ಎಂ. ಎನ್. ರಾಯ್

ಎಂ. ಎನ್. ರಾಯ್ ಇಪ್ಪತ್ತನೆಯ ಶತಮಾನದ ಪ್ರಮುಖ ಭಾರತೀಯ ನವಮಾನವತಾವಾದಿ. ಸಾಮಾಜಿಕ ಮತ್ತು ರಾಜಕೀಯ ಚಿಂತಕ. ಮನಭೇಂದ್ರನಾಥ ರಾಯ್ ಇವರ ಪೂರ್ಣ ಹೆಸರು. ನರೇಂದ್ರನಾಥಭಟ್ಟಾಚಾರ್ಯ ಎಂಬುದು ಇವರ ಮೂಲ ಹೆಸರು. ಜಾಗತಿಕ ಚಿಂತನ ಕ್ಷೇತ್ರದಲ್ಲಿ ಇವರು ಎಂ. ಎನ್. ರಾಯ್ ಎಂದೇ ಪ್ರಸಿದ್ಧರು.
ಲೆನಿನ್ನಿಂದ “ಪೌರಾತ್ಯ ರಾಷ್ಟ್ರಗಳ ಕ್ರಾಂತಿಯ ಸಂಕೇತ ” ಎಂಬ ಹೊಗಳಿಕೆಗೆ ಇವರು ಪಾತ್ರರಾಗಿದ್ದರು.
ರಾಯ್ ಅವರು ಪಶ್ಚಿಮ ಬಂಗಾಲದ 24 ಪರಗಣ ಜಿಲ್ಲೆಗೆ ಸೇರಿದ ಅರಬೇಲಿಯಲ್ಲಿ 1887ರ ಮಾರ್ಚ್ 21ರಂದು ಜನಿಸಿದರು. ದೀನಬಂಧು ಭಟ್ಟಾಚಾರ್ಯ ಇವರ ತಂದೆ. ಸಾಂಪ್ರದಾಯಿಕ ಕಟ್ಟುಪಾಡುಗಳಿಂದ ಕೂಡಿದ್ದ ಮನೆತನದ ದೀನಬಂಧು ಅವರು ಸ್ಥಳೀಯ ಶಾಲೆಯೊಂದರಲ್ಲಿ ಸಂಸ್ಕೃತ ಶಿಕ್ಷಕರಾಗಿದ್ದರು. ರಾಯ್ ಅವರು ಭಟ್ಟಾಚಾರ್ಯರ ಮೂರನೆಯ ಮಗ. ಇವರ ಪ್ರಾಥಮಿಕ ಶಿಕ್ಷಣ ಅರಬೇಲಿಯಲ್ಲೂ ಕೊಡಾಲಿಯಲ್ಲೂ ಅನಂತರ ಕಲ್ಕತ್ತದ ಅರವಿಂದ ಘೋಷರ ರಾಷ್ಟ್ರೀಯ ವಿಶ್ವವಿದ್ಯಾಲಯ ಮತ್ತು ಬಂಗಾಲ ತಾಂತ್ರಿಕ ಸಂಸ್ಥೆಗಳಲ್ಲೂ ನಡೆಯಿತು. ವಿದ್ಯಾಭ್ಯಾಸದ ಅವಧಿಯಲ್ಲಿ ರಾಷ್ಟ್ರೀಯ ಚಳವಳಿಯತ್ತ ಆಕರ್ಷಿತರಾದರು. ಸಶಸ್ತ್ರ ರಾಷ್ಟ್ರೀಯ ರಾಜಕಾರಣದಲ್ಲಿ ಆಸಕ್ತಿ ತಾಳಿದ ಇವರು ತೀವ್ರಗಾಮಿ ಗುಂಪು ಸೇರಿದರು. ಕೊಡಾಲಿಯ ಬಳಿಯ ಚಿಂಗ್ರಿಪೋತ ರೈಲ್ವೆನಿಲ್ದಾಣದಲ್ಲಿ ನಡೆಸಿದ ಬ್ರಿಟಿಷ್ ವಿರುದ್ದದ ಡಕಾಯಿತಿಯೇ ಇವರ ಮೊದಲ ಕಾರ್ಯಚರಣೆ. ಹೌರದಂಗೆಗೆ ಸಂಬಂಧಿಸಿದಂತೆ ಆರೋಪಕ್ಕೊಳಗಾದ ಇವರು ಸನ್ಯಾಸಿಯ ವೇಷದಲ್ಲಿ ಬನಾರಸ್ಗೆ ಬಂದು ಉತ್ತರ ಭಾರತ ಪ್ರವಾಸ ಕೈಗೊಂಡರು. ಇದೇ ಅವಧಿಯಲ್ಲಿ ಜತೀಂದ್ರನಾಥಮುಖರ್ಜಿ (ವ್ಯಾಘ್ರ ಜತಿನ್) ಯನ್ನು ಭೇಟಿಯಾದರು. ಜತಿನ್ ಯುಗಾಂತರ ಕ್ರಾಂತಿಕಾರಿ ಗುಂಪಿನ ಮುಖ್ಯಸ್ಥರಾಗಿದ್ದರು.
