ಜಾನ್ ಕೀಟ್ಸ್ ಎರಡನೆಯ ಪೀಳಿಗೆಯ ಇಂಗ್ಲಿಷ್ ರೊಮಾಂಟಿಕ್ ಕವಿ.

 

ಜಾನ್ ಕೀಟ್ಸ್ ಎರಡನೆಯ ಪೀಳಿಗೆಯ ಇಂಗ್ಲಿಷ್ ರೊಮಾಂಟಿಕ್ ಕವಿಗಳಲ್ಲಿ ಪ್ರಮುಖನಾದವ. ಈತ ಈ ಲೋಕವನ್ನಗಲಿದ್ದು 1821ರ ಫೆಬ್ರವರಿ 23ರಂದು.ಜಾನ್ ಕೀಟ್ಸ್ 1795 ಅಕ್ಟೋಬರ್ 31ರಂದು ಲಂಡನ್ನಿನಲ್ಲಿ ಜನಿಸಿದ. ತಂದೆ ಥಾಮಸ್ ಕೀಟ್ಸ್ ಹೋಟೆಲೊಂದರ ಕುದುರೆ ಲಾಯದ ಮುಖ್ಯ ಕಾಸ್ತಾರನಾಗಿದ್ದು, ತನ್ನ ದಣಿಯ ಮಗಳನ್ನು ಮದುವೆಯಾಗಿ, ಪ್ರಯಾಣಿಕರ ಕುದುರೆಗಳನ್ನು ನೋಡಿಕೊಳ್ಳುವ ಮತ್ತು ಬೇಕೆಂದವರಿಗೆ ಕುದುರೆಗಳನ್ನು ಬಾಡಿಗೆಗೆ ಕೊಡುವ ವ್ಯವಹಾರ ಮಾಡುತ್ತಿದ್ದ. ಕಾಸ್ತಾರ ವೃತ್ತಿಯವನಾದರೂ ಥಾಮಸ್ ಕೀಟ್ಸ್, ವಿದ್ಯೆ ಸಭ್ಯತೆ ಸಂಸ್ಕೃತಿಗಳ ಅಭಿಮಾನಿ. ಜಾನ್ನನ್ನೂ ಅವನ ತಮ್ಮಂದಿರನ್ನೂ ಹತ್ತಿರದ ಊರಾದ ಎನ್ಫೀಲ್ಡಿನ ಪ್ರಖ್ಯಾತ ಪಾಠಶಾಲೆಗೆ ಕಳಿಸಿದ. ಅಲ್ಲಿ ಜಾನನಿಗೆ ಓದಿಗಿಂತಲೂ ಹೆಚ್ಚಾಗಿ ಕದನವೆಂದರೆ ಪ್ರೀತಿ; 1804ರಲ್ಲಿ ತಂದೆ ತೀರಿಕೊಂಡ. ಆದರೂ ಹುಡುಗರ ವಿದ್ಯಾಭ್ಯಾಸಕ್ಕೆ ಚ್ಯುತಿ ಉಂಟಾಗಲಿಲ್ಲ. ಸುಲಭವಾಗಿ ಕೆರಳುವ ಜಾಯಮಾನದವನಾದರೂ ಜಾನ್ ವಿಪರೀತ ಉದಾರಿ; ಆದ್ದರಿಂದ ಅವನನ್ನು ಕಂಡು ಎಲ್ಲರಿಗೂ ವಿಶ್ವಾಸ.1810ರಲ್ಲಿ ತಾಯಿ ಗತಿಸಿದಳು. ನಾಲ್ಕು ಕಿರಿಯರ ಪಾಲನೆ ಅಬ್ಬೆ ಎಂಬೊಬ್ಬ ವರ್ತಕನ ಜವಾಬ್ದಾರಿಯಾಯಿತು. ಸುಮಾರು 8,000 ಪೌಂಡು ಅವರ ಪಿತ್ರಾರ್ಜಿತ ಆಸ್ತಿ. ಜಾನ್ ಕೀಟ್ಸನ ಶಾಲಾ ವ್ಯಾಸಂಗ 1810ರಲ್ಲಿ ಮುಗಿಯಿತು. ಅಬ್ಬೆ ಅವನನ್ನು ಕೂಡಲೆ ಹತ್ತಿರದ ಎಡ್ಮಂಟನ್ ಎಂಬ ಊರಿನಲ್ಲಿ ಪ್ರಸಿದ್ಧನಾಗಿದ್ದ ಹ್ಯಾಮಂಡ್ ಎಂಬ ಶಸ್ತ್ರವೈದ್ಯನ ಕೈಕೆಳಗೆ ಐದು ವರ್ಷ ಕಲಿಕೆಯವನನ್ನಾಗಿ ಗೊತ್ತುಮಾಡಿದ. ವೈದ್ಯಕೀಯದಲ್ಲಿ ಜಾನನಿಗೆ ಪೂರಾ ಶ್ರದ್ಧೆ ಬಾರದಿದ್ದರೂ ಅದನ್ನು ಅಸಡ್ಡೆಗೆ ಈಡುಮಾಡಲಿಲ್ಲ. ಶಾಲೆಯಲ್ಲಿದ್ದಾಗ ಮೊದಮೊದಲು ಅಲಕ್ಷಿಸುತ್ತಿದ್ದ ಜ್ಞಾನಾರ್ಜನೆ ಕಡೆಯ ಎರಡು ವರ್ಷಗಳಲ್ಲಿ ಅವನ ಚಿತ್ತವನ್ನು ಬಲವಾಗಿ ಸೆಳೆದಿತ್ತು.
