ಕಾಳಿದಾಸನ ಕಾಲ 4ನೆಯ ಶತಮಾನ.

ಕಾಳಿದಾಸನ ಕಾಲ 4ನೆಯ ಶತಮಾನ. ಕಾಳಿದಾಸ ಸಂಸ್ಕೃತ ಸಾಹಿತ್ಯದಲ್ಲಿ ಕವಿಕುಲಗುರು ಎಂಬ ಪ್ರಶಸ್ತಿಗೆ ಪಾತ್ರನಾದ ಕವಿ; ಕವಿತಾಮಾಧುರ್ಯ ಮತ್ತು ಪ್ರತಿಭೆಗಳಿಂದ ವಿಶ್ವಕವಿಗಳ ಶ್ರೇಣಿಯಲ್ಲಿ ಸೇರಿರುವಂಥವ. ಇಷ್ಟು ಪ್ರಸಿದ್ಧವಾದವನ ಕಾಲ ನಮಗೆ ನಿಶ್ಚಿತವಾಗಿ ತಿಳಿಯದಿರುವುದು ಸೋಜಿಗ ಸಂಗತಿ. ಆಧುನಿಕ ಪಂಡಿತರು ಈ ವಿಷಯದಲ್ಲಿ ಶೋಧನೆ ನಡೆಸಿ ವಿಧವಿಧವಾದ ಅಭಿಪ್ರಾಯಗಳನ್ನು ಕೊಟ್ಟಿದ್ದಾರೆ. ಇವನ ಕಾಲ ಕ್ರಿ.ಪೂ. ಮೊದಲ ಶತಮಾನವೆಂದು ಕೆಲವರೂ ಕ್ರಿ.ಶ. ಎರಡನೆ ಶತಮಾನವೆಂದು ಕೆಲವರೂ ನಾಲ್ಕನೆಯದೆಂದು ಕೆಲವರೂ ಆರನೆಯದೆಂದು ಮತ್ತೆ ಕೆಲವರೂ ಹೇಳುತ್ತಾರೆ, ಅಂತೂ ಚಂದ್ರಗುಪ್ತ ವಿಕ್ರಮಾದಿತ್ಯನ (ಕ್ರಿ.ಶ. 357-413) ಆಸ್ಥಾನದಲ್ಲಿದ್ದನೆಂದು ಹೇಳುವುದು ಬಹುಜನ ಪಂಡಿತರ ಮತವಾಗಿದೆಯಲ್ಲದೆ ಸಮಂಜಸವಾಗಿಯೂ ತೋರುತ್ತದೆ. ಈ ಚಂದ್ರಗುಪ್ತ ಉಜ್ಜಯಿನಿಯಲ್ಲಿ ಆಳುತ್ತಿದ್ದನಾದುದರಿಂದಲೂ ಕವಿಯ ಕಾವ್ಯಗಳಲ್ಲಿ ಈ ನಗರದ ಬಗ್ಗೆ ವಿಶೇಷ ಅಭಿಮಾನ ವ್ಯಕ್ತಪಟ್ಟಿರುವುದರಿಂದಲೂ ಉಜ್ಜಯಿನಿ ಕಾಳಿದಾಸನ ವಾಸ ಸ್ಥಳವಾಗಿದ್ದಿರಬೇಕೆಂದು ಹೇಳಬಹುದು. ಇಂಥ ಊಹೆಗಳನ್ನು ಬಿಟ್ಟರೆ ಈತನ ವೈಯಕ್ತಿಕ ವಿಷಯಗಳ ವಿಚಾರಗಳೇನೂ ನಮಗೆ ತಿಳಿದುಬರುವುದಿಲ್ಲ.ಕಾಳಿದಾಸನ ಕೃತಿಗಳು ಏಳು : ಎರಡು ಖಂಡಕಾವ್ಯಗಳು-ಋತುಸಂಹಾರ ಮತ್ತು ಮೇಘಸಂದೇಶ ; ಎರಡು ಮಹಾಕಾವ್ಯಗಳು-ಕುಮಾರ ಸಂಭವ ಮತ್ತು ರಘುವಂಶ : ಮೂರು ನಾಟಕಗಳು-ಮಾಲವಿಕಾಗ್ನಿ ಮಿತ್ರ, ವಿಕ್ರಮೋರ್ವಶೀಯ ಮತ್ತು ಅಭಿಜ್ಞಾನ ಶಾಕುಂತಲ. ಕಾಳಿದಾಸನ ಕೃತಿಗಳು ಸರ್ವತೋಪೂರ್ಣವಾಗಿವೆ, ಸರ್ವಾಂಗ ಸುಂದರವಾಗಿವೆ. ಇದು ಹೆಚ್ಚು ಇದು