ಅರಣ್ಯದಲ್ಲಿ ಲಂಟಾನ ತೆರವು ಕಾರ್ಯಾಚರಣೆ.

ಮೈಸೂರು, ಜನವರಿ 21: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಲಂಟಾನ ಗಿಡಗಳು ಯಥೇಚ್ಛವಾಗಿ ಹರಡಿ ಬೆಳೆಯುತ್ತಿರುವುದು ಅರಣ್ಯಕ್ಕೆ ಮಾತ್ರವಲ್ಲದೆ, ಅರಣ್ಯದಲ್ಲಿ ವಾಸಿಸುವ ಸಸ್ಯಹಾರಿ ಪ್ರಾಣಿಗಳಾದ ಕಾಡೆಮ್ಮೆ, ಮೊಲ, ಜಿಂಕೆಗಳ ಆಹಾರಕ್ಕೂ ಮಾರಕವಾಗುತ್ತಿವೆ. ಹೀಗಾಗಿ ಲಂಟಾನವನ್ನು ನಾಶ ಮಾಡಿ ಆ ಜಾಗದಲ್ಲಿ ಹುಲ್ಲು ಬೆಳೆಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.

ಈಗಾಗಲೇ ಬಂಡೀಪುರದಲ್ಲಿ ಹುಲ್ಲು ಬೆಳೆಸಿ ಯಶಸ್ವಿಯಾಗಿದ್ದು, ಅದೇ ರೀತಿ ನಾಗರಹೊಳೆ ಅರಣ್ಯವನ್ನು ಹರಡಿ ಬೆಳೆಯುತ್ತಿರುವ ಲಂಟಾನಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಈ ಹಿಂದೆ ಅರಣ್ಯಕ್ಕೆ ಕಾಡ್ಗಿಚ್ಚು ಬಿದ್ದ ಪರಿಣಾಮ ಕುರುಚಲು ಕಾಡು ನಾಶವಾಗಿದ್ದು, ಇದೀಗ ಆ ಪ್ರದೇಶದಲ್ಲಿ ಲಂಟಾನ ಬೆಳೆದಿದೆ. ಲಂಟಾನ ಬೆಳೆದ ಸ್ಥಳದಲ್ಲಿ ಇತರೆ ಯಾವುದೇ ಗಿಡಮರಗಳು, ಹುಲ್ಲು ಬೆಳೆಯದಂತಾಗಿದೆ. ಹೀಗಾಗಿ ಲಂಟಾನ ನಾಶ ಮಾಡಿದರೆ ಇತರೆ ಗಿಡಮರಗಳು ಬೆಳೆಯಲು, ಹುಲ್ಲು ಹುಟ್ಟಲು ಅನುಕೂಲವಾಗುತ್ತದೆ. ಜತೆಗೆ ಸಸ್ಯಹಾರಿ ಪ್ರಾಣಿಗಳಿಗೂ ಆಹಾರ ದೊರೆಯಲಿದೆ.

ಅರಣ್ಯ ಪ್ರದೇಶಕ್ಕೆ ಲಂಟಾನ ಕಂಟಕವಾಗಿದೆ. ಇದು ಅರಣ್ಯವನ್ನು ವ್ಯಾಪಿಸಿಕೊಂಡು ಬೆಳೆಯುವುದರಿಂದ ಅದನ್ನು ಅವಲಂಬಿಸಿಕೊಂಡು ಇತರೆ ಯಾವುದೇ ಸಸ್ಯ, ಗಿಡಗಳು ಬೆಳೆಯವುದಿಲ್ಲ. ಪ್ರಾಣಿಗಳ ಓಡಾಟಕ್ಕೂ ತೊಂದರೆಯಾಗುತ್ತದೆ. ಒಂದು ರೀತಿಯಲ್ಲಿ ಇದು ಅರಣ್ಯಕ್ಕೆ ಮಾರಕವಾಗಿದ್ದು, ಅದನ್ನು ನಾಶ ಮಾಡುವ ಕಾರ್ಯಕ್ಕೆ ಅರಣ್ಯ ಇಲಾಖೆ ಇಲಾಖೆಯ ಹುಲ್ಲುಗಾವಲು ಅಭಿವೃದ್ಧಿ ಯೋಜನೆ ಮತ್ತು ನರೇಗಾ ಯೋಜನೆಯಡಿ ಕ್ರಮವಹಿಸಿದೆ. ಇದು ಸಂತಸದ ವಿಚಾರವಾಗಿದೆ. ಈಗಾಗಲೇ ನಾಗರಹೊಳೆ ಉದ್ಯಾನವನದಲ್ಲಿ 500 ಹೆಕ್ಟೇರ್‌ಗೂ ಹೆಚ್ಚಿನ ಅರಣ್ಯ ಪ್ರದೇಶದಲ್ಲಿದ್ದ ಹೆಚ್ಚು ಲಂಟಾನವನ್ನು ಕಿತ್ತೊಗೆದು ಹಚ್ಚಹಸಿರಿನ ಹುಲ್ಲುಗಾವಲು ನಿರ್ಮಾಣ ಮಾಡಲಾಗಿದೆ. ಮುಂದಿನ 2023ನೇ ಸಾಲಿಗಾಗಿ ಮತ್ತೆ 500 ಹೆಕ್ಟೇರ್ ಪ್ರದೇಶದಲ್ಲಿರುವ ಲಂಟಾನವನ್ನು ನಾಶ ಮಾಡಿ ಹುಲ್ಲು ಬೆಳೆಯಲು ಕ್ರಮ ಕೈಗೊಳ್ಳಲಾಗಿದೆ.

