ಪಿ. ಬಿ. ದೇಸಾಯಿ

ಡಾ. ಪಾಂಡುರಂಗ ಭೀಮರಾವ್ ದೇಸಾಯಿ ಅವರು ಕರ್ನಾಟಕ ಇತಿಹಾಸ ಸಾಹಿತ್ಯ ಸಂಸ್ಕೃತಿಗಳ ಖ್ಯಾತ ಸಂಶೋಧಕರೂ, ಶಾಸನತಜ್ಞರೂ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಚೀನ ಭಾರತೀಯ ಇತಿಹಾಸ ಸಂಸ್ಕೃತಿಗಳ ಪ್ರಾಧ್ಯಾಪಕರೂ ಆಗಿದ್ದವರು. ಮಾರ್ಚ್ 5 ಈ ಮಹನೀಯರ ಸಂಸ್ಮರಣಾ ದಿನ.
ಪಾಂಡುರಂಗ ದೇಸಾಯಿಯವರು ರಾಯಚೂರು ಜಿಲ್ಲೆಯ ಕೊಪ್ಪಳದ ಬಳಿಯ ಕಿನ್ಹಾಲದಲ್ಲಿ 1910ರ ಡಿಸೆಂಬರ್ 24ರಂದು ಜನಿಸಿದರು. ತಂದೆ ಭೀಮರಾವ್. ತಾಯಿ ಭಾಗೀರಥೀಬಾಯಿ.
ಪಾಂಡುರಂಗ ದೇಸಾಯಿ ಅವರ ಪ್ರಾಥಮಿಕ ಶಿಕ್ಷಣ ಸೇಡಮ್ನಲ್ಲೂ, ಸೆಕೆಂಡರಿ ಶಿಕ್ಷಣ ಗುಲ್ಬರ್ಗದಲ್ಲೂ ನಡೆಯಿತು. ಮುಂಬಯಿ ವಿಶ್ವವಿದ್ಯಾಲಯದ ಎಂಟ್ರೆನ್ಸ್ ಪರೀಕ್ಷೆಯ ಅನಂತರ ಅನಾರೋಗ್ಯದಿಂದಾಗಿ ಇವರು ಸುಮಾರು ಆರು ವರ್ಷ (1927-1932) ವಿಧ್ಯಾಭ್ಯಾಸವನ್ನು ಮುಂದುವರಿಸಲಾಗಲಿಲ್ಲ. 1935ರಲ್ಲಿ ಇವರು ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಆನರ್ಸ್ ಶ್ರೇಣಿಯ ಪದವಿ ಪಡೆದರು. 1937ರಲ್ಲಿ ಇವರಿಗೆ ಸಂಸ್ಕೃತ ಹಾಗೂ ಕನ್ನಡ ಭಾಷೆಗಳಲ್ಲಿ ಎಂ.ಎ. ಪದವಿ ದೊರಕಿತು.
ಅನಾರೋಗ್ಯದಿಂದ ವಿಶ್ರಾಂತಿ ಪಡೆಯುತ್ತಿದ್ದಾಗಲೂ, ಅನಂತರವೂ ಇವರು ತಮ್ಮ ಊರಿನ ಹಾಗೂ ಸುತ್ತಮುತ್ತಣ ಸ್ಥಳಗಳಲ್ಲಿದ್ದ ಶಿಲಾಶಾಸನಗಳನ್ನು ಅಧ್ಯಯನ ಮಾಡುವ ಹವ್ಯಾಸ ಬೆಳೆಸಿಕೊಂಡರು. ಇವರು ಸುಮಾರು 60 ಗ್ರಾಮಗಳಲ್ಲಿ ತಿರುಗಾಡಿ 200ಕ್ಕೂ ಹೆಚ್ಚಿನ ಶಾಸನಗಳನ್ನು ಪ್ರತಿ ಮಾಡಿಕೊಂಡರು. ಎಂ.ಎ. ಪರೀಕ್ಷೆಯಲ್ಲಿ ಇವರ ಅಧ್ಯಯನ ವಿಷಯಗಳಲ್ಲಿ ಲಿಪಿಶಾಸ್ತ್ರವೂ ಒಂದಾಗಿತ್ತು.
