ಮುಸ್ಲಿಂ ಶಾಲೆಗಳಲ್ಲಿ ಶುಕ್ರವಾರ ರಜಾ ದಿನದ ಪದ್ಧತಿಯನ್ನು ರದ್ದು ಮಾಡಲಾಗಿದೆ

ರಾಂಚಿ, ಜುಲೈ 14: ಜಾರ್ಖಂಡ್‌ನ ಜಾಮತಾಡ ಜಿಲ್ಲೆಯ ಮುಸ್ಲಿಂ ಬಹುಸಂಖ್ಯೆಯ ಪ್ರದೇಶಗಳಲ್ಲಿನ 43 ಶಾಲೆಗಳಲ್ಲಿ ಎರಡು ವರ್ಷಗಳಿಂದ ಜಾರಿಯಲ್ಲಿದ್ದ ಶುಕ್ರವಾರ ರಜಾ ದಿನದ ಪದ್ಧತಿಯನ್ನು ರದ್ದು ಮಾಡಲಾಗಿದೆ. ಎಲ್ಲೆಡೆಯ ಶಾಲೆಗಳಲ್ಲಿರುವಂತೆ ಇಲ್ಲಿಯೂ ಭಾನುವಾರವೇ ರಜೆ ನೀಡುವಂತೆ ಸರಕಾರ ಆದೇಶ ಹೊರಡಿಸಿದೆ.

ಅಷ್ಟೇ ಅಲ್ಲ, ಭಾನುವಾರದ ಬದಲು ಶುಕ್ರವಾರವನ್ನು ವಾರದ ರಜಾ ದಿನವಾಗಿ ಬದಲಾಯಿಸಿದ್ದ 43 ಶಾಲೆಗಳ ಆಡಳಿತ ಸಮಿತಿಗಳನ್ನೂ ಸರಕಾರ ಬುಧವಾರ ರದ್ದು ಮಾಡಿದೆ. ಐದು ದಿನಗಳ ಹಿಂದೆ ಈ 43 ಶಾಲೆಗಳಲ್ಲಿ ಶುಕ್ರವಾರ ರಜೆ ಇರುವ ವಿಚಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ತನಿಖೆಗೆ ಆದೇಶ ನೀಡಲಾಗಿತ್ತು, ಪ್ರಾಥಮಿಕ ಹಂತದ ವರದಿ ಇಲಾಖೆ ಕೈಗೆ ಸಿಕ್ಕಿದೆ.

“ಬ್ಲಾಕ್ ಶಿಕ್ಷಣಾಧಿಕಾರಿಗಳು (ಬಿಇಒಗಳು) ಹಾಗೂ ಖುದ್ದು ನಾನು ಸೇರಿ ತನಿಖೆ ನಡೆಸಿದೆವು. ಎರಡಕ್ಕೂ ಹೆಚ್ಚು ವರ್ಷಗಳಿಂದಲೂ ಜಾಮತಾಡ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಬಾಹುಳ್ಯ ಇರುವ ಪ್ರದೇಶಗಳಲ್ಲಿನ ಕೆಲ ಶಾಲೆಗಳಲ್ಲಿ ಶುಕ್ರವಾರವನ್ನು ವಾರದ ರಜಾ ದಿನವಾಗಿ ಬದಲಾಯಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಅದಾದ ಬಳಿಕ ಆ ಶಾಲೆಗಳ ಆಡಳಿತ ಮಂಡಳಿಗಳನ್ನು ವಜಾಗೊಳಿಸಲಾಗಿದೆ” ಎಂದು ಜಾಮತಾಡ (Jamtara) ಜಿಲ್ಲಾ ಶಿಕ್ಷಣ ಅಧಿಕಾರಿ ಅಭಯ್ ಶಂಕರ್ ತಿಳಿಸಿದ್ದಾರೆ.

ಪೋಷಕರ ಒತ್ತಡ ಕಾರಣವಾ?
ಜಾಮತಾರ ಜಿಲ್ಲೆಯಲ್ಲಿರುವ ಈ 43 ಶಾಲೆಗಳಲ್ಲಿ ಭಾನುವಾರದ ಬದಲು ಶುಕ್ರವಾರವನ್ನು ರಜಾ ದಿನವಾಗಿ ಬದಲಾಯಿಸಲು ವಿದ್ಯಾರ್ಥಿಗಳ ಪೋಷಕರ ಒತ್ತಡ ಕಾರಣ ಎನ್ನಲಾಗಿದೆ. ಕೆಲ ಪೋಷಕರು ಸತತವಾಗಿ ಒತ್ತಾಯ ಮಾಡುತ್ತಾ ಬಂದಿದ್ದರಿಂದ ಮುಖ್ಯ ಶಿಕ್ಷಕರು ಬೇರೆ ವಿಧಿಯಿಲ್ಲದೆ ವಾರದ ರಜಾ ದಿನದ ಬದಲಾವಣೆ ಮಾಡಬೇಕಾಯಿತು ಎಂದು ಹೇಳಲಾಗುತ್ತಿದೆ.

