ಪಿ ವಿ ನರಸಿಂಹರಾವ್ ಭಾರತದ ಮಾಜಿ ಪ್ರಧಾನಿ.

ಇಂದು ಭಾರತದ ಮಾಜಿ ಪ್ರಧಾನಿ, ಮಹಾನ್ ವಿದ್ವಾಂಸ, ಮಹತ್ವದ ಸಾಧನೆಗಳ ಹರಿಕಾರ ಪಿ ವಿ ನರಸಿಂಹರಾವ್ ಸಂಸ್ಮರಣಾ ದಿನ.
ನಮ್ಮ ದೇಶದಲ್ಲಿ ರಾಜಕಾರಣದಲ್ಲಿದ್ದೂ ತಮ್ಮ ಸಾಂಸ್ಕೃತಿಕ ಮನೋಭಾವನೆಗಳಿಂದ, ವೈವಿಧ್ಯಮಯ ಸಾಧನೆ, ಚಾಣಾಕ್ಷತೆಗಳಿಂದ ಮಹತ್ವಪೂರ್ಣ ವ್ಯಕ್ತಿ ಎನಿಸಿದ್ದವರು ಪಿ. ವಿ. ನರಸಿಂಹರಾವ್.
ಪಿ ವಿ ನರಸಿಂಹರಾಯರು 1921ರ ಜೂನ್ 28ರಂದು ಆಂಧ್ರಪ್ರದೇಶದ ಲಕ್ನೇಪಲ್ಲಿ ಎಂಬ ಗ್ರಾಮದಲ್ಲಿ ಜನಿಸಿದರು. ಪದವೀಧರರಾಗಿ, ಕಾನೂನಿನ ಸ್ನಾತಕೋತ್ತರ ಪದವೀಧರರಾಗಿ ಸ್ವಾತಂತ್ರ ಸಂಗ್ರಾಮದ ಸಮಯದಿಂದಲೂ ರಾಜಕೀಯದಲ್ಲಿದ್ದ ಪಿ ವಿ ನರಸಿಂಹರಾಯರು ಆಂಧ್ರಪ್ರದೇಶದಲ್ಲಿ ಹಲವಾರು ರಾಜಕೀಯ ಸ್ಥಾನಗಳಲ್ಲಿದ್ದು ಕೆಲವು ಕಾಲ ಮುಖ್ಯಮಂತ್ರಿಗಳೂ ಆಗಿದ್ದರು. ಆಂಧ್ರಪ್ರದೇಶದಲ್ಲಿ ಭೂಸುಧಾರಣಾ ಕಾನೂನುಗಳನ್ನು ಅತ್ಯಂತ ಪ್ರಶಸ್ತವಾಗಿ ನೆರವೇರಿಸಿದ ಕೀರ್ತಿ ನರಸಿಂಹರಾಯರದು.
ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸರ್ಕಾರದಲ್ಲಿ ಗೃಹ ಖಾತೆ, ರಕ್ಷಣಾ ಖಾತೆ, ವಿದೇಶಾಂಗ ಖಾತೆ ಮತ್ತು ಕೈಗಾರಿಕಾ ಖಾತೆಗಳನ್ನು ನಿರ್ವಹಿಸಿದ ಪಿ ವಿ ನರಸಿಂಹ ರಾವ್ ರಾಜಕಾರಣದಲ್ಲಿ ಚಾಣಾಕ್ಷರೆಂದೇ ಪ್ರಖ್ಯಾತರು. ರಾಜೀವ್ ಗಾಂಧಿ ಅವರ ಸಂಪುಟದಿಂದ ಮೊದಲುಗೊಂಡಂತೆ ಕಾಂಗ್ರೆಸ್ಸಿನ ಲೈಸೆನ್ಸ್ ರಾಜ್ ಪದ್ಧತಿಗೆ ಇತಿಶ್ರೀ ಹಾಡಲು ಪ್ರಾರಂಭ ಮಾಡಿದ ಕೀರ್ತಿ ಕೂಡಾ ಪಿ ವಿ ನರಸಿಂಹರಾವ್ ಅವರಿಗೆ ಸೇರುತ್ತದೆ.
