ಎಂ. ವಿ. ವಾಸುದೇವರಾವ್| On the birth anniversary of great actor M. V. Vasudeva Rao |

 
ಎಂ. ವಿ. ವಾಸುದೇವರಾವ್ ಅವರು ಚೋಮನದುಡಿ ವಾಸುದೇವರಾವ್ ಎಂದೇ ಪ್ರಖ್ಯಾತರು. ಅವರು ರಂಗಭೂಮಿ ಮತ್ತು ಚಿತ್ರರಂಗದ ನಿಷ್ಠಾವಂತ ಕಲಾವಿದರಾಗಿ ಬದುಕು ನಡೆಸಿದವರು. ಇಂದು ಅವರ ಸಂಸ್ಮರಣಾ ದಿನ.
ಮೂಡಬಿದರೆ ವೆಂಕಟರಾವ್ ವಾಸುದೇವರಾವ್ 1921ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ ಜನಿಸಿದರು.
ಶಿಕ್ಷಕವೃತ್ತಿಯಲ್ಲಿದ್ದ ತಂದೆ ಬಿ.ವೆಂಕಟರಾವ್ ಅವರಿಗೆ ಕವಿತೆ, ನಾಟಕ ಹಾಗೂ ಸಂಗೀತದಲ್ಲಿ ಅಪಾರ ಆಸಕ್ತಿಯಿತ್ತು. ವಾಸುದೇವರಾವ್ ತಮ್ಮ ತಂದೆಯವರಿಂದ ರಂಗಭೂಮಿಯಲ್ಲಿ ಆಸಕ್ತಿ ಬೆಳೆಸಿಕೊಂಡರು.
ವಾಸುದೇವರಾವ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನಲ್ಲಿ ಶ್ರೀನಿವಾಸ ಅಯ್ಯಂಗಾರ್ ನಾಟಕ ಕಂಪನಿಗೆ ಬಾಲನಟನಾಗಿ ಸೇರುವ ಮೂಲಕ ರಂಗಭೂಮಿ ಪ್ರವೇಶಿಸಿದ ಒಂದೆರಡು ವರ್ಷಗಳಲ್ಲಿ ಗುಬ್ಬಿ ವೀರಣ್ಣ ನವರ ನಾಟಕ ಕಂಪನಿಯನ್ನು ಸೇರಿಕೊಂಡರು. ಆಗ ಇವರಿಗೆ ಎಂಟು ವರ್ಷ ವಯಸ್ಸು. ಅಂದಿನಿಂದ ಕೊನೆಯವರೆಗೂ ಇದೇ ಕಂಪನಿಯ ನಟರಾಗಿದ್ದರು. ಇಲ್ಲಿ ಸಹೋದ್ಯೋಗಿಗಳಿಗೆ ಇವರು ಹೆಚ್ಚಾಗಿ ಪರಿಚಿತರಾಗಿದ್ದದ್ದು, ಬೇಬಿ, ಎಂಬ ಅಡ್ಡ ಹೆಸರಿನಿಂದ. ಇವರ ಭಾವಾಭಿನಯ ಕೌಶಲ್ಯಪೂರ್ಣವಾದದ್ದು. ಕಂಠಶ್ರೀ ಶ್ರೀಮಂತವಾಗಿದ್ದ ಇವರು ಯಾವ ಪಾತ್ರವನ್ನೂ ಲೀಲಾಜಾಲವಾಗಿ ನಿರ್ವಹಿಸುತ್ತಿದ್ದರು. ಕುರುಕ್ಷೇತ್ರದಲ್ಲಿ ಅಭಿಮನ್ಯು, ಭೀಷ್ಮ ಮೊದಲಾದ ಪಾತ್ರಗಳನ್ನು ವಹಿಸುತ್ತಿದ್ದರು. ಪರಶುರಾಮನ ಪಾತ್ರ ಇವರಿಗೆ ಅಪಾರಕೀರ್ತಿ ತಂದುಕೊಟ್ಟಿತು. ಬಿ.ವಿ.ಕಾರಂತ್, ಜಿ.ವಿ.ಅಯ್ಯರ್, ಬಾಲಕೃಷ್ಣ, ರಾಜಕುಮಾರ್ ಮೊದಲಾದವರು ಗುಬ್ಬಿ ಕಂಪನಿಯಲ್ಲಿ ಇವರ ಸಹನಟರಾಗಿದ್ದರು.
