ಶಾಲೆಗಳು ಪ್ರಾರಂಭ: ಬಸ್ ಪಾಸ್‌ ಗೊಂದಲ ಬೇಡ- ಕೆಎಸ್‌ಆರ್‌ಟಿಸಿ!

ಬೆಂಗಳೂರು, ಮೇ 14: ರಾಜ್ಯದಲ್ಲಿ ಶಾಲಾ ಕಾಲೇಜುಗಳು ಮೇ 16ರಿಂದ ಪುನಾರಂಭವಾಗಲಿವೆ ಎಂದು ಈಗಾಗಲೇ ರಾಜ್ಯ ಸರಕಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್‌ ಪಾಸ್‌ ಮಾನ್ಯತೆ ಬಗ್ಗೆ ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ ನೀಡಿದೆ.

ಶನಿವಾರ ಪ್ರಕಟಣೆ ಹೊರಡಿಸಿರುವ ಕೆಎಸ್‌ಆರ್‌ಟಿಸಿ 2022-23ರ ಸಾಲಿನ ಭೌತಿಕ ತರಗತಿಗಳು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಇದೇ ತಿಂಗಳ 16 ರಂದು ಆರಂಭವಾಗುತ್ತಿದೆ. ಹಾಗಾಗಿ ಪ್ರಸ್ತುತ ಸಾಲಿನ ಪಾಸುಗಳನ್ನು ಪಡೆಯಲು ಸಮಯಾವಕಾಶ ಒದಗಿಸಿಕೊಡುವ ಉದ್ದೇಶವನ್ನು ಇಲಾಖೆ ಹೊಂದಿದೆ. ಆದ್ದರಿಂದ ಕಳೆದ ಸಾಲಿನಲ್ಲಿ ಪಡೆದಿರುವ ಪಾಸ್‌ಗಳು ಮಾನ್ಯತಾ ಅವಧಿ ಜೂನ್ 30ರವರೆಗೆ ಇರುವುದರಿಂದ, ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದೇ ತಮ್ಮ ಹಳೆಯ ಪಾಸುಗಳನ್ನು ಬಳಸಿಕೊಳ್ಳುವಂತೆ ಇಲಾಖೆ ಸೂಚಿಸಿದೆ.

ಯಾವ ಬಸ್ಸುಗಳಲ್ಲಿ ಬಳಸಲು ಅವಕಾಶ

2021-22ರ ಸಾಲಿನಲ್ಲಿ ರಿಯಾಯಿತಿ ಮತ್ತು ಉಚಿತ ಪಾಸ್‌ ಪಡೆದಿರುವ ವಿದ್ಯಾರ್ಥಿಗಳು ತಮ್ಮ ಹಳೆಯ ಪಾಸುಗಳನ್ನು ಕರಾರರಸಾ ನಿಗಮದ ನಗರ, ಹೊರಹೊಲಯ, ಸಾಮಾನ್ಯ ಮತ್ತು ವೇಗದೂತ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಇನ್ನು ಹೊಸ ಬಸ್‌ ಪಾಸ್‌ಗಳ ವಿತರಣಾ ದಿನಾಂಕವನ್ನು ಶೀಘ್ರದಲ್ಲೇ ತಿಳಿಸುತ್ತೇವೆ. ಆ ನಂತರ ನಿಯಾಮಾನುಸಾರ ಪಾಸುಗಳನ್ನು ಪಡೆಯಲು ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕೆಂದು ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಮಾಹಿತಿ ನೀಡಲು ಸಾರಿಗೆ ಸಿಬ್ಬಂದಿಗೆ ಸೂಚನೆ

ಬಸ್‌ ಪಾಸ್‌ ಮಾನ್ಯತೆಯ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಯಾವುದೆ ಗೊಂದಲ ಉಂಟಾಗದಂತೆ ಸೂಕ್ತಮಾಹಿತಿಯನ್ನು ಒದಗಿಸಿಕೊಡುವಂತೆ ಚಾಲನಾ ಸಿಬ್ಬಂದಿಗೆ ಇಲಾಖೆ ಸೂಚನೆ ನೀಡಿದೆ. ಈ ವಿಚಾರದಲ್ಲಿ ಯಾವುದೇ ರೀತಿಯ ದೂರುಗಳಿಗೆ ಅವಕಾಶ ನೀಡದಂತೆ ಕ್ರಮವಹಿಸಬೇಕೆಂದು ತಿಳಿಸಲಾಗಿದೆ.

