”ಕಾಶ್ಮೀರ ಫೈಲ್‌ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲು ಬಿಜೆಪಿ ಅಗ್ನಿಹೋತ್ರಿಯರನ್ನು ಕೇಳಬೇಕು”: ಅರವಿಂದ್ ಕೇಜ್ರಿವಾಲ್

ನವದೆಹಲಿ ಮಾರ್ಚ್ 25: “ಕೆಲವರು ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಕೋಟಿಗಟ್ಟಲೆ ಸಂಪಾದಿಸಿದ್ದಾರೆ ಮತ್ತು ನಿಮಗೆ ಕೇವಲ ಪೋಸ್ಟರ್‌ಗಳನ್ನು ಹಾಕುವ ಕೆಲಸವನ್ನು ನೀಡಲಾಗಿದೆ” ಎಂದು ವಿಧಾನಸಭೆಯಲ್ಲಿ ಬಿಜೆಪಿ ವಿರುದ್ಧ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಾಶ್ಮೀರಿ ಪಂಡಿತರ ವಲಸೆಯ ನೋವನ್ನು ತೋರಿಸುವ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಮಾರ್ಚ್ 11ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ, ಅನೇಕ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಈ ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸಲಾಗಿದೆ. ಇವುಗಳಲ್ಲಿ ಬಿಹಾರ, ಮಧ್ಯಪ್ರದೇಶ, ಹರಿಯಾಣ, ಉತ್ತರ ಪ್ರದೇಶ, ಗುಜರಾತ್, ತ್ರಿಪುರಾ, ಗೋವಾ ಮತ್ತು ಉತ್ತರಾಖಂಡ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸಲಾಗಿದೆ.

ಬಿಜೆಪಿ ಶಾಸಕರು ಬುಧವಾರ ನಡೆಯುತ್ತಿರುವ ವಿಧಾನಸಭೆ ಅಧಿವೇಶನಕ್ಕೆ ಅಡ್ಡಿಪಡಿಸಿ ಕಾಶ್ಮೀರ ಫೈಲ್‌ಗಳನ್ನು ತೆರಿಗೆ ಮುಕ್ತಗೊಳಿಸುವಂತೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೆ ಗುರುವಾರ ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕಾಶ್ಮೀರ ಫೈಲ್‌ಗಳನ್ನು ರಾಜ್ಯದಲ್ಲಿ ತೆರಿಗೆ ಮುಕ್ತಗೊಳಿಸಬೇಕೆಂಬ ಭಾರತೀಯ ಜನತಾ ಪಕ್ಷ (ಬಿಜೆಪಿ) ಅವರ ಬೇಡಿಕೆಯ ವಿರುದ್ಧ ವಾಗ್ದಾಳಿ ನಡೆಸಿದರು. ಅದನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲು ಬಿಜೆಪಿಯು ವಿವೇಕ್ ಅಗ್ನಿಹೋತ್ರಿ ಅವರನ್ನು ಕೇಳಬೇಕು ಮತ್ತು ಪ್ರತಿಯೊಬ್ಬರೂ ಅದನ್ನು ಉಚಿತವಾಗಿ ನೋಡುತ್ತಾರೆ. ಕೆಲವರು ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಕೋಟಿಗಟ್ಟಲೆ ಸಂಪಾದಿಸಿದ್ದಾರೆ ಮತ್ತು ನಿಮಗೆ (ಪಂಡಿತರು) ಕೇವಲ ಪೋಸ್ಟರ್‌ಗಳನ್ನು ಹಾಕುವ ಕೆಲಸವನ್ನು ನೀಡಿದ್ದಾರೆ ಎಂದು ಕೇಜ್ರಿವಾಲ್ ವಾಗ್ದಾಳಿ ಮಾಡಿದ್ದಾರೆ.

