ಎಲ್ ಎಸ್. ಶೇಷಗಿರಿರಾವ್ ಕನ್ನಡದ ಪ್ರಸಿದ್ಧ ವಿದ್ವಾಂಸ, ವಿಮರ್ಶಕ

 

ಪ್ರೊ. ಎಲ್. ಎಸ್. ಶೇಷಗಿರಿರಾವ್ ಕನ್ನಡದ ಪ್ರಸಿದ್ಧ ವಿದ್ವಾಂಸ, ವಿಮರ್ಶಕ, ಹೋರಾಟಗಾರ, ಪ್ರಾಧ್ಯಾಪಕ, ಬರಹಗಾರ, ಸರಳ ಸಜ್ಜನಿಕೆಗಳಿಗೆ ಸದಾ ಹೆಸರಾಗಿದ್ದವರು. 2019ರ ಡಿಸೆಂಬರ್ 20ರಂದು ನಮ್ಮನ್ನಗಲಿದ ಮಹಾನ್ ವಿದ್ವಾಂಸರಾದ ಎಲ್ಎಸ್ಎಸ್ ಅವರ ಸಂಸ್ಮರಣಾ ಸಂದರ್ಭವಿದು.
ಪ್ರೊಫೆಸರ್ ಪ್ರೊ. ಎಲ್. ಎಸ್. ಶೇಷಗಿರಿರಾವ್ 1925ರ ಫೆಬ್ರವರಿ 16ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರು ಮೂಲತಃ ಧಾರವಾಡದ ಹತ್ತಿರದ ಲಕ್ಷ್ಮೇಶ್ವರ ದೇಶಪಾಂಡೆ ಮನೆತನದವರು. ತಮ್ಮ ತಂದೆ ಎಲ್. ಸ್ವಾಮಿ ರಾವ್ ಅವರಂತೆಯೇ ಅಧ್ಯಾಪನ ವೃತ್ತಿಗೆ ಆಕರ್ಷಿತರಾದ ಎಲ್ಎಸ್ಎಸ್ ಸಾಹಿತ್ಯದ ವಿಚಾರದಲ್ಲಿಯೂ ತಂದೆಯವರ ಆಸಕ್ತಿಯನ್ನೇ ಹಿಂಬಾಲಿಸಿದರು. ಇಂಗ್ಲಿಷ್ ಅಧ್ಯಾಪಕರಾಗಿ ತಮ್ಮ ಪ್ರಿಯ ಶಿಷ್ಯವರ್ಗದವರಿಗೆ ಎಂದೆಂದೂ ಮೇಷ್ಟ್ರು ಎನಿಸಿದ್ದ ಎಲ್ಎಸ್ಎಸ್ ಕನ್ನಡದ ‘ಸಾಕ್ಷೀಪ್ರಜ್ಞೆ’ಯ ಪ್ರತೀಕವೆಂದು ಹೆಸರಾದವರು.
ಸುದೀರ್ಘಕಾಲದ ಅಧ್ಯಾಪನವೇ ಅಲ್ಲದೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಆರ್. ಗುಂಡೂರಾಯರ ಪತ್ರಿಕಾ ಕಾರ್ಯದರ್ಶಿಯಾಗಿ, ಪುಸ್ತಕ ಪ್ರಾಧಿಕಾರದ ಪ್ರಥಮಾಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಎಲ್ ಎಸ್ ಎಸ್ ದುಡಿದಿದ್ದರು.