1936ರಲ್ಲಿ ವಿಜಯನಗರದ ಆರನೆಯ ಶತಮಾನೋತ್ಸವದ ಸಂದರ್ಭದಲ್ಲಿ ಇವರು ವಿಜಯನಗರ ಸಾಮ್ರಾಜ್ಯ ಎಂಬ ಗ್ರಂಥವೊಂದನ್ನು ಕನ್ನಡದಲ್ಲಿ ಬರೆದರು. 1939ರಲ್ಲಿ ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಯ ಶಾಸನ ಶಾಖೆಯಲ್ಲಿ ಸಹಾಯಕ ಸಂಶೋಧಕರಾಗಿ ಕೆಲಸಕ್ಕೆ ಸೇರಿದ ಇವರು 17 ವರ್ಷಗಳ ಕಾಲ ಉದಕಮಂಡಲದಲ್ಲಿದ್ದು ಶಾಸನಶಾಸ್ತ್ರವನ್ನು ಆಳವಾಗಿ ಅಭ್ಯಸಿಸಿ ಅದರಲ್ಲಿ ಸಂಪೂರ್ಣ ಪಾಂಡಿತ್ಯವನ್ನು ಪಡೆದರು. ದಕ್ಷಿಣ ಭಾರತದ ಶಾಸನ ಸಂಪುಟಗಳ ಪೈಕಿ 11ನೆಯ ಸಂಪುಟದ ಮೊದಲನೆಯ ಭಾಗವನ್ನು ಎನ್. ಲಕ್ಷ್ಮೀನಾರಾಯಣರಾಯರೊಂದಿಗೆ ಹಾಗೂ 15ನೆಯ ಸಂಪುಟವನ್ನು ತಾವೇ ಸಂಪಾದಿಸಿದರು. 1947 ರಲ್ಲಿ ಚಂದ್ರವಳ್ಳಿಯಲ್ಲಿ ನಡೆಸಲಾದ ಉತ್ಖನನದಲ್ಲಿ ಇವರೂ ಭಾಗವಹಿಸಿದ್ದರು.
ಶಾಸನಗಳಿಗೆ ಸಂಬಂಧಿಸಿದಂತೆ 1956 ರಲ್ಲಿ ಇವರ ಶಾಸನ ಪರಿಚಯ ಎಂಬ ಗ್ರಂಥ ಪ್ರಕಟವಾಯಿತು. ಇದಕ್ಕೆ 1959ರಲ್ಲಿ ಆಗಿನ ಮೈಸೂರು ಸರ್ಕಾರದ ಪುರಸ್ಕಾರ ದೊರಕಿತು. ಅಂದಿನ ಹೈದರಾಬಾದ್ ಸರ್ಕಾರಕ್ಕಾಗಿ ‘ಎ ಕಾರ್ಪಸ್ ಆಫ್ ಕನ್ನಡ ಇನ್ಸ್ಕ್ರಿಪ್ಷನ್ಸ್ ಇನ್ ಹೈದರಾಬಾದ್’ ಎಂಬ ಗ್ರಂಥವನ್ನು ಸಂಪಾದಿಸಿದರು. ಇವರ ಜೈನಿಸ್ಮ್ ಇನ್ ಸೌತ್ ಇಂಡಿಯ ಅಂಡ್ ಸಮ್ ಜೈನ ಎಪಿಗ್ರಾಫ್ಸ್ ಎಂಬ ಗ್ರಂಥಕ್ಕೆ 1961 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಡಿ.ಲಿಟ್. ಪದವಿ ಸಂದಿತು. 1957 ರಲ್ಲಿ ಅದೇ ವಿಶ್ವವಿದ್ಯಾಲಯದ ಪ್ರಾಚೀನ ಭಾರತ ಇತಿಹಾಸ ಹಾಗೂ ಸಂಸ್ಕೃತಿ ಇಲಾಖೆಯಲ್ಲಿ ರೀಡರ್ ಆಗಿ ನೇಮಕಗೊಂಡ ದೇಸಾಯಿಯವರು 1962ರಲ್ಲಿ ಅದರ ಮುಖ್ಯರೂ, ಕನ್ನಡ ಸಂಶೋಧನ ಸಂಸ್ಥೆಯ ನಿರ್ದೇಶಕರೂ ಆದರು. 