“ನಮ್ಮನ್ನು ತೆರಿಗೆಮುಕ್ತಗೊಳಿಸುವಂತೆ ಏಕೆ ಕೇಳುತ್ತಿದ್ದೀರಿ? ನಿಮಗೆ ಅಷ್ಟು ಉತ್ಸುಕವಾಗಿದ್ದರೆ, ವಿವೇಕ್ ಅಗ್ನಿಹೋತ್ರಿಯವರಿಗೆ ಕಾಶ್ಮೀರ ಫೈಲ್‌ ಸಿನಿಮಾವನ್ನು ಯೂಟ್ಯೂಬ್‌ನಲ್ಲಿ ಹಾಕಲು ಹೇಳಿ. ಆಗ ಎಲ್ಲಾ ಉಚಿತವಾಗಿರುತ್ತದೆ. ಎಲ್ಲರೂ ಅದನ್ನು ಒಂದು ದಿನದಲ್ಲಿ ನೋಡಬಹುದು” ಎಂಬ ಕೇಜ್ರಿವಾಲ್ ಅವರ ಮಾತು ದೆಹಲಿ ವಿಧಾನಸಭೆ ಸದಸ್ಯರ ನಗು ಮತ್ತು ಡೆಸ್ಕ್‌ಗಳ ಬಡಿತಕ್ಕೆ ಕಾರಣವಾಯಿತು.

ಚಿತ್ರವೊಂದನ್ನು ತೆರಿಗೆ ಮುಕ್ತ ಮಾಡೋದರಿಂದ ಯಾರಿಗೆ ಲಾಭ ಆಗಲಿದೆ? ತೆರಿಗೆ ಮುಕ್ತ ಮಾಡುವುದು ಏಕೆ? ಇಂತಹ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. 2017ರಲ್ಲಿ ಜಿಎಸ್‌ಟಿ ಜಾರಿಗೆ ಬರುವವರೆಗೆ ರಾಜ್ಯ ಸರ್ಕಾರಗಳು ಚಿತ್ರಮಂದಿರಗಳಿಂದ ಮನರಂಜನಾ ತೆರಿಗೆ ಸಂಗ್ರಹ ಮಾಡುತ್ತಿದ್ದವು. ಆದರೆ ಹೊಸ ತೆರಿಗೆ ಜಾರಿಯ ಬಳಿಕ ದೇಶದ ಪ್ರತಿ ರಾಜ್ಯಗಳಲ್ಲಿ ಚಲನಚಿತ್ರ ಟಿಕೆಟ್‌ಗಳ ಮೇಲೆ ಶೇಕಡಾ 28ರಷ್ಟು ಜಿಎಸ್‌ಟಿ ವಿಧಿಸಲಾಗುವುದು ಎಂದು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿತು. ಅಲ್ಲದೆ, ಈ ತೆರಿಗೆಯಿಂದ ಬರುವ ಆದಾಯದ ಅರ್ಧದಷ್ಟು ಹಣವನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಹಂಚಿಕೊಳ್ಳಲು ಒಪ್ಪಿಕೊಂಡವು.ಈ ಹೊಸ ನೀತಿಯಿಂದಾಗಿ ನಮ್ಗೆ ಪರಿಹಾರ ಬೇಕು.. ಸಡಿಲಿಕೆ ಬೇಕು ಎಂದು ಚಿತ್ರರಂಗ ಧ್ವನಿ ಎತ್ತಿತು. ಟಿಕೆಟ್‌ಗೆ ಶೇ.28ರಷ್ಟು ತೆರಿಗೆ ಕಟ್ಟೋದು ತುಂಬಾ ಕಷ್ಟ ಎಂದು ಸರಕಾರಗಳ ಮೇಲೆ ಒತ್ತಡ ಹೇರಿದರು. ಕೇಂದ್ರ ಸರಕಾರ ಈ ಒತ್ತಡಕ್ಕೆ ಮಣಿದು, ಎರಡು ಭಾಗಗಳಾಗಿ ವಿಂಗಡಿಸಿ ತೆರಿಗೆ ಹಾಕುವುದಾಗಿ ಹೇಳಿತು.

