ಡಾ. ಎಂ.ಶಿವರಾಂ ಮಹಾನ್ ಸಾಹಿತಿ.

ವೃತ್ತಿಯಲ್ಲಿ ವೈದ್ಯರಾದ ಡಾ. ಎಂ. ಶಿವರಾಂ ಪ್ರವೃತ್ತಿಯಲ್ಲಿ ಲೇಖಕರಾಗಿ ರಾ.ಶಿ ಎಂಬ ಕಾವ್ಯನಾಮವನ್ನು ಇರಿಸಿಕೊಂಡರು. “ನನ್ನ ಹೆಸರಿನ ಎರಡು ಪದಗಳ ಪ್ರಥಮಾಕ್ಷರಗಳನ್ನು ತಿರುವು ಮುರುವು ಮಾಡಿ ‘ರಾ.ಶಿ’ ಎಂದಿಟ್ಟುಕೊಂಡೆ” ಎಂಬುದು ಅವರದೇ ಹೇಳಿಕೆ. ಅವರು ಜನಿಸಿದ ದಿನ ನವೆಂಬರ್ 10, 1905.ನಗಲು ಬರದೆ ಮುಗುಮ್ಮಾಗಿ ಕುಳಿತಿದ್ದ ಕನ್ನಡಿಗರಿಗೆ ತಮ್ಮ ‘ಕೊರವಂಜಿ’ ಮಾಸಪತ್ರಿಕೆಯ ಮುಖಾಂತರ ನಗಲು ಕಲಿಸಿಕೊಟ್ಟವರು ರಾಶಿ. ಅಪಾರ ಅರಿವಿನ ಖನಿಯಾಗಿದ್ದರೂ ಅಹಂಕಾರದ ಸೋಂಕಿರಲಿಲ್ಲ. ಬೆಂಗಳೂರು ಮೆಡಿಕಲ್ ಕಾಲೇಜು ಉಗಮಕ್ಕೆ ರಾಶಿ ಅವರು ಮುಖ್ಯ ಕಾರಣರು. ಡಾ. ಎಂ. ಶಿವರಾಂ ಕಿರ್ಲೋಸ್ಕರ್ ಕಂಪನಿಯ ನಿರ್ದೇಶಕ ಮಂಡಲಿಯಲ್ಲಿದ್ದರು. ಎಂ.ಐ.ಟಿ.ಎಲ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರೂ ಆಗಿದ್ದರು, ಅವರ ಸ್ನೇಹಿತರಲ್ಲಿ ಸಾಹಿತಿಗಳಿದ್ದರು, ವಿಜ್ಞಾನಿಗಳಿದ್ದರು. ಚಿಂತನಕಾರರಿದ್ದರು. ವೈದ್ಯರಾದ ಡಾ. ಶಿವರಾಂ ರೋಗಿಗಳಿಗೆ ಅತ್ಯಂತ ಆಪ್ತರು. ಯಾವ ವಯಸ್ಸಿನವರೇ ಇರಲಿ, ಕೆಲವೇ ನಿಮಿಷಗಳಲ್ಲಿ ಅವರ ಅಂತರಂಗ ಅವರಿಗೆ ತಿಳಿಯುತ್ತಿತ್ತು. ಸಾಹಿತಿಗಳ ಬಗ್ಗೆ ಅಪಾರ ಗೌರವ. ಸಾಹಿತ್ಯಕ ಮಿತ್ರರಿಗೆ ವಯಸ್ಸಿನ ಅಂತರವಿರಲಿಲ್ಲ. ಕಿರಿಯ ವಯಸ್ಸಿನವರು ಅಪರೂಪದ ಕೃತಿ ರಚಿಸಿದ್ದರೆ ತುಂಬು ಮನಸ್ಸಿನಿಂದ ಪ್ರಶಂಸಿಸುತ್ತಿದ್ದರು. ಅವರೊಂದಿಗಿನ ಮಾತು ಯಾವಾಗಲೂ ಚೇತೋಹಾರಿ, ಯಾಕೆಂದರೆ ಅವರು ‘ಓಡಾಡುವ ವಿಶ್ವಕೋಶ’ವಾಗಿದ್ದರು. ಮಕ್ಕಳನ್ನು ಆಯಸ್ಕಾಂತದಂತೆ ಆಕರ್ಷಿಸುತ್ತಿದ್ದರು. ರಾಶಿ ಅವರು ಹೇಳುತ್ತಿದ್ದ ಕತೆಗಳು ಮಕ್ಕಳ ಮನಸ್ಸನ್ನು ಸೂರೆ ಹೊಡೆದರೆ ಅವರ ಹತ್ತಿರವಿರುತ್ತಿದ್ದ ಪೆಪ್ಪರಮೆಂಟುಗಳು ಬಾಯನ್ನು ಸಿಹಿ ಮಾಡುತ್ತಿದ್ದವು.
ತಮ್ಮ ಮುಖವನ್ನು ‘ಗೊರಿಲ್ಲಾ ಮುಖ’ ಎಂದೂ, ಹುಬ್ಬುಗಳನ್ನು ‘ಕಂಬಳಿಹುಳುಗಳು’ ಎಂದೂ ರಾಶಿ ತಮ್ಮನ್ನು ತಾವೇ ಗೇಲಿ ಮಾಡಿಕೊಂಡದ್ದು ಉಂಟು. ರಾಶಿಯವರದು ತುಂಬು ಸಂಸಾರ. ಧರ್ಮಪತ್ನಿ ನಾಗಮ್ಮನವರು. ಮೂರು ಗಂಡು ಮಕ್ಕಳು ಮತ್ತು ಮೂರು ಹೆಣ್ಣುಮಕ್ಕಳು. ರಾ.ಶಿ ಅವರು ಅವರ ಪತ್ನಿಯ ಹೆಸರು ನಾಗಮ್ಮ ಎಂಬ ಸೂಚಕವಾಗಿ ಅವರ ಮನೆಯನ್ನು ನಾಗಾಲ್ಯಾಂಡ್ ಎಂದು ತಮಾಷೆಯಾಗಿ ಕರೆಯುತ್ತಿದ್ದರು. ಮನೆಗೆ ಬರುವವರಿಗೆಲ್ಲ ಊಟ, ತಿಂಡಿಗಳ ಉಪಚಾರವಾಗುತ್ತಿತ್ತು. ಅವರಿಗೆ ಊಟ ಅಚ್ಚುಕಟ್ಟಾಗಿರಬೇಕಿತ್ತು. ಹುರಿಗಾಳು ಕಂಡರೆ ಅವರಿಗೆ ಬಲು ಪ್ರೀತಿ. ಉಡುಪಿನ ವಿಚಾರದಲ್ಲಿ ಟಾಕೋ ಠೀಕು. ತಮ್ಮ ಮಕ್ಕಳನ್ನು ಕೂಡ ಸಲಹೆ ಕೇಳುವಷ್ಟು ದೊಡ್ಡ ಗುಣ. ಬೆರೆಯುವ ಸ್ನೇಹಗುಣ. ಒಮ್ಮೆ ಡಿ.ವಿ.ಜಿ ಅವರನ್ನು ಕಂಡು ಬಂದ ಅವರ ಮಗಳು “ಡಿ.ವಿ.ಜಿ ನಿಮ್ಮನ್ನು ತುಂಬಾ ಕೇಳಿದರು” ಎಂದು ಹೇಳಿದಾಗ ರಾ.ಶಿ. “ಎಷ್ಟಕ್ಕೆ?” ಎಂದು ಚಟಾಕಿ ಹಾರಿಸಿದರು. ಇನ್ನೊಮ್ಮೆ ಹೆಂಡತಿ ತೌರಿಗೆ ಹೊರಟಿದ್ದಾಗ “ಮನೆಕಡೆ ಯೋಚ್ನೆ ಮಾಡಬೇಡ, ನಾನೂ ಹೆಣ್ಣು ಮಕ್ಕಳೂ ಸೇರ್ಕೊಂಡು ಅಡುಗೆ ಮಾಡ್ಕೋತೀವಿ, ಆದ್ರೆ ಕೂದಲು ಯಾವಾಗ ಎಷ್ಟೆಷ್ಟು ಹಾಕ್ಬೇಕು ಅನ್ನೋದನ್ನ ಹೇಳಿಹೊಗು” ಎಂದಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆತ್ಮ ವಿಶ್ವಾಸದಿಂದ ಪರೀಕ್ಷೆಗಳನ್ನು ಎದುರಿಸಲು ಸಲಹೆ

