ಮುತ್ತುಸ್ವಾಮಿ ದೀಕ್ಷಿತರು

ಕರ್ಣಾಟಕ ಸಂಗೀತದಲ್ಲಿ ಹಂಸಧ್ವನಿಯಲ್ಲಿರುವ ‘ವಾತಾಪಿ ಗಣಪತಿಂ ಭಜೇ’ ಕೃತಿಯನ್ನು ಅರಿಯದವರೇ ಇಲ್ಲ. ಅಂತಹ ಅಸಂಖ್ಯಾತ ಮಹಾನ್ ಕೃತಿಗಳ ಕರ್ತಾರರಾದ ಮುತ್ತುಸ್ವಾಮಿ ದೀಕ್ಷಿತರು ಜನಿಸಿದ ದಿನ ಮಾರ್ಚ್ 24, 1775.
ಮುತ್ತುಸ್ವಾಮಿ ದೀಕ್ಷಿತರು ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರು. ಇನ್ನಿಬ್ಬರು ತ್ಯಾಗರಾಜರು ಮತ್ತು ಶ್ಯಾಮಾ ಶಾಸ್ತ್ರಿಗಳು. ಬಹುತೇಕ ವಾಗ್ಗೇಯಕಾರರು ತೆಲುಗಿನಲ್ಲಿ ಹೆಚ್ಚು ಕೃತಿಗಳನ್ನು ರಚಿಸಿದ್ದರೆ ದೀಕ್ಷಿತರ ಕೃತಿಗಳೆಲ್ಲವೂ ಸಂಸ್ಕೃತದಲ್ಲಿ ರಚಿತವಾಗಿರುವುದು ಮಹತ್ವದ ವಿಚಾರವಾಗಿದೆ. ‘ಗುರುಗುಹ’ ಎಂಬ ಕಾವ್ಯನಾಮದ ಹಾಸುಹೊಕ್ಕು ದೀಕ್ಷಿತರ ಕೃತಿಗಳಲ್ಲಿ ಕಂಡುಬರುವುದು ಮತ್ತೊಂದು ಪ್ರಧಾನ ಅಂಶ.
ಮುತ್ತುಸ್ವಾಮಿ ದೀಕ್ಷಿತರ ಪೂರ್ವಜರು ತಮಿಳುನಾಡು ಆಂಧ್ರಪ್ರದೇಶಗಳ ಗಡಿ ಪ್ರದೇಶವಾದ ವಿರಿಂಚಿಪುರಂನಲ್ಲಿದ್ದವರು. ದೀಕ್ಷಿತರ ತಂದೆ ರಾಮಸ್ವಾಮಿ ದೀಕ್ಷಿತರೂ ಮಹಾನ್ ಮೇಧಾವಿ ಸಂಗೀತ ವಿದ್ವಾಂಸರು. ಇನ್ನೆರಡು ಸಂಗೀತ ತ್ರಿಮೂರ್ತಿಗಳಂತೆ ಮುತ್ತುಸ್ವಾಮಿ ದೀಕ್ಷಿತರು ಜನಿಸಿದ್ದೂ ತಮಿಳುನಾಡಿನ ತಿರುವಾರೂರಿನಲ್ಲಿ. ಇವರು ತಮ್ಮ ಜೀವನಕಾಲದಲ್ಲಿ ಹಲವಾರುಕಡೆ ಪ್ರಯಾಣಿಸಿ, ಹಲವೆಡೆ ವಾಸಿಸಿ, ಕೊನೆಗೆ ತಿರುನೆಲ್ವೇಲಿ ಬಳಿಯ ಎಟ್ಟಯಪುರಮ್ ಆಸ್ಥಾನದಲ್ಲಿ ಆಶ್ರಯ ಪಡೆದರು.