ರಂಗಭೂಮಿಯಲ್ಲಿ ಸುಮಾರು ಐದು ದಶಕಗಳಷ್ಟು ದೀರ್ಘಕಾಲ ಅನುಭವವಿದ್ದ ವಾಸುದೇವರಾಯರಿಗೆ ಅಂತಾರಾಷ್ಟ್ರೀಯ ಕೀರ್ತಿಗೆ ಪಾತ್ರವಾಗುವ ಸಂದರ್ಭ ಒದಗಿಬಂದದ್ದು ಚೋಮನ ದುಡಿ (1975) ಚಿತ್ರದಲ್ಲಿ ನಟಿಸುವ ಮೂಲಕ. ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿಯನ್ನು ಬಿ.ವಿ.ಕಾರಂತರು ಸಿನಿಮಾ ಮಾಧ್ಯಮಕ್ಕೆ ಪರಿವರ್ತಿಸಿದಾಗ ಒಮ್ಮೆ ತಮ್ಮ ಸ್ನೇಹಿತರಾಗಿದ್ದ ಇವರಿಗೆ ಚೋಮನ ಪಾತ್ರ ನೀಡಿದರು. ಅಪಾರ ತಾಳ್ಮೆ ಹಾಗೂ ಶ್ರದ್ಧೆಯಿಂದ ಪಾತ್ರದ ಆಳ ಆಯಾಮಗಳನ್ನು ಅನುಭವಿಸಿದ ರಾಯರು ಅದನ್ನು ತಾದಾತ್ಮ್ಯದಿಂದ ಅಭಿನಯಿಸಿ ಮೊದಲ ಚಿತ್ರದಲ್ಲೆ ತಮ್ಮ ಅಭಿನಯ ಪ್ರತಿಭೆಯನ್ನು ಸಾರಿದರು. ಈ ಚಿತ್ರದಲ್ಲಿನ ಇವರ ಅಭಿನಯಕ್ಕಾಗಿ 1975ರಲ್ಲಿ ಇವರಿಗೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿತು. ರಾಷ್ಟ್ರಪ್ರಶಸ್ತಿಯ ಜೊತೆಗೆ 1975ರ ಕರ್ನಾಟಕ ರಾಜ್ಯಪ್ರಶಸ್ತಿಯೂ ಇವರ ಪಾಲಿನದಾಯಿತು. ಮುಂಬಯಿ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಯೂ ಇವರ ಅಭಿನಯ ಮೆಚ್ಚುಗೆಗೆ ಪಾತ್ರವಾಯಿತು. ಈ ಚಿತ್ರೋತ್ಸವದಲ್ಲಿ ಇವರೂ ಭಾಗವಹಿಸಿದ್ದರು.
ಮುಂದೆ ವಾಸುದೇವರಾವ್ ಅನೇಕ ಚಿತ್ರಗಳಲ್ಲಿ ಅಭಿನಯಿಸಿದರು. ‘ಹುಲಿ ಬಂತು ಹುಲಿ’ (1978) ಚಿತ್ರದಲ್ಲಿ ಜೇನುಕುರುಬರ ಮುಖ್ಯನ ಪಾತ್ರದಲ್ಲಿ ಅಭಿನಯಿಸಿದ್ದರು. ‘ದೇವರೇ ದಿಕ್ಕು’ ಇವರ ಇನ್ನೊಂದು ಕನ್ನಡ ಚಿತ್ರ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಒಂದು ಊರಿನ ಕಥೆ’ (1978) ಚಿತ್ರದಲ್ಲೂ ಇವರು ಅತ್ಯುತ್ತಮವಾಗಿ ಅಭಿನಯಿಸಿದ್ದರು. ಮೃಣಾಲ್ ಸೇನ್ ನಿರ್ದೇಶಿಸಿದ ‘ಒಕ ಊರಿ ಕಥಾ’ (ಪ್ರೇಮಚಂದರ ಕಫನ್ ಕಥೆಯಾಧಾರಿತ) ತೆಲುಗು ಚಿತ್ರದ ಮೂಲಕ ಅನ್ಯಭಾಷಾ ಚಿತ್ರರಂಗದಲ್ಲೂ ಕಾಲಿಟ್ಟಿದ್ದರು. ಶ್ಯಾಂ ಬೆನೆಗಲ್ ಅವರ ‘ಕೊಂಡೂರ’, ‘ದಂಗೆಯೆದ್ದ ಮಕ್ಕಳು’, ‘ಕಳಸಾಪುರದ ಹುಡುಗರು, ‘ದೊಂಬರ ಕೃಷ್ಣ’, ‘ಅಪರಿಚಿತ’, ‘ದ್ವೀಪ’, ಮಣಿರತ್ನಂ ಅವರ ‘ನಾಯಗನ್’ ಮತ್ತು ‘ಬಾಂಬೆ’ ಮೊದಲಾದವು ಅವರು ಅಭಿನಯಿಸಿದ ಇನ್ನಿತರ ಪ್ರಮುಖ ಚಿತ್ರಗಳು. ಕಿರುತೆರೆಯ ಧಾರಾವಾಹಿಗಳಲ್ಲೂ ಅವರು ಅಭಿನಯಿಸಿದ್ದರು.
ಸರಳ ಸಜ್ಜನಿಕೆಯ ವಾಸುದೇವರಾಯರು 2002ರ ಮಾರ್ಚ್ 22ರಂದು ನಿಧನರಾದರು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

IPL 2022: ಕೊಹ್ಲಿ, ಡು ಪ್ಲೆಸಿಸ್, ಮ್ಯಾಕ್ಸ್ವೆಲ್ ಹೆಡ್ಲೈನ್ RCB ಯ ನೀರಸ ಬ್ಯಾಟಿಂಗ್ ಲೈನ್ ,ಕಾರ್ತಿಕ್ ಮತ್ತು ಹಸರಂಗಕ್ಕೆ ಅವಕಾಶ!

Fri Mar 25 , 2022
ಅವರ ಅನುಪಸ್ಥಿತಿಯಲ್ಲಿ, ಫ್ರಾಂಚೈಸಿಯು ಇನ್ನೊಬ್ಬ ಮಾಜಿ ಪ್ರೊಟೀಸ್ ಕ್ರಿಕೆಟಿಗ ಫಾಫ್ ಡು ಪ್ಲೆಸಿಸ್‌ಗೆ ಕೆಲಸವನ್ನು ಹಸ್ತಾಂತರಿಸಿದೆ, ಅವರು ಪ್ಯಾಕ್‌ನ ನಾಯಕರೂ ಆಗಿದ್ದಾರೆ. ಅವರು ಹಿಂದಿನ ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಂದ ಹೆಚ್ಚು ಅಗತ್ಯವಿರುವ ಸಹಾಯವನ್ನು ಪಡೆಯುತ್ತಾರೆ. ಆದರೆ ಮೂವರ ಹೊರತಾಗಿ RCB ಹೆಚ್ಚು ಫೈರ್‌ಪವರ್ ಹೊಂದಿದೆಯೇ? ಈ ತುಣುಕಿನಲ್ಲಿ ನಾವು ತಂಡದ SWOT ವಿಶ್ಲೇಷಣೆಯನ್ನು ನೋಡೋಣ… ಕೆಲವು ದೊಡ್ಡ ಹೆಸರುಗಳನ್ನು ಹೊಂದಿದ್ದರೂ, ಬೆಂಗಳೂರು […]

Advertisement

Wordpress Social Share Plugin powered by Ultimatelysocial