“ಲಾಕ್ ಡೌನ್ ಬಳಿಕ ಇದು ಆಗುತ್ತಿತ್ತು. ಆದರೆ, ಇತ್ತೀಚೆಗಷ್ಟೇ ಇದು ನನ್ನ ಗಮನಕ್ಕೆ ಬಂದಿತು” ಎಂದು ಡಿಇಒ ಅಭಯ್ ಶಂಕರ್ ಹೇಳಿದ್ದಾರೆ.

ಉರ್ದು ಅಲ್ಲದ ಶಾಲೆಗಳೂ

ಜಾರ್ಖಂಡ್ ಸರಕಾರ ಉರ್ದು ಶಾಲೆಗಳಲ್ಲಿ ಭಾನುವಾರದ ಬದಲು ಶುಕ್ರವಾರ ರಜೆ ನೀಡುವುದಾಗಿ ಕಳೆದ ವರ್ಷ ಅಧಿಸೂಚನೆ ನೀಡಿತ್ತು. ಆದರೆ, ಉರ್ದು ಶಾಲೆಗಳೆಂದು ನೋಂದಣಿಯಾಗದ ಶಾಲೆಗಳಲ್ಲೂ ಶುಕ್ರವಾರವನ್ನೇ ವಾರದ ರಜೆಯನ್ನಾಗಿ ಬದಲಾಯಿಸಲಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಉರ್ದು ಮಾಧ್ಯಮವಲ್ಲದ ಈ ಶಾಲೆಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದ ಕಾರಣ ಈ ಬದಲಾವಣೆ ಮಾಡಲಾಗಿರುವುದು ತಿಳಿದುಬಂದಿದೆ.

ಜಾಮತಾಡ ಜಿಲ್ಲೆಯಲ್ಲಿ ಒಟ್ಟು 1084 ಪ್ರಾಥಮಿಕ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಪೈಕಿ 15 ಶಾಲೆಗಳು ಉರ್ದು ಶಾಲೆಯಾಗಿ ನೊಂದಾಯಿತವಾಗಿವೆಯಂತೆ. ಜಾರ್ಖಂಡ್ ಸರಕಾರ ಉರ್ದು ಶಾಲೆಗಳಿಗೆ ಮಾತ್ರ ಶುಕ್ರವಾರ ರಜೆ ಎಂದು ಪ್ರಕಟಿಸಿದ್ದು. ಆದರೆ, ಉರ್ದು ಶಾಲೆ ಎಂದು ನೊಂದಾಯಿತವಾಗದ ಶಾಲೆಗಳಲ್ಲೂ ಅದನ್ನು ಅಳವಡಿಸಿಕೊಂಡಿರುವುದು ಅಕ್ರಮ ಎಂದು ಪರಿಗಣಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ರಾಜಕೀಯ ವಾಗ್ಯುದ್ಧ

43 ಶಾಲೆಗಳಲ್ಲಿ ಶುಕ್ರವಾರವನ್ನು ವಾರದ ರಜಾದಿನವಾಗಿ ಬದಲಾಯಿಸಿರುವ ವಿಚಾರ ರಾಜಕೀಯ ಕೆಸರೆರಚಾಟಕ್ಕೆ ನಾಂದಿ ಹಾಡಿದೆ. ದುಮಕಾ ಕ್ಷೇತ್ರದ ಸಂಸದ ಸುನೀಲ್ ಸೊರೇನ್ ಈ ವಿಚಾರದ ಬಗ್ಗೆ ಕಿಡಿಕಾರಿದ್ದು, ಕೇಂದ್ರ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಕೋರಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಇದಕ್ಕೆ ತೀಕ್ಷ್ಣವಾಗಿ ಪ್ರಕ್ರಿಯಿಸಿರುವ ಜಾಮತಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ, ಈ ಪ್ರಕರಣಕ್ಕೆ ಸುಖಾಸುಮ್ಮನೆ ಕೋಮುಬಣ್ಣ ನೀಡಲಾಗುತ್ತಿದೆ ಎಂದು ವಿಷಾದಿಸಿದ್ದಾರೆ.