ಸಾರಿಗೆ ಇಲಾಖೆಗೆ ಮಾಹಿತಿ

ಮೇ16 ಶಾಲೆಗಳು ಪ್ರಾರಂಭವಾಗಲಿದೆ ಎಂದು ಶಿಕ್ಷಣ ಸಚಿವರು ಸಾರಿಗೆ ಇಲಾಖೆಗೆ ಈಗಾಗಲೆ ಮಾಹಿತಿ ನೀಡಿದ್ದರು. ವಿದ್ಯಾರ್ಥಿಗಳು ಶಾಲೆಗಳಿಗೆ ಬರಲು ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕ್ರಮವಹಿಸಲು ಸಾರಿಗೆ ಇಲಾಖೆಗೆ ಮನವಿ ಮಾಡಿದ್ದರು. ವಿದ್ಯಾರ್ಥಿಗಳ ಹಳೆಯ ಐಡಿ ಕಾರ್ಡ್ ಅಥವಾ ಶಾಲೆಯಿಂದ ಕೊಡುವ ಲೆಟರ್ ಅನ್ನು ಗಮನಿಸಿ ಪಾಸ್ ವಿತರಿಸಬೇಕು. ಬಿಎಂಟಿಸಿ , ಕೆಎಸ್‌ಆರ್‌ಟಿಸಿ ಸೇರಿದಂತೆ ಯಾವುದೇ ನಿಗಮದ ಸಾರಿಗೆಯಿಂದಲೂ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದು ಸೂಚಿಸಿಲಾಗಿದೆ.

ಶಾಲೆ ರಿಪೇರಿ ಕೆಲಸಗಳಿದ್ದರೆ ಮುಗಿಸಲು ಸೂಚನೆ

ಶಾಲೆಗೆ ಮಕ್ಕಳು ಬರಬೇಕೆಂದರೆ ಶಾಲೆಯ ವಾತಾವರಣ ಪರಿಶುದ್ದವಾಗಿರಬೇಕು. ವಿದ್ಯಾರ್ಥಿಗಳು ಶಾಲೆಯ ಆವರಣಕ್ಕೆ ಕಾಲಿಡುತ್ತಿದ್ದಂತೆ ಉಲ್ಲಾಸಿತರಾಗಬೇಕು ಎಂಬ ಕಾರಣಕ್ಕೆ ಶಾಲೆಯನ್ನು ಸ್ವಚ್ಛಗೊಳಿಸಿ ಅಣಿಯಾಗಲು ತಿಳಿಸಲಾಗಿದೆ. ಇನ್ನು ಶಾಲೆಯ ಒಳಾಂಗಣದಲ್ಲಿ ಯಾವುದೇ ರೀತಿಯ ರಿಪೇರಿ ಕೆಲಸಗಳಿದ್ದರೇ ಹಾಗೂ ಬಣ್ಣವನ್ನು ಬಳಿಯಬೇಕಿದ್ದರೆ ಆ ಕಾರ್ಯಗಳನ್ನು ಮೇ 16ರ ಒಳಗೆ ಮುಗಿಸಿಕೊಳ್ಳುವಂತೆ ಮುಖ್ಯೋಪಾಧ್ಯಾಯರಿಗೆ ಈಗಾಗಲೇ ಶಿಕ್ಷಣ ಇಲಾಖೆ ಸೂಚಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿಗೆ ಸುಮಲತಾ, ರಮ್ಯಾ ಬರಲಿ ಕರೆದುಕೊಳ್ಳೋದಕ್ಕೆ ರೆಡಿ: ಸಚಿವ ಕೆ.ಸಿ.ನಾರಾಯಣಗೌಡ!

Sat May 14 , 2022
  ಮಂಡ್ಯ: ಇತ್ತೀಚೆಗೆ ಸುಮಲತಾ, ರಮ್ಯಾ ಪಕ್ಷಕ್ಕೆ ಬರುವ ಕುರಿತು ಚರ್ಚೆಗಳು ಸಾಕಷ್ಟು ನಡೆಯುತ್ತಿವೆ.ಈ ಕುರಿತು ಬಿಜೆಪಿಗೆ ಸುಮಲತಾ ಬರಲಿ, ರಮ್ಯಾ ಬರಲಿ ಕರೆದುಕೊಳ್ಳೋದಕ್ಕೆ ರೆಡಿ ಇದ್ದೀವಿ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಮಾತನಾಡಿದ ಅವರು, ಪಕ್ಷ ಸ್ಟ್ರಾಂಗ್ ಆದಾಗ ಎಲ್ಲರೂ ಬರೋದಕ್ಕೆ ಪ್ರಯತ್ನ ಮಾಡುತ್ತಾರೆ.ನಮ್ಮ ಪಕ್ಷದ ನಾಯಕರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧ ಇದ್ದೀವಿ ಎಂದು ಹೇಳಿದರು. ರಮ್ಯಾ ಬಿಜೆಪಿ ಸಂಪರ್ಕದಲ್ಲಿ ಇದ್ದಾರೊ, […]

Advertisement

Wordpress Social Share Plugin powered by Ultimatelysocial