ಕಡಿಮೆ ಎನ್ನುವಂತಿಲ್ಲ. ಲಾಕ್ಷಣಿಕರ ಎಲ್ಲೆಯಲ್ಲಿಯೇ ಇದ್ದರೂ ಕವಿ ಅದರಿಂದ ಬದ್ಧನಾಗಿಲ್ಲ. ಕಾವ್ಯಕ್ಕೆ ಬೇಕಾದುದೆಲ್ಲಕ್ಕೂ ಇವನಲ್ಲಿ ಉದಾಹರಣೆಗಳಿವೆ. ಯಾವುದೂ ಅತಿಯಾಗಿಲ್ಲ. ವಸ್ತುವಿನ್ಯಾಸ, ಪಾತ್ರಸೃಷ್ಟಿ. ತಕ್ಕ ಮಾತು, ತಕ್ಕ ಶಬ್ದಜಾಲ-ಎಲ್ಲದರಲ್ಲೂ ಪರಸ್ಪರ ಔಚಿತ್ಯ ತಾನೇತಾನಾಗಿದೆ. ಇಂಥ ಅದ್ಭುತ ಪ್ರತಿಭಾಪೂರ್ಣನಾದ್ದರಿಂದಲೆ ಕಾಳಿದಾಸ ಭಾರತದ ಪ್ರಾಚೀನ ಹಾಗೂ ಆಧುನಿಕ ವಿಮರ್ಶಕರಿಂದ ಮಾತ್ರವಲ್ಲದೆ, ವಿಶ್ವದ ಪಂಡಿತರಿಂದಲೂ ಮೆಚ್ಚುಗೆಯನ್ನು ಪಡೆದಿದ್ದಾನೆ.ಋತುಸಂಹಾರ: ಇದೊಂದು ಕತೆಯಿಲ್ಲದ ಕಾವ್ಯ. ಬಹುಶಃ ಇದು ಕಾಳಿದಾಸ ಬರೆದ ಕಾವ್ಯಗಳಲ್ಲಿ ಮೊದಲನೆಯದು. ಇದರಲ್ಲಿ ಒಂದೊಂದು ಋತುವಿಗೆ ಒಂದೊಂದು ಸರ್ಗದಂತೆ ಆರು ಸರ್ಗಗಳಿವೆ. ಒಟ್ಟು ಶ್ಲೋಕಗಳ ಸಂಖ್ಯೆ 114. ಇಂದ್ರವಜ್ರ, ವಂಶಸ್ಥ, ವಸಂತತಿಲಕ, ಮಾಲಿನೀ ಮತ್ತು ಶಾರ್ದೂಲವಿಕ್ರೀಡಿತ-ಇವು ಇಲ್ಲಿ ಬಳಸಿರುವ ವೃತ್ತಗಳು. ಈ ಕಾವ್ಯಕ್ಕೆ ಅಲಂಕಾರಿಕರೂ ಪಂಡಿತರೂ ಹೆಚ್ಚು ಪ್ರಾಶಸ್ತ್ಯ ಕೊಟ್ಟಿರುವಂತೆ ಕಂಡುಬರುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಈ ಪದ್ಯಗಳ ಸರಳತೆ. ಈ ಕಾವ್ಯದಲ್ಲಿ ಭಾವಗಾರಿಕೆಗಿಂತ ಬಣ್ಣಗಾರಿಕೆ ಹೆಚ್ಚು. ಋತುಗಳಲ್ಲೂ ಈ ಲೋಕ ಯಾವ ಯಾವ ಚೆಲುವನ್ನು ತಳೆದು ಯಾವ ಯಾವ ಸೊಗಸುಗಳನ್ನು ರಸಿಕರಿಗೆ ನೀಡುತ್ತದೆ ಎಂಬುದರ ವರ್ಣನೆಯನ್ನು ಈ ಕಾವ್ಯ ಮನೋಹರವಾಗಿ ನಿರ್ವಹಿಸುತ್ತದೆ. ಆರು ಸರ್ಗಗಳಲ್ಲಿ ಕವಿ ಆರು ಋತುಗಳನ್ನು ವರ್ಣಿಸುತ್ತಾನೆ. ಇಡೀ ಕಾವ್ಯದಲ್ಲಿ ಪ್ರಿಯಪ್ರೇಯಸಿಯರ ದೃಷ್ಟಿ ಇರುವುದಲ್ಲದೆ ಪ್ರತಿಪದ್ಯವೂ ಪ್ರಿಯ ಪ್ರೇಯಸಿಗೆ ಹೇಳಿದಂತೆ ರಚನೆಗೊಂಡಿದೆ.