ಕ್ರಾಂತಿಕಾರಿ ಚಟುವಟಿಕೆಯಲ್ಲಿ ತೀವ್ರವಾಗಿ ತೊಡಗಿಸಿಕೊಂಡ ರಾಯ್ ಅವರು ಒಂದನೆಯ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯ ಸಹಾಯ ಪಡೆಯಲು ಫಾದರ್ ಮಾರ್ಟಿನ್ ಎಂಬ ಹೆಸರಿನಲ್ಲಿ ಪ್ರಯಾಣ ಬೆಳೆಸಿದರು. ದಕ್ಷಿಣ ಪೂರ್ವ ಏಷ್ಯದ ಭಾಗಗಳು, ಇಂಡೋನೇಷ್ಯ, ಚೀನ, ಜಪಾನ್, ಫಿಲಿಫೀನ್ಸ್ ಮುಂತಾದ ಕಡೆ ಅಲೆದು ಅಂತಿಮವಾಗಿ ಸ್ಯಾನ್ಫ್ರಾನ್ಸಿಸ್ಕೋ ಸೇರಿದರು. ಇದೇ ಅವಧಿಯಲ್ಲಿ ಜತೀಂದ್ರನಾಥರು ಭಾರತೀಯ ಪೊಲೀಸ್ ಕಾರ್ಯಚರಣೆಯಲ್ಲಿ ಸಾವಿಗೀಡಾದರು. ಈ ಘಟನೆಯಿಂದ ಆಘಾತಗೊಂಡ ಕ್ರಾಂತಿಕಾರಿ ಧೋರಣೆಯ ರಾಯ್ ಅವರು ಅನಂತರ ಸಮಾಜವಾದದ ಕಡೆ ವಾಲತೊಡಗಿದರು.
ಭಾರತೀಯ ಕ್ರಾಂತಿಕಾರಿಗಳ ಕಾರ್ಯಚರಣೆಯ ಒತ್ತಡಕ್ಕೊಳಗಾದ ಅಮೇರಿಕ ಈ ಸಂಘಟನೆಯ ಸದಸ್ಯರನ್ನು ಬಂಧಿಸತೊಡಗಿತು. ರಾಯ್ ಅವರು ಬಂಧಿತರಾದರೂ ತಾತ್ಕಾಲಿಕ ಬಿಡುಗಡೆ (ಬೇಲ್) ಪಡೆದು ಮೆಕ್ಸಿಕೊಗೆ ತೆರಳಿದರು. ಅಲ್ಲಿ ಬೊರೋದಿನ್ನನ್ನು ಭೇಟಿಯಾದ ರಾಯ್ ಮೆಕ್ಸಿಕೋದ ಕಮ್ಯೂನಿಸ್ಟ್ ಪಕ್ಷವನ್ನು ಸ್ಥಾಪಿಸಿದರು. ಇದು ಸೋವಿಯತ್ ಒಕ್ಕೂಟದಿಂದ ಹೊರತಾಗಿ ಹೊರದೇಶದಲ್ಲಿ ಸ್ಥಾಪನೆಯಾದ ಮೊದಲ ಕಮ್ಯೂನಿಸ್ಟ್ ಪಕ್ಷವೆಂದು ಖ್ಯಾತಿ ಪಡೆಯಿತು. ಲೆನಿನ್ನಿಂದ ಆಹ್ವಾನಿತರಾದ ರಾಯ್ ಅವರು ಸೋವಿಯತ್ ಒಕ್ಕೂಟಕ್ಕೆ ತೆರಳಿದರು. ಅಲ್ಲಿ ನಡೆದ ಕಮ್ಯೂನಿಸ್ಟ್ ಕಾಂಗ್ರೇಸ್ನ ಎರಡನೆಯ ಜಾಗತಿಕ ಸಮ್ಮೇಳನದಲ್ಲಿ ಪಾಲ್ಗೊಂಡರು. ಸಮಾಜದ ಮೇಲುಸ್ತರದಲ್ಲಿ ಕ್ರಾಂತಿ ನಡೆಯಬೇಕೆಂದು ಲೆನಿನ್ವಾದಿಸಿದರೆ, ಕೆಳಸ್ತರದ ಕ್ರಾಂತಿಯ ಅಗತ್ಯವನ್ನು ರಾಯ್ ಪ್ರತಿಪಾದಿಸರು.
ಕಳೆದ ಶತಮಾನದ ಇಪ್ಪತ್ತರ ದಶಕದಲ್ಲಿ ಜಾಗತಿಕ ಮಟ್ಟದ ಪ್ರಮುಖ ಕಮ್ಯೂನಿಸ್ಟ್ ಚಿಂತಕರೆಂದು ರಾಯ್ ಪ್ರಸಿದ್ಧರಾದರು. ಅಂತಾರಾಷ್ಟ್ರೀಯ ಕಮ್ಯೂನಿಸ್ಟ್ ಕಾರ್ಯಕಾರಿ ಸಮಿತಿಗೆ ಸಾಮಾನ್ಯ ಸದಸ್ಯರಾಗಿ 1922ರಲ್ಲಿ ನೇಮಕವಾದ ರಾಯ್ ಅವರು 1924ರಂದು ಪೂರ್ಣಸದಸ್ಯರೆಂದು ಘೋಷಿತರಾದರು. ಅಂತಾರಾಷ್ಟ್ರೀಯ ಕಮ್ಯೂನಿಸ್ಟ್ ಸಮಿತಿಯಲ್ಲಿದ್ದ ಅವಧಿಯಲ್ಲಿ ಇವರು ಭಾರತದಲ್ಲಿ ಕ್ರಾಂತಿಕಾರಿ ಚಳವಳಿಯ ಏಳಿಗೆಗಾಗಿ ಶ್ರಮಿಸಿದರು. ಅಂತಾರಾಷ್ಟ್ರೀಯ ಕಮ್ಯೂನಿಸ್ಟ್ ಸಮಿತಿಯಿಂದ 1926ರಲ್ಲಿ ಚೀನದ ಪರಿಸ್ಥಿತಿಯ ಅಧ್ಯಯನಕ್ಕಾಗಿ ನೇಮಕವಾದ ಇವರು 1927ರಲ್ಲಿ ಚೀನ ಪ್ರವಾಸವನ್ನು ಕೈಗೊಂಡರು.
ಸ್ಟಾಲಿನ್ನ ನೇತೃತ್ವದಲ್ಲಿ ಜರುಗಿದ ಆರನೆಯ ಜಾಗತಿಕ ಕಮ್ಯೂನಿಸ್ಟ್ ಸಮ್ಮೇಳನ ರಾಯ್ ಅವರ ನಿಲುವುಗಳನ್ನು ಟೀಕಿಸಿತು. ಇದರಿಂದಾಗಿ ರಾಯ್ ಅವರು ಅಂತಾರಾಷ್ಟ್ರೀಯ ಕಮ್ಯೂನಿಸ್ಟ್ ಸಮಿತಿಯನ್ನು ತೊರೆಯಬೇಕಾಯಿತು.