ದೀಕ್ಷಿತರ ಸಂಗೀತ ಶೈಲಿಯನ್ನು ನಾರಿಕೇಳಪಾಕಕ್ಕೆ ಹೋಲಿಸಲಾಗುತ್ತದೆ. ತೆಂಗಿನಕಾಯಿಯಲ್ಲಿ, ಹೇಗೆ ಹೊರಗೆ ಕಠಿಣವಾದ ಕರಟವಿದ್ದು ಒಳಗೆ ಸವಿಯಾದ ಎಳನೀರೂ, ರುಚಿಯಾದ ಕಾಯಿಯೂ ಇರುತ್ತದೋ ಅದೇ ರೀತಿ, ಮೇಲ್ನೋಟಕ್ಕೆ ಇವರ ಕೃತಿಗಳು ಕಠಿಣವಾಗಿ ತೋರಿದರೂ, ಅವುಗಳಲ್ಲಿರುವ ಸುಮಧುರ ಸಂಗೀತ ಸಾಹಿತ್ಯದ ಅಂಶಗಳಿಂದಾಗಿ, ಅವರ ಕೃತಿಗಳು ಶ್ರೇಷ್ಠ ವಾಗ್ಗೇಯಕಾರತ್ವಕ್ಕೆ ನಿದರ್ಶನವಾಗಿವೆ.
ಮುತ್ತುಸ್ವಾಮಿ ದೀಕ್ಷಿತರು ತಮ್ಮ 16ನೇ ವಯಸ್ಸಿಗೇ ವೇದಾಧ್ಯಯನ, ಕಾವ್ಯಾಲಂಕಾರ, ಜ್ಯೋತಿಷ್ಯ ಶಾಸ್ತ್ರ, ವೈದ್ಯ ಮತ್ತು ಮಂತ್ರಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದಿದ್ದರು. ಇವರು ತಮ್ಮ ಗುರುಗಳ ಅಣತಿಯಂತೆ ಕಾಶಿಯ ಗಂಗೆಯಲ್ಲಿ ಮಿಂದು ಪ್ರಾರ್ಥಿಸಿದಾಗ ಇವರ ಬೊಗಸೆಯ ನೀರಿನಲ್ಲಿ ವೀಣೆಯ ದರ್ಶನವಾಯಿತಂತೆ. ನಿಷ್ಣಾತ ವೈಣಿಕರಾಗಿದ್ದ ದೀಕ್ಷಿತರು ಪಂಚದಶ ಗಮಕಗಳನ್ನೂ ಪ್ರಯೋಗಮಾಡಿ ತೋರಿಸಿದ್ದರು. ಇವರು ತಿರುತ್ತಣಿಯ ಷಣ್ಮುಖನ ಆರಾಧಕರೂ ಮತ್ತು ಸುಬ್ರಹ್ಮಣ್ಯನನ್ನು ಒಲಿಸಿಕೊಂಡವರೂ ಆಗಿದ್ದರು. ಸ್ವಾಮಿ ಇವರಿಗೆ ವಲ್ಲಿ-ದೇವಯಾನಿ ಸಮೇತ, ಮಯೂರ ವಾಹನನಾಗಿ ಸಾಕ್ಷಾತ್ಕಾರವಿತ್ತಿದ್ದರೆಂಬ ಪ್ರತೀತಿಯಿತ್ತು. ತಾವು ಈ ’ಗುರುಗುಹ’ನ ದಾಸ, ಅವನ ಪಾದಧೂಳಿಯಿಂದ ಅನುಗ್ರಹ್ರೀತರಾದರೆಂಬ ಭಕ್ತಿಭಾವದಿಂದ ತಮ್ಮ ಮೊಟ್ಟ ಮೊದಲ ಕೃತಿ “ಶ್ರೀನಾಥಾದಿ ಗುರುಗುಹೋ ಜಯತಿ ಜಯತಿ..” ರಚನೆಯನ್ನು ಮಾಯಾ ಮಾಳವಗೌಳ ರಾಗದಲ್ಲಿ ರಚಿಸಿದರು. ಈ ಕೃತಿಯಲ್ಲಿ ಭಗವಂತನ ಚರಣ ಒಂದೇ ಎಲ್ಲದಕ್ಕೂ ಆಶ್ರಯ ಎಂಬ ಪುನೀತಭಾವದ ಅಭಿವ್ಯಕ್ತಿಯಿದೆ.