ಮೇಘದೂತ: ಅಥವಾ ಮೇಘಸಂದೇಶ ವಿರಹಿಯಾದ ಯಕ್ಷಕನೊಬ್ಬನ ಮನೋವೃತ್ತಿಯನ್ನು ಚಿತ್ರಿಸಿರುವ ಒಂದು ಖಂಡ ಕಾವ್ಯ. ಇದರಲ್ಲಿ ಪೂರ್ವಮೇಘವೆಂದೂ ಉತ್ತರಮೇಘವೆಂದೂ ಎರಡು ಭಾಗಗಳಿವೆ. ಇದರ 115 ಶ್ಲೋಕಗಳೂ ಮಂದಾಕ್ರಾಂತ ವೃತ್ತದಲ್ಲಿದೆ. ಕುಬೇರನ ಸೇವೆಯಲ್ಲಿದ್ದ ಯಕ್ಷನೊಬ್ಬ ತಾನು ಮಾಡಿದ ತಪ್ಪಿಗಾಗಿ ಒಂದು ವರ್ಷ ಕಾಲ ತನ್ನ ಪ್ರಿಯಪತ್ನಿಯನ್ನೂ ನೆಲಸೂರಾದ ಅಲಕಾವತಿಯನ್ನೂ ಬಿಟ್ಟು ಹೊರಗೆ ಹೋಗಬೇಕಾದ ಸಂದರ್ಭ ಒದಗುತ್ತದೆ. ಶಿಕ್ಷೆಯನ್ನನುಭವಿಸಲು ಯಕ್ಷ ವಿಂಧ್ಯ ಪರ್ವತದ ರಾಮಗಿರ್ಯಾಶ್ರಮ ಪ್ರದೇಶದಲ್ಲಿ ವಿರಹ ದುಃಖದಲ್ಲಿ ಸವೆಯುತ್ತಾ ಕಾಲ ಕಳೆಯುತ್ತಿದ್ದ. ಎಂಟು ತಿಂಗಳು ಕಳೆಯಲು ಮಳೆಗಾಲ ಆರಂಭವಾಯಿತು. ಉತ್ತರ ದಿಕ್ಕಿಗೆ ಓಡುತ್ತಿದ್ದ ಮೋಡ ಶಿಖರವೊಂದರ ಮೇಲೆ ತಂಗಿದ್ದಾಗ ವಿರಹಿಯಾದ ಯಕ್ಷ ಅದನ್ನು ಸ್ವಾಗತಿಸಿ ತನ್ನ ಪ್ರಿಯೆಗೆ ತನ್ನ ಸಂದೇಶವನ್ನು ತಲಪಿಸಬೇಕೆಂದು ಬೇಡಿದ. ಅಲಕಾವತಿಗೆ ಮಾರ್ಗನಿರ್ದೇಶ ಮಾಡುವುದೇ ಪೂರ್ವಮೇಘದ ವಸ್ತು. ಇದು ವರ್ಣನಾತ್ಮಕವಾದ ಪೂರ್ವಭಾಗ. ಅಲಕಾವತಿಯಲ್ಲಿ ತನ್ನ ಮನೆಯ ಗುರುತು, ಪ್ರಿಯೆ ಇರಬಹುದಾದ ಸ್ಥಿತಿಯ ವರ್ಣನೆ, ತಲಪಿಸಬೇಕಾದ ಸಂದೇಶ-ಇವು ಉತ್ತರಮೇಘದ ವಸ್ತು.ಪೂರ್ವಮೇಘವನ್ನು ವರ್ಣನಾತ್ಮಕ ಗೀತೆಯೆಂದೂ ಉತ್ತರ ಮೇಘವನ್ನು ಉತ್ಕಂಠಾ ಗೀತೆಯೆಂದೂ ಕರೆಯಬಹುದು. ಈ ಕಾವ್ಯದ ಪ್ರತಿಯೊಂದು ಶ್ಲೋಕವೂ ರತ್ಮಪ್ರಾಯವಾಗಿದೆ. ಇಡಿಯ ಗೀತ ಒಂದು ಭವ್ಯ ರತ್ನಮಾಲಿಕೆಯಂತಿದೆ.