ಹಾ. ಮಾ. ನಾಯಕರ ಪೂರ್ತಿ ಹೆಸರು ಹಾರೋಗದ್ದೆ ಮಾನಪ್ಪ ನಾಯಕ. ಹಾಮಾನಾ ಎಂಬುದು ಅವರ ಕಾವ್ಯನಾಮ.

ಅವರ ಒಟ್ಟು ಬದುಕಿನ ಕಾಯಕದಲ್ಲಿ, ಸಿಂಹಪಾಲು ಕನ್ನಡದ ಕೈಂಕರ್ಯಕ್ಕೆ, ಪರಿಚಾರಿಕೆಗೆ ಮೀಸಲು. ‘ಕನ್ನಡ ನನ್ನ ಮೊದಲ ಪ್ರೀತಿ, ಎರಡನೆಯ ಪ್ರೀತಿಯೂ ಅದೇ’ ಎಂಬುದು ಅವರ ನಿಲುವು. ಅವರ ಬದುಕು ಕೂಡ ಅಂತಹುದೆ.
ವಿಶಾಲ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿಗೆ ಸೇರಿದ ಹಾರೋಗದ್ದೆ ನಾಯಕರ ಒಂದೇ ಮನೆಯ ಹಳ್ಳಿ; ಹುಟ್ಟಿದ್ದು 1931 ಫೆಬ್ರವರಿ 5. ತಾಯಿ-ತಂದೆ ಇಟ್ಟ ಹೆಸರು ಮಾನಪ್ಪ. ತಾಯಿ ರುಕ್ಮಿಣಿಯಮ್ಮ. ತಂದೆ ಶ್ರೀನಿವಾಸ ನಾಯಕ. ಅವರದು ರೈತಾಪಿ ಕುಟುಂಬ; ಪೂರ್ವದಿಂದಲೂ ವ್ಯವಸಾಯಗಾರರ ಮನೆತನ. ಪ್ರಾಥಮಿಕ ಓದು ಆಗುಂಬೆಯ ಹತ್ತಿರದ ನಾಲೂರಿನಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸ ಮೇಗರವಳ್ಳಿ, ಪ್ರೌಢಶಾಲೆ ಮುಗಿಸಿದ್ದು ತೀರ್ಥಹಳ್ಳಿ, ಇಂಟರ್ ಮೀಡಿಯಟ್ ಶಿವಮೊಗ್ಗ, ಬಿ.ಎ. ಆನರ್ಸ್ ಮೈಸೂರು ಮಹಾರಾಜ ಕಾಲೇಜು. ಕನ್ನಡ ಅಧ್ಯಾಪಕರಾಗಿ ತುಮಕೂರು, ಶಿವಮೊಗ್ಗಗಳಲ್ಲಿದ್ದು 1961ರಲ್ಲಿ ಮೈಸೂರು ವಿಶ್ವವಿದ್ಯಾಲಯ ಸೇರಿದರು. ಮೈಸೂರು ವಿಶ್ವವಿದ್ಯಾಲಯದ ವ್ಯಾಸಂಗ ವೇತನ ಪಡೆದು ಕಲ್ಕತ್ತ ವಿಶ್ವವಿದ್ಯಾಲಯದ ಭಾಷಾವಿಜ್ಞಾನ ಎಂ.ಎ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಗಳಿಸಿದರು. ಅಲ್ಲಿಂದ ಮುಂದೆ ಫುಲ್ ಬ್ರೈಟ್ ವಿದ್ಯಾರ್ಥಿವೇತನ ದೊರೆತು ಅಮೆರಿಕೆಯ ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ‘ಕನ್ನಡ: ಸಾಹಿತ್ಯಕ ಆಡುಭಾಷೆ’ ಎಂಬ ನಿಬಂಧ ಸಾದರಪಡಿಸಿ ಡಾಕ್ಟರೇಟ್ ಪಡೆದರು. ಅಮೆರಿಕದಿಂದ ಹಿಂತಿರುಗಿದ ಮೇಲೆ ಮೈಸೂರು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ, ಉಪ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾದರು.ದೇಜಗೌ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗಿ ನೇಮಕವಾದದ್ದರಿಂದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ತೆರವಾದ ಅವರ ಸ್ಥಾನ ತುಂಬಿ ನಾಯಕರು ನಿರ್ದೇಶಕರಾದರು. ನಾಯಕರ ನೇತೃತ್ವವಿದ್ದ ಸುದೀರ್ಘ ಅವಧಿಯಲ್ಲಿ ಅಧ್ಯಯನ ಸಂಸ್ಥೆ ಹಲವು ಮೊಗವಾಗಿ ಮೈಚಾಚಿತು. ನೂರಾರು ಪ್ರಕಟಣೆಗಳು, ವಿಚಾರ ಸಂಕಿರಣಗಳು, ಸಮ್ಮೇಳನದ ಗೋಷ್ಠಿಗಳು, ಹತ್ತಾರು ಉಪವಿಭಾಗಗಳು, ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಅಚ್ಚುಕಟ್ಟಾದ ಕಾರ್ಯಕ್ರಮಗಳು – ಹೀಗೆ ನಿತ್ಯೋತ್ಸವ. ಕನ್ನಡದ ಪ್ರತಿಭೆಗಳು ಪುಟಿಯಲು ಹೊಸ ಹೆದ್ದಾರಿಗಳು ತೆರೆದುವು. ಮಾರುಕಟ್ಟೆಯಲ್ಲಿ ದುರ್ಲಭವಾದ ಅಪರೂಪದ ಆಕರ ಗ್ರಂಥಗಳ ಪರಿಷ್ಕೃತ ಪುನರ್ ಮುದ್ರಣಗಳು; ಎಪಿಗ್ರಾಫಿಯ ಕರ್ನಾಟಿಕ, ಕನ್ನಡ ವಿಶ್ವಕೋಶ, ಕನ್ನಡ ಸಾಹಿತ್ಯ ಚರಿತ್ರೆ ಮುಂತಾದ ಮೌಲಿಕ ಸಂಪುಟಗಳು. ನಾಯಕರು ಸ್ವಯಂ ಜಾನಪದ ವಿದ್ವಾಂಸರು, ಅದು ಅವರ ಅಂತರಂಗಕ್ಕೆ ಹತ್ತಿರವಾದ ಪ್ರಕಾರ, ಫಲವಾಗಿ ಜಾನಪದ ವಸ್ತುಸಂಗ್ರಹಾಲಯ ಮೈಪಡೆಯಿತು.ನಾಯಕರು 1984ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕವಾದರು ಮತ್ತು ತಮ್ಮ ಸೇವಾ ಅವಧಿ ಇನ್ನೂ ಎಂಟು ತಿಂಗಳು ಇರುವಂತೆಯೇ, ತಾತ್ವಿಕ ಕಾರಣಗಳಿಗಾಗಿ, ಕುಲಪತಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟು 1987ರಲ್ಲಿ ಮತ್ತೆ ಕನ್ನಡ ಅಧ್ಯಯನ ಸಂಸ್ಥೆಗೆ ಪ್ರಾಧ್ಯಾಪಕರಾಗಿ ಮರಳಿ ಎಂದಿನ ಬೋಧನೆಗೆ, ಓದಿಗೆ ಹಾಜರಾದರು. ಅವರು ಬೀದರಿನಲ್ಲಿ ನಡೆದ ಅಖಿಲ ಭಾರತ 57ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅಲ್ಲದೆ ಹತ್ತಾರು ಉನ್ನತ ಸಮಿತಿಗಳಲ್ಲಿ ಸದಸ್ಯರಾಗಿ ಇಲ್ಲವೇ ಸಂಚಾಲಕರಾಗಿ ಕೆಲಸಮಾಡಿದ್ದರು. ಅಮೇರಿಕಾ ದೇಶದ ಪೆನ್ಸಿಲ್ ವೇನಿಯ ವಿಶ್ವವಿದ್ಯಾಲಯದಲ್ಲಿ ಗೌರವಾನ್ವಿತ ಸಂದರ್ಶಕ ವಿದ್ವಾಂಸರಾಗಿದ್ದರು. ರುಮಾನಿಯಾ ದೇಶದ ಬುಖಾರೆಸ್ಟ್ ನಲ್ಲಿ ನಡೆದ ಹತ್ತನೆಯ ಅಂತರ ರಾಷ್ಟ್ರೀಯ ಭಾಷಾ ವಿಜ್ಞಾನಿಗಳ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.ಕರ್ನಾಟಕ ರಾಜ್ಯ ಸರ್ಕಾರದ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಐಬಿಎಚ್ ಶಿಕ್ಷಣದತ್ತಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯ ಸುವರ್ಣ ಮಹೋತ್ಸವ ಬಹುಮಾನ, ‘ಸಂಪ್ರತಿ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹೀಗೆ ಹಲವು ಗೌರವ, ಪ್ರಶಸ್ತಿಗಳಿಗೆ ಹಾಮಾನಾ ಪಾತ್ರರಾದರು.ನಾಯಕರು ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ಲೇಖಣಿ ಹಿಡಿದರು. ಮೇಗರವಳ್ಳಿ ಮಾಧ್ಯಮಿಕ ಶಾಲೆಯಲ್ಲಿ ಇರುವಾಗ ‘ಮಕ್ಕಳ ಪುಸ್ತಕ’ವೆಂಬ ಪತ್ರಿಕೆಗೆ ಬರೆದಿದ್ದರು. ಪ್ರೌಢಶಾಲೆಯಲ್ಲಿ ಕೈಬರಹ ಪತ್ರಿಕೆಯ ಖಾಯಂ ಲೇಖಕರಾದರು. ಎಸ್.ಎಸ್. ಎಲ್.ಸಿ ತರಗತಿಯಲ್ಲಿರುವಾಗ ಅವರ ಚೊಚ್ಚಲ ಕೃತಿ ‘ಬಾಳ್ನೋಟಗಳು’ ಹೊರಬಂದು ಮೆಚ್ಚುಗೆ ದಾಖಲೆ ಸ್ಥಾಪಿಸಿತು. ನಂತರದಲ್ಲಿ ಅವರ ಬರವಣಿಗೆ ಸುಮಾರು ಐದು ದಶಕಗಳಕಾಲ ನಿರಂತರವಾಗಿ ಹರಿಯಿತು.ಬುದ್ಧಿ ಅರಳುತ್ತಿದ್ದ ಬಾಲ್ಯದ ದಿನಗಳಲ್ಲಿಯೇ ಅವರಿಗೆ ಕುವೆಂಪು ಮೊದಲಾದ ಸಾಹಿತ್ಯದೈತ್ಯರ ಗಾಢ ಪ್ರಭಾವವಾಗಿತ್ತು. ಅವರ ಮನೆ ಪುಸ್ತಕ ಕಾಶಿ. ಅವರ ಮುಂದೆ ಪುಸ್ತಕದ್ದೇ ರಾಶಿ. ಅವರದೇ ನಿವೇದನೆ ಹೀಗಿದೆ: “ಪುಸ್ತಕಗಳು ನನಗೆ ತುಂಬಾ ಪ್ರಿಯ. ನನಗೆ ಬೇಕಾದ ಪುಸ್ತಕಗಳಿಗಾಗಿ ಬಹುಸಂದರ್ಭದಲ್ಲಿ ಕಷ್ಟಪಟ್ಟಿದ್ದೇನೆ, ಸಂಕಟಪಟ್ಟಿದ್ದೇನೆ, ನಿರಾಶೆಗೊಂಡಿದ್ದೇನೆ. ಲೌಕಿಕವಾದ ಸಣ್ಣತನಗಳಿಂದ ದೂರಾಗಲು ಪುಸ್ತಕಗಳು ಒಂದೇ ದಾರಿ. ದುಃಖ ನೋವುಗಳನ್ನು ಮಾಯಿಸಲು ಅವು ದಿವ್ಯೌಷಧ. ದಿಗಂತದ ಆಚೆಯ ಬೆಳಕಿಗೆ ಕೈಮರಗಳು ಪುಸ್ತಕಗಳು. ಇಂಥ ಪುಸ್ತಕಗಳು ನಮ್ಮವೇ ಆಗಿ ನಮ್ಮ ಪಕ್ಕದಲ್ಲೇ ಇದ್ದರೆ ನಮಗಾಗುವ ನೆಮ್ಮದಿ, ತೃಪ್ತಿ, ಸಮಾಧಾನ ಹೆಚ್ಚಿನದೆಂದು ನನ್ನ ಅನುಭವಕ್ಕೆ ಬಂದಿದೆ. ಸುತ್ತಲೂ ಬಗೆಬಗೆಯ ಪುಸ್ತಕಗಳ ರಾಶಿ, ನಡುವೆ ಪುಸ್ತಕ ಹಿಡಿದ ನಾನು – ಇದು ನಾನು ಸತತವಾಗಿ ಇಷ್ಟಪಡುವ ಸನ್ನಿವೇಶ. ಇಂಥ ಸನ್ನಿವೇಶದಲ್ಲಿ ನನ್ನಂಥ ಸುಖಿ ಲೋಕದಲ್ಲಿ ಇನ್ನೊಬ್ಬರಿಲ್ಲವೇನೋ ಎನಿಸುತ್ತದೆ. ಪುಸ್ತಕ ಪ್ರಪಂಚದ ಸುಖವೇ ಸುಖ”
ಈ ಕಾರಣದಿಂದಾಗಿ ಅವರ ಅಂಕಣ ಬರಹಗಳಲ್ಲಿ ಪುಸ್ತಕ ಪರಿಚಯ ಇಲ್ಲವೇ ಮೌಲ್ಯಮಾಪನದ ಮಾತುಗಳು ತೂರಿ ಬರುತ್ತವೆ, ದೇಶ ವಿದೇಶಗಳ ಪ್ರವಾಸ ಜೀವನಾನುಭವದ ಸಾರಾಂಶ ಹರಳುಗೊಂಡು ನಿಲ್ಲುತ್ತದೆ. ಆಲೋಚನಶೀಲವಾದ ವ್ಯಾಸಂಗನಿಷ್ಠ ಮನಸ್ಸೊಂದರ ಲೋಕ ವಿಹಾರ ಇಲ್ಲಿರುತ್ತದೆ.ನಾಯಕರು ಕನ್ನಡ-ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದಿದ್ದಾರೆ. ಅವರ ಕೆಲವು ಬರಹಗಳು ಉರ್ದು, ತೆಲುಗು, ಬಂಗಾಳಿ, ಮರಾಠಿ, ಹಿಂದಿ ಮೊದಲಾದ ಭಾಷೆಗಳಿಗೂ ತರ್ಜುಮೆಯಾಗಿವೆ. ಸಾಹಿತ್ಯದ ಕೆಲವು ಪ್ರಕಾರಗಳಲ್ಲಷ್ಟೇ ಅವರ ಕೃಷಿ ನಡೆದಿದೆ. ಶಾಲಾವಿದ್ಯಾರ್ಥಿಯಾಗಿದ್ದಾಗ ಕವನಗಳನ್ನು ಬರೆದದ್ದುಂಟು, ಅನಂತರವೂ ಕಾವ್ಯಾನುವಾದ ಕೂಡ ಮಾಡಿದ್ದಾರೆ. ಅಂಕಣ, ಅನುವಾದ, ಜೀವನ ಚರಿತ್ರೆ, ಪ್ರಬಂಧ, ವಿಮರ್ಶೆ, ಸಂಪಾದನೆ – ಅವರ ಮುಖ್ಯ ಕ್ಷೇತ್ರಗಳು.