ದೀಕ್ಷಿತರು ಶ್ರೀವಿದ್ಯೆಯ ಉಪಾಸಕರೂ ಆಗಿದ್ದರು. ಅವರು ರಚಿಸಿದ ಕೃತಿಗಳಲ್ಲಿ ಅವರ ವಿದ್ವತ್ಪೂರ್ಣ ಪಾಂಡಿತ್ಯಗಳ ಅನುಭಾವ ಕಾಣಸಿಗುತ್ತದೆ. ಕೃತಿಗಳಲ್ಲಿ ಅವರು ಅದರ ರಚನೆಯ ರಾಗದ ಹೆಸರನ್ನು ಸಹಾ ಅತ್ಯಂತ ಅರ್ಥಪೂರ್ಣವಾಗಿ ಹೊಂದಿಸಿರುವುದೂ ಕೂಡ ಒಂದು ವಿಶೇಷತೆಯೇ.
ದೀಕ್ಷಿತರು ಅನೇಕ ಚಿಕ್ಕ ಚಿಕ್ಕ ಕೃತಿಗಳನ್ನು ಸಮಷ್ಠಿ ಚರಣಗಳನ್ನೊಳಗೊಂಡಂತೆ ಅದ್ಭುತವಾಗಿ ರಚಿಸಿದ್ದಾರೆ. ದೀಕ್ಷಿತರು ತಮ್ಮ ಕ್ಷೇತ್ರ ಕೃತಿಗಳಲ್ಲಿ ಆಯಾ ಕ್ಷೇತ್ರದ ವಿವರಣೆ, ವಿಶೇಷತೆಯನ್ನು ಅಳವಡಿಸಿದ್ದಾರೆ. ನವಗ್ರಹ ಕೃತಿಗಳಲ್ಲಿ ಗ್ರಹಗಳ ಪರಿಚಯ ಮತ್ತು ಸ್ಥಾನಗಳನ್ನು ವಿವರಿಸಿದ್ದಾರೆ. ಮೋಕ್ಷ ಸಾಧನೆಗೆ ಕರ್ಮ, ಭಕ್ತಿ ಮತ್ತು ಜ್ಞಾನ ಮಾರ್ಗಗಳನ್ನು ಅನುಸರಿಸಬೇಕೆಂಬುದನ್ನು ನಮಗೆ ತೋರಿಸಿಕೊಟ್ಟಿದ್ದಾರೆ.
ದೀಕ್ಷಿತರು ಶ್ರೀ ಶಂಕರಾಚಾರ್ಯರ ವೇದಾಂತ ಸೂತ್ರಗಳಿಗೆ ಅನುಗುಣವಾಗಿ ಇಡೀ ವಿಶ್ವವು ಮಾಯೆಯಿಂದ ಸೃಷ್ಟಿಸಲ್ಪಟ್ಟಿದೆ, ಪರಮಾತ್ಮನ ಸಾಕ್ಷಾತ್ಕಾರ ಆಂತರಿಕವಾಗಿ ನಮ್ಮಲ್ಲಿ ಉದಿಸಬೇಕಾದರೆ, ಮಾಯೆಯನ್ನು ಜಯಿಸಬೇಕೆಂದು ತಿಳಿಸುತ್ತಾರೆ. ದೀಕ್ಷಿತರು ಎಲ್ಲಾ 72 ಮೇಳಕರ್ತ ರಾಗಗಳಲ್ಲೂ ಕೃತಿರಚನೆ ಮಾಡಿದ್ದಾರೆಂಬುದು ಗಮನಾರ್ಹ ಸಂಗತಿ.