ಕುಮಾರಸಂಭವ: ಕಾಳಿದಾಸನಿಗೆ ಸಂಸ್ಕೃತ ಮಹಾಕವಿಗಳಲ್ಲಿ ಅಗ್ರಸ್ಥಾನವನ್ನು ದೊರಕಿಸುವುದಕ್ಕೆ ರಘುವಂಶದಷ್ಟೇ ಕುಮಾರಸಂಭವವೂ ಕಾರಣವೆನ್ನಬಹುದು. ಎರಡೂ ಮಹಾಕಾವ್ಯಗಳು. ಎರಡೂ ರಾಷ್ಟ್ರೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರನ್ನಗನ್ನಡಿಗಳು. ರಸಭಾವಗಳ ಮಧುರ ನಿರ್ವಹಣೆಯಲ್ಲಿ, ಸಮುಚಿತ ಹಾಗು ಸುಲಲಿತ ಅಲಂಕಾರಗಳ ಸಂಯೋಜನೆಯಲ್ಲಿ, ಪ್ರಕೃತಿಯ ರಮಣೀಯ ಮುಖಗಳ ಹಾಗೂ ಉದಾತ್ತ ಪಾತ್ರಗಳ ಸ್ವಭಾವ ಸುಂದರ ವರ್ತನೆಗಳ ಸಹಜ ಪ್ರತಿಪಾದನೆಯಲ್ಲಿ ಕಾಳಿದಾಸನನ್ನು ಸರಿಗಟ್ಟುವವರು ವಿರಳ. ರಘುವಂಶದ ಆದಿಯಲ್ಲಿ ಕವಿ ವಿನಯವನ್ನು ಪ್ರದರ್ಶಿಸಿರುವಂತೆ ಕುಮಾರಸಂಭವದ ಆದಿಯಲ್ಲಿ ಪ್ರದರ್ಶಿಸಿಲ್ಲ. ಇಲ್ಲಿ ಜಗತ್ತಿಗೆ ತಾಯ್ತಂದೆಗಳಾದ ಪಾರ್ವತೀಪರಮೇಶ್ವರರ ವಿವಾಹ ಹಾಗು ಪುತ್ರಪ್ರಾಪ್ತಿಯ ಏಕೈಕ ವಸ್ತುವಿದೆ; ಶೃಂಗಾರವೊಂದೇ ಪ್ರಧಾನರಸವಾಗಿದೆ.ರಘುವಂಶ : 19 ಸರ್ಗಗಳ ಮಹಾಕಾವ್ಯ. ಕಾಳಿದಾಸನ ಪಳಗಿದ ಕೈ ಇದರಲ್ಲಿ ಸ್ಪಷ್ಟವಾಗಿದೆ. ಸೂರ್ಯವಂಶದ ರಾಜರ ಚರಿತ್ರೆಯನ್ನಿಲ್ಲಿ ದಿಲೀಪನಿಂದ ಮೊದಲುಗೊಂಡು ಬರೆಯಲಾಗಿದೆ. ಇದರಲ್ಲಿ ಮೂರು ಘಟ್ಟಗಳನ್ನು ಕಾಣಬಹುದು. ಮೊದಲ ಒಂಬತ್ತು ಸರ್ಗಗಳು ಶ್ರೀರಾಮನ ಪೂರ್ವ ಚರಿತ್ರೆ. 10 ರಿಂದ 15 ಪೂರ್ತಿ ಶ್ರೀರಾಮನ ಕಥೆ. ಮಿಕ್ಕವು ಶ್ರೀರಾಮನ ಅನಂತರದ ಅರಸುಗಳ ಚರಿತ್ರೆ.ಕಾಳಿದಾಸನ ನಾಟಕಗಳು: ಕಾಳಿದಾಸ ತನ್ನ ಮೂರು ನಾಟಕಗಳಲ್ಲಿಯೂ ಪ್ರೇಮದ ವಿವಿಧ ಮುಖವನ್ನು ಚಿತ್ರಿಸುತ್ತಾನೆ. ಆತನ ಮಾಲವಿಕಾಗ್ನಿಮಿತ್ರದಲ್ಲಿ ಪ್ರತಿಪಾದಿತವಾಗಿರುವ ಪ್ರೇಮ ಕೇವಲ ಐಹಿಕ. ವಿಕ್ರಮೋರ್ವಶೀಯದಲ್ಲಿ ಪ್ರೇಮದ ಮಟ್ಟ ಕೊಂಚ ಮೇಲೇರುತ್ತದೆ. ಶಾಕುಂತಲದಲ್ಲಿ ಪ್ರೇಮ ಸ್ವರ್ಗದ ಮಟ್ಟಕ್ಕೇರುತ್ತದೆ. ಇಂಥ ಪ್ರತಿಪಾದನೆಗೆ ತಕ್ಕ ಸನ್ನಿವೇಶ ಪಾತ್ರಗಳ ಸೃಷ್ಟಿ ಅಭೂತಪೂರ್ವ ಹಾಗೂ ಅಸದೃಶ ರೀತಿಯಲ್ಲಿ ಕಾಲಿದಾಸತ್ರಯ ಎಂದು ಪ್ರಸಿದ್ಧವಾದ ಈ ನಾಟಕಗಳಲ್ಲಿ ಮೂಡಿಬಂದಿವೆ.