ದೀಪ್ತಿ ನಾವಲ್ | On the birthday of my favorite Deepi Naval |

ದೀಪ್ತಿ ನಾವಲ್
On the birthday of my favorite Deepi Naval
ಚಿತ್ರರಂಗದಲ್ಲಿ ಕೆಲವೊಂದು ಕಲಾವಿದರು ಅಭಿನಯಿಸುತ್ತಾರೆ ಎಂದೇ ಅನಿಸದಿರುವ ಹಾಗೆ ಸಹಜವಾದ ನಮ್ಮ ಅಕ್ಕಪಕ್ಕದ ಮನೆಯಲ್ಲಿರುವಂತಹ ಸಹಜ ಸರಳ ವ್ಯಕ್ತಿಗಳೇನೋ ಅನಿಸಿಬಿಡುತ್ತಾರೆ. ಅಂಥ ಆಪ್ತ ಭಾವ ಮೂಡಿಸಿದವರಲ್ಲಿ ಕಲಾವಿದೆ ದೀಪ್ತಿ ನಾವಲ್ ಒಬ್ಬರು. ಈಕೆ ನನ್ನ ಮೆಚ್ಚಿನ ನಟಿಯರಲ್ಲಿ ಒಬ್ಬರು.
ದೀಪ್ತಿ ನಾವಲ್ 1952ರ ಫೆಬ್ರವರಿ 3ರಂದು ಅಮೃತಸರದಲ್ಲಿ ಜನಿಸಿದರು. ಅವರ ತಂದೆಯವರಿಗೆ ನ್ಯೂಯಾರ್ಕಿನ ಸಿಟಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ಹುದ್ದೆ ದೊರೆತ ಕಾರಣ ಅಲ್ಲಿಗೆ ತೆರಳಿದರು. ದೀಪ್ತಿ ಹಂಟರ್ ವಿಶ್ವವಿದ್ಯಾಲಯದಲ್ಲಿ ಲಲಿತಕಲಾ ಪದವಿ ಗಳಿಸಿದರು.
ದೀಪ್ತಿ ನಾವಲ್ 1978ರಲ್ಲಿ ಶ್ಯಾಮ್ ಬೆನಗಲ್ ಅವರ ‘ಜುನೂನ್’ ಚಿತ್ರದಲ್ಲಿ ಅಭಿನಯಿಸಿದರು. ಎರಡು ವರ್ಷಗಳ ನಂತರ ‘ಏಕ್ ಬಾರ್ ಫಿರ್’ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದರು. ಶಬಾನಾ ಅಜ್ಮಿ, ಸ್ಮಿತಾ ಪಾಟೀಲ್ ಅವರಂತೆಯೇ ಕಲಾತ್ಮಕ ಚಿತ್ರಗಳ ಪಾತ್ರಧಾರಿಯಾಗಿ 1984ರ ‘ಕಮಲ’ 1985ರ ‘ಅನ್ಕಹಿ’ ಅಂತಹ ಚಿತ್ರಗಳಲ್ಲಿ ಅಭಿನಯಿಸಿದರು. 1981ರಲ್ಲಿ ಬಂದ ‘ಚಶ್ಮೆ ಬದ್ದೂರ್’ ಇಂದ ಮೊದಲುಗೊಂಡಂತೆ, ಸಾತ್ ಸಾತ್, ಕಿಸಿ ಸೇ ನ ಕೆಹನಾ, ಕಥಾ, ರಂಗ್ ಬಿರಂಗಿ, ಫಾಸ್ಲೆ ಮಂತಾದ ಅನೇಕ ಚಿತ್ರಗಳಲ್ಲಿ ಫರೂಕ್ ಶೇಕ್ ಮತ್ತು ದೀಪ್ತಿ ನಾವಲ್ ಜೋಡಿ ಅಪಾರ ಜನಪ್ರಿಯತೆ ಗಳಿಸಿತ್ತು. ಮುಂದೆ ಮೂರು ದಶಕಗಳ ನಂತರ ಈ ಜೋಡಿ 2011ರಲ್ಲಿ ‘ಟೆಲ್ ಮಿ ಓ ಖುದಾ’, 2013ರ ‘ಲಿಸನ್ ಅಮಯಾ’ ಮುಂತಾದ ಚಿತ್ರಗಳಲ್ಲಿಯೂ ನಟಿಸಿದ್ದರು.
ದೀಪ್ತಿ ಅವರು ಕೆಲವೊಂದು ಸಮಯ ಸಿನಿಮಾದಲ್ಲಿ ಅವಕಾಶಗಳು ಕಡಿಮೆ ಆದಾಗ ಕಲೆಯ ಇತರ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. 2000ದ ವರ್ಷದ ಸುಮಾರಿಗೆ ಬಾವಂದರ್, ಫಿರಾಕ್ ಚಿತ್ರಗಳಲ್ಲಿ ಅಭಿನಯಿಸಿದ ದೀಪ್ತಿ, ‘ಲೀಲಾ’, ‘ಮೆಮೊರಿಸ್ ಇನ್ ಮಾರ್ಚ್’, ‘ಲಿಸನ್ ಅಮಯಾ’, ‘ಮಿರ್ಚ್ ಮಸಾಲ’ ಮುಂತಾದ ಚಿತ್ರಗಳ ಅಭಿನಯಕ್ಕಾಗಿ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗಳಿಸಿದರು.
ದೀಪ್ತಿ ನಾವಲ್ ಅವರು ಪಂಜಾಬಿಯಲ್ಲಿ ‘ಮರ್ಹಿ ದ ದೀವಾ’, ಕನ್ನಡದಲ್ಲಿ ಗಿರೀಶ್ ಕಾಸರವಳ್ಳಿ ಅವರ ‘ಮನೆ’ ಎಂಬ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಚಿತ್ರಗಳಲ್ಲಿಯೂ ಅಭಿನಯಿಸಿದ್ದರು.
ದೀಪ್ತಿ ನಾವಲ್ ಅವರು ಟೆಲಿಚಿತ್ರಗಳು ಮತ್ತು ಧಾರಾವಾಹಿಗಳಾದ ಸೌದಾ, ತನಾವ್, ಮುಖಮ್ಮಲ್, ಮುಕ್ತಿ ಬಂಧನ್ ಮುಂತಾದವುಗಳಲ್ಲಿ ಅಭಿನಯಿಸಿದರು. 2015ರಲ್ಲಿ ರಂಗಭೂಮಿಯ ‘ಏಕ್ ಮುಲಾಖಾತ್’ ಪ್ರಯೋಗದಲ್ಲಿ ಅಮೃತಾ ಪ್ರೀತಮ್ ಪಾತ್ರ ನಿರ್ವಹಿಸಿದರು.
ದೀಪ್ತಿ ನಾವಲ್ ನಿರ್ದೇಶಕಿಯಾಗಿ ‘ದೋ ಪೈಸೆ ಕಿ ಧೂಪ್’, ‘ಚಾರ್ ಆನೇ ಕಿ ಬಾರಿಷ್’ ಮುಂತಾವುಗಳನ್ನು ತೆರೆಗೆ ಮೂಡಿಸಿದರು. ಇದು ನ್ಯೂಯಾರ್ಕ್ ಚಿತ್ರೋತ್ಸವದಲ್ಲಿ ಉತ್ತಮ ಚಿತ್ರಕಥಾ ಪ್ರಶಸ್ತಿ ಗೆದ್ದಿತು. ಕಿರುತೆರೆಯಲ್ಲಿಯೂ ‘ತೋಡಾ ಸಾ ಆಸ್ಮಾನ್’ಎಂಬ ಧಾರವಾಹಿಯ ಚಿತ್ರಕಥೆ ರಚಿಸಿ ನಿರ್ದೇಶಿಸಿದರು. ‘ದ ಪಾಥ್ ಲೆಸ್ ಟ್ರಾವಲ್ಡ್’ ಎಂಬುದು ಅವರು ನಿರ್ಮಿಸಿದ ‘ಪ್ರವಾಸಿ ಕಾರ್ಯಕ್ರಮ’
‘ಲಮ್ಹಾ ಲಮ್ಹಾ’ ಮತ್ತು ‘ಬ್ಲ್ಯಾಕ್ ವಿಂಡ್’ ಮುಂತಾದವು ದೀಪ್ತಿ ಅವರ ಪ್ರಕಟಿತ ಕಾವ್ಯ ಸಂಕಲನಗಳು, ‘ದ ಮ್ಯಾಡ್ ಟಿಬೆಟನ್’ ಅವರ ಕಥಾ ಸಂಕಲನ. ಚಿತ್ರಕಲೆ ಮತ್ತು ಛಾಯಾಗ್ರಹಣದಲ್ಲೂ ಅಪಾರ ಸಾಧನೆ ಮಾಡಿರುವ ದೀಪ್ತಿ ನವಾಲ್ ಹಲವಾರು ಕಲಾ ಪ್ರದರ್ಶನಗಳನ್ನು ನೀಡಿದ್ದಾರೆ. ಜೀವನ ಸಂಗಾತಿಯಾಗಿದ್ದ ವಿನೋದ್ ಪಂಡಿತ್ ಅವರ ಹೆಸರಿನಲ್ಲಿ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತಾಸೆಯಾಗಿದ್ದಾರೆ.
ಸರಳ ಸುಂದರ ನಗೆಮೊಗದ ದೀಪ್ತಿ ನಾವಲ್ ಅವರ ನಗೆ ಎಂದೆಂದೂ ಬೆಳಗುತ್ತಿರಲಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಅವರಿಗೆ ಬ್ಯಾಟಿಂಗ್ ಮಾಡುವುದನ್ನು ಕಲಿಸಲು ಸಾಧ್ಯವಿಲ್ಲ ಎಂದು ಕೊಹ್ಲಿ ಜೊತೆ ಕೆಲಸ ಮಾಡುತ್ತಿರುವ ಹೆಸನ್!!