ದೀಕ್ಷಿತರು ತಮ್ಮ ಜೀವಿತದ ಕೊನೆಯ ಉಸಿರಿರುವವರೆಗೂ ಪರಮಾತ್ಮನ ಧ್ಯಾನದಲ್ಲಿ ನಿರತರಾಗಿದ್ದವರು. ಬಹಳ ಮೃದು ಹೃದಯಿಗಳೂ, ಕರುಣಾಮಯಿಯೂ ಆಗಿದ್ದರು. ತಮ್ಮ ಶಿಷ್ಯನೊಬ್ಬನ ಹೊಟ್ಟೆ ಶೂಲೆಯನ್ನು ಪರಿಹರಿಸುವ ಸಲುವಾಗಿ, ಅವನಿಗೆ ಗುರು ಮತ್ತು ಶನಿ ಗ್ರಹಗಳನ್ನು ಬಲ ಪಡಿಸುವುದಕ್ಕೋಸ್ಕರವೇ ಅವರು ಗುರು, ಶನಿ ಗ್ರಹಗಳನ್ನು ಕುರಿತು ಕೃತಿ ರಚಿಸಿದರಂತೆ. ಅನ್ಯಕುಲದವನಾದ ತಾನು ನವಗ್ರಹ ಶಾಂತಿ ಮಾಡುವುದಾದರೂ ಹೇಗೆ ಎಂದು ವ್ಯತಿಥನಾಗಿದ್ದ ಆತನಿಗೆ ಸ್ವಯಂ ಈ ಕೃತಿಗಳನ್ನು ಬೋಧಿಸಿದರಂತೆ. ಮಂತ್ರಗಳಿಂದ ಹೇಗೆ ನಾವು ದೇವತೆಗಳನ್ನು ಒಲಿಸಿಕೊಂಡು ಗ್ರಹಗಳ ಶಾಂತಿ ಮಾಡಿಕೊಳ್ಳಬಹುದೋ ಅಂತೆಯೇ ಅದನ್ನು ಸಂಗೀತ ಮುಖೇನ ಕೂಡಾ ಮಾಡಲು ಸಾಧ್ಯವೆಂಬುದನ್ನು ಶಿಷ್ಯನಿಗೆ ತಿಳಿಸಿಕೊಟ್ಟರಂತೆ. ತನ್ಮಯನಾಗಿ, ಭಕ್ತಿಯಿಂದ ಅಭ್ಯಸಿಸಿದ ಶಿಷ್ಯನ ಉದರ ಬೇನೆ ವಾಸಿಯಾಗಿತ್ತು. ಹೀಗೆ ದೀಕ್ಷಿತರು ಮಂತ್ರಾನುಷ್ಠಾನದ ಫಲವನ್ನು ನಾದೋಪಾಸನೆಯಿಂದ ಮಾಡಬಹುದೆಂದು ಜ್ಯೋತಿಷ್ಯ ಶಾಸ್ತ್ರದ ವಿಶೇಷಗಳನ್ನೆಲ್ಲಾ ಒಟ್ಟಾಗಿಸಿ, ನವಗ್ರಹ ಕೃತಿಗಳನ್ನು ರಚಿಸಿದರು. ಈ ಕೃತಿಗಳು ಸಂಗೀತ ಲೋಕದಲ್ಲೇ ಅತ್ಯಂತ ಶ್ರೇಷ್ಠ ಕೃತಿಗಳೆನಿಸಿವೆ.
ಶ್ರೀ ಚಕ್ರ ಉಪಾಸನೆಯಲ್ಲಿ ದೇವಿಯನ್ನು ನಾನಾ ವಿಧವಾಗಿ ಅತ್ಯಂತ ಭಕ್ತಿಯಿಂದ ಆರಾಧಿಸುವ ಅನುಷ್ಟಾನಗಳಿವೆ. ಇದರಲ್ಲಿ ಒಂಭತ್ತು ಆವರಣಗಳ ಪೂಜೆಯಿದೆ. ಪ್ರತಿಯೊಂದು ವೃತ್ತದಲ್ಲೂ ಪೂಜೆಯ ವಿಧಾನಕ್ಕೆ ಬೇರೆಯದೇ ಆದ ಹೆಸರೂ ಮತ್ತು ಶಕ್ತಿಯೂ ಇದೆ. ಇಲ್ಲಿರುವ ಒಂಭತ್ತು ಚಕ್ರಗಳನ್ನೂ ಪೂಜಿಸಿದ ನಂತರವೇ ದೇವಿಯ ಅನುಗ್ರಹ ನಮಗೆ ಲಭಿಸುವುದು. ಈ ನವ ಆವರಣಗಳಿಂದ ಕೂಡಿದ “ಶ್ರೀಚಕ್ರ”ದ ಉಪಾಸನೆಯೇ “ಶ್ರೀವಿದ್ಯೆ”. ಆ ಲಲಿತಾಂಬಿಕೆ, ಜಗನ್ಮಾತೆ, ಪರಾಶಕ್ತಿ, ಬಿಂದು ಸ್ವರೂಪಳಾಗಿ ಶ್ರೀ ಚಕ್ರದಲ್ಲಿ ಕುಳಿತಿದ್ದಾಳೆ. ಸಾಟಿಯಿಲ್ಲದ ಅತ್ಯಂತ ಉತ್ಕೃಷ್ಟವಾದ ನವಾವರಣ ಕೃತಿಗಳಲ್ಲಿ ದೀಕ್ಷಿತರು ದೇವಿಯ ಆರಾಧನೆಯನ್ನೂ, ದೇವಿಯ ಸೌಂದರ್ಯವನ್ನೂ ಮನೋಹರವಾಗಿ ವರ್ಣಿಸಿದ್ದಾರೆ.
