಷದ ಹಿನ್ನೆಲೆ. ‘ಮಿಥಿಲೆಯ ಸೀತೆಯರು’ ವಂಶ ಪ್ರತಿಷ್ಠೆ ಹಾಗೂ ಮುಗ್ಧ ಹೆಣ್ಣು ಮಕ್ಕಳ ಸಂತಸದ ಬಾಳನ್ನು ಬಲಿತೆಗೆದುಕೊಳ್ಳುವ ದಾರುಣ ಕಥಾನಕ. ‘ಮಲಯ ಮಾರುತ’ ಸಂಗೀತಗಾರನ ಬದುಕಿನ ನಿರೂಪಣೆ. ‘ಹರಕೆಯ ಕುರಿ’ ರಾಜಕೀಯ ಹಿನ್ನಲೆ, ಹೊಂದಿದ್ದರೆ ‘ರಾಮಲಕ್ಷ್ಮಣ’ ವನ್ಯಸಿರಿ ರಕ್ಷಣೆ ಕಥೆ. ‘ಜಿಮ್ಮಿಗಲ್ಲು’ ಅನ್ಯಾಯಕ್ಕೆ ಸಿಲುಕಿ ಖೈದಿಯಾದವನ ಮನಮಿಡಿಯುವ ಕಥೆ.ತೂಗುದೀಪ, ಲಗ್ನಪತ್ರಿಕೆ, ಗಾಂಧೀನಗರ, ಭಾಗ್ಯದ ಬಾಗಿಲು, ಮಂಕುದಿಣ್ಣೆ, ಅಣ್ಣ ತಮ್ಮ, ಅರಿಷಿಣ ಕುಂಕುಮ, ಲಕ್ಷ್ಮೀ ಸರಸ್ವತಿ, ಆರು ಮೂರು ಒಂಭತ್ತು, ಭಲೇ ಅದೃಷ್ಟವೋ ಅದೃಷ್ಟ, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ, ಕುಳ್ಳ ಏಜೆಂಟ್ 000, ದೇವರು ಕೊಟ್ಟ ತಂಗಿ, ಸಿಐಡಿ 72, ಭಾಗ್ಯ ಜ್ಯೋತಿ, ಮಕ್ಕಳ ಭಾಗ್ಯ,ತುಳಸಿ, ದೇವರ ದುಡ್ಡು, ಮಾಗಿಯ ಕನಸು, ಮುಗ್ದಮಾನವ, ಬನಶಂಕರಿ, ಅಳುಕು, ಡ್ರೈವರ್ ಹನುಮಂತು, ಭೂಮಿಗೆ ಬಂದ ಭಗವಂತ, ಜಿಮ್ಮಿಗಲ್ಲು, ಮತ್ತೆ ವಸಂತ, ಕ್ರಾಂತಿಯೋಗಿ ಬಸವಣ್ಣ, ಮುತ್ತೈದೆ ಭಾಗ್ಯ, ಕರುಣೆ ಇಲ್ಲದ ಕಾನೂನು, ಹುಲಿ ಹೆಜ್ಜೆ, ಪಿತಾಮಹ, ಮಲಯ ಮಾರುತ, ಮಿಥಿಲೆಯ ಸೀತೆಯರು, ಜಂಬೂ ಸವಾರಿ, ಹರಕೆಯ ಕುರಿ, ಮಹಾ ಎಡಬಿಡಂಗಿ ಮುಂತಾದವು ಕೆ. ಎಸ್. ಎಲ್. ಸ್ವಾಮಿ ಅವರ ನಿರ್ದೇಶನದ ಚಿತ್ರಗಳಲ್ಲಿ ಸೇರಿವೆ. ಸದಭಿರುಚಿ ಮತ್ತು ಸುಶ್ರಾವ್ಯ ಗೀತೆಗಳು ಸ್ವಾಮಿ ಅವರ ಚಿತ್ರಗಳ ವಿಶಿಷ್ಟತೆ. ಗಾಂಧೀನಗರ, ಮಲಯ ಮಾರುತ, ಭಾಗ್ಯಜ್ಯೋತಿ, ಜಿಮ್ಮಿಗಲ್ಲು, ಮಿಥಿಲೆಯ ಸೀತೆಯರು, ಭೂಮಿಗೆ ಬಂದ ಭಗವಂತ, ಮುಗ್ದ ಮಾನವ ಮುಂತಾದ ಚಿತ್ರಗಳ ಗೀತೆಗಳು ಇಂದಿಗೂ ಜನಪ್ರಿಯವೆನಿಸಿವೆ. ಸೋಲು ಗೆಲುವುಗಳ ಆಚೆಗೂ ಅವರು ಚಿತ್ರೋದ್ಯಮಿಗಳೊಂದಿಗೆ, ಕಲಾವಿದರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೀತಿ ಆಯೋಗದ ನೂತನ ಸಿಇಒ ಆಗಿ ಬಿವಿಆರ್ ಸುಬ್ರಹ್ಮಣ್ಯಂ ನೇಮಕ!

Tue Feb 21 , 2023
ನವದೆಹಲಿ, ಫೆ.21. ಎರಡು ವರ್ಷಗಳ ಅವಧಿಗೆ ನೀತಿ ಆಯೋಗದ ಸಿಇಒ ಆಗಿ ನೇಮಕಗೊಂಡಿದ್ದ ಪರಮೇಶ್ವರನ್ ಅಯ್ಯರ್ ಅವರು ಏಳು ತಿಂಗಳ ನಂತರ ಹುದ್ದೆಯಿಂದ ಕೆಳಗಿಳಿದಿದ್ದು, ಇದೀಗ ಸರ್ಕಾರವು ಬಿವಿಆರ್ ಸುಬ್ರಹ್ಮಣ್ಯಂ ಅವರನ್ನು ಮುಂದಿನ ಸಿಇಒ ಆಗಿ ನೇಮಿಸಿದೆ. 1987ರ ಬ್ಯಾಚ್‌ನ ಛತ್ತೀಸ್‌ಗಢ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದು, ವಾಣಿಜ್ಯ ಕಾರ್ಯದರ್ಶಿಯಾಗಿ ನಿವೃತ್ತರಾದ ಸುಬ್ರಹ್ಮಣ್ಯಂ ಅವರು ಈ ಹಿಂದೆ ಪ್ರಧಾನ ಮಂತ್ರಿ ಕಚೇರಿಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ […]

Advertisement

Wordpress Social Share Plugin powered by Ultimatelysocial