ವಿಜಯಾ | On the birthday of great Journalist and writer Dr. Vijaya |

ವಿಜಯಾ ಅವರು ಸಾಮಾಜಿಕ ಅಸಮಾನತೆ, ಶೋಷಣೆ, ದಬ್ಬಾಳಿಕೆ, ಅನ್ಯಾಯಗಳ ವಿರುದ್ಧ ದನಿ ಎತ್ತುವ, ಮಹಿಳೆಯರ ಸಮಸ್ಯೆಗಳು, ಭಾಷಾಚಳವಳಿ ಮುಂತಾದ ಚಳವಳಿಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳುವ ದಿಟ್ಟ ಪರ್ತಕರ್ತೆಯಾಗಿ ಹೆಸರಾಗಿದ್ದಾರೆ.
ವಿಜಯಾರವರು 1942ರ ವರ್ಷದ ಹೋಳಿ ಹುಣ್ಣಿಮೆಯ ದಿನದಂದು ದಾವಣಗೆರೆಯಲ್ಲಿ ಜನಿಸಿದರು (ಸಾಮಾನ್ಯವಾಗಿ ಇದು ಮಾರ್ಚ್ ಮಾಸದಲ್ಲಿ ಬರುತ್ತದೆ). ತಂದೆ ಶಾಮಣ್ಣನವರು ಮತ್ತು ತಾಯಿ ಸರೋಜ ಅವರು. ವಿಜಯಾ ಅವರ ಪ್ರಾರಂಭಿಕ ಶಿಕ್ಷಣ ದಾವಣಗೆರೆ, ಹೊಸ ಪೇಟೆಯ ಅಮರಾವತಿಗಳಲ್ಲಿ ನೆರವೇರಿತು.
ವಿಜಯಾ ಅವರು ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡು, ಹದಿನಾರರ ಹರೆಯದಲ್ಲಿಯೇ ವಿವಾಹಬಂಧನಕ್ಕೊಳಗಾದರೂ ಕುಟುಂಬದ ಕರ್ತವ್ಯಗಳಿಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ, ಅರ್ಥಪೂರ್ಣ ಬದುಕನ್ನು ತಮ್ಮದಾಗಿಸಿಕೊಳ್ಳುವ ಛಲದಿಂದ ಸಾಧನೆಯಲ್ಲಿ ತೊಡಗಿಕೊಂಡು, ಪದವಿ ಮತ್ತು ಡಾಕ್ಟರೇಟ್‌ಗಳನ್ನು ಪಡೆದದ್ದು ವಿವಾಹದ ನಂತರವೇ. ಬಿ.ಎ. ಓದುವ ದಿನಗಳಲ್ಲಿ ಅವರಿಗೆ ಕಿ.ರಂ., ಸಾ.ಶಿ.ಮರುಳಯ್ಯ ಮುಂತಾದ ದಿಗ್ಗಜರು ಗುರುಗಳಾಗಿದ್ದರು. ಹೀಗಾಗಿ ಅವರಲ್ಲಿ ಸಾಹಿತ್ಯಾಸಕ್ತಿ ಮತ್ತು ಬರವಣಿಗೆಯ ಆಸಕ್ತಿಯು ಬೆಳೆದಿತ್ತು. ಇವುಗಳೊಂದಿಗೆ ಕಲಾಮಂದಿರದ ಒಡನಾಟದಿಂದ ರಂಗಭೂಮಿಯ ಸಂಪರ್ಕವೂ ಹೆಚ್ಚಾಗಿತ್ತು. ಪಿಎಚ್.ಡಿ ಸಾಧನೆಗಾಗಿ ವಿಜಯಾ ಅವರು ‘ಶ್ರೀರಂಗರ ನಾಟಕಗಳು: ಒಂದು ಅಧ್ಯಯನ’ ಎಂಬ ಪ್ರೌಢ ಪ್ರಬಂಧ ಮಂಡಿಸಿದ್ದರು. ಈ ನಡುವೆ ಅವರು ಬದುಕಿನ ಅನಿವಾರ್ಯತೆಗಳನ್ನು ನಿರ್ವಹಿಸುವುದಕ್ಕಾಗಿ ಕೆಲವೊಂದು ಕಾಲ ಐ ಟಿ ಐ ಕಾರ್ಖಾನೆಯಲ್ಲಿ ಉದ್ಯೋಗ ನಿರ್ವಹಿಸಿದ್ದೂ ಉಂಟು.
ವಿಜಯಾ ಅವರು ಪತ್ರಕರ್ತೆಯಾಗಿ ವೃತ್ತಿ ಪ್ರಾರಂಭಿಸಿದ್ದು ಪ್ರಜಾಮತ ಪತ್ರಿಕೆಯಲ್ಲಿ. ನಂತರ ಮಲ್ಲಿಗೆ, ತುಷಾರ ಪತ್ರಿಕೆಗಳ ಸಹಾಯಕ ಸಂಪಾದಕತ್ವದ ಜವಾಬ್ದಾರಿ ಹೊತ್ತು ಆ ಪತ್ರಿಕೆಗಳಿಗೆ ವಿಶಿಷ್ಟ ಮೌಲ್ಯ ತಂದುಕೊಟ್ಟರು. ಚಲನಚಿತ್ರ ಸುದ್ದಿಗಳಿಗಷ್ಟೇ ಸೀಮಿತವಾಗಿದ್ದ ‘ರೂಪತಾರ’ ಪತ್ರಿಕೆ ವಿಜಯಾ ಅವರ ಸಂಪಾದಕತ್ವದಲ್ಲಿ ಅನೇಕ ಪ್ರಖ್ಯಾತ ಸಾಹಿತ್ಯಗಳ ಸಾಹಿತ್ಯಕ ವಿಚಾರಗಳನ್ನು ಪ್ರಕಟಿಸಿ ಪತ್ರಿಕೆಗೊಂದು ಸಾಹಿತ್ಯಕ ಮೌಲ್ಯವನ್ನು ತಂದುಕೊಟ್ಟಿತು. ವಿಜಯಾ ಅವರ ಕಾರ್ಯನಿರ್ವಹಣೆಯ ರೂಪತಾರಾ ಪತ್ರಿಕೆಯಲ್ಲಿ ಕೇವಲ ಸಿನಿಮಾ ತಾರೆಗಳು ಮಾತ್ರ ಜನರಿಗೆ ಪರಿಚಿತವಾಗದೆ ಸ್ಟುಡಿಯೋಗಳಲ್ಲಿ ಕಾರ್ಯನಿರ್ವಹಿಸುವ ತಂತ್ರಜ್ಞರಿಂದ ಮೊದಲ್ಗೊಂಡು ಲೈಟ್ ಬಾಯ್ ಅಂತಹ ಕಾರ್ಮಿಕರು ಕೂಡಾ ಹೊರಜಗತ್ತಿಗೆ ಕಾಣುವಂತಾಯಿತು. ವ್ಯಾಪಾರಿ ಮಾಧ್ಯಮದ ಅಲೆಗಳ ಆಚೆಯಲ್ಲಿ ಹವ್ಯಾಸಿ ಹೊಸ ಅಲೆಯ ಚಿತ್ರರಂಗಕ್ಕೆ ಬಂದ ಪ್ರತಿಭೆಗಳಿಗೆ ವಿಜಯಾ ಅವರ ನೇತೃತ್ವದ ಈ ಪತ್ರಿಕೆ ಪೋಷಣೆ ಒದಗಿಸುತ್ತಿತ್ತು. ಅವರು ಉದಯವಾಣಿ ಪತ್ರಿಕೆಯ ಅಂಕಣಗಳಲ್ಲಿ ವಿಶಾಲ ವ್ಯಾಪ್ತಿಯ ಸೃಜನಾತ್ಮಕ ಬರವಣಿಗೆಗಳನ್ನೂ ಓದುಗರಿಗೆ ನೀಡಿದರು.