ಈ ಪರಿಯಾಗಿ ಮುತ್ತುಸ್ವಾಮಿ ದೀಕ್ಷಿತರು ಅಸಂಖ್ಯಾತ ಕೀರ್ತನೆಗಳನ್ನು ರಚಿಸಿದ್ದಾರೆ. ಇದುವರೆಗೆ ಗುರುತಿಸಲಾಗಿರುವ ಅವರ ಕೃತಿಗಳ ಸಂಖ್ಯೆಯೇ ಐದು ನೂರಕ್ಕೂ ಹೆಚ್ಚಿನದು. ಇಂತಹ ಮಹಾನ್ ತಪಸ್ವಿಯ ಕೃತಿಗಳನ್ನು ಕುರಿತು ನಮಗೆ ತಿಳಿದಿದೆ ಎಂದು ಹೇಳುವುದು ಬಾವಿಯಲ್ಲಿರುವ ಕಪ್ಪೆ ತಾನಿರುವುದೇ ಪ್ರಪಂಚ ಎಂದು ಬಣ್ಣಿಸಿದಂತಾದೀತು. ನಮ್ಮ ಕಿವಿಯ ಮೇಲೆ ಬಿದ್ದಿರುವ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳನ್ನು ಗುರುತಿಸುವುದಾದರೆ ಏಕದಂತಂ ಭಜೇಹಂ, ಸಿದ್ದಿ ವಿನಾಯಕಂ ಅನಿಶಂ, ಶ್ರೀಮಹಾ ಗಣಪತಿರವತುಮಾಂ, ವಾತಾಪಿ ಗಣಪತಿಂ, ಸುಬ್ರಮಣ್ಯೇನ ರಕ್ಷಿತೋಹಂ, ಸ್ವಾಮಿನಾಥ ಪರಿಪಾಲಯಾ ಸುಮಾಂ, ಸೂರ್ಯ ಮೂರ್ತೆ ಸುಂದರ ಛಾಯಾಧಿಪತೆ, ಕಾಮಕೋಟಿ ಪೀಠವಾಸಿನಿ ಸೌಗಂಧಿಂ, ಕಂಜದಳಾಯತಾಕ್ಷಿ ಕಾಮಾಕ್ಷಿ, ಶಿವಕಾಮೇಶ್ವರಿಂ ಚಿಂತಯೇಹಂ, ಶ್ರೀವಿಶ್ವನಾಥಂ ಭಜೇಹಂ, ಮಾಮವ ಪಟ್ಟಾಭಿರಾಮ, ಶ್ರೀ ರಾಮಂ ರವಿ ಕುಲಾಬ್ಧಿ ಸೋಮಂ, ಶ್ರೀರಂಗಪುರವಿಹಾರ, ಶ್ರೀವರಲಕ್ಷ್ಮಿ ನಮಸ್ತುಭ್ಯಂ, ಶ್ರೀ ಸರಸ್ವತಿ ನಮಸ್ತೋತೆ, ವೀಣಾ ಪುಸ್ತಕಧಾರಿಣಿಂ ಆಶ್ರಯೇ, ಸರಸಿಜನಾಭ ಸೋದರಿ ಶಂಕರಿ ಮುಂತಾದವುಗಳನ್ನು ಭಕ್ತಿಯಿಂದ ನೆನೆಯುವಂತಾಗುತ್ತದೆ.