ಕೀಟ್ಸ್ ವರ್ಜಿಲ್ ಕವಿಯನ್ನು ಪಠಿಸಿದ್ದ. ಕೈಪಿಡಿ ನಿಘಂಟುಗಳ ಮೂಲಕ ಪ್ರಾಚೀನ ಗ್ರೀಕರ ಪುರಾಣ ಕಥಾವಳಿಯನ್ನು ಪರಿಚಯ ಮಾಡಿಕೊಂಡಿದ್ದ ಅದಕ್ಕೆ ಮನಸೋತಿದ್ದ.1812ರಲ್ಲಿ ಒಂದು ವಿಶೇಷ ಘಟನೆ ನಡೆಯಿತು. ಗೆಳೆಯ ಕೌಡನ್ ಕ್ಲಾರ್ಕ್ ಅವನಿಗೆ ಸ್ವೆನ್ಸರ್ ಕವಿಯ ಫೇರಿ ಕ್ವೀನ್ ಎಂಬ ಮಹಾಕಾವ್ಯವನ್ನು ಓದಲು ಎರವಿತ್ತ. ಕೀಟ್ಸಿಗೆ ಯಾವುದೋ ಅಮೂಲ್ಯ ನಿಧಿ ದೊರಕಿದಂತಾಯಿತು. ಎಳೆಯ ಕುದುರೆ ವಸಂತದ ಹಸಿರು ಬಯಲಲ್ಲಿ ನೆಗೆನೆಗೆದು ಓಡಾಡುವಂತೆ ಆ ಅದ್ಭುತ ಕಾವ್ಯದಲ್ಲಿ ಆಸಕ್ತನಾದನಂತೆ. ತಾನೂ ಒಬ್ಬ ಕವಿ. ಪದ್ಯರಚನೆಯೇ ತನ್ನ ನೇಮಿತ ಕೃಷಿ ಎಂಬುದು ಆಗ ಅವನಿಗೆ ಮನದಟ್ಟಾಯಿತು. ಸ್ವೆನ್ಸರನ್ನು ಅನುಕರಿಸಿ ಪದ್ಯ ಬರೆದ. 1814ರಲ್ಲಿ ಅವನಿಗೂ ಹ್ಯಾಮಂಡನಿಗೂ ನಡುವೆ ವೈಮನಸ್ಯ ಬೆಳೆಯಿತಾಗಿ, ಕಲಿಕೆಯನ್ನು ಕೊನೆಗೊಳಿಸಿ, ಲಂಡನ್ನಿಗೆ ನಡೆದು, ಆಸ್ವತ್ರೆಯಲ್ಲಿ ವೈದ್ಯ ಅಭ್ಯಾಸ ಮಾಡತೊಡಗಿದ. ಸಾಹಿತ್ಯದ ಪ್ರಭಾವ ಅವನ ಮೇಲೆ ಪ್ರಬಲವಾಗಿದ್ದರೂ ಸಹಾಧ್ಯಾಯಿಗಳಿಗೆ ಅಚ್ಚರಿ ಹುಟ್ಟುವಂತೆ ವೈದ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ.ಲೀ ಹಂಟ್ ಎಂಬಾತ ಸಾಧಾರಣ ಕವಿ, ಒಳ್ಳೆಯ ಪ್ರಬಂಧಕಾರ. ಆತ ಪರೀಕ್ಷಕ ಎಂಬ ಪತ್ರಿಕೆಯನ್ನು ನಡೆಸುತ್ತ ಸಾಹಿತ್ಯ ಸಮಾಜಗಳ ಟೀಕಾಕಾರನಾಗಿದ್ದ. ಅವನದ್ದು ತೀವ್ರಗಾಮಿಗಳ ಪಕ್ಷ; ರಾಜಕುಮಾರನ ವಿಚಾರವಾಗಿ ಕಟುವಿಮರ್ಶೆ ಪ್ರಕಟಿಸಿ ಸೆರೆಮನೆಗೆ ಹೋಗಿ ಬಂದ. ಆ ಶಿಕ್ಷೆ ಅವನಿಗೆ ಬಹಳ ಯಶಸ್ಸನ್ನು ತಂದುಕೊಟ್ಟಿತು. ಯುವಕ ಕವಿಗಳು ಅವನ ಹಿಂಬಾಲಕರಾದರು: ಅವರಲ್ಲಿ ಕೀಟ್ಸನೂ ಒಬ್ಬ. ವಿರೋಧ ಪಕ್ಷದವರು ಲೀ ಹಂಟನ ಗುಂಪನ್ನು ಕಾಕಿ ಮಠ ಎಂದು ಅಪಹಾಸ್ಯ ಗೈದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಚ್.ವಿ.ಆರ್. ಅಯ್ಯಂಗಾರ್ ರಿಸರ್ವ್ ಬ್ಯಾಂಕ್‌ನ ಆರನೇ ಗವರ್ನರ್ ಆಗಿದ್ದರು.

