Nuh Violence: ಹರಿಯಾಣ ಹಿಂಸೆಗೆ ಪ್ರಚೋದನೆ; ಕಾಂಗ್ರೆಸ್‌ ಶಾಸಕ ಮಾಮನ್‌ ಖಾನ್‌ ಬಂಧನ

ಚಂಡೀಗಢ: ಹರಿಯಾಣದ ನುಹ್‌ ಜಿಲ್ಲೆಯಲ್ಲಿ ಜುಲೈ 31ರಂದು ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾಂಗ್ರೆಸ್‌ ಶಾಸಕ ಮಾಮನ್‌ ಖಾನ್‌ ಅವರನ್ನು ಬಂಧಿಸಿದ್ದಾರೆ. ನುಹ್‌ ಹಿಂಸಾಚಾರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್‌ ಶೇರ್‌ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದು, ಇಂದು (ಸೆಪ್ಟೆಂಬರ್‌ 15) ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.

 

ಹಿಂಸಾಚಾರ ನಡೆದ ದಿನ ಮಾಮನ್‌ ಖಾನ್‌ ಅವರು ನುಹ್‌ನಲ್ಲೇ ಇದ್ದರು. ಇವರು ಹಿಂಸಾಚಾರಕ್ಕೆ ಪ್ರಚೋದನೆ ನಡೆಸಿದ್ದಾರೆ ಎಂಬ ಆರೋಪವೂ ಇದೆ. ಹಾಗಾಗಿ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲು ಮಾಡಿಕೊಂಡಿರುವ ಎಫ್‌ಐಆರ್‌ನಲ್ಲಿ ಮಾಮನ್‌ ಖಾನ್‌ ಹೆಸರೂ ಇದೆ. ಅಲ್ಲದೆ, ಇದಕ್ಕೂ ಮೊದಲು ಎರಡು ಬಾರಿ ವಿಚಾರಣೆಗೆ ಹಾಜರಾಗುವಂತೆ ಮಾಮನ್‌ ಖಾನ್‌ ಅವರಿಗೆ ಸಮನ್ಸ್‌ ಜಾರಿ ಮಾಡಿದ್ದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ

 

ಪೊಲೀಸರ ಎಫ್‌ಐಆರ್‌ನಲ್ಲಿ ತಮ್ಮ ಹೆಸರು ಇದೆ ಎಂಬುದು ಗೊತ್ತಾಗುತ್ತಲೇ ಬಂಧನದಿಂದ ರಕ್ಷಣೆ ಕೋರಿ ಮಾಮನ್‌ ಖಾನ್‌ ಅವರು ಪಂಜಾಬ್‌-ಹರಿಯಾಣ ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ, ಇವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್‌ 19ರಂದು ನಡೆಸಲಾಗುವುದು ಎಂದು ಹೈಕೋರ್ಟ್‌ ತಿಳಿಸಿದೆ. ಅಲ್ಲದೆ, ಮಾಮನ್‌ ಖಾನ್‌ ಅವರ ಪಿತೂರಿ ಕುರಿತು ಸಮರ್ಪಕ ದಾಖಲೆ ಇವೆ, ಫೋನ್‌ ಕರೆಗಳ ರೆಕಾರ್ಡಿಂಗ್ಸ್‌ ಇವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದಾದ ಬಳಿಕ ಅವರನ್ನು ಬಂಧಿಸಿದ್ದಾರೆ. ಮಾಮನ್‌ ಖಾನ್‌ ಫಿರೋಜ್‌ಪುರ ಝಿರ್ಕಾ ಕ್ಷೇತ್ರದ ಕಾಂಗ್ರೆಸ್‌ ಶಾಸಕರಾಗಿದ್ದಾರೆ.

ಜುಲೈ 31ರಂದು ಹಿಂದುಗಳು ಮೆರವಣಿಗೆ ಮಾಡುವಾಗ ಕಲ್ಲು ತೂರಾಟ ನಡೆಸಲಾಗಿದೆ. ಇದರಿಂದ ಭುಗಿಲೆದ್ದ ಹಿಂಸಾಚಾರವು ಬೃಹತ್‌ ಗಲಭೆಯಾಗಿ ಮಾರ್ಪಟ್ಟು ಬೇರೆ ಜಿಲ್ಲೆಗಳಲ್ಲೂ ಹಿಂಸಾಚಾರ ನಡೆದಿತ್ತು. ಐವರು ಮೃತಪಟ್ಟಿದ್ದರು. ಹಿಂಸಾಚಾರದಲ್ಲಿ ಭಾಗಿಯಾದ 300ಕ್ಕೂ ಅಧಿಕ ಜನರ ಮನೆಗಳನ್ನು ಅಕ್ರಮವಾಗಿ ನಿರ್ಮಿಸಿದ ಆರೋಪದಲ್ಲಿ ನೆಲಸಮಗೊಳಿಸಲಾಗಿದೆ. ಹಾಗೆಯೇ, 25 ರೋಹಿಂಗ್ಯಾ ಮುಸ್ಲಿಮರನ್ನೂ ಬಂಧಿಸಲಾಗಿದೆ. ಹಲವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಹಿಂಸಾಚಾರದ ಕುರಿತು ನಕಲಿ ಸುದ್ದಿ ಹರಡಿದ ಆರೋಪದಲ್ಲಿ ಸುದರ್ಶನ್‌ ನ್ಯೂಸ್‌ ಚಾನೆಲ್‌ ರೆಸಿಡೆಂಟ್ ಎಡಿಟರ್‌ (ಸ್ಥಾನಿಕ ಸಂಪಾದಕ) ಮುಕೇಶ್‌ ಕುಮಾರ್‌ ಅವರನ್ನೂ ಬಂಧಿಸಲಾಗಿದೆ.

 

Please follow and like us:

tmadmin

Leave a Reply

Your email address will not be published. Required fields are marked *

Next Post

Scrub Typhus: ಒಡಿಶಾದಲ್ಲಿ 'ಸ್ಕ್ರಬ್ ಟೈಫಸ್' ಜ್ವರ; 6 ಮಂದಿ ಸಾವು

Fri Sep 15 , 2023
ಭುವನೇಶ್ವರ: ಒಡಿಶಾದಲ್ಲಿ ‘ಸ್ಕ್ರಬ್ ಟೈಫಸ್’ ಎಂಬ ಸೋಂಕು ಜ್ವರ ಕಾಣಿಸಿಕೊಂಡಿದ್ದು, ಈವರೆಗೆ ಆರು ಮಂದಿ ಮೃತಪಟ್ಟಿದ್ದಾರೆ. ಬರ್ಗಢ್ ಜಿಲ್ಲೆಯಲ್ಲಿ ಐದು ಮಂದಿ ಮತ್ತು ಸುಂದರ್‌ಗಢ್ ಜಿಲ್ಲೆಯಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಸುಂದರ್‌ಗಢ್ ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 132 ಸ್ಕ್ರಬ್ ಟೈಫಸ್ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಬಹುತೇಕ ಮಂದಿ ಗುಣಮುಖರಾಗಿದ್ದಾರೆ ಎಂದು ಮುಖ್ಯ ಜಿಲ್ಲಾ ವೈದ್ಯಕೀಯ ಹಾಗೂ ಸಾರ್ವಜನಿಕ ಆರೋಗ್ಯ ಅಧಿಕಾರಿ ಕನ್ಹು ಚರಣ್ ನಾಯಕ್ ತಿಳಿಸಿದ್ದಾರೆ. […]

Advertisement

Wordpress Social Share Plugin powered by Ultimatelysocial