ಮೊದಲನೆಯದು: ಥಿಯೇಟರ್‌ಗಳಲ್ಲಿ ಟಿಕೆಟ್ ದರ 100 ರೂ.ಗಿಂತ ಕಡಿಮೆಯಿದ್ದರೆ 12 ರಷ್ಟು ಜಿಎಸ್‌ಟಿ

ಎರಡನೆಯದು: ಥಿಯೇಟರ್ ಗಳಲ್ಲಿ ಟಿಕೆಟ್ ಬೆಲೆ 100 ರೂ.ಗಿಂತ ಹೆಚ್ಚಾಗಿದ್ದರೆ ಶೇ.18ರಷ್ಟು ಜಿಎಸ್‌ಟಿ

ಉದಾಹರಣೆಗೆ ಕರ್ನಾಟಕದಲ್ಲಿ ಯಾವುದೇ ಚಿತ್ರದ ಟಿಕೆಟ್‌ಗೆ 18 ಪ್ರತಿಶತ ಜಿಎಸ್‌ಟಿ ವಿಧಿಸಲಾಗುತ್ತಿದೆ ಎಂದು ಇಟ್ಟುಕೊಳ್ಳೋಣ. ರಾಜ್ಯ ಸರಕಾರ ಸಿನೆಮಾವೊಂದಕ್ಕೆ ತೆರಿಗೆ ಮುಕ್ತ ಘೋಷಿಸಿದ ಬಳಿಕ ತೆರಿಗೆ ವ್ಯಾಪ್ತಿಯಿಂದ ತನ್ನ ಪಾಲಿನ ಶೇಕಡಾ 9ರಷ್ಟು ವಿನಾಯಿತಿ ನೀಡಲಾಗಿದೆ ಎಂದು ಅರ್ಥ. ಶೇ. 18ರ ಜಿಎಸ್‌ಟಿ ಬದಲಿಗೆ 9ರಷ್ಟು ತೆರಿಗೆ ವಿಧಿಸಲಾಗುತ್ತದೆ. ಹಾಗಾಗಿ ವಿಧಿಸುತ್ತಿರುವ ಶೇ.9ರಷ್ಟು ತೆರಿಗೆಯೂ ಕೇಂದ್ರದ ಪಾಲಾಗಿರುತ್ತದೆ. ಸರಳ ಭಾಷೆಯಲ್ಲಿ ಹೇಳೋದಾದ್ರೆ, ರಾಜ್ಯವು ತನ್ನ ಪಾಲಿನ ತೆರಿಗೆಯ ಶೇಕಡಾ 50 ರಷ್ಟು ಮಾತ್ರ ಮನ್ನಾ ಮಾಡುವ ಹಕ್ಕು ಹೊಂದಿದೆ. ಹೀಗಾಗಿ, ಈ ತೆರಿಗೆ ಲಾಭ ಪ್ರೇಕ್ಷಕರಿಗೆ ದೊರೆಯಲಿದೆ. ಸಾಮಾನ್ಯವಾಗಿ ಸ್ಪೂರ್ತಿದಾಯಕ, ಸ್ವಾತಂತ್ರ್ಯ ಹೋರಾಟಗಾರರು, ಕೋಮು ಸೌಹಾರ್ದತೆ ಉತ್ತೇಜಿಸುವ, ಸಮಾಜದ ಮೇಲೆ ಉತ್ತಮ ಪರಿಣಾಮ ಬೀರುವ ಚಲನಚಚಿತ್ರಗಳಿಗೆ ತೆರಿಗೆ ಮುಕ್ತ ಘೋಷಿಸುವ ಅಧಿಕಾರ ರಾಜ್ಯ ಸರಕಾರಕ್ಕೆ ಬಿಟ್ಟದ್ದು.