ಮಾಲವಿಕಾಗ್ನಿಮಿತ್ರ: ಐದು ಅಂಕಗಳ ನಾಟಕ, ಅಂತಃಪುರದಲ್ಲಿಯೇ ನಡೆದ ಪ್ರಣಯ ವೃತ್ತಾಂತ ಇದರ ವಸ್ತು. ಅಗ್ನಿಮಿತ್ರನೆಂಬ ದೊರೆ ತನ್ನ ಅಂತಃಪುರದಲ್ಲಿ ವೇಷಾಂತರದಲ್ಲಿದ್ದ ಮಾಲವಿಕೆ ಎಂಬ ರಾಜಪುತ್ರಿಯನ್ನು ಕಂಡು ಮೋಹಿಸಿ, ಅವಳನ್ನು ವಿವಾಹವಾದುದು ನಾಟಕದ ಕಥೆ. ಕಥೆ ಕುತೂಹಲದಿಂದ ಪ್ರಾರಂಭವಾಗಿ ಮಧ್ಯೆ ಮಧ್ಯೆ ಅಡ್ಡಿಗಳನ್ನು ಹೊಂದಿ. ಕೊನೆಗೆ ಅವೆಲ್ಲವೂ ಆಶ್ಚರ್ಯಕರವಾದ ರೀತಿಯಲ್ಲಿ ದೂರವಾಗಿ ಸುಖಾಂತವಾಗಿ ಪರಿಣಮಿಸಿದೆ. ಕವಿ ಕಥೆಯನ್ನು ಹೊಂದಿಸಿಕೊಳ್ಳುವುದರಲ್ಲಿ ಕೌಶಲವನ್ನು ತೋರಿಸಿರುವಂತೆಯೇ ಮಾತುಗಳನ್ನು ಸಂದರ್ಭಕ್ಕೆ ತಕ್ಕಂತೆ ಸೊಗಸಾಗಿ ಜೋಡಿಸುವುದರಲ್ಲಿಯೂ ತನ್ನ ಜಾಣ್ಮೆಯನ್ನು ಮೆರೆದಿದ್ದಾನೆ. ಆದರ್ಶ ಯುವತಿಯಾದ ಮಾಲವಿಕೆಯ ರೂಪ ಸೌಂದರ್ಯಾದಿಗಳನ್ನೂ ನಟನ ಚಾತುರ್ಯವನ್ನೂ ಪ್ರದರ್ಶಿಸುವಲ್ಲಿ ಕವಿ ಅಮಿತಾಸಕ್ತಿಯನ್ನು ತೋರಿದ್ದಾನೆ. ತನ್ಮೂಲಕ ಪ್ರೇಕ್ಷಕವರ್ಗದವರ ಆಸಕ್ತಿಯನ್ನು ಸೆರೆಹಿಡಿದಿದ್ದಾನೆ. ಮಾಲವಿಕೆ ಅಗ್ನಿಮಿತ್ರರ ಸಮಾಗಮಕ್ಕೆ ಆಸಕ್ತಿಯನ್ನು ಆಗುವ ಅನುಕೂಲಗಳು ಅವನ ಪಾತ್ರಕ್ಕೆ ಕಳೆಕೊಟ್ಟಿವೆ

ವಿಕ್ರಮೋರ್ವಶೀಯ: ಐದು ಅಂಕಗಳ ನಾಟಕ. ಕೇಶಿ ಎಂಬ ದಾನವನಿಂದ ಕಷ್ಟಕ್ಕೊಳಗಾದ ಅಪ್ಸರೆ ಊರ್ವಶಿಯನ್ನು ಪೂರೂರವ ಬಿಡಿಸಿದ್ದರಿಂದ ಅ ರಾಜನಲ್ಲಿ ಅವಳಿಗೆ ಅನುರಾಗ ಹುಟ್ಟಿತು. ಅವರೀರ್ವರ ಪ್ರಣಯ ಕಥೆಯೇ ನಾಟಕದ ವಸ್ತು. ಮಧ್ಯೆ ಊರ್ವಶಿ ಪ್ರಣಯ ಕೋಪದಿಂದ ಕುಮಾರ ವನವನ್ನು ಪ್ರವೇಶಿಸಿ ಹುಚ್ಚು ಹಿಡಿದು ಅಲೆಯುವ ಪ್ರಸಂಗವನ್ನು ಕವಿ ಹೃದಯಸ್ಪರ್ಶಿಯಾಗಿ ವಿವರಿಸುತ್ತಾನೆ. ವೇದಗಳಲ್ಲಿ ಸೂಚಿತವಾದ ಪುರೂರವ ಊರ್ವಶಿಯರ ಕಥೆ ಪದ್ಮಪುರಾಣ, ವಿಷ್ಣುಪುರಾಣ ಮತ್ತು ಭಾಗವತಗಳಲ್ಲಿ ವಿವರಿಸಲ್ಪಟ್ಟಿದೆ. ಕಥಾ ಸರಿತ್ಸಾಗರದಲ್ಲಿಯೂ ಬರುವುದರಿಂದ ಬೃಹತ್ಕಥೆಯಲ್ಲೂ ಇದು ಇದ್ದಿತೆನ್ನಬಹುದು. ಇವುಗಳ ಆಧಾರದ ಮೇಲೆ ಕಥೆಯನ್ನು ತನ್ನ ಉದ್ದೇಶಕ್ಕೆ ತಕ್ಕಂತೆ ಕಾಳಿದಾಸ ರೂಪಿಸಿಕೊಂಡಿದ್ದಾನೆ. ಮೇಲಿನ ಎರಡೂ ನಾಟಕಗಳ ಮಹಾರಾಣಿಯರು ಪತಿವ್ರತಾಶಿರೋಮಣಿಗಳು; ಪತಿಯ ಸಂತೋಷಕ್ಕಾಗಿ ತಮ್ಮ ಸುಖವನ್ನೆ ತ್ಯಜಿಸಲು ಸಿದ್ಧರಾದವರು. ಮಾಲವಿಕಾಗ್ನಿಮಿತ್ರದ ಧಾರಣಿ ಉದಾತ್ತಭಾವನೆಯಿಂದ ಪತಿಯ ಹಿತವನ್ನು ಬಯಸಿ ಪ್ರತಿಪಕ್ಷ ವರ್ಗಕ್ಕೆ ಸೇರಿದ ಮಾಲವಿಕೆಯನ್ನು ವಿವಾಹವಾಗಲು ರಾಜನಿಗೆ ತಾನೇ ಅನುಮತಿ ಕೊಡುತ್ತಾಳೆ. ವಿಕ್ರಮೋರ್ವಶೀಯದ ಔಶೀನರಿ ಊರ್ವಶಿಯ ಪ್ರಣಯ ವಿಷಯವನ್ನು ತಿಳಿದು ಮೊದಲು ಕೋಪಿಸಿಕೊಂಡರೂ ಕಡೆಗೆ ತಾನಾಗಿಯೇ ತನ್ನ ಸುಖವನ್ನು ಒತ್ತಿಟ್ಟು, ಪತಿಯ ಸುಖವನ್ನು ಬಯಸುತ್ತಾಳೆ.ಅಭಿಜ್ಞಾನ ಶಾಕುಂತಲ: ಮಹಾಭಾರತದ ಶಾಕುಂತಲೋಪಾಖ್ಯಾನದ ಅಸ್ಥಿಪಂಜರದಲ್ಲಿ ನಾಟಕೀಯ ವಸ್ತುವಿಗೆ ಬೇಕಾದ ಮೂಲದ್ರವ್ಯಗಳು ಮಾತ್ರ ಕಾಳಿದಾಸನ ಪ್ರತಿಭೆಗೆ ದೊರೆತವೆನ್ನಬಹುದು. ಅತಿಯಾಸೆಯ ಕನ್ಯೆ, ಕಾಮಾತುರನಾದ ರಾಜ ಇವರಿಬ್ಬರೂ ಅನುಚಿತ ಅತುರದಲ್ಲಿ ಕೂಡಿ ಕಾಲಾಂತರದವರೆಗೆ ಹೇಗೆ ಪರಿತಪಿಸಿದರೆಂಬುದೇ ಮೂಲಕಥೆಯಾಗಿತ್ತು. ತನ್ನ ಚೆಲುವಿನ ಗರ್ವವುಳ್ಳ ಕನ್ಯೆ ಅದನ್ನು ಮಾರಿಕೊಳ್ಳಲು ಒಂದು ರಾಜ್ಯವನ್ನೇ ಬೆಲೆಯಾಗಿ ನಿಶ್ಚಯಿಸುತ್ತಾಳೆ. ಇಲ್ಲಿ ಅನುರಾಗದ ಆವೇಗಕ್ಕಿಂತ ಮಾರಾಟದ ವ್ಯವಹಾರವೇ ಹೆಚ್ಚಾದಂತಿದೆ. ಹಿರಿಯರ ಅನುಮತಿಯನ್ನು ಪಡೆಯಬೇಕೆಂದು ಅವರಲ್ಲಿ ಒಬ್ಬರಿಗೂ ಹೊಳೆಯುವುದಿಲ್ಲ. ರಾಜನಾದ ದುಷ್ಯಂತ ಕೂಡ ರಾಜಧಾನಿಯನ್ನು ತಲುಪಿದೊಡನೆ ಶಕುಂತಲೆಯನ್ನು ಕರೆಸಿಕೊಳ್ಳುವುದಾಗಿ ಮಾಡಿದ್ದ ವಾಗ್ದಾನವನ್ನು ಸರಾಗವಾಗಿ ಮರೆತೇ ಬಿಡುತ್ತಾನೆ. ಅವನಿಗೆ ಮತ್ತೆ ನೆನಪು ಮಾಡಿಕೊಡಲು ಅವಳೇ ಆರು ವರ್ಷಗಳ ಕಾಲ ಸುಮ್ಮನಿದ್ದಳೆನ್ನುವುದಾದರೋ ಒಂದು ಸೋಜಿಗವೇ. ಆಗಲೂ ಶಕುಂತಲೆಯ ಅಥವಾ ಅವಳ ಬಾಲಕನ ಅರಿವೇ ತನಗಿಲ್ಲವೆಂದು ರಾಜ ಹಾರಿಕೆಯ ಮಾತನ್ನೇ ಆಡುತ್ತಾನೆ. ಅವರನ್ನು ಸ್ವೀಕರಿಸಿದರೆ ಪ್ರಜೆಗಳೆಲ್ಲ ತನ್ನ ನಡತೆಯನ್ನು ಶಂಕಿಸುವರೋ ಎಂಬ ಅಂಜಿಕೆಯೇ ಅವನಿಗೆ ಪ್ರಬಲವಾಗುತ್ತದೆ. ಹೇಗೋ ಕಡೆಗೊಮ್ಮೆ ಈ ವಿಷಯ ಪರಿಸ್ಥಿತಿಯಿಂದ ಇಬ್ಬರೂ ಪಾರಾಗುವಂತೆ ಅನಿರೀಕ್ಷಿತವಾಗಿ ಅಶರೀರ ವಾಣಿಯ ದೈವ ಸಹಾಯವೊದಗುತ್ತದೆ. ಪರಿಶುದ್ಧ ಹಾಗು ಉದಾತ್ತವಾದ ಪ್ರೇಮದ ಚಿತ್ರಣವೇ ಕಾಳಿದಾಸನ ವಿವಕ್ಷೆ. ಆದುದರಿಂದ ಆತ ಉಪಾಖ್ಯಾನದ ಶಕುಂತಲೆಯ ವ್ಯಕ್ತಿತ್ವದಲ್ಲಿ ಅನಪೇಕ್ಷಿತ ಅಥವಾ ಅಸಂಭಾವ್ಯವೆನಿಸಿದ ಅಂಶಗಳನ್ನೆಲ್ಲ ಕೈಬಿಟ್ಟು, ಮುಗ್ಧ, ನಿರಾಡಂಬರ, ಕೋಮಲ, ಮಧುರ, ಮನೋಹರ, ಸುಶೀಲಗಳ ಸಕಾರಮೂರ್ತಿಯನ್ನಾಗಿ ಆಕೆಯನ್ನು ಚಿತ್ರಿಸುತ್ತಾನೆ. ತಂದೆ ಕಣ್ವರ ಮೇಲೆ ಆಕೆಗಿರುವ ವಿಶೇಷ ಪ್ರೀತಿಗೌರವಗಳನ್ನು ಎತ್ತಿ ತೋರಿಸುತ್ತಾನೆ. ಪಾವನ ತಪೋವನದಲ್ಲಿ ಕನ್ಯೆಯರ ಸಹಜ ಮಧುರ ಜೀವನವನ್ನು