ಮುಂದೆ ಮೇಲ್ಕಂಡ ಜವಾಬ್ಧಾರಿಗಳಿಂದ ಮುಕ್ತರಾದ ನಂತರದಲ್ಲಿ ಡಾ. ವಿಜಯಾ ಅವರು ‘ಅರಗಿಣಿ’ ಚಲನಚಿತ್ರ ಪತ್ರಿಕೆಯ ಸಾಪ್ರಾಹಿಕದ ಗೌರವ ಸಂಪಾದಕರಾಗಿ, ‘ಬೆಳ್ಳಿಚುಕ್ಕಿ’ ವಿಡಿಯೋ ಮ್ಯಾಗಜಿನ್ ಸಮಾಲೋಚಕ ಸಂಪಾದಕರಾಗಿ, ‘ನಕ್ಷತ್ರಲೋಕ’ ಚಲನಚಿತ್ರ ಸಾಪ್ತಾಹಿಕದ ಸಂಪಾದಕರಾಗಿ, ಪ್ರತಿಷ್ಠಿತ ‘ಕರ್ಮವೀರ’ ಪತ್ರಿಕೆಯ ಸಾಪ್ತಾಹಿಕದ ಸಲಹೆಗಾರರಾಗಿ, ‘ನಮ್ಮಮಾನಸ’ ಮಹಿಳಾ ಪತ್ರಿಕೆಯ ಸಲಹೆಗಾರರಾಗಿ ‘ಹೊಸತು’ ಮಾಸ ಪತ್ರಿಕೆಯ ಸಲಹಾಮಂಡಲಿಯ ಸದಸ್ಯರಾಗಿ – ಹೀಗೆ ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದಲೂ ಪತ್ರಿಕೋದ್ಯಮದಲ್ಲಿ ತಮ್ಮ ಅಪಾರ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ.
ವಿಜಯಾ ಅವರು 1970ರಲ್ಲಿ ಎ.ಎಸ್.ಮೂರ್ತಿ, ಎ.ಎಲ್. ಶ್ರೀನಿವಾಸಮೂರ್ತಿ ಮುಂತಾದವರುಗಳೊಡನೆ ‘ಪಪೆಟ್‌ಲ್ಯಾಂಡ್’ ಸಂಘಟನೆಯ ಸ್ಥಾಪಕರಾಗಿ, ಹೆಣ್ಣು ಮಕ್ಕಳೇ ಬೊಂಬೆಗಳನ್ನು ತಯಾರಿಸಿಕೊಂಡು, ವಿಶಿಷ್ಟ ರೀತಿಯ ಚಲನಗತಿಯನ್ನು ಕೊಟ್ಟು ಹಲವಾರು ಘಟನೆಗಳಿಗೆ ಹಿನ್ನೆಲೆಯಲ್ಲಿ ಧ್ವನಿಮೂಡಿಸಿ, ನಡೆಸಿಕೊಟ್ಟ ಬೊಂಬೆಯಾಟದ ಪ್ರದರ್ಶನಗಳು ಕರ್ನಾಟಕದಾದ್ಯಂತ ಮನೆಮಾತಾಗಿತ್ತು. ಇದಕ್ಕೆ ಅಂದು ಪ್ರಜಾವಾಣಿಯಲ್ಲಿದ್ದ ಟಿ.ಎಸ್.ರಾಮಚಂದ್ರರಾವ್ ಅವರು ಆಸಕ್ತಿ ತೋರಿಸಿದ್ದರಿಂದ ರಾಷ್ಟ್ರಾದ್ಯಂತ ಪ್ರಚಾರ ಸಿಕ್ಕಿ ಚಂದ್ರಶೇಖರ ಕಂಬಾರರ ‘ಕಿಟ್ಟಿಕತೆ’, ಗಿರೀಶ್‌ಕಾರ್ನಾಡರ ‘ಮಾನಿಷಾದ’, ಚಂದ್ರಶೇಖರ ಪಾಟೀಲರ ‘ಟಿಂಗರ ಬುಡ್ಡಣ್ಣ’ ಮತ್ತು ಗಿರಡ್ಡಿ ಗೋವಿಂದ ರಾಜರ ‘ಕನಸು’ಗಳನ್ನು ಬೊಂಬೆಯಾಟಕ್ಕೆ ಅಳವಡಿಸಿದ ಕೀರ್ತಿ ವಿಜಯಾ ಅವರಿಗೆ ಸಲ್ಲುತ್ತದೆ.
