ಮಾಸ್ಟರ್ ಮಂಜುನಾಥ್ ಅಂದ್ರೆ ‘ಓ ನಮ್ಮ ಮಾಲ್ಗುಡಿ ಡೇಸ್ ಹುಡುಗ’

 

 

ಮಂಜುನಾಥ್ ಅಂದ್ರೆ ಜನರಿಗೆ ಗುರುತು ಸಿಗಲ್ಲ. ಮಾಸ್ಟರ್ ಮಂಜುನಾಥ್ ಅಂದ್ರೆ ‘ಓ ನಮ್ಮ ಮಾಲ್ಗುಡಿ ಡೇಸ್ ಹುಡುಗ’ ಅಂತ ತಕ್ಷಣ ನೆನಪಾಗುತ್ತಾರೆ. ಇಂದು ಇವರ ಹುಟ್ಟುಹಬ್ಬ.
ಮಂಜುನಾಥ್ ಹೆಸರು ಮಂಜುನಾಥ್ ನಾಯಕರ್. ಅವರು 1976ರ ಡಿಸೆಂಬರ್ 23ರಂದು ಬೆಂಗಳೂರಿನಲ್ಲಿ ಜನಿಸಿದರು.
ಮಂಜುನಾಥ್ ತಮ್ಮ 3ನೇ ವಯಸ್ಸಿನಿಂದಲೇ ನಟನೆ ಆರಂಭಿಸಿ ಕನ್ನಡ, ಹಿಂದಿ ಮತ್ತು ತೆಲುಗಿನ ಒಟ್ಟು 68 ಚಿತ್ರಗಳಲ್ಲಿ ನಟಿಸಿದರು. ಶಂಕರನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್’ ಸರಣಿಯಲ್ಲಿ ಬಾಲಕ ಸ್ವಾಮಿಯಾಗಿ ಈ ಹುಡುಗ ತನ್ನ ಮನೆ, ಗೆಳೆತನ ಮತ್ತು ಸ್ವಾಮಿಯಾಗಿ ತೋರಿದ ಮಿಂಚು ಕಲಾಲೋಕದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತದ್ದು. ಮಾಸ್ಟರ್ ಮಂಜುನಾಥ್ ಆಗಿ ಅವರಿಗೆ ಈ ನಿರ್ವಹಣೆಗಾಗಿ ಆರು ಅಂತರರಾಷ್ಟ್ರೀಯ, ಒಂದು ರಾಷ್ಟ್ರೀಯ ಮತ್ತು ಒಂದು ರಾಜ್ಯ ಪ್ರಶಸ್ತಿ ಸಂದಿತ್ತು.
ಶಂಕರನಾಗ್ ನಿರ್ದೇಶನದಲ್ಲಿ ‘ನೋಡಿ ಸ್ವಾಮಿ ನಾವಿರೋದೆ ಹೀಗೆ,’ ‘ಎಸ್.ಪಿ.ಸಾಂಗ್ಲಿಯಾನಾ-೧’, ‘ಎಸ್.ಪಿ. ಸಾಂಗ್ಲಿಯಾನಾ-೨’ ಚಿತ್ರಗಳಲ್ಲೂ ಮಂಜುನಾಥ್ ಅಭಿನಯಿಸಿದ್ದರು. ಅಮಿತಾಭ್ ಬಚ್ಚನ್ ಅಭಿನಯದ ಹಿಂದಿಯ ‘ಅಗ್ನಿಪಥ್’, ‘ಮಮ್ಮೂಟ್ಟಿ’ ಜೊತೆಯಲ್ಲಿ ಕೆ. ವಿಶ್ವನಾಥನ್ ಅವರ ತೆಲುಗಿನ ‘ಸ್ವಾತಿ ಕಿರಣಂ’, ನಾಗಾಭರಣರ ‘ಬ್ಯಾಂಕರ್ ಮಾರ್ಗಯ್ಯ’, ರವಿಚಂದ್ರನ್ ಅವರ ‘ರಣಧೀರ’, ‘ಕಿಂದರ ಜೋಗಿ’, ‘ರಾಮಾಚಾರಿ’ ಮುಂತಾದವು ತಕ್ಷಣದಲ್ಲಿ ನೆನಪಿಗೆ ಬರುವ ಬಾಲಕ ಮಂಜುನಾಥ್ ಅವರ ಕೆಲವು ಚಿತ್ರಗಳು.
ಯಶಸ್ಸು – ಜನಪ್ರಿಯತೆಗೆ ಬಂದಾಗ ಅದಕ್ಕೆ ಅಂಟಿಕೊಳ್ಳುವುದು ಮಾನವ ಸಹಜ ಗುಣ. ಅದರಿಂದ ಈಚೆ ಬರುವುದಕ್ಕೆ ಸಾಕಷ್ಟು ದೃಢ ನಿರ್ಧಾರದ ಗಟ್ಟಿತನ ಬೇಕು. ಮಂಜುನಾಥ್ ಅಂತಹ ಗಟ್ಟಿತನ ಮೆರೆದು ಓದಿನ ಕಡೆ ಮುಖ ಮಾಡಿದರು.
ಮಂಜುನಾಥ್ ಎಷ್ಟರ ಮಟ್ಟಿಗೆ ತನ್ನ ಜನಪ್ರಿಯತೆಯನ್ನು ಹೊರಗಿಟ್ಟು ಸಹಜವಾದ ಯುವ ವಿದ್ಯಾರ್ಥಿಯಾಗಿದ್ದರೆಂದರೆ, ಅಂದಿನ ದಿನಗಳಲ್ಲಿ ನನ್ನ ಬಜಾಜ್ ಸ್ಕೂಟರ್ನಲ್ಲಿ ಹೋಗುವಾಗ ಒಬ್ಬ ಹುಡುಗ ಲಿಫ್ಟ್ ಕೇಳುತ್ತಾ ಕೈತೋರಿದ. ನಿಲ್ಲಿಸಿದಾಗಲೇ ಗೊತ್ತಾದದ್ದು ಮಂಜುನಾಥ್ ಎಂದು. ಮುಂದೆ ಹಾಗೆ ಎರಡು ಮೂರು ಬಾರಿ ಅವರು ಬಸ್ಸಿಗೆ ಕಾಯುತ್ತಿದ್ದಾಗ ನನ್ನ ಸ್ಕೂಟರ್ ಸವಾರಿಯಲ್ಲಿ ದೇವಯ್ಯ ಪಾರ್ಕ್ ಇಂದ ಹತ್ತಿ ಶೇಷಾದ್ರಿಪುರದ ಬಳಿ ಇಳಿಯುತ್ತಿದ್ದರು. ಅಷ್ಟರ ಮಟ್ಟಿಗೆ ಯಾವುದೇ ಹಮ್ಮುಬಿಮ್ಮುಗಳಿಲ್ಲದ ಸಹಜ ಯುವವಿದ್ಯಾರ್ಥಿಯಾಗಿ ಅವರು ಕಾಲೇಜು ಜೀವನ ನಡೆಸಿದರು.
ಹಲವು ಸಂದರ್ಶನಗಳಲ್ಲಿ ಮಂಜುನಾಥ್ ತಮಗೆ ಹಿಂದೀ ಇಂಗ್ಲಿಷ್ ಬಾರದಿದ್ದ ಸ್ಥಿತಿಯಲ್ಲೂ ಶಂಕರನಾಗ್ ಅವರಿಂದ ‘ಮಾಲ್ಗುಡಿ ಡೇಸ್’ ಸರಣಿಯಲ್ಲಿ ಅವಕಾಶ ಪಡೆದು ನಟಿಸಿದ್ದರ ಬಗ್ಗೆ ಹೇಳಿದ್ದಾರೆ. ಬಹುಶಃ ಶಂಕರನಾಗ್ ಇದ್ದಿದ್ದರೆ ಮಂಜುನಾಥ್ ಚಿತ್ರರಂಗದಲ್ಲಿ ಮುಂದೆಯೂ ಇರುತ್ತಿದ್ದರೇನೋ! ಎಲ್ಲವೂ ಹಾಗಿದ್ದಿದ್ರೆ ಹೀಗಿದ್ದಿದ್ರೆ!
ವಾಸ್ತವಕ್ಕೆ ಬರೋಣ. ಮಂಜುನಾಥರು ಇಂಗ್ಲಿಷಿನಲ್ಲಿ ಬಿ. ಎ. ಪದವಿ ಮತ್ತು ಸಮಾಜಶಾಸ್ತ್ರದಲ್ಲಿ ಎಂ. ಎ ಪದವಿಗಳನ್ನು ಗಳಿಸಿದ್ದಲ್ಲದೆ, ಸಿನಿಮಾ ಛಾಯಾಗ್ರಹಣದಲ್ಲಿ ಡಿಪ್ಲೊಮಾ ಪದವಿ ಕೂಡಾ ಪಡೆದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಲಕ್ಷ್ಮಿ ಭಾರತದ ಪ್ರಮುಖ ಸಿನಿಮಾ ತಾರೆ.