1950ರಲ್ಲಿ ಬಂದ ನಾಯಕರ ಮೊದಲ ಕೃತಿ ‘ಬಾಳ್ನೋಟಗಳು’ ಅವರು ಶಾಲೆಯಲ್ಲಿದ್ದಾಗ ಬರೆದ ಕೃತಿ. ಮಲೆನಾಡಿನ ಗ್ರಾಮವೊಂದರ ಬದುಕಿನೆಡೆಗೆ ಹಾಯಿಸಿದ ನೋಟವಿರುವ ಈ ಚಿಕ್ಕಪುಸ್ತಕ ಲೇಖಕರಿಗೆ ಕೀರ್ತಿ ಪ್ರತಿಷ್ಠೆಗಳನ್ನು ಕೊಟ್ಟಿತು. ಮೊಹಮ್ಮದ್ ಪೈಗಂಬರ್ (1952) ಮೈಸೂರು ಸಂಸ್ಥಾನದ ವಯಸ್ಕರ ಶಿಕ್ಷಣ ಸಮಿತಿಯವರು ಪ್ರಕಟಿಸಿರುವ ಜೀವನ ಚರಿತ್ರೆ. ಏಳನೆಯ ಶತಮಾನದಲ್ಲಿ ಆಗಿಹೋದ ಪ್ರವಾದಿ ಮಹಮ್ಮದನ ಬದುಕಿನ ಮಹೋನ್ನತಿಯನ್ನು ಶ್ರೀಸಾಮಾನ್ಯರಿಗೆ ಎಟುಕುವಂತೆ ಸರಳಗೊಳಿಸಿ ಚೊಕ್ಕವಾಗಿ ನಿರೂಪಿರುವುದು ಈ ಪುಸ್ತಕದ ಹೆಚ್ಚಳ. ‘ಮನೆಯ ದೀಪ’(1956) ಲಲಿತ ಸಾಹಿತ್ಯದ ಮಾದರಿಗೆ ಸೇರಿದ ಪ್ರಬಂಧಗಳ ಸಂಗ್ರಹ. ಇದು ಅಚ್ಚಾದಾಗ ನಾಯಕರು 25ರ ಜವ್ವನಿಗ. “ಅವರು ಈ ವಯಸ್ಸಿನಲ್ಲಿಯೇ ಉತ್ತಮವಾದ ಬರವಣಿಗೆಯನ್ನು ಬರೆದು ಹೆಸರಾಗಿದ್ದಾರೆ. ಅವರ ಬರವಣಿಗೆ ಉಷಾಕಾಲದಲ್ಲಿಯೇ ಬೆಳದಿಂಗಳಂತಿದೆ” ಎಂದು ಡಾ. ಎ. ಆರ್. ಕೃಷ್ಣಶಾಸ್ತ್ರಿಗಳು ಮೆಚ್ಚುಗೆ ಸೂಚಿಸಿದ್ದಾರೆ.ರವೀಂದ್ರನಾಥ ಠಾಕೂರ್ (1960) ಕವೀಂದ್ರ ರವೀಂದ್ರರ ಜೀವನವನ್ನು ಹೃದ್ಯವಾಗಿ ಪರಿಚಯಿಸುವ ಪುಸ್ತಕ. ‘ಸಂಕೀರ್ಣ’ (1966) ಪತ್ರಿಕೆ, ಅಭಿನಂದನಾ ಗ್ರಂಥಗಳು ಹಾಗೂ ಆಕಾಶವಾಣಿಗಾಗಿ ಸಿದ್ಧಪಡಿಸಿದ ಬರಹಗಳ ಗುತ್ತಿ. ಕುವೆಂಪು, ಬೇಂದ್ರೆ, ಮಾಸ್ತಿ, ಮುಗಳಿ, ವಿ.ಸೀ, ಎಂ.ಆರ್.ಶ್ರೀ, ಎ.ಆರ್.ಕೃ, ಡಿ.ಎಲ್.ಎನ್ ಮುಂತಾದ ಕನ್ನಡ ಸಾಹಿತ್ಯದ ದಿಗ್ಗಜಗಳ ವ್ಯಕ್ತಿಚಿತ್ರವನ್ನು ಬಿಡಿಸಲಾಗಿದೆ. ಚದುರಂಗರ ಸರ್ವಮಂಗಳವನ್ನು ಕುರಿತ ವಿಮರ್ಶೆ ಆ ಕೃತಿಯ ಒಳನೋಟಗಳನ್ನು ನೀಡುತ್ತದೆ. ‘ಸಂಚಯ’ (1969) ದಲ್ಲಿ ಹದಿಮೂರು ಲೇಖನಗಳಿವೆ.ಅಂಕಣ ಬರವಣಿಗೆಯೂ ಒಂದು ಮರ್ಯಾದಿತ ಸಾಹಿತ್ಯ ಪ್ರಕಾರವೆಂಬ ಗೌರವದ ಸ್ಥಾನವನ್ನು ತಂದುಕೊಟ್ಟ ಕೀರ್ತಿ ಹಾ.ಮಾ.ನಾ ಅವರದ್ದು. 