ನಾಟಕಗೃಹಗಳಿಗೇ ಸೀಮಿತವಾಗಿದ್ದ ನಾಟಕಗಳನ್ನು ಜನ ಸಾಮಾನ್ಯರ ಬಳಿಗೆ ಕೊಂಡೊಯ್ಯುವಲ್ಲಿ ಕ್ರಾಂತಿಕಾರಕ ಬದಲಾವಣೆ ಎಂಬಂತೆ, ‘ಚಿತ್ರಗೆಳೆಯರ ಗುಂಪನ್ನು’ 1973ರಲ್ಲಿ ಪ್ರಾರಂಭಿಸಿ ಆ ಮೂಲಕ ಬೀದಿ ನಾಟಕಗಳ ಪ್ರದರ್ಶನಗಳನ್ನು ಜಾರಿಗೆ ತಂದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದಾಗ ಅದು ಚಳವಳಿಯ ರೂಪ ಪಡೆದು ಇವರು ರಚಿಸಿದ ತೀಕ್ಷ್ಣ ವಿಡಂಬನೆಯ ನಾಟಕಗಳಾದ ‘ಬಂದರೋ ಬಂದರು’, ‘ಉಳ್ಳವರ ನೆರಳು’, ‘ಕೇಳ್ರಪ್ಪೋ ಕೇಳ್ರೀ…’, ‘ಮುಖವಿಲ್ಲದವರು’, ಕುವೆಂಪುರವರ ‘ಧನ್ವಂತರಿ ಚಿಕಿತ್ಸೆ’ (ರೂಪಾಂತರ) ನಾಟಕಗಳು ರಾಜ್ಯಾದ್ಯಂತ ಪ್ರದರ್ಶನಗೊಂಡು ಯಶಸ್ವಿಯಾಗುವುದರ ಜೊತೆಗೆ ಪುಸ್ತಕರೂಪದಲ್ಲಿಯೂ ಪ್ರಕಟಗೊಂಡಿದ್ದವು.
ವಿಜಯಾ ಅವರ ಮತ್ತೊಂದು ಸಾಹಸದ ಕೆಲಸವೆಂದರೆ ಕಲೆಗಾಗಿಯೇ ಪ್ರಾರಂಭಿಸಿದ ಒಂದು ಮಹತ್ವದ ಪತ್ರಿಕೆ. ಕಲೆಯ ಎಲ್ಲ ಕ್ಷೇತ್ರಗಳು, ಇತರ ಶಾಸ್ತ್ರಗಳು ಒಟ್ಟಾಗಿ ಕೆಲಸಮಾಡುವ ಪ್ರಕ್ರಿಯೆಯ ಶೋಧ ಮತ್ತು ಅವುಗಳನ್ನು ಅನುಭವಿಸುವ, ಅರ್ಥೈಸುವ ಮಾರ್ಗಗಳನ್ನು ಕಂಡುಕೊಳ್ಳುವ ಉದ್ದೇಶದಿಂದ 1993ರ ನವಂಬರ್‌ನಲ್ಲಿ ದ್ವೈಮಾಸಿಕವಾಗಿ ಪ್ರಾರಂಭಿಸಿದ ‘ಸಂಕುಲ’ ಪತ್ರಿಕೆಯು ಆಯಾಯ ಕ್ಷೇತ್ರದ ವಿದ್ವಾಂಸರುಗಳ ಸಲಹೆ, ಸಹಕಾರಗಳಿಂದ ಹಲವಾರು ಆಕರ ವಿಷಯಗಳ ಸಮೃದ್ಧ ಮಾಹಿತಿಯ ಪ್ರೌಢಲೇಖನಗಳಿಂದ ಕೂಡಿದ್ದುದಾಗಿತ್ತು. ಕಲೆಗಾಗಿಯೇ ಮೀಸಲಾಗಿದ್ದ ಈ ಪತ್ರಿಕೆಯು ಐದು ವರ್ಷಗಳ ನಂತರ ಕಾರಣಾಂತರದಿಂದ ನಿಂತು ಹೋದದ್ದು ಕಲಾಪ್ರಿಯರಿಗಾದ ನಷ್ಟವೆಂದರೆ ತಪ್ಪಾಗಲಾರದು.