ಎಲ್ ಎಸ್ ಶೇಷಗಿರಿರಾಯರು ರಾಷ್ಟ್ರೋತ್ತಾನ ಪರಿಷತ್ತಿನ ಪುಟ್ಟ ಮಕ್ಕಳಿಗಾಗಿನ ಸಚಿತ್ರ ಪುಸ್ತಕಗಳ ಮೂಲಕ ಚಿಕ್ಕ ಮಕ್ಕಳಿಗೆ ಹೇಗೆ ಪ್ರಿಯರಾಗಿದ್ದರೋ ಹಾಗೆಯೇ, ತಮ್ಮ ಉನ್ನತ ವ್ಯಾಖ್ಯಾನ, ಉಪನ್ಯಾಸ, ವಿಶಾಲ ವ್ಯಾಪ್ತಿಯ ಬರಹ, ವಿಮರ್ಶೆ, ಸಂಪಾದನೆ ಮತ್ತು ಕನ್ನಡ ಪರ ಹೋರಾಟಗಳ ಮೂಲಕ ನಾಡಿನ ಎಲ್ಲ ವರ್ಗದ ಹಿರಿಯರಿಗೂ ಪ್ರಿಯ ಹೆಸರು. ಅವರ ಸಂಪಾದನೆಯಲ್ಲಿ ಮೂಡಿಬಂದ ಬೆಂಗಳೂರು ದರ್ಶನ ಸಂಪುಟಗಳು ಪಡೆದ ಜನಪ್ರಿಯತೆ ಅಪಾರವಾದದ್ದು. ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಅವರ ಹೆಸರು ನಿರಂತರವಾಗಿ ಬೆಳಗುತ್ತಿರುವಂತದ್ದು. ಕನ್ನಡ ಪುಸ್ತಕ ಪ್ರಾಧಿಕಾರದಂತಹ ಅಧಿಕಾರ ನಿರ್ವಹಣೆಯಲ್ಲಿ ಅವರು ಕೈಗೊಂಡ ಕಾರ್ಯಕ್ರಮಗಳು ಕೂಡಾ ಅಷ್ಟೇ ಮಹತ್ವಪೂರ್ಣವಾದವು.
ಅಂದಿನ ದಿನಗಳಲ್ಲಿ ನಾವು ಸಂಘಟಿಸಿದ್ದ ಮಾಸ್ತಿ ಜನ್ಮ ಶತಾಬ್ಧಿ ಕಾರ್ಯಕ್ರಮ, ನೀನಾಸಂ ಅವರ ‘ಆಧುನಿಕ ಕನ್ನಡ ಸಾಹಿತ್ಯ ಶಿಬಿರ’ದ ಉದ್ಘಾಟನಾ ಸಂದರ್ಭಗಳಲ್ಲಿ ಅವರು ನೀಡಿದ ಉಪನ್ಯಾಸಗಳು ನನ್ನ ಮನಸ್ಸಿನಲ್ಲಿ ಈಗಲೂ ಆಳವಾಗಿ ಬೇರೂರಿವೆ. ಒಂದು ರೀತಿಯಲ್ಲಿ ಇದು ಆಗತಾನೆ ಕನ್ನಡದ ಸಾಸ್ಕೃತಿಕ ಪರಿಸರದಲ್ಲಿ ಆಸಕ್ತಿ ತಾಳಿದ್ದ ನಮ್ಮಂತಹವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಮೊದ ಮೊದಲಿಗೆ ದೊರೆತ ಅಪೂರ್ವ ಬೆಳಕು ಎಂದರೆ ತಪ್ಪಾಗಲಾರದು. ಕಥಾನಕ ರೂಪದಲ್ಲಿ ಅವರು ನಮ್ಮಲ್ಲಿ ತುಂಬಿದ್ದ ಮಾಸ್ತಿಯವರ ಬದುಕಿನ ರೀತಿ, ಮಾಸ್ತಿಯವರ ಸಾಹಿತ್ಯದ ವಿಸ್ತಾರ ಮತ್ತು ಆಳ, ಆಧುನಿಕ ಕನ್ನಡ ಸಾಹಿತ್ಯದ ವಿವಿಧ ನೆಲೆಗಳು ಇತ್ಯಾದಿ ವಿಚಾರಗಳು ಇಂದಿಗೂ ಮರೆಯಲಾರದಂತೆ ಹಸುರಾಗಿವೆ. ವಿವಿಧ ಕನ್ನಡ ಸಮಾರಂಭಗಳು – ಚಳುವಳಿಗಳಲ್ಲಿ ಅವರು ನಮಗೆ ನೀಡಿದ ಬೋಧೆ, ಸ್ಪೂರ್ತಿ ಮನನೀಯವಾದದ್ದು.