1970ರಿಂದ ನಿರಂತರವಾಗಿ ಎರಡು ದಶಕಗಳ ಕಾಲ ಅಂಕಣ ಬರಹಗಳಿಂದ ಆ ಪ್ರಕಾರಕ್ಕೆ ಒಂದು ಹೊಸ ಆಯಾಮ, ಆಕರ್ಷಣೆ ಜನಮನ್ನಣೆ ತಂದುಕೊಟ್ಟರು. ಸಾಹಿತ್ಯ ಸಲ್ಲಾಪ (1970) ಅವರ ಅಂಕಣ ಬರಹಗಳ ಪುಸ್ತಕಮಾಲೆಯನ್ನು ಹೊರತಂದ ಪ್ರಥಮ ಕೃತಿ. ಕನ್ನಡಪ್ರಭ ದಿನ ಪತ್ರಿಕೆಯ ವಾರದ ಅಂಕಣಕ್ಕೆ ಕೊಟ್ಟ ಸ್ಥಿರ ಶೀರ್ಷಿಕೆಯಾದ ‘ಸಾಹಿತ್ಯ ಸಲ್ಲಾಪ’ದಲ್ಲಿ ಪ್ರಕಟವಾದ ನೂರಾರು ಲೇಖನಗಳಲ್ಲಿ ಮೊದಲನೆಯ ಒಂದು ನೂರು ಬರಹಗಳು ಇದರಲ್ಲಿ ಸೇರಿವೆ. ಇದರಲ್ಲಿ ಕನ್ನಡ ಮತ್ತು ಕನ್ನಡ ನಾಡಿನ ಸಮಸ್ಯೆಗಳ ವಿಶ್ಲೇಷಣೆ, ರಾಮಾಯಣದಿಂದ ರಂಗಯ್ಯನವರೆಗೆ, ಬಂಕಿಮ ಚಂದ್ರನಿಂದ ಸಿಂಕ್ಲೇರನವರೆಗೆ ವಿಶಾಲ ಹರವನ್ನು ಪಡೆದಿದೆ.‘ಸಾಹಿತ್ಯ ಸಲ್ಲಾಪ’ದ ಮುಂದಿನ ಕಂತಾದ ‘ಸಲ್ಲಾಪ’ದಲ್ಲಿ (1972) 123 ಲೇಖನಗಳಿವೆ. ಇಲ್ಲಿನ ವಿಷಯ ಮಾತು ವಿಚಾರ ಸಂಪತ್ತು, ವಿಷಯ ವೈವಿಧ್ಯ, ಅನುಭವ ವಿಸ್ತಾರ, ಭಾವನಾವಿಲಾಸ, ಉನ್ನತ ವ್ಯಕ್ತಿಗಳ ಗೊಮ್ಮಟ ವ್ಯಕ್ತಿತ್ವವನ್ನು ಅಂಗೈಯಗಲದಲ್ಲಿ ಕಡೆದು ಮೂಡಿಸುವ ಕಲೆಗಾರಿಕೆ, ಅಪಾಕ್ಷಿಕವಾದ ಸಮತೋಲನ, ಇವಿಷ್ಟನ್ನೂ ಮೊಗೆದುಕೊಡುವ ಗದ್ಯದ ಹೃದ್ಯತೆ – ಈ ಗುಣಗಳಿಗಾಗಿ ಸಲ್ಲಾಪ ಒಂದು ಪುಟ್ಟ ಸಾಹಿತ್ಯಕೋಶವಾಗಿ ಪರಿಣಮಿಸಿದೆ. ‘ಸಂವಾದ’ (1972) ಸಾಂದರ್ಭಿಕವಾದ ಲೇಖನ, ಅನುವಾದ ಮತ್ತು ಭಾಷಣಗಳ ಗುಚ್ಛ; ಜಾನಪದ, ವ್ಯಕ್ತಿಚಿತ್ರ, ಕವಿವಾಕ್ಯ ಪರಿಚಯ ಸಂಬಂಧವಾದ ವಿವೇಚನೆ ಇಲ್ಲಿದೆ.ಜಾನಪದವನ್ನು ವಿಶ್ವವಿದ್ಯಾಲಯದಲ್ಲಿ ಒಂದು ಪ್ರಧಾನ ವಿಷಯವಾಗಿ ಬೋಧಿಸುವ – ಅಭ್ಯಸಿಸುವ ಮಟ್ಟಕ್ಕೆ ಏರಿಸಿದವರಲ್ಲಿ ಹಾಮಾನಾ ಪ್ರಮುಖರು. ಜಾನಪದವನ್ನು ಕುರಿತು ತಾತ್ವಿಕ ವಿಮರ್ಶೆಗೆ ದಾರಿ ತೆರೆದು ಜಲಚಿಹ್ನೆ ಸ್ಥಾಪಿಸಿದ ಪ್ರಭಾವೀ ಪುಸ್ತಕ, ನಾಯಕರ ‘ಜಾನಪದ ಸ್ವರೂಪ’ (1971).ಅಕ್ಕಮಹಾದೇವಿ (1975) ಚೆನ್ನಮಲ್ಲಿಕಾರ್ಜುನನನ್ನು ತನ್ನ ಗಂಡನೆಂದು ಮಹಾದೇವನಿಗೆ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡ ಶರಣೆ-ಭಕ್ತೆ-ವಚನಕಾರ್ತಿ, ಅಕ್ಕಮಹಾದೇವಿಯ ಉಜ್ವಲವಾದ ಜೀವನವನ್ನು ತಿಳಿಗನ್ನಡದಲ್ಲಿ ಮಕ್ಕಳಿಗೆ ಪರಿಚಯಿಸಿರುವ ಪುಟ್ಟ ಪುಸ್ತಕ ಸಂಗ್ರಹ.