ನರಸಿಂಹರಾವ್ ಅವರು ಪ್ರಧಾನಿ ಆಗಿದ್ದ ಸಮಯದಲ್ಲಿ ದೇಶ ಹಲವಾರು ಗಂಭೀರ ಪರಿಸ್ಥಿತಿಗಳನ್ನು ಎದುರಿಸುತ್ತಿತ್ತು. ಆರ್ಥಿಕ ಸ್ಥಿತಿ ಅಧೋಗತಿ ತಲುಪಿತ್ತು. ಈ ಸಂದರ್ಭದಲ್ಲಿ ರಾಜಕೀಯೇತರ ವ್ಯಕ್ತಿಯಾದ ಮನಮೋಹನ್ ಸಿಂಗ್ ಅವರನ್ನು ಹಣಕಾಸು ಮಂತ್ರಿಯಾಗಿ ಮತ್ತು ಮಾಂಟೆಕ್ ಅಹ್ಲುವಾಲಿಯಾ ಅವರನ್ನು ಹಣಕಾಸು ಕಾರ್ಯದರ್ಶಿಯನ್ನಾಗಿ ತಂದು ತಮ್ಮ ಮುಖ್ಯ ದೃಷ್ಟಿ ರಾಜಕೀಯವಲ್ಲ ದೇಶದ ಅಗತ್ಯತೆಗಳ ನಿರ್ವಹಣೆ ಎಂಬುದನ್ನು ತೋರಿಸಿಕೊಟ್ಟರು. ಭಾರತವು ಮುಕ್ತ ಮಾರುಕಟ್ಟೆಗೆ ಮುಖಮಾಡುವಂತಹ ಕಾರ್ಯಕ್ರಮಕ್ಕೆ ಇಂಬುಕೊಟ್ಟು ತಮ್ಮ ಆಡಳಿತಾವಧಿಯಲ್ಲಿ ದೇಶದ ಆರ್ಥಿಕ ಪ್ರಗತಿ ಔನ್ನತ್ಯದ ಹಾದಿಯಲ್ಲಿ ನಡೆಯುವುದನ್ನು ನಿರಂತರವಾಗಿ ಕಾಯ್ದುಕೊಂಡದ್ದಲ್ಲದೆ ಭಾರತೀಯ ಆರ್ಥಿಕತೆಗೊಂದು ಹೊಸ ಮಾರ್ಗಸೂಚಿಯನ್ನೇ ರೂಪಿಸಿದರು. ವಿಶ್ವಸಂಸ್ಥೆಯಲ್ಲಿ ಭಾರತದ ವಿಚಾರಗಳನ್ನು ಉತ್ತಮವಾಗಿ ಪ್ರತಿಪಾದಿಸಬಲ್ಲ ವ್ಯಕ್ತಿಯ ಅವಶ್ಯಕತೆಯಿದ್ದಾಗ ಅವರು ಅದಕ್ಕಾಗಿ ಆರಿಸಿದ್ದು ತಮ್ಮ ವಿರೋಧಪಕ್ಷದ ಮುತ್ಸದ್ಧಿಯಾದ ಅಟಲ್ ಬಿಹಾರಿ ವಾಜಪೇಯಿ ಅವರನ್ನು. ತಮ್ಮ ಅಧಿಕಾರ ಮುಗಿದು ಬಿ ಜೆ ಪಿ ನೇತೃತ್ವದ ಸರ್ಕಾರ ಬಂದಾಗ ಪರಮಾಣು ಪರೀಕ್ಷಣೆಗಳಿಗೆ ಸಕಲವೂ ಸಿದ್ಧವಾಗಿದೆ ಅದನ್ನು ಆಗಗೊಳಿಸಿ ಎಂದು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲಹೆ ನೀಡಿದವರೂ ಪಿ. ವಿ.ನರಸಿಂಹರಾವ್ ಅವರೇ ಎಂದು ವಾಜಪೇಯಿ ಉಲ್ಲೇಖಿಸಿದ್ದಾರೆ. ಹೀಗೆ ನರಸಿಂಹರಾವ್ ಪಕ್ಷ ರಾಜಕೀಯಕ್ಕೂ ಮಿಗಿಲಾದ ಒಬ್ಬ ಸುಸಂಸ್ಕೃತ ರಾಜಕಾರಣಿ.