ಮನಗಾಣಿಸಲೆಂದು ಆಕೆಗೆ ಅನಸೂಯೆ ಪ್ರಿಯಂವದೆಯರೆಂಬ ಓರುಗೆಯ ಸಖಿಯರಿಬ್ಬರನ್ನು ತರುತ್ತಾನೆ. ನಿಜವಾಗಿ ಕಾಳಿದಾಸನ ಶಕುಂತಲೆ ಪುಣ್ಯಾಶ್ರಮದ ಸುಕುಮಾರ ತರುಲತೆಗಳು, ಜಿಂಕೆಮರಿ, ಪುಟ್ಟಹಕ್ಕಿಗಳೊಡನೆ ತಾದಾತ್ಮ್ಯ ಪಡೆದು ತಾನೂ ಅವುಗಳಲ್ಲಿ ಒಂದೆನಿಸುತ್ತಾಳೆ. ಕಾಳಿದಾಸ ಇಲ್ಲಿ ಚಿತ್ರಿಸಿರುವ ಪ್ರಕೃತಿಯ ಸೌಂದರ್ಯ ಹಾಗು ಮಾಧುರ್ಯಗಳ ವಾತಾವರಣವೇ ಸಮ್ಮೋಹಕವಾಗಿದೆ.ಕನ್ನಡದಲ್ಲಿ ಕಾಳಿದಾಸನ ಗ್ರಂಥಗಳ ಪ್ರಚಾರ, ಅನುವಾದ ಕಾರ್ಯ ಒಂದು ನೂರು ವರ್ಷಗಳಿಗೂ ಹೆಚ್ಚುಕಾಲದಿಂದ ಅವ್ಯಾಹತವಾಗಿ ಸಾಗಿದೆಯೆನ್ನಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಇಂಡಿಯನ್ ಕೋಸ್ಟ್ ಗಾರ್ಡ್ ಸಹಾಯಕ ಕಮಾಂಡೆಂಟ್ ಹುದ್ದೆ'ಗಳಿಗೆ ಅರ್ಜಿ

Fri Feb 18 , 2022
 ‘ಇಂಡಿಯನ್ ಕೋಸ್ಟ್ ಗಾರ್ಡ್ ಸಹಾಯಕ ಕಮಾಂಡೆಂಟ್ ಹುದ್ದೆ’ಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು  ರಂದು ಭಾರತೀಯ ಕರಾವಳಿ ರಕ್ಷಣಾ ಪಡೆಯ ಅಧಿಕೃತ ಸೈಟ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.ನೋಂದಣಿ ಪ್ರಕ್ರಿಯೆ ಫೆಬ್ರವರಿ 18 ರಿಂದ ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ 28, 2022 ರಂದು ಕೊನೆಗೊಳ್ಳುತ್ತದೆ.ಅಸಿಸ್ಟೆಂಟ್ ಕಮಾಂಡೆಂಟ್- ಜನರಲ್ ಡ್ಯೂಟಿ, ಕಮರ್ಷಿಯಲ್ ಪೈಲಟ್ ಲೈಸೆನ್ಸ್ (ಸಿಪಿಎಲ್-ಎಸ್ ಎಸ್ ಎ) ಮತ್ತು ಟೆಕ್ನಿಕಲ್ (ಎಂಜಿನಿಯರಿಂಗ್ ಮತ್ತು […]

Advertisement

Wordpress Social Share Plugin powered by Ultimatelysocial