ಸಂದರ್ಭ (1978) ವಿವಿಧ ಸಂದರ್ಭಗಳಲ್ಲಿ ಮಾಡಿದ 16 ಭಾಷಣಗಳ ಸಂಕಲನ. ಇವುಗಳಲ್ಲಿ ಕನ್ನಡ ಅಧ್ಯಯನ ಸಂಸ್ಥೆ ನಡೆಸಿದ ವಿಚಾರಗೋಷ್ಠಿ, ಸಭೆ, ಸಮ್ಮೇಳನಗಳಲ್ಲಿ ಮಾಡಿದ ಸ್ವಾಗತ ಭಾಷಣಗಳು ಅಡಕವಾಗಿವೆ. ಗೋಕಾಕ ಗ್ರಂಥಾವಳಿ (1980) ಮತ್ತು ಮಾಸ್ತಿಯವರ ಪುಸ್ತಕಗಳು (1983) ಕೃತಿ ಶೀರ್ಷಿಕೆಯಲ್ಲಿರುವ ಇಬ್ಬರು ಹಿರಿಯ ಸಾಹಿತಿಗಳ ಎಲ್ಲ ಪ್ರಕಟಿತ ಕೃತಿಗಳ ಸಮಗ್ರ ಪಟ್ಟಿ; ಆಧುನಿಕ ಕನ್ನಡ ಸಾಹಿತಿಗಳಿಗೆ ಸಂಬಂಧಪಟ್ಟಂತೆ ಈ ಬಗೆಯ ಕೃತಿಗಳು ಆದ್ಯವೆನಿಸಿವೆ, ಮಾದರಿಯಾಗಿ ನಿಂತಿವೆ. ಸಂಪುಟ (1980) ಕನ್ನಡದ ಕೆಲವು ಹಿರಿಯ, ಕಿರಿಯ ಬರಹಗಾರರ ವಿಮರ್ಶಾತ್ಮಕ ಬೆಳ್ಳಿ ಕರಂಡಗೆ. ಇದರ ಎರಡನೆಯ ಕಂತು ಸಂಪದ (1981). ಸ್ಮರಣದಲ್ಲಿ (1981) ದೇಶ ವಿದೇಶಗಳಲ್ಲಿ ಹೆಸರಾಗಿರುವ ಲೇಖಕ, ತತ್ವಜ್ಞಾನಿ, ವಿಜ್ಞಾನಿ, ವಿದ್ವಾಂಸ ಮತ್ತು ಕಲಾವಿದರಲ್ಲಿ ಕೆಲವರ ವ್ಯಕ್ತಿಚಿತ್ರಗಳನ್ನು ರೇಖಿಸಿದ್ದಾರೆ. ಈ ವ್ಯಕ್ತಿ ಪರಿಚಯ ಅಪ್ಯಾಯಮಾನವಾದ ಶಬ್ದಚಿತ್ರಗಳಲ್ಲಿ ಮೂಡಿದ್ದು ಓದುಗರ ಮನಸ್ಸನ್ನು ಆವರಿಸಿಕೊಳ್ಳುತ್ತದೆ; ಪುಸ್ತಕದ ಶೀರ್ಷಿಕೆ ಸಾರ್ಥಕವೆನಿಸುತ್ತದೆ.ಸಮೂಹ, ಸಂಪರ್ಕ, ಸಾಂಪ್ರತ ಮತ್ತು ಸಂವಹನ (1982-83) ಎಂಬ ನಾಲ್ಕು ಸಂಪುಟಗಳು ಪ್ರಜಾಮತ ವಾರಪತ್ರಿಕೆಯಲ್ಲಿ ಪ್ರಕಟವಾದ ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಕುರಿತ ಸ್ಥಿರ ಶೀರ್ಷಿಕೆ ಹೊತ್ತ ಅಂಕಣದಲ್ಲಿ ಹೊರಬಂದ ಬರಹಗಳ ಬಳಗಕ್ಕೆ ಸೇರಿದವು. ಇಲ್ಲಿ ಒಟ್ಟು 1140 ಪುಟಗಳಲ್ಲಿ ಕೆನೆಗಟ್ಟಿರುವ ವಿಚಾರ ಸಂಪತ್ತು ವಿಪುಲ ಸಾಮಗ್ರಿಯ ಶ್ರೀಮಂತ ಭಂಡಾರ ಲೇಖಕರ ಆಳವೂ, ವಿಸ್ತಾರವೂ ಆದ ಅಧ್ಯಯನಕ್ಕೆ ಹಿಡಿದ ರನ್ನಗನ್ನಡಿ. ಈ ಸಂಪುಟಗಳ ಮೇಲ್ಮೆ ಮತ್ತು ಉಪಯುಕ್ತತೆ ಕುರಿತು ವಿಮರ್ಶಕರು ಮುಕ್ತಕಂಠರಾಗಿ ಪ್ರಶಂಸಿಸಿದ್ದಾರೆ.