ನರಸಿಂಹರಾವ್ ಅವರ ಸಾಂಸ್ಕೃತಿಕ ಶ್ರೀಮಂತಿಕೆ ಎಷ್ಟು ಮಹತ್ವಪೂರ್ಣವಾದದ್ದೆಂದರೆ ಅವರಿಗೆ ತೆಲುಗಿನಲ್ಲಿ ಎಷ್ಟು ಪ್ರಭುತ್ವವಿತ್ತೋ ಅಂತದ್ದೇ ಪ್ರಭುತ್ವ ಮರಾಠಿ ಭಾಷೆಯಲ್ಲಿತ್ತು. ಹಿಂದಿ, ಉರ್ದು, ಒರಿಯಾ, ಬೆಂಗಾಲಿ, ಗುಜರಾಥಿ, ತಮಿಳು ಇಂಗ್ಲಿಷ್, ಫ್ರೆಂಚ್, ಅರಾಬಿಕ್, ಸ್ಪಾನಿಶ್, ಜರ್ಮನ್, ಗ್ರೀಕ್, ಲ್ಯಾಟಿನ್, ಪರ್ಷಿಯನ್ ಹೀಗೆ ಹದಿನೇಳು ಭಾಷೆಗಳಲ್ಲಿ ಉತ್ತಮವಾಗಿ ಸಂಭಾಷಿಸುವ ಸಾಮರ್ಥ್ಯವಿತ್ತು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಂದ ಸಂದರ್ಭದಲ್ಲಿ ಆ ಪ್ರಶಸ್ತಿ ಆಯ್ಕೆ ಸಮಿತಿ ಆಧ್ಯಕ್ಷತೆಯನ್ನು ಪಿ ವಿ ನರಸಿಂಹರಾವ್ ಅವರು ವಹಿಸಿದ್ದು ಆ ಸಮಯದಲ್ಲಿ ಪಿ ವಿ ಎನ್ ಅವರು ಮಾಸ್ತಿ ಅವರ ಕುರಿತು ನುಡಿದ ನಿರ್ಣಯಾತ್ಮಕ ಮಾತುಗಳನ್ನು ಡಾ. ಹಾ ಮಾ ನಾಯಕರು ತಮ್ಮ ಅಂಕಣದಲ್ಲಿ ಸುಂದರವಾಗಿ ಬರೆದಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ವಿ. ರಾಮರತ್ನಂ ಕಳೆದ ಶತಮಾನದ ಶ್ರೇಷ್ಠ ಸಂಗೀತಗಾರರಲ್ಲಿ ಒಬ್ಬರು.

Fri Dec 23 , 2022
  ವಿದ್ವಾನ್ ವಿ. ರಾಮರತ್ನಂ ಕಳೆದ ಶತಮಾನದ ಶ್ರೇಷ್ಠ ಸಂಗೀತಗಾರರಲ್ಲಿ ಒಬ್ಬರು. ವಿ. ರಾಮರತ್ನಂ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ 1917ರ ಡಿಸೆಂಬರ್ 23ರಂದು ಜನಿಸಿದರು. ತಂದೆ ವಿ. ಸುಬ್ಬರಾಮಯ್ಯ, ತಾಯಿ ಪಾರ್ವತಮ್ಮ. ಬೆಂಗಳೂರಿನ ಗಾಯನ ಸಮಾಜದಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮಗಳನ್ನು ಕೇಳಿ ಅವರಲ್ಲಿ ಸಂಗೀತದಲ್ಲಿ ಆಕರ್ಷಣೆ ಮೂಡಿತು. ರಾಮರತ್ನಂ ಅವರಿಗೆ ಡಿ. ಸುಬ್ಬರಾಮಯ್ಯ, ನಾರಾಯಣ ಸ್ವಾಮಿ ಭಾಗವತರ್, ಪಾಲ್ಘಾಟ್ ಸೋಮೇಶ್ವರ ಭಾಗವತರಲ್ಲಿ ಸಂಗೀತ ಪಾಠವಾಯಿತು. ಟಿ. ಚೌಡಯ್ಯನವರಲ್ಲಿ ಹತ್ತುವರ್ಷ ಶಿಷ್ಯವೃತ್ತಿ […]

Advertisement

Wordpress Social Share Plugin powered by Ultimatelysocial