ಹಲವಾರು ಸಂಘ ಸಂಸ್ಥೆಗಳೊಡನೆ ಸಕ್ರಿಯ ಒಡನಾಟ ಹೊಂದಿರುವ ವಿಜಯಾರವರು ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಕಾರ್ಯದರ್ಶಿಗಳಾಗಿ, ಅಧ್ಯಕ್ಷರಾಗಿ; ಕಲಾಮಂದಿರ ಕಲಾಶಾಲೆ, ಸುಚಿತ್ರ ಫಿಲಂ ಅಕಾಡಮಿ ಮುಂತಾದವುಗಳ ಉಪಾಧ್ಯಕ್ಷರಾಗಿ, ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಿತಿ, ರಾಷ್ಟ್ರೀಯ ಚಲನಚಿತ್ರ ತೀರ್ಪುಗಾರರ ಮಂಡಲಿ, ಕೇಂದ್ರ ಸಾಹಿತ್ಯ ಅಕಾಡಮಿ ಸಲಹಾಮಂಡಲಿ, ಕರ್ನಾಟಕ ಸರಕಾರದ ಪುಟ್ಟಣ ಕಣಗಾಲ್ ಪ್ರಶಸ್ತಿ ಆಯ್ಕೆ ಸಮಿತಿ, ಬೆಂಗಳೂರು ದೂರದರ್ಶನ ಚಲನಚಿತ್ರ ಸೆನ್ಸಾರ್‌ ಸಮಿತಿ, ಕರ್ನಾಟಕ ಲೇಖಕಿಯರ ಸಂಘದ ಅನುಪಮ ಪ್ರಶಸ್ತಿ ಆಯ್ಕೆ ಸಮಿತಿ, ಮೈಸೂರು ವಿಶ್ವವಿದ್ಯಾಲಯದ ಮಹಿಳಾ ವಿಷಯಗಳ ಅಧ್ಯಯನ ಕೇಂದ್ರ ಸಲಹಾ ಮಂಡಲಿ ಮುಂತಾದ ಸಮಿತಿಗಳ ಸದಸ್ಯರಾಗಿ – ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ, ಸಮಿತಿಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ.
ಕನ್ನಡ ಪುಸ್ತಕ ಪ್ರಕಾಶನದಲ್ಲಿ ಮುದ್ರಣದ್ದೇ ದೊಡ್ಡ ಸಮಸ್ಯೆ ಎನಿಸಿದ ದಿನಗಳಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭಗೊಂಡ ವಿಜಯಾ ಅವರ ‘ಇಳಾ’ಪ್ರಕಾಶನವು ಮುಂದೆ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯಾಗಿ ರೂಪಗೊಂಡು ಪ್ರಖ್ಯಾತ ಬರಹಗಾರರದಷ್ಟೇ ಅಲ್ಲದೆ ಅನೇಕ ಉದಯೋನ್ಮುಖ ಬರಹಗಾರರನ್ನು ಬೆಳಕಿಗೆ ತಂದು ಸುಮಾರು 200ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಹೊರತಂದಿದೆ.
ಆಗಾಗ್ಗೆ ಪತ್ರಿಕೆಗೆ ಬರೆದ ಲೇಖನಗಳು, ಕಾಲಂ ಬರಹಗಳು ಇವೆಲ್ಲವೂ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿಲ್ಲವಾದರೂ ‘ಮಾತಿನಿಂದ ಲೇಖನಿಗೆ’, ‘ಸುದ್ಧಿದಿಕನ್ನಡಿ’, ‘ನಿಜ ಧ್ಯಾನ’ – ಲೇಖನಗಳ ಸಂಗ್ರಹ; ಸತ್ಯಜಿತ್ ರಾಯ್ ಮತ್ತು ಅ.ನ.ಸುಬ್ಬರಾವ್ – ವ್ಯಕ್ತಿ ಚಿತ್ರಣ; ಶ್ರೀರಂಗ-ರಂಗ-ಸಾಹಿತ್ಯ-ಸಂಪ್ರಬಂಧ; ನೇಮಿಚಂದ್ರ – ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ – ಹೀಗೆ ಹಲವಾರು ಕೃತಿಗಳ ಪ್ರಕಟಣೆಯ ಜೊತೆಗೆ ಬಹಳಷ್ಟು ಕೃತಿಗಳನ್ನು ವಿಜಯಾ ಅವರು ಸಂಪಾದಿಸಿದ್ದಾರೆ. ಪರ್ವ – ಒಂದು ಸಮೀಕ್ಷೆ, ಇನಾಂದಾರ್‌, ಇಂದಿನ ರಂಗ ಕಲಾವಿದರು, ಕನ್ನಡ ಸಿನಿಮಾ ಸ್ವರ್ಣ ಮಹೋತ್ಸವ, ಮಕ್ಕಳ ಸಿನಿಮಾ, ಕಿರಿಯರ ಕರ್ನಾಟಕ, ಪದ್ಮಾಂತರಂಗ (ಆಕಾಶವಾಣಿ ಕಲಾವಿದೆ ಎಸ್.ಕೆ. ಪದ್ಮಾದೇವಿಯವರ ಜೀವನ-ವೃತ್ತಿ) ‘ಅಕ್ಕರೆ’ (ವ್ಯಾಸರಾಯ ಬಲ್ಲಾಳರ ಅಭಿನಂದನಗ್ರಂಥ), ಕನ್ನಡ ಚಲನಚಿತ್ರ ಇತಿಹಾಸ, ಸ್ವಾತಂತ್ಯ್ರೋತ್ತರ ಕನ್ನಡ ಸಾಹಿತ್ಯ-ಸಂಸ್ಕೃತಿ, ಬೆಂಗಳೂರು ದರ್ಶನ, ಕರ್ನಾಟಕ ಕಲಾದರ್ಶನ ಮುಂತಾದವು ಇವುಗಳಲ್ಲಿ ಪ್ರಮುಖವಾದವು. ‘ಕುದಿ ಎಸರು – ತಿಟ್ಹತ್ತಿ ತಿರುಗಿ ನೋಡಿದಾಗ’ ನಮ್ಮ ವಿಜಯಮ್ಮನವರು ಬದುಕಿನ ಹಿನ್ನೋಟವನ್ನು ತೆರೆದಿಟ್ಟ ಪುಸ್ತಕ. ‘ಕುದಿ ಎಸರು’ ಕೃತಿಗೆ 2019ರ ವರ್ಷ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಸಂದಿದೆ.
ಹೀಗೆ ಚಲನಚಿತ್ರ, ನಾಟಕ, ಸಾಹಿತ್ಯಗಳಲ್ಲಿ ತೊಡಗಿಕೊಂಡಿರುವ ಡಾ. ವಿಜಯಾ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವವೇ ಅಲ್ಲದೆ ಸಂದ ಪ್ರಶಸ್ತಿಗಳು ಹಲವಾರು. ಬಂದರೋ ಬಂದರು ನಾಟಕಕ್ಕೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸಂಕುಲ ಕೃತಿಗೆ ಗೀತಾದೇಸಾಯಿ ಪ್ರಶಸ್ತಿ; ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಆರ್‌.ಎನ್.ಆರ್‌. ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ, ಲೋಕಶಿಕ್ಷಣ ಟ್ರಸ್ಟ್ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಫೆಲೊಶಿಪ್, ಮಾಸ್ತಿ ಪ್ರಶಸ್ತಿ, ಹಾರ್ನಳ್ಳಿ ಟ್ರಸ್ಟ್ ಪ್ರಶಸ್ತಿ, ಉದಯಭಾನು ಪ್ರಶಸ್ತಿ, ಡಾ. ಶಿವರಾಮ ಕಾರಂತ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ವಿಜಯಾ ಅವರನ್ನು ಅರಸಿ ಬಂದಿವೆ. ಪ್ರಶಸ್ತಿಯ ಜೊತೆ ಬಂದ ಹಣವನ್ನು ಅನೇಕ ಸಂಘ ಸಂಸ್ಥೆಗಳಿಗೆ ಕೊಡುಗೆಯಾಗಿ ನೀಡಿದಂತೆ ಹಾರ್ನಳ್ಳಿ ರಾಮಸ್ವಾಮಿ ಟ್ರಸ್ಟ್ ಪ್ರಶಸ್ತಿಯ ಜೊತೆಗೆ ಕೊಡಮಾಡಿದ ಒಂದು ಲಕ್ಷ ರೂ. ಹಣವನ್ನು ನಾಲ್ಕು ಜನ ಲೇಖಕರು ತರಲು ಉದ್ದೇಶಿಸಿರುವ ನಾಲ್ಕು ಗ್ರಂಥಗಳ ಪ್ರಕಟಣೆಗೆ ನೆರವು ನೀಡಿರುವುದಲ್ಲದೆ ಮಾಸ್ತಿ ಪ್ರಶಸ್ತಿಯಿಂದ ಬಂದ 25000 ರೂಗಳನ್ನು ಗಾರ್ಮೆಂಟ್ಸ್ ಟೆಕ್ಸ್‌ಟೈಲ್ ವರ್ಕರ್ಸ್ ಯೂನಿಯನ್‌ಗೆ ನೀಡಿ ಶ್ರಮ ಜೀವಿಗಳ ಹೋರಾಟದ ಬದುಕಿಗೆ ಬೆನ್ನೆಲುಬಾಗಿದ್ದಾರೆ.

ನಮ್ಮ ನಡುವಿರುವ ಮಹಾನ್ ಚೈತನ್ಯಶೀಲ, ಮಾನವೀಯ ಧ್ವನಿಯ ಹಿರಿಯ ಕನ್ನಡತಿ ಡಾ. ವಿಜಯಾ ಅವರಿಗೆ ಗೌರವಪೂರ್ವಕವಾಗಿ ಹೃತ್ಪೂರ್ವಕ ಶುಭ ಹಾರೈಕೆಗಳನ್ನು ಸಲ್ಲಿಸುತ್ತಿದ್ದೇವೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಾನಪದ ಸಾಹಿತ್ಯದಲ್ಲಿ ‘ಕಾಮನ ಹಬ್ಬ’

Fri Mar 18 , 2022
ಕಾಮದಹನದ ಕಥೆ ವಿಷ್ಣುಪುರಾಣ, ಸ್ಕಂದ ಪುರಾಣ, ಶಿವಪುರಾಣ, ಮಹಾಭಾರತ, ಭಾಗವತ ಲಿಂಗಪುರಾಣಗಳು ಅಲ್ಲದೆ ಕಾಳಿದಾಸನ ’ಕುಮಾರಸಂಭವ’ ಮಹಾಕಾವ್ಯದಲ್ಲಿ, ಕನ್ನಡದ ಗಿರಿಜಾಕಲ್ಯಾಣ, ಚನ್ನಬಸವಪುರಾಣ, ಮೋಹನ ತರಂಗಿಣಿ, ಕಬ್ಬಿಗರ ಕಾವ, ಯಶೋಧರಚರಿತೆ ಮುಂತಾದ ಕಾವ್ಯಗಳಲ್ಲಿ ಪ್ರಾಸಂಗಿಕವಾಗಿ ಕಾಣಿಸಿಕೊಳ್ಳುತ್ತದೆ. ಕಾಮ ವಿಷ್ಣುವಿನ ಮಗನೆಂದೂ ಚತುರ್ಮುಖ ಬ್ರಹ್ಮನ ಮಗನೆಂದೂ ಪುರಾಣಗಳು ಹೇಳುತ್ತ ಬಂದಿವೆ. ಮಹಾಕವಿ ಕಾಳಿದಾಸನ ’ಕುಮಾರ ಸಂಭವ’ ಮಹಾಕಾವ್ಯದಲ್ಲಿ ರತಿವಿಲಾಪ ಸಂದರ್ಭವಿದೆ. ತಾರಕಾಸುರನ ಬಾಧೆ ಉಪಟಳ ಹೆಚ್ಚಲು ದೇವ – ದೇವತೆಯರ ಪ್ರಾರ್ಥನೆಯ ಮೇರೆಗೆ […]

Advertisement

Wordpress Social Share Plugin powered by Ultimatelysocial