Sat Jan 14 , 2023
ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರು ಮಾಡಿಕೊಳ್ಳಬೇಕಾದರೆ ಆತ್ಮವಿಶ್ವಾಸದಿಂದ ಅಧ್ಯಯನ ಮಾಡಿ ಮತ್ತು ಹಿಂದಿನ ಪ್ರಶ್ನೆ ಪತ್ರಿಕೆಗಳ  ಬಿಡಿಸುವಿಕೆ ಮುಖ್ಯ. ಹಾಗೂ ಪರಿಕ್ಷಾ ಪೂರ್ವದಲ್ಲಿ ಪ್ರಶ್ನೆ ಪತ್ರಿಕೆ ಮತ್ತು ಪಠ್ಯಕ್ರಮದ ಕುರಿತು ನಡೆಯುವ ಕಾರ್ಯಗಾರದಲ್ಲಿ ಭಾಗವಹಿಸಿ  ಆತ್ಮ ವಿಶ್ವಾಸದಿಂದ  ಪರೀಕ್ಷೆ ಯನ್ನು ಎದುರಿಸಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರಾದ ಶ್ರೀ ವೆಂಕಟೇಶ್ ಬಾಬು  ಹೇಳಿದರು. ಅವರು ನಗರದ ನಿಜಲಿಂಗಪ್ಪ ಬಡಾವಣೆಯ ಜೈನ್ ಟ್ರಿನಿಟಿ ಪದವಿಪೂರ್ವ […]

Advertisement

Wordpress Social Share Plugin powered by Ultimatelysocial