ಅಂತಾರಾಷ್ಟ್ರೀಯ ಕಮ್ಯೂನಿಸ್ಟ್ ಸಂಬಂಧವನ್ನು ತೊರೆದ ತರುವಾಯ ರಾಯ್ ಅವರು ಭಾರತಕ್ಕೆ ಬಂದು ನೆಲಸಿದರು. ಯುರೋಪಿನಿಂದ ಮರುಳುವಾಗ ಎಲೆನ್ಗೋಟ್ಸ್ಚಾಲ್ಕ್ ಎಂಬಾಕೆಯನ್ನು ಭೇಟಿಯಾದ ಇವರು 1937ರಲ್ಲಿ ಆಕೆಯನ್ನು ವಿವಾಹವಾದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಕರಾಚಿ ಅಧಿವೇಶನದಲ್ಲಿ ಭಾಗವಹಿಸಿದ ಇವರು ಜವಾಹರಲಾಲ್ ನೆಹರು ಮತ್ತು ಸುಭಾಷ್ಚಂದ್ರಭೋಸ್ ಅವರನ್ನು ಭೇಟಿಯಾದರು. ಕಾನ್ಪುರ ಕಮ್ಯೂನಿಸ್ಟ್ ದಂಗೆಯ ಆರೋಪದಿಂದ ಬಂಧನಕ್ಕೊಳಗಾಗಿ ಆರು ವರ್ಷ ಕಾರಾಗೃಹ ಶಿಕ್ಷೆಯನ್ನು ಅನುಭವಿಸಿದರು. ಬಿಡುಗಡೆಯ ಅನಂತರ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸೇರಿದ ರಾಯ್ ಅವರು ಅದನ್ನು ಜನರ ಬಳಿ ಒಯ್ಯುವ ಹಾಗೂ ಪಕ್ಷವನ್ನು ಪ್ರಜಾಪ್ರಭುತ್ವವಾದಿ ಧೋರಣೆಗೊಳಪಡಿಸುವ ಯತ್ನದಲ್ಲಿ ತೊಡಗಿದರು. ಈ ನಡುವೆ ಎರಡೆನೆಯ ಮಹಾಯುದ್ಧ ಆರಂಭಗೊಂಡಾಗ ಸರ್ವಾಧಿಕಾರಿ ಧೋರಣೆ ಪ್ರಾಬಲ್ಯಪಡೆಯುತ್ತಿರುವುದನ್ನು ಗಮನಿಸಿದ ಇವರು ಅದರ ವಿರುದ್ಧ ಹೋರಾಡಲು ಕರೆ ನೀಡಿದರು. ಕಾಂಗ್ರೆಸ್ನೊಂದಿಗೆ ಹೊಂದಿಕೆಯಾಗದೆ ರಾಯ್ ಅವರು ಕಾಂಗ್ರೆಸ್ಸನ್ನು ತೊರೆದರು. “ರ್ಯಾಡಿಕಲ್ ಡೆಮಾಕ್ರಾಟಿಕ್ ಪಾರ್ಟಿ”ಯನ್ನು ಸ್ಥಾಪಿಸಿದರು. ಇದಕ್ಕೆ ಪೂರಕವಾಗಿ ಭಾರತೀಯ ಶ್ರಮಿಕರ ಒಕ್ಕೂಟವನ್ನು ಸ್ಥಾಪಿಸಿದ ಇವರು ಎರಡನೆಯ ಮಹಾಯುದ್ಧದಲ್ಲಿ ಸರ್ವಾಧಿಕಾರಿ ಪ್ರವೃತ್ತಿಯ ವಿರುದ್ದ ಹೋರಾಡುವ ಒಕ್ಕೂಟಗಳಿಗೆ ಬೆಂಬಲ ಘೋಷಿಸಿದರು. ಸೋವಿಯತ್ ಒಕ್ಕೂಟದ ಬಗ್ಗೆ ಅಪಾರ ಗೌರವವಿದ್ದರೂ ಯುದ್ದ ಸಂದರ್ಭದಲ್ಲಿ ಅದು ಪ್ರದರ್ಶಿಸಿದ ಕಠೋರ ನೀತಿಗೆ ಬೇಸತ್ತ ರಾಯ್ ಅದನ್ನು ಟೀಕಿಸಿದರು. ಮಾನವತಾವಾದ ಮಾತ್ರವೇ ಭವಿಷ್ಯದ ಆದರ್ಶವಾಗಬೇಕೆಂದು ಬಯಸಿದರು. ಕಮ್ಯೂನಿಸ್ಟ್ ಪಕ್ಷದ ಕಠೋರ ನಿಲುವುಗಳನ್ನು ಇವರು ಎಂದೂ ಸಹಿಸಲಿಲ್ಲ.