ಆಶ್ವೀಜ ಬಹುಳ ಚತುರ್ದಶಿ – ನರಕ ಚತುರ್ದಶಿ ದೀಪಾವಳಿ ಪರ್ವ ದಿನವಾದ್ದರಿಂದ ದೀಕ್ಷಿತರು (ಅಕ್ಟೋಬರ್ 21, 1835) ಆ ಜಗನ್ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಸಾಯಂಕಾಲ ತಮ್ಮ ಎಲ್ಲಾ ಶಿಷ್ಯರನ್ನೂ ಕರೆದು ತಾವೇ ರಚಿಸಿದ ಪೂರ್ವಿ ಕಲ್ಯಾಣಿ ರಾಗದ “ಮೀನಾಕ್ಷಿ ಮುದಂ ದೇಹಿ” ಕೃತಿಯನ್ನು ವೀಣೆಯಲ್ಲಿ ನುಡಿಸುತ್ತಾ, ಎಲ್ಲರಿಗೂ ಹಾಡಲು ಹೇಳುತ್ತಾರೆ. “ಮೀನಲೋಚನಿ ಪಾಶಮೋಚನಿ” ಎಂಬ ಅನುಪಲ್ಲವಿಯ ಸಾಹಿತ್ಯವನ್ನು ಪದೇ ಪದೇ ಹಾಡಿಸುತ್ತಾ, ವೀಣೆ ಬದಿಗಿಟ್ಟು ತಂಬೂರಿಯ ನಾದ ಕೇಳುತ್ತಾ, ಆ ಜಗನ್ಮಾತೆಯ ಮಡಿಲಿನಲ್ಲಿ ಒರಗಿ ಬಿಡುತ್ತಾರೆ ತಾಯಿಯಲ್ಲಿ ಅವರ ಆತ್ಮ ಲೀನವಾಗಿ ಬಿಡುತ್ತದೆ. ನಮ್ಮ ಸಂಗೀತ ಪ್ರಪಂಚದಲ್ಲಿ ದೀಪಾವಳಿಯನ್ನು “ದೀಕ್ಷಿತರ ದಿನ” ಎಂದೇ ಆಚರಿಸಲಾಗುತ್ತಿದೆ.
ಈ ಮಹಾನ್ ಸಂಗೀತ ತಪಸ್ವಿಗಳ ನೆನಪಿಗೆ ನಮ್ಮ ಭಕ್ತಿಪೂರ್ಣನಮನ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸತೀಶ್ ಆಚಾರ್ಯ

Thu Mar 24 , 2022
  ಸತೀಶ್ ಆಚಾರ್ಯ ನಮ್ಮ ನಾಡಿನ ಉತ್ತಮ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರು. ಸತೀಶ್ ಆಚಾರ್ಯರು ಅವರ ಹುಟ್ಟಿದ ಹಬ್ಬ ಮಾರ್ಚ್ 24ರಂದು. ಶಾಲೆಯ ದಿನದಲ್ಲೇ ಅಮರಚಿತ್ರಕಥಾದಂತಹ ವಿವಿಧ ಚಿತ್ರರೂಪಕಗಳಿಗೆ ಮನಸೋತಿದ್ದವರು ಸತೀಶ್. ನಮ್ಮ ಕನ್ನಡದ ನಟ ವಿಷ್ಣುವರ್ಧನರು ಅವರಿಗೆ ಪ್ರಿಯವಾದ ಹೀರೋ. ಒಮ್ಮೆ ಶಾಲೆಯಲ್ಲಿ ಅವರ ಚಿತ್ರವೊಂದನ್ನು ಕಾರ್ಬನ್ ಕಾಗದದಲ್ಲಿ ಟ್ರೇಸ್ ಮಾಡಿ ಗೆಳೆಯರ ಮೇಲೆ ಮೋಡಿ ಮಾಡಿದ್ದರು. ಮತ್ತೊಬ್ಬರ ಹೃದಯದಲ್ಲಿ ನಾವು ಉಕ್ಕಿಸುವ ಆಸ್ಥೆ, ಬೆರಗುಗಳು ನಮಗರಿವಿಲ್ಲದಂತೆ ನಮ್ಮೊಳಗೊಂದು ವಿಶಿಷ್ಟ […]

Advertisement

Wordpress Social Share Plugin powered by Ultimatelysocial