ಶಿವಾನಂದ ಬೇಕಲ್ ಬರಹಗಾರರಾಗಿ ಮತ್ತು ಬಹುಮುಖಿ ಸಾಂಸ್ಕೃತಿಕ ವ್ಯಕ್ತಿಗಳಾಗಿ ಹೆಸರಾದವರು.

 

ಶಿವಾನಂದ ಬೇಕಲ್ ಬರಹಗಾರರಾಗಿ ಮತ್ತು ಬಹುಮುಖಿ ಸಾಂಸ್ಕೃತಿಕ ವ್ಯಕ್ತಿಗಳಾಗಿ ಹೆಸರಾದವರು.ಶಿವಾನಂದ 1951ರ ಫೆಬ್ರವರಿ 21ರಂದುಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಐತಿಹಾಸಿಕ ಸ್ಥಳ ಬೇಕಲ್ ಎಂಬಲ್ಲಿ ಜನಿಸಿದರು. ತಂದೆ ಬೇಕಲ ಸಾಂತನಾಯಕರು. ತಾಯಿ ಲಲಿತಾಬಾಯಿ. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ಇವರ ವಿದ್ಯಾಭ್ಯಾಸ ನಡೆದದ್ದು ಬೇಕಲ್‌ನಲ್ಲಿ. ಕಾಸರಗೋಡಿನಲ್ಲಿ ಬಿ.ಎಸ್ಸಿ, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಡ್., ಕರ್ನಾಟಕ ವಿಶ್ವ ವಿದ್ಯಾಲಯದಿಂದ ಎಂ.ಎ. ಮತ್ತು ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಗಳಿಸಿದರು.ಶಿವಾನಂದ ಬೇಕಲ್ ಚಿಕ್ಕಂದಿನಿಂದಲೇ ಬರವಣಿಗೆಯ ಹವ್ಯಾಸವನ್ನು ಬೆಳೆಸಿಕೊಂಡರು. 16ನೇ ವಯಸ್ಸಿನಲ್ಲಿ ಬರೆದ ‘ಕೇದಗೆಯ ಹಾವು’ ಮೊದಲ ಕಥೆಗೇ 1968ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಸಂದಿತು. ಪ್ರಾರಂಭದಲ್ಲಿ ಇವರ ಲೇಖನ ಕೃಷಿ ಮಂಗಳೂರಿನ ನವಭಾರತ, ಕಿನ್ನಗೋಳಿಯ ಯುಗಪುರುಷ ಮುಂತಾದ ಪತ್ರಿಕೆಗಳಲ್ಲಿ ಮೂಡಿ ನಂತರ ರಾಜ್ಯಮಟ್ಟದ ಪತ್ರಿಕೆಗಳಾದ ಸುಧಾ, ತರಂಗ, ಪ್ರಜಾವಾಣಿ, ತುಷಾರ, ಕರ್ಮವೀರ, ಉದಯವಾಣಿ ಮುಂತಾದ ಪತ್ರಿಕೆಗಳಲ್ಲಿ ಮೂಡಿಬಂತು.
ಪದವಿಗಳಿಸಿದ ನಂತರ ಭಾರತೀಯ ಪ್ರಸಾರ ಸೇವೆಗೆ ಬಂದ ಶಿವಾನಂದ ಬೇಕಲ್ ಅವರು ಮಂಗಳೂರು, ಗುಲಬರ್ಗಾ, ಬೆಂಗಳೂರು ಆಕಾಶವಾಣಿ; ಬೆಂಗಳೂರು ದೂರದರ್ಶನ, ಗುಲಬರ್ಗಾ ದೂರದರ್ಶನ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದರು. ಮುಂದೆ ಗುಲಬರ್ಗಾ ಆಕಾಶವಾಣಿ ಕೇಂದ್ರದಲ್ಲಿ ಸಹಾಯಕ ಕೇಂದ್ರ ನಿರ್ದೇಶಕರಾದರು.ಶಿವಾನಂದ ಬೇಕಲ್ ಅವರ ಕೃತಿಗಳಲ್ಲಿ ಇನ್ನಾದರೂ ಅರ್ಥವಾಗೋಣ, ಮಂಗ್ಳೂರ ಮಲ್ಲಿಗೆ ಕವನ ಸಂಕಲನ; ಮೈಲಿಗೆ, ಕಪ್ಪುಚುಕ್ಕೆ, ಮಳೆನಿಂತ ಮೇಲಿನ ಮರ ಕಾದಂಬರಿಗಳು; ಕರಾವಳಿಯ ಕಾವ್ಯ (ದ. ಕನ್ನಡದ ನಾಲ್ಕು ಜಿಲ್ಲೆಯ ೧೧೭ ಕವಿಗಳ ಪ್ರಾತಿನಿಕ ಕವನ ಸಂಕಲನ), ಕೈಂಕರ್ಯ, ರಜತೋತ್ಸವ ಸಂಪಾದಿತ ಕೃತಿಗಳು; ಮುಂತಾದವು ಸೇರಿವೆ. ಇದಲ್ಲದೆ ಜನಪ್ರಿಯ ಇಂಗ್ಲಿಷ್ ಪ್ರೇರಣಾತ್ಮಕ ಬರಹಗಳನ್ನು ಕನ್ನಡಕ್ಕೆ ತಂದಿದ್ದಾರೆ. ಇವುಗಳಲ್ಲಿ ಬ್ರಿಯಾನ್ ಟ್ರೇಸಿ ಅವರ ಸಮಯದ ನಿರ್ವಹಣೆ, ಪ್ರೇರಣೆ, ವೈಯಕ್ತಿಕ ಯಶಸ್ಸು, ನಾಯಕತ್ವ, ವ್ಯವಸ್ಥಾಪನೆ, ಯಶಸ್ವೀ ಮಾರಾಟ, ಗುರಿ; ಪಾವ್ಲೋ ಕೊಯೆಲೊ ಅವರ ಅಲ್ಕೆಮಿಸ್ಟ್, ಎಡಿತ್ ಎಗರ್ ಉಡುಗೊರೆ; ಜೋಸೆಫ್ ಮರ್ಫಿ ಅವರ ಸುಪ್ತಪ್ರಜ್ಞಾ ಮನಸ್ಸಿನ ಶಕ್ತಿ, ಶ್ರೀ ಎಂ ಅವರ ಧ್ಯಾನ, ವಿಕ್ಟರ್ ಈ ಪ್ರಾಂಕಲ್ ಅವರ ಬದುಕಿನ ಅರ್ಥ ಹುಡುಕಾಟದಲ್ಲಿ ಮನುಷ್ಯ; ಜಯಶ್ರೀ ಶೆಟ್ಟಿ ರಚಿತ ಶಿವರಾಮ ಭಂಡಾರಿಯ ಜೀವನ ಪಯಣವಾದ ಸ್ಮೈಲಿಂಗ್ ಅಟ್ ದ ಟಾಪ್; ರಾಮರ್ಟ್ ಟಿ. ಕಿಯೋಸಾಕಿ ಅವರ ರಿಚ್ ಡ್ಯಾಡ್ ಪೂರ್ ಡ್ಯಾಡ್ ಮುಂತಾದವು ಸೇರಿವೆ.
ಶಿವಾನಂದ ಬೇಕಲ್ ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆ ಕ್ಯಾಸೆಟ್, ಸಿಡಿಗಳನ್ನು ಹೊರ ತಂದಿದ್ದಾರೆ. ಶಿವರಾಮಕಾರಂತರು, ಡಾ. ರಾಜಕುಮಾರ್, ಕೆ.ಎಸ್. ನರಸಿಂಹಸ್ವಾಮಿ, ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಹಲವಾರು ಪ್ರಮುಖರ ಸಂದರ್ಶನ, ಸಾಕ್ಷ್ಯ ಚಿತ್ರಗಳನ್ನು ಆಕಾಶವಾಣಿ, ದೂರದರ್ಶನಗಳಿಗಾಗಿ ತಯಾರಿಸಿದ್ದಾರೆ. ಇವರ ಹಲವಾರು ಕಾರ್ಟೂನ್ ಮಾಲಿಕೆಗಳು ನಿಯತ ಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಇವರೇ ಬರೆದು ಪ್ರಸ್ತುತ ಪಡಿಸಿರುವ ಹಲವಾರು ದೂರದರ್ಶನ, ರೇಡಿಯೋ ನಾಟಕ, ಪ್ರಹಸನಗಳಿಗೆ ವಿಶೇಷ ಪುರಸ್ಕಾರ ಸಂದಿವೆ.ಶಿವಾನಂದ ಬೇಕಲ್ ಅವರಿಗೆ ೨ನೇ ಹೊಸದುರ್ಗ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಗುಲಬರ್ಗಾ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ, ಬೇಕಲದಲ್ಲಿ ಜರುಗಿದ ಚುಟುಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ, ಕಡೆಂಗೋಡ್ಲು ಕಾವ್ಯಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ. ತಮ್ಮ ತಂದೆಯವರ ನೆನಪಲ್ಲಿ ಶ್ರೀ ಬೇಕಲ್ ಸಾಂತನಾಯಕ ಪ್ರತಿಷ್ಠಾನವನ್ನು ಸ್ಥಾಪಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಂಬಾರಿ ಉತ್ಸವಕ್ಕೆ ಬೊಮ್ಮಾಯಿ ಚಾಲನೆ!

Tue Feb 21 , 2023
ಬೆಂಗಳೂರು, ಫೆಬ್ರವರಿ 21: ರಾಜ್ಯ ಸರ್ಕಾರ ಈಗಾಗಲೇ ಬಜೆಟ್ ನಲ್ಲಿ ಘೋಷಿಸಿರುವಂತೆ ದುಡಿಯುವ ಮಹಿಳೆಯರಿಗೆ ಮತ್ತು ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆಯನ್ನು ಹೊಸ ಹಣಕಾಸು ವರ್ಷದ (ಏಪ್ರಿಲ್ 1) ಆರಂಭದಿಂದ ಕಲ್ಪಿಸಲು ಕ್ರಮ ಕೈಗೊಳ್ಳಿ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ನಿರ್ದೇಶಿಸಿದರು. ಬೆಂಗಳೂರಿನಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ವೋಲ್ವೋ ಮಲ್ಟಿ ಆಕ್ಸೆಲ್ ಬಿಎಸ್ 4-9600 ಸ್ಲೀಪರ್ ಬಸ್ಸುಗಳನ್ನು ಲೋಕಾರ್ಪಣೆ ಮಾಡಿ […]

Advertisement

Wordpress Social Share Plugin powered by Ultimatelysocial