ಇವರು ಪ್ರತಿಪಾದಿಸಿದ ಮೂಲ ಮಾನವತಾವಾದ ಅಥವಾ ರ್ಯಾಡಿಕಲ್ ಹ್ಯೂಮನಿಸಂ ಮಾನವ ಸಮಾಜದ ಆರ್ಷಮಾದರಿ ಎಂದು ಪರಿಗಣಿಸಲಾಗಿದೆ.
ಸಹಕಾರತತ್ತ್ವ ವೈಯಕ್ತಿಕ ಸಾಮರ್ಥ್ಯ
ಬೆಳಕಿಗೆ ತರಲು ಸಹಕರಿಸುತ್ತವೆ; ವೈಯಕ್ತಿಕ ಸಾಧನೆ ಸಿದ್ದಿಗಳೇ ಸಾಮಾಜಿಕ ಬೆಳವಣಿಗೆಯ ಮಾನದಂಡಗಳು. ಇಂಥ ಬೆಳವಣಿಗೆ ಮಾನವನ ಮೂಲಭೂತ ಸ್ವಭಾವಗಳಾದ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಮತ್ತು ಸತ್ಯವನ್ನು ಹುಡುಕುವುದು ಈ ಕ್ರಿಯೆಗಳಲ್ಲಿ ಫಲವಾಗುತ್ತದೆ. ಆದ್ದರಿಂದ ಹೊಸ ಸ್ವತಂತ್ರ ಜಗತ್ತಿನ ನಿರ್ಮಾಣಕ್ಕಾಗಿ ಸಮಾಜದ ಆರ್ಥಿಕ ಸಂಘಟನೆಯ ಹಿಡಿತವನ್ನು ದಾಟಿ ಕ್ರಾಂತಿ ಮುಂದೆ ಹೋಗಬೇಕೆಂದು ಇವರು ಪ್ರತಿಪಾದಿಸಿದರು. ಮುಕ್ತಸಮಾಜ ಸೃಷ್ಟಿಯಾಯಿತೆಂದರೆ ಆರ್ಥಿಕ ಸ್ವಾತಂತ್ರ್ಯ ಜನತೆಗೆ ಸಹಜವಾಗಿ ದೊರಕುತ್ತದೆ ಎಂಬ ನಂಬಿಕೆ ಇವರದಾಗಿತ್ತು.
ರಾಯ್ ಅವರು 1952ರಲ್ಲಿ ಜೂನ್ನಲ್ಲಿ ಯುರೋಪ್ ಮತ್ತು ಅಮೇರಿಕಗಳಲ್ಲಿ ಶೈಕ್ಷಣಿಕ ಉಪನ್ಯಾಸ ನೀಡುವ ತಯಾರಿಯಲ್ಲಿ ಮಸೂರಿಯಲ್ಲಿದ್ದಾಗ ಅಕಸ್ಮಾತ್ ಕಾಲುಜಾರಿ ಬಿದ್ದು ತಲೆಗೆ ಪೆಟ್ಟಾಗಿ 1954ರಂದು ಜನವರಿ 25ರಂದು ನಿಧನರಾದರು. 1987ರಲ್ಲಿ ಭಾರತಾದ್ಯಂತ ಇವರ ಜನ್ಮಶತಮಾನೋತ್ಸವವನ್ನು ಆಚರಿಸಲಾಯಿತು.