“ದುಮ್ಕಾ ಸಂಸದರು ಸಣ್ಣ ವಿಚಾರಕ್ಕೆ ಕೋಮುಬಣ್ಣ ಹಚ್ಚಿದ್ದಾರೆ. ಮುಸ್ಲಿಂ ಸಮುದಾಯದಿಂದ ಹೆಚ್ಚಿನ ವಿದ್ಯಾರ್ಥಿಗಳು ಹೋಗುವ ಶಾಲೆಗಳಲ್ಲಿ ಭಾನುವಾರ ಬದಲು ಬೇರಾವುದಾದರೂ ದಿನವನ್ನು ವಾರದ ರಜೆಯಾಗಿ ಮಾಡುವುದರಲ್ಲಿ ಏನು ತಪ್ಪಿದೆ?” ಎಂದು ಅನ್ಸಾರಿ ಪ್ರಶ್ನಿಸಿದ್ದಾರೆ.

ಷರಿಯಾ ಹೇರಿಕೆ ಆರೋಪ

ಜಾರ್ಖಂಡ್ ಜಿಲ್ಲೆಯಲ್ಲಿ ಈ ಹಿಂದೆ ಕೋಮುಸೂಕ್ಷ್ಮವೆನಿಸುವ ವಿಚಾರಗಳು ಬೆಳಕಿಗೆ ಬಂದಿದ್ದಿದೆ. ಸದರ್ ಬ್ಲಾಕ್‌ನ ಗ್ರಾಮವೊಂದರ ಶಾಲೆಯಲ್ಲಿ ಮಕ್ಕಳು ಕೈ ಜೋಡಿಸಿ ನಮಸ್ಕಾರ ಮಾಡುವುದನ್ನು ಅಘೋಷಿತವಾಗಿ ನಿಷೇಧಿಸಲಾಗಿದೆ ಎಂಬ ಸುದ್ದಿ ಇತ್ತು.

ಇಲ್ಲಿಯ ಗರ್ವಾ ಜಿಲ್ಲೆಯ ಒಂದು ಶಾಲೆಯಲ್ಲಿ ಇಸ್ಲಾಮಿಕ್ ಕಾನೂನಾದ ಷರಿಯಾವನ್ನು ಹೇರಲಾಗುತ್ತಿದೆ ಎಂಬ ವಿಚಾರ ಕೂಡ ಬೆಳಕಿಗೆ ಬಂದಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಹಾರಾಷ್ಟ್ರದಲ್ಲಿ ಗಗನಕ್ಕೇರುತ್ತಿರುವ ಇಂಧನ ಬೆಲೆಯಿಂದ ವಾಹನ ಸವಾರರಿಗೆ ಬಿಗ್ ರಿಲೀಫ್

Thu Jul 14 , 2022
ನವದೆಹಲಿ: ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಇಂಧನ ಬೆಲೆಗಳ ಮೇಲಿನ ವ್ಯಾಟ್ ಅನ್ನು ಲೀಟರ್‌ಗೆ 5 ರೂ.ವರೆಗೆ ಕಡಿತಗೊಳಿಸಿದೆ. ಪೆಟ್ರೋಲ್ ಮೇಲಿನ ವ್ಯಾಟ್ ಪ್ರತಿ ಲೀಟರ್‌ಗೆ 5 ರೂಪಾಯಿ ಇಳಿಕೆಯಾಗಿದ್ದು, ಡೀಸೆಲ್ ಮೇಲೆ 3 ರೂಪಾಯಿ ಇಳಿಕೆಯಾಗಿದೆ. ಇಂಧನ ಬೆಲೆಗಳ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡುವ ಸಾಧ್ಯತೆಯ ಕುರಿತು ಶಿಂಧೆ ಅವರು ರಾಜ್ಯ ಅಸೆಂಬ್ಲಿಯಲ್ಲಿ ಒಂದೆರಡು ದಿನ ಘೋಷಿಸಿದ್ದರು. ವಿಶ್ವಾಸಮತ ಯಾಚನೆಯಲ್ಲಿ ಜಯಗಳಿಸಿದ ಬಳಿಕ ನಡೆದ […]

Advertisement

Wordpress Social Share Plugin powered by Ultimatelysocial