Thu Feb 23 , 2023
  ಕನ್ನಡದ ನೆಲದವರಾದ ಹರವು ವೆಂಕಟನರಸಿಂಹ ವರದರಾಜ ಅಯ್ಯಂಗಾರ್ ಅವರು ಭಾರತೀಯ ರಿಸರ್ವ್ ಬ್ಯಾಂಕ್‌ನ ಆರನೇ ಗವರ್ನರ್ ಆಗಿದ್ದರು. ಇಂದು ಅವರ ಸಂಸ್ಮರಣೆ ದಿನ. ಎಚ್.ವಿ. ಆರ್. ಅಯ್ಯಂಗಾರ್ ಅವರು 1902ರ ಆಗಸ್ಟ್ 23 ರಂದು ಜನಿಸಿದರು. ಅವರದ್ದು ಮಂಡ್ಯ ಜಿಲ್ಲೆಯ ಪಾಂಡವಪುರ ಸಮೀಪದ ಹರವು ಗ್ರಾಮ. ಅವರ ತಂದೆ ವೆಂಕಟ ನರಸಿಂಹ ಅಯ್ಯಂಗಾರ್. ತಾಯಿ ಚೊಕ್ಕಮ (ಶ್ರೀರಂಗಮ್ಮ). ಅಯ್ಯಂಗಾರ್ ಅವರು 1919ರ ಅವಧಿಯಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಯನ […]

Advertisement

Wordpress Social Share Plugin powered by Ultimatelysocial