Fri Mar 4 , 2022
ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕ ಮೈಕ್ ಹೆಸ್ಸನ್ ಅವರು ಖಂಡಿತವಾಗಿಯೂ ಇಂತಹದನ್ನು ಕಲಿಸಲು ಸಾಧ್ಯವಿಲ್ಲ ಎಂದು ನಂಬುತ್ತಾರೆ ವಿರಾಟ್ ಕೊಹ್ಲಿ ಬ್ಯಾಟ್ ಮಾಡುವುದು ಹೇಗೆ ಮತ್ತು ಇದು ಆಟಗಾರನಿಗೆ ಈಗಾಗಲೇ ತಿಳಿದಿರುವ ಮೌಲ್ಯವನ್ನು ಸೇರಿಸುವುದು. 2019 ರಲ್ಲಿ RCB ಯಿಂದ ಆಯ್ಕೆಯಾದ ನಂತರ ಹೆಸ್ಸನ್ ಅವರು ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರಂತಹ ಸ್ಟಾರ್ ಆಟಗಾರರೊಂದಿಗೆ ಕೆಲಸ ಮಾಡಿದ್ದಾರೆ. “ನೀವು ಖಂಡಿತವಾಗಿಯೂ ಅವರಿಗೆ ಹೇಗೆ ಬ್ಯಾಟಿಂಗ್ ಮಾಡಬೇಕೆಂದು […]

Advertisement

Wordpress Social Share Plugin powered by Ultimatelysocial