ಲಂಟಾನ ನಾಶ ಮಾಡಿ ಅಲ್ಲಿ ಹುಲ್ಲು ಬೆಳೆಯವುದು ಅಷ್ಟು ಸುಲಭದ ಕೆಲಸವಲ್ಲ ಏಕೆಂದರೆ ಲಂಟಾನ ವಿಚಿತ್ರ ಗಿಡ. ಇದು ಸೂರ್ಯನ ಬೆಳಕು ಸರಾಗವಾಗಿ ಬೀಳುವ ಜಾಗದಲ್ಲಿ ಮತ್ತು ಶೀಘ್ರವಾಗಿ ಬೆಳೆದು ಇಡೀ ಪ್ರದೇಶವನ್ನು ಆವರಿಸಿಕೊಂಡು ಬೆಳೆಯುತ್ತಾ ಹೋಗುತ್ತದೆ. ಕಾಡಿನಲ್ಲಿ ಕಾಲುದಾರಿ ಮಾಡಲು ಆಗದಂತೆ ದಟ್ಟವಾಗಿ ಬೆಳೆಯುವ ಇದನ್ನು ಕೀಳುವುದು ಸುಲಭದ ಕೆಲಸವಲ್ಲ. ಸದ್ಯ ಅರಣ್ಯ ಇಲಾಖೆ ಸ್ಥಳೀಯ ಆದಿವಾಸಿಗಳನ್ನು ನರೇಗಾ ಯೋಜನೆಯಡಿ ಕೂಲಿಯಾಳುಗಳಾಗಿ ಸೇರಿಸಿಕೊಂಡು ತೆರವು ಕಾರ್ಯಾಚರಣೆ ನಡೆಸುತ್ತಿದೆ. ಮೊದಲು ದಟ್ಟ ಪೊದೆಯಂತೆ ಬೆಳೆದ ಗಿಡಗಂಟಿಗಳನ್ನು ಕತ್ತರಿಸಿ ನಂತರ ಭೂಮಿಯೊಳಗೆ ಇಳಿದ ಬೇರು ಸಮೇತ ಬೊಡ್ಡೆಯನ್ನು ಕಿತ್ತು ಹೊರತೆಗೆಯಲಾಗುತ್ತದೆ. ಕಿತ್ತುಹಾಕಿದ ಗಿಡ ಮತ್ತು ಬೇರಿನ ಭಾಗವನ್ನು ಕೆಲಕಾಲ ಒಣಗಲು ಬಿಟ್ಟು ನಂತರ ಅತ್ಯಂತ ಎಚ್ಚರಿಕೆಯಿಂದ ಬೆಂಕಿ ಹಾಕಿ ಸುಡಬೇಕಾಗುತ್ತದೆ.