Fri Dec 23 , 2022
  ಲಕ್ಷ್ಮಿ ನಮ್ಮ ಅಚ್ಚುಮೆಚ್ಚು. ಭಾರತದ ಪ್ರಮುಖ ಸಿನಿಮಾ ತಾರೆಯರಲ್ಲಿ ಲಕ್ಷ್ಮಿ ಸದಾ ಆಪ್ತರಾಗಿ ಕಂಡುಬಂದಿರುವವರು. 1968ರಲ್ಲಿ ತೆರೆಕಂಡ ತಮಿಳು ಚಿತ್ರ ‘ಜೀವನಾಂಶಂ’ ಮೂಲಕ ಚಿತ್ರರಂಗಕ್ಕೆ ಬಂದ ಲಕ್ಷ್ಮಿ ಈಗಲೂ ಸಕ್ರಿಯರಾಗಿ ಅಭಿನಯ ಕ್ಷೇತ್ರದಲ್ಲಿ ಉಳಿದಿದ್ದಾರೆ. ಆಗ ಅವರ ವಯಸ್ಸು ಕೇವಲ 15. ಅವರ ತಂದೆ ವೈ.ವಿ. ರಾವ್ ಮೂಲತಃ ತೆಲುಗಿನವರಾಗಿದ್ದರೂ, ಕನ್ನಡವನ್ನೊಳಗೊಂಡಂತೆ, ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅಪಾರ ಹೆಸರನ್ನು ಮಾಡಿದ್ದರು. ಕನ್ನಡ ಚಿತ್ರರಂಗದ ಪ್ರಪ್ರಥಮ ಚಿತ್ರ ‘ಸತಿ […]

Advertisement

Wordpress Social Share Plugin powered by Ultimatelysocial