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಬಿಡುಗಡೆಯಾದ ದಿನದಿಂದ ದೇಶದ ಗಮನ ಸೆಳೆದಿದೆ. ಬಾಕ್ಸಾಫೀಸ್​ನಲ್ಲಿ ನಿರೀಕ್ಷೆಗೂ ಮೀರಿ ಅತ್ಯುತ್ತಮ ಗಳಿಕೆ ಮಾಡುತ್ತಿರುವ ಚಿತ್ರದ ಒಟ್ಟಾರೆ ಕಲೆಕ್ಷನ್ 190 ಕೋಟಿ ರೂ ದಾಟಿದೆ. 1990ರಲ್ಲಿ ಕಾಶ್ಮೀರದಲ್ಲಿ ನಡೆದ ಘಟನೆಗಳು, ಕಾಶ್ಮೀರಿ ಪಂಡಿತರ ವಲಸೆ ಮೊದಲಾದ ಘಟನೆಗಳನ್ನು ಆಧರಿಸಿ ಚಿತ್ರ ತಯಾರಾಗಿದೆ. ಅನುಪಮ್ ಖೇರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪ್ರಕಾಶ್ ಬೆಳವಾಡಿ ಮೊದಲಾದ ತಾರೆಯರು ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತೀವ್ರ ಚರ್ಚೆಯನ್ನೂ ಹುಟ್ಟುಹಾಕಿದೆ. ರಾಜಕೀಯ ನೇತಾರರೂ ಸೇರಿದಂತೆ ಅಧಿಕಾರಿಗಳು, ಸಿನಿಮಾ ಪ್ರೇಮಿಗಳು ಚಿತ್ರವನ್ನು ಬಗೆಬಗೆಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

RRR ಚಲನಚಿತ್ರ ವಿಮರ್ಶೆ: ಜೂನಿಯರ್ ಎನ್ಟಿಆರ್-ರಾಮ್ ಚರಣ್ ಅವರ ಫ್ಯಾಬ್ ಪ್ರದರ್ಶನಗಳು, ಎಸ್ಎಸ್ ರಾಜಮೌಳಿ ಅವರ ನಿರ್ದೇಶನವು ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡುತ್ತದೆ;

Fri Mar 25 , 2022
ಕೊನೆಗೂ ಎಸ್ ಎಸ್ ರಾಜಮೌಳಿ ಅವರ ಆರ್ ಆರ್ ಆರ್ ತೆರೆಗೆ ಬಂದಿದೆ. ಬ್ರಿಟಿಷ್ ವಸಾಹತುಶಾಹಿಗಳಿಂದ ಸ್ವಾತಂತ್ರ್ಯವನ್ನು ಪಡೆಯಲು ಬಯಸುವ ಇಬ್ಬರು ವ್ಯಕ್ತಿಗಳ ಕುರಿತಾದ ಚಲನಚಿತ್ರವು ಸ್ವಾತಂತ್ರ್ಯ ಪೂರ್ವದ ಯುಗದಲ್ಲಿ ನಡೆಯುತ್ತದೆ. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅವರ ಎಲ್ಲಾ ಅಭಿಮಾನಿಗಳಿಗೆ ಈ ಚಿತ್ರವನ್ನು ಟ್ರೀಟ್ ಎಂದು ಪ್ರಶಂಸಿಸಲಾಗುತ್ತಿದೆ. ಪ್ರಮುಖ ವ್ಯಕ್ತಿಗಳ ಶುಲ್ಕ ಮತ್ತು ಎಸ್‌ಎಸ್ ರಾಜಮೌಳಿ ಅವರ ಲಾಭದ ಪಾಲನ್ನು ನಾವು ಲೆಕ್ಕಾಚಾರ ಮಾಡಿದರೆ RRR ಸುಮಾರು […]

Advertisement

Wordpress Social Share Plugin powered by Ultimatelysocial