ಇನ್ನು ಲಂಟಾನ ಕಿತ್ತ ಜಾಗದಲ್ಲಿ ಹಣ್ಣುಹಂಪಲು, ಗಿಡಮರಗಳ ಬೀಜಗಳನ್ನು ಬಿತ್ತನೆ ಮಾಡಬೇಕಾಗುತ್ತದೆ. ಲಂಟಾನದ ಒಂದು ಬೇರು ಅಥವಾ ಬೀಜ ನೆಲದ ಮೇಲೆ ಇದ್ದರೂ ಮತ್ತೆ ಮೊಳಕೆಯೊಡೆಯುತ್ತದೆ. ಹೀಗಾಗಿ ಸತತ 2 ರಿಂದ 3 ವರ್ಷಗಳ ಕಾಲ ಬೀಜ ಬಿತ್ತನೆ, ನಾಟಿ ಕಾರ್ಯ ಮುಂದುವರೆಸಿದಲ್ಲಿ ಕ್ರಮೇಣ ಲಂಟಾನದ ವಂಶ ಕಣ್ಮರೆಯಾಗಿ ಹಚ್ಚಹಸಿರಿನ ಪ್ರದೇಶ ನಿರ್ಮಾಣವಾಗುತ್ತದೆ. ಜೊತೆಗೆ ಲಂಟಾನ ತೆರವಿಗೆ ಯಂತ್ರೋಪಕರಣಗಳನ್ನು ಬಳಸದೆ. ಕೇವಲ ಮಾನವ ಸಂಪನ್ಮೂಲದೊಂದಿಗೆ ತೆರವು ಕೆಲಸ ಮಾಡುತ್ತಿರುವುದು ವಿಶೇಷವಾಗಿದೆ.

ಲಂಟಾನ ಕಿತ್ತೊಗೆಯಲು ಮುನ್ನುಡಿ ಬರೆದ ಡಿ.ಮಹೇಶ್ ಕುಮಾರ್

ಎರಡು ವರ್ಷಗಳ ಹಿಂದೆ ಅಂದಿನ ಡಿಸಿಎಫ್ ಡಿ.ಮಹೇಶ್ ಕುಮಾರ್ ಅವರು ಕಾಡಿನಲ್ಲಿ ಲಂಟಾನ ಕಿತ್ತೊಗೆಯಲು ಮುನ್ನುಡಿ ಬರೆದಿದ್ದು, ಇದೀಗ ನಾಗರಹೊಳೆ ವ್ಯಾಪ್ತಿಯಲ್ಲಿ 500 ಹೆಕ್ಟೇರ್‌ಗೂ ಹೆಚ್ಚು ಭೂ ಪ್ರದೇಶದಲ್ಲಿ ಹಸಿರು ಹುಲ್ಲುಗಾವಲು ನಳನಳಿಸುತ್ತಿದೆ. ಇದು ಹೀಗೆಯೇ ಮುಂದುವರೆದರೆ ಲಂಟಾನ ಸರ್ವನಾಶವಾಗುವ ದಿನ ದೂರವಿಲ್ಲ ಎನ್ನುವ ಭರವಸೆ ಎಲ್ಲರಲ್ಲಿ ಮೂಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannad

Please follow and like us:

Leave a Reply

Your email address will not be published. Required fields are marked *

Next Post

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ.

Sat Jan 21 , 2023
ಕಟೀಲ್ ಚಪ್ಪಲಿ ಹೇಳಿಕೆ ವಿಚಾರ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ ಕಟೀಲ್ ನಾಲಿಗೆಗೆ ಮೂಳೆಯಿಲ್ಲ, ಬಾಯಿಗೆ ಬಂದಂತೆ ಮಾತನಾಡ್ತಾರೆ ಬಚ್ಚಲಬಾಯಿ ಅಂತ ಹಳ್ಳಿಯಲ್ಲಿ ಕರೀತಾರೆ ಕಟೀಲ್ ಒಂದು ಪಕ್ಷದ ಅಧ್ಯಕ್ಷ ಒಂದು ಉದಾಹರಣೆ ಕೊಡಲಿ ನಮ್ಮ ಗಲಾಟೆ ಬಗ್ಗೆ ಅವರ ಪಕ್ಷದಲ್ಲಿ ಹೊಡೆದಾಟ ನಡಿಯುತ್ತಿದೆ ಯತ್ನಾಳ, ನಿರಾಣಿ, ವಿಶ್ವನಾಥ್, ಯೋಗೇಶ್ವರ್ ಬಹಿರಂಗವಾಗಿ ಹೇಳಿದ್ದಾರೆ ಅದರ ಬಗ್ಗೆ ಹೇಳಿಕೆ ನೀಡಲಿ ಕಟೀಲ್ ಗೆ ಪಕ್ಷದ ಮೇಲೆ ಹಿಡಿತ ಇಲ್ಲ […]

Advertisement

Wordpress Social Share Plugin powered by Ultimatelysocial