1967ರಲ್ಲಿ ಇವರಿಗೆ ಪ್ರಾಧ್ಯಾಪಕ ಹುದ್ದೆ ದೊರಕಿತು. ಶಾಸನಶಾಸ್ತ್ರವನ್ನು ವೈಜ್ಞಾನಿಕವಾಗಿ ವಿದ್ಯಾರ್ಥಿಗಳಿಗೆ ಕಲಿಸಿಕೊಡಲು ಶಾಸನಶಾಸ್ತ್ರದ ಡಿಪ್ಲೊಮ ಶಿಕ್ಷಣವನ್ನು ಮೊದಲ ಬಾರಿಗೆ ರೂಪಿಸಿದರು. ಕನ್ನಡ ಸಂಶೋಧನ ಸಂಸ್ಥೆಯ ನಿರ್ದೇಶಕರಾಗಿ ಅಲ್ಲಿ ಪುರಾತತ್ವ ವಸ್ತುಸಂಗ್ರಹಾಲಯವನ್ನು ದೇಸಾಯಿ ಅವರು ರೂಪಿಸಿದರು. ಅನೇಕ ವಿದ್ವಾಂಸರಿಂದ ವಿದ್ವತ್ಪೂರ್ಣ ಉಪನ್ಯಾಸಗಳನ್ನೇರ್ಪಡಿಸಿ ಅವನ್ನು ಗ್ರಂಥ ರೂಪದಲ್ಲಿ ಹೊರತಂದದ್ದು ಅವರ ಇನ್ನೊಂದು ಮುಖ್ಯ ಸಾಧನೆ. ಕನ್ನಡ ಸಂಶೋಧನ ಸಂಸ್ಥೆಯ ಹಸ್ತಪ್ರತಿ ವಿಭಾಗದ ಹಸ್ತಪ್ರತಿಗಳ ವಿವರಣಾತ್ಮಕ ಪಟ್ಟಿಯನ್ನು (ಡಿಸ್ಕ್ರಿಪ್ಟಿವ್ ಕ್ಯಾಟಲಾಗ್ಸ್ ಆಫ್ ಮ್ಯಾನುಸ್ಕ್ರಿಪ್ಟ್ಸ್ ಇನ್ ದಿ ಕನ್ನಡ ರಿಸರ್ಚ್ ಇನ್ಸ್ಟಿಟ್ಯೂಟ್, ಸಂ. 5 – 9 ) ಪ್ರಕಟಿಸಿದರು.
ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಹಾಗೂ ಧಾರವಾಡ ಜಿಲ್ಲೆಯ ಹಳ್ಳೂರು ಗ್ರಾಮದಲ್ಲಿ ಉತ್ಖನನ ಕಾರ್ಯಗಳನ್ನು ಕೈಗೊಳ್ಳಲಾಯಿತು. ಕನ್ನಡ ಇನ್ಸ್ಕ್ರಿಪ್ಷನ್ಸ್ ಆಫ್ ಆಂಧ್ರ ಪ್ರದೇಶ್ ಮತ್ತು ಸೆಲೆಕ್ಟ್ ಇನ್ಸ್ಕ್ರಿಪ್ಷನ್ ಆಫ್ ಆಂಧ್ರ ಪ್ರದೇಶ್ ಎಂಬವು ಆಂಧ್ರ ಪ್ರದೇಶ ಸರ್ಕಾರಕ್ಕಾಗಿ ಇವರು ಸಂಪಾದಿಸಿದ ಗ್ರಂಥಗಳು. ಇವರ ಸಂಶೋಧನ ಗ್ರಂಥಗಳಲ್ಲಿ ಪ್ರಮುಖವಾದ್ದು ಬಸವೇಶ್ವರ ಅಂಡ್ ಹಿಸ್ ಟೈಮ್ಸ್ ಎಂಬುದು. ಕರ್ನಾಟಕದ ಇತಿಹಾಸವನ್ನು ಹತ್ತು ಸಂಪುಟಗಳಲ್ಲಿ ಪ್ರಕಟಿಸಬೇಕೆಂಬ ಯೋಜನೆಗೆ ಅನುಗುಣವಾಗಿ ಇವರು ತಮ್ಮ ಇಬ್ಬರು ಸಹೋದ್ಯೋಗಿಗಳೊಡನೆ ಎ ಹಿಸ್ಟೊರಿ ಆಫ್ ಕರ್ನಾಟಕ ಎಂಬ ಗ್ರಂಥವನ್ನು ಪ್ರಕಟಿಸಿದರು. ಮಿಂಚಿದ ಮಹಿಳೆಯರು, ಕುಂತಲೇಶ್ವರ, ಮದಗಜಮಲ್ಲ, ಕರ್ನಾಟಕದ ಕಲಚುರಿಗಳು, ಕನ್ನಡನಾಡಿನ ಶಾಸನಗಳು – ಇವು ದೇಸಾಯಿಯವರ ಕನ್ನಡ ಗ್ರಂಥಗಳ ಪೈಕಿ ಕೆಲವು. ಶಿವಾಜಿಯ ಜೀವನಕ್ಕೆ ಸಂಬಂಧಿಸಿದ ಮೂಲಸಾಮಗ್ರಿಗಳನ್ನೊಳಗೊಂಡ ಶಿವಚರಿತ್ರ ವೃತ್ತ ಸಂಗ್ರಹ ಎಂಬ ಮರಾಠಿ ಗ್ರಂಥವನ್ನು ಇವರು ಬರೆದಿದ್ದಾರೆ. ಇವರು ಬರೆದು ಪ್ರಕಟಿಸಿದ ಇಂಗ್ಲಿಷ್ ಲೇಖನಗಳ ಸಂಖ್ಯೆ 105, ಕನ್ನಡದವು ಸುಮಾರು 230, ಮರಾಠಿಯವು 40.
ಕರ್ನಾಟಕದ ಇತಿಹಾಸ, ಸಾಹಿತ್ಯ, ಸಂಸ್ಕೃತಿಗಳನ್ನು ಕುರಿತು ಆಳವಾಗಿ ಅಭ್ಯಾಸಮಾಡಿ ಸಂಶೋಧನೆಯಲ್ಲಿ ನಿರತರಾಗಿದ್ದ ಡಾ|| ದೇಸಾಯಿಯವರು 1971 ರಲ್ಲಿ ನಿವೃತ್ತರಾದ ಮೇಲೆ ವಿಶ್ವವಿದ್ಯಾಲಯ ಧನದಾನ ಆಯೋಗದ ಪ್ರಾಧ್ಯಾಪಕರಾಗಿದ್ದರು. 1973ರಲ್ಲಿ ನಡೆದ ಅಖಿಲ ಭಾರತ ಇತಿಹಾಸ ಸಮ್ಮೇಳನದಲ್ಲಿ ಶಾಸನ ಶಾಸ್ತ್ರ ವಿಭಾಗದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.
ಪಾಂಡುರಂಗ ಭೀಮರಾವ್ ದೇಸಾಯಿಯವರು 1974ರ ಮಾರ್ಚ್ 5 ರಂದು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮನ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿತ್ರ ಮಿತ್ರ

Sat Mar 5 , 2022
ಚಿತ್ರ ಮಿತ್ರ On the birth day our great friend and amazing artiste on whom I often lose words to define Chithra Mitra Sir ಇಂದು ವಿಶಿಷ್ಟ ಕಲಾವಿದರಾದ ‘ಚಿತ್ರ ಮಿತ್ರ’ರ ಜನ್ಮದಿನ. ಚಿತ್ರ ಮಿತ್ರರು ಅರಳಿಸುವ ಕಲೆಯ ಬೆರಗೇ ಬೆರಗು! ಫೇಸ್ಬುಕ್ ಆವರಣದಿಂದ ಪರಿಚಿತರಾದ ಚಿತ್ರಮಿತ್ರರು ಆಗಾಗ ಮೂಡಿಸುವ ಗಂಟೆಗಟ್ಟಲೆ ನೇರ ಚಿತ್ರರಚನಾ ಕೌಶಲ, ಅವರ ಪುಟಕ್ಕೆ ಹೋದರೆ ಕಾಣುವ ಪ್ರತಿ […]

Advertisement

Wordpress Social Share Plugin powered by Ultimatelysocial