ಕನ್ನಡ ಸಾಹಿತ್ಯ ಮಾತ್ರವಲ್ಲದೆ ವಿಶ್ವದೆಲ್ಲೆಡೆಯ ಸಾಹಿತ್ಯದಲ್ಲಿನ ಪ್ರಗತಿಯನ್ನು ತೀವ್ರ ಆಸಕ್ತಿಯಿಂದ ಗಮನಿಸುತ್ತ ಬಂದಿದ್ದ ಎಲ್ಎಸ್ಎಸ್ ಕನ್ನಡ ಸಾಹಿತ್ಯ ಲೋಕದಲ್ಲಿ ಕಂಡು ಬಂದಿರುವ ಎಲ್ಲಾ ಸಾಹಿತ್ಯ ಪ್ರಗತಿಗಳನ್ನೂ ಸಮಚಿತ್ತ ಸಮಗೌರವದಿಂದ ಕಾಣುತ್ತಾ ಸಾಗಿದ್ದವರು. ಕಳೆದ ಹಲವು ವರ್ಷಗಳಲ್ಲಿ ಸಾಹಿತ್ಯವು ಪಡೆದುಕೊಂಡಿರುವ ವಿಶಾಲ ವ್ಯಾಪ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದ ಎಲ್ಎಸ್ಎಸ್ ವಿವಿಧ ಜ್ಞಾನ ಪ್ರಕಾರಗಳಾದ ಮನಃಶಾಸ್ತ್ರ, ಸಮಾಜಶಾಸ್ತ್ರಗಳ ಜೊತೆಗೆ ಅರ್ಥಶಾಸ್ತ್ರ, ರಾಜಕೀಯದಂತಹ ವಿಚಾರಗಳನ್ನು ಕೂಡಾ ಸಮರ್ಥವಾಗಿ ಅರ್ಥೈಸಿರುವ ಜನ ಇಂದು ಬರಹದಲ್ಲಿ ತೊಡಗಿರುವುದನ್ನು ಸಂತೋಷಿಸುತ್ತಿದ್ದರು. ದಲಿತ ಸಾಹಿತ್ಯ ಶಕ್ತಿಶಾಲಿಯಾಗಿ ಹೊರಹೊಮ್ಮಿರುವುದರ ಬಗ್ಗೆ ವಿಶೇಷ ಮಹತ್ವ ನೀಡುತ್ತಿದ್ದ ಎಲ್ಎಸ್ಎಸ್ ದಲಿತ ಸಾಹಿತ್ಯ ಪ್ರಕಾರದಲ್ಲಿನ ಲೇಖಕರು ತಮ್ಮ ಅಸಾಮಾನ್ಯ ಪ್ರತಿಭೆಯ ಜೊತೆಗೆ ತೀವ್ರವಾದ ಅನುಭವಗಳ ಸಹಿತವಾಗಿ ಆತ್ಮಗೌರವ ಮತ್ತು ಸತ್ಯಪ್ರದಿಪಾದನೆಯ ಹಾದಿಯಲ್ಲಿ ಸಾಹಿತ್ಯ ಮೂಡಿಸುತ್ತಾ ಸಾಗಿದ್ದು ದಲಿತ ಸಾಹಿತ್ಯಕ್ಕೆ ಅಪಾರ ಶಕ್ತಿ ಒದಗಿಸಿತ್ತು ಎಂದು ಅಭಿಪ್ರಾಯಪಡುತ್ತಿದ್ದರು.