‘ಸ್ಪಂದನ’ (1983) ಐಬಿಎಚ್ ಪ್ರಕಾಶನ ಸಂಸ್ಥೆಯು ಪ್ರಕಟಿಸುತ್ತಿದ್ದ ‘ಇಂಚರ’ ಮಾಸಪತ್ರಿಕೆಯಲ್ಲಿ ವರ್ತಮಾನ ಎಂಬ ಹೆಸರಿನಿಂದ ಬೆಳಕು ಕಂಡ ಹಲವಾರು ಅಂಕಣಗಳ ಸಂಕಲನ. ಇದರಲ್ಲಿ ಶಾಲೆ, ಶಿಕ್ಷಣ, ಮಾತೃಭಾಷೆ, ಪತ್ರಿಕೆಗಳು, ಚುನಾವಣೆಗಳು, ಅಕಾಡೆಮಿಗಳು ಉದ್ದೇಶ-ಮುಂತಾದ ವಿಷಯಗಳ ವಿವೇಚನೆ-ಪ್ರತಿಕ್ರಿಯೆ ಇದೆ. ಅಪ್ಪಯ್ಯ (1984) ಎಂಬುದೊಂದು ವಿಶಿಷ್ಟವಾದ ಹೊತ್ತಗೆ. ನಾಯಕರ ತಂದೆ ಹಾರೋಗದ್ದೆ ಶ್ರೀನಿವಾಸ ನಾಯಕರ (1980-1984) ನಂದಾನೆನಪಿಗೆ ನಿಲ್ಲಿಸಿದ ಕೃತಿಸ್ತಂಭ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

COVID-19 ವ್ಯಾಕ್ಸಿನೇಷನ್ ನಂತರ ತಿಂಗಳವರೆಗೆ ಪ್ರತಿಕಾಯಗಳ ಗುಣಮಟ್ಟ ಸುಧಾರಿಸುತ್ತದೆ: ಅಧ್ಯಯನ

Wed Feb 16 , 2022
    ಯುಎಸ್‌ನ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ಫಿಜರ್-ಬಯೋಎನ್‌ಟೆಕ್ ಲಸಿಕೆಗೆ ಪ್ರತಿಕಾಯ ಪ್ರತಿಕ್ರಿಯೆಯನ್ನು ಜನರಲ್ಲಿ ವಿವರವಾಗಿ ನಿರ್ಣಯಿಸಿದ್ದಾರೆ. ನೇಚರ್ ಜರ್ನಲ್‌ನಲ್ಲಿ ಮಂಗಳವಾರ ಪ್ರಕಟವಾದ ಸಂಶೋಧನೆಗಳು, ವ್ಯಾಕ್ಸಿನೇಷನ್ ನಂತರದ ತಿಂಗಳುಗಳಲ್ಲಿ ಪ್ರತಿಕಾಯ ಮಟ್ಟಗಳು ಕಡಿಮೆಯಾಗುವುದು ಪ್ರಾಥಮಿಕವಾಗಿ ಸಮರ್ಥನೀಯ ಪ್ರತಿರಕ್ಷಣಾ ಪ್ರತಿಕ್ರಿಯೆಗೆ ಬದಲಾವಣೆಯನ್ನು ಪ್ರತಿನಿಧಿಸುತ್ತದೆ ಎಂದು ಸೂಚಿಸುತ್ತದೆ. ವೈರಸ್ ಬದಲಾಗದಿರುವವರೆಗೆ ಕಡಿಮೆ ಮಟ್ಟದ ಪ್ರತಿಕಾಯಗಳು ಸಹ ರೋಗದ ವಿರುದ್ಧ ಸ್ವಲ್ಪ ರಕ್ಷಣೆ ನೀಡುವುದನ್ನು ಮುಂದುವರಿಸುತ್ತವೆ ಎಂದು ಸಂಶೋಧಕರು ಗಮನಿಸಿದ್ದಾರೆ. […]

Advertisement

Wordpress Social Share Plugin powered by Ultimatelysocial