ರಾಯ್ ಅವರು ಉತ್ತಮ ವಾಗ್ಮಿಯಾಗಿದ್ದಂತೆ ಒಳ್ಳೆಯ ಲೇಖಕರೂ ಆಗಿದ್ದರು. ಇಂಡಿಯಾ ಇನ್ ಟ್ರಾನ್ಸಿಷನ್, ವಾಟ್ ಡು ವಿ ವಾಂಟ್, ಒನ್ ಇಯರ್ ಆಫ್ ನಾನ್ ಕೋ-ಆಪರೇಷನ್, ಆಫ್ಟರ್ಮತ್ ಆಫ್ ನಾನ್ ಕೋಆಫರೇಷನ್ ಮತ್ತು ದಿ ಪ್ಯೂಚರ್ ಆಫ್ ಇಂಡಿಯನ್ ಪಾಲಿಟಿಕ್ಸ್ – ಇವು ಇವರ ಮುಖ್ಯ ಕೃತಿಗಳು. ಇವರ ಅನೇಕ ಬರೆಹಗಳು ನಿಷೇದಕ್ಕೊಳಗಾಗಿದ್ದವು. ಇವರ ನೇತೃತ್ವದಲ್ಲಿ ಪ್ರಕಟಗೊಂಡ ದಿ ರಷ್ಯನ್ ರೆವೆಲ್ಯೂಷನ್, ದಿ ಡ್ರಾಫ್ಟ್ ಕಾನ್ಸ್ಟಿಟ್ಯೂಶನ್ ಆಫ್ ಇಂಡಿಯಾ, ದಿ ಪೀಪಲ್ಸ್ ಪ್ಲಾನ್ ಆಫ್ ಇಕಾನಮಿಕ್ ಡೆವಲೆಪ್ಮೆಂಟ್, ಬಿಯಾಂಡ್ ಕಮ್ಯೂನಿಸಂ ಮತ್ತು ನ್ಯೂ ಹ್ಯೂಮನಿಸಂ ಮೊದಲಾದ ಕೃತಿಗಳು ಇಂದಿಗೂ ಪ್ರಸ್ತುತವೆನಿಸಿವೆಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಡಿಶಾ ಕೈದಿಗಳ ಮಕ್ಕಳಿಗೆ ICDS ಪ್ರಯೋಜನಗಳನ್ನು ವಿಸ್ತರಿಸುತ್ತದೆ!

Fri Mar 25 , 2022
ಸೆರೆವಾಸದಲ್ಲಿರುವ ಪೋಷಕರ ಮಕ್ಕಳ ಕಲ್ಯಾಣಕ್ಕಾಗಿ ಹೊರಡಿಸಲಾದ ಪರಿಷ್ಕೃತ ಮಾರ್ಗಸೂಚಿಗಳಲ್ಲಿ, ಅವರ ಅಥವಾ ಅವಳ ಪೋಷಕರೊಂದಿಗೆ ಜೈಲಿನೊಳಗೆ ಇರುವ 0-6 ವಯಸ್ಸಿನ ಮಕ್ಕಳಿಗೆ ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯ (ICDS) ಪ್ರಯೋಜನಗಳನ್ನು ವಿಸ್ತರಿಸಲು ಒಡಿಶಾ ಸರ್ಕಾರ ನಿರ್ಧರಿಸಿದೆ. ಈ ಯೋಜನೆಯಡಿಯಲ್ಲಿ ಪ್ರಯೋಜನವನ್ನು ಪಡೆಯಲು ಉದ್ದೇಶಿಸಿರುವ ಮತ್ತು ಹೊರಗಿರುವ ಮಕ್ಕಳ ಪೋಷಕರ ಸೆರೆವಾಸದ ಅವಧಿಯು 60 ದಿನಗಳಿಗಿಂತ ಕಡಿಮೆಯಿರಬಾರದು. ಐಸಿಡಿಎಸ್ ಕಾರ್ಯಕ್ರಮಗಳ ಅಡಿಯಲ್ಲಿನ ಪ್ರಯೋಜನಗಳನ್ನು ಜೈಲಿನಲ್ಲಿ ವಾಸಿಸುವ ಒ ಯಿಂದ 6 ವರ್ಷದೊಳಗಿನ […]

Advertisement

Wordpress Social Share Plugin powered by Ultimatelysocial