ಕನ್ನಡ ಪರವಾದ ಎಲ್ಲಾ ಚಳುವಳಿಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಎಲ್ಎಸ್ಎಸ್ ಅವರು ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೂಡಾ ಕನ್ನಡಕ್ಕೆ ಸೂಕ್ತವಾಗಿ ಸಿಗದಿರುವ ಪುರಸ್ಕಾರ, ಸಂಪನ್ಮೂಲ, ನಾಯಕತ್ವಗಳ ಬಗೆಗೆ ವ್ಯಕ್ತಪಡಿಸಿದ್ದ ಕಾಳಜಿಗಳು ಮನನೀಯವಾದದ್ದು.
ನಾವು ನಿರೀಕ್ಷಿಸುವಂತಹ ಸಾಹಿತ್ಯ ಕ್ಷೇತ್ರದ ಮಾರ್ಗದರ್ಶಿಗಳು ಮಾರುಕಟ್ಟೆಯಲ್ಲಿ ಉದ್ದ್ಭವಿಸುವುದಿಲ್ಲ, “ಕುವೆಂಪು, ಮಾಸ್ತಿ, ಬೇಂದ್ರೆ, ಶಿವರಾಮ ಕಾರಂತರು ತಮ್ಮನ್ನು ರೋಲ್ ಮಾಡೆಲ್ಲುಗಳೆಂದು ಘೋಷಿಸುತ್ತಾ ಬಂದವರಲ್ಲ” ಎನ್ನುತ್ತಿದ್ದ ಎಲ್ ಎಸ್ ಎಸ್ ಬರವಣಿಗೆಯ ಕಲೆಯನ್ನು ಶಾಲೆಯ ಕೊಟಡಿಗಳಲ್ಲಿ ಕಲಿಸುವುದು ಸಾಧ್ಯವಿಲ್ಲ, ಅದು ಸ್ವಾಭಾವಿಕವಾಗಿಯೇ ವ್ಯಕ್ತಿತ್ವದಲ್ಲಿ ಮೂಡಬೇಕು. ಬರಹಗಾರನಾಗಬೇಕಾದವ ತನ್ನ ಪರಿಸರ ಮತ್ತು ಬದುಕಿನೊಡನೆ ಸಾಕ್ಷೀಭೂತವಾದ ಅನುಭಾವವನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯಕ” ಎನ್ನುತ್ತಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಕೊರಟಗೆರೆ ಪ್ರಯಾಣಿಕರನ್ನು ಬಸ್ ಹತ್ತಿಸುವುದಿಲ್ಲ ಎಂದ ಖಾಸಗಿ ಕಂಡಕ್ಟರ್..

Thu Dec 22 , 2022
ತುಮಕೂರಿನ ಬಸ್ ನಿಲ್ದಾಣದಲ್ಲಿ ಮಧುಗಿರಿಗೆ ಬಸ್ ಟಿಕೆಟ್ ತೆಗೆದುಕೊಂಡು ಬಸ್ ಹತ್ತಿದ ಕೊರಟಗೆರೆಯ ಪ್ರಯಾಣಿಕರು..ಕೊರಟಗೆರೆಯ ಎಸ್ ಎಸ್ ಆರ್ ವೃತ್ತದಲ್ಲಿ ತಡರಾತ್ರಿ ಬಸ್ ತಡೆದು ಕಂಡಕ್ಟರ್ ಗೆ ಕ್ಲಾಸ್ ತೆಗೆದುಕೊಂಡ ಪ್ರಯಾಣಿಕರು ಸಾರ್ವಜನಿಕರುಕಂಡಕ್ಟರ್ ಮಾಡಿದ ತಪ್ಪಿಗೆ ಕೊರಟಗೆರೆ ಬಸ್ನಿಲ್ದಾಣದಲ್ಲಿ ಒಂದು ಗಂಟೆಗೂ ಹೆಚ್ಚು ಟ್ರಾಫಿಕ್ ಜಾಮ್…ಕೊರಟಗೆರೆ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಯಲ್ಲ ಖಾಸಗಿ ಬಸ್ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ಗಳಿಂದ ಪ್ರತಿದಿನ ಕೊರಟಗೆರೆ […]

Advertisement

Wordpress Social Share Plugin powered by Ultimatelysocial