ಪಾಪು ಸಂಸ್ಮರಣೆ

ನಮ್ಮ ಕನ್ನಡದ ‘ಪಾಪು’ ಪಾಟೀಲ ಪುಟ್ಟಪ್ಪ ಅವರ ಸಂಸ್ಮರಣಾ ದಿನವಿದು. ಅವರು 2020ರ ಮಾರ್ಚ್ 16ರಂದು ಈ ಲೋಕವನ್ನಗಲಿದರು.”
ಅವರಿಗೆ 101 ವರ್ಷ ವಯಸ್ಸಾಗಿತ್ತಾದರೂ ಕೊನೆಯವರೆಗೆ ಕನ್ನಡದ ಕುರಿತಾದ ಅವರ ಆತ್ಮೀಯ ಕಾಳಜಿಗಳು ಎಂದೆಂದೂ ನಮ್ಮ ಹೃದಯದಲ್ಲಿ ಅವರನ್ನು ‘ಪಾಪು’ವೆಂದು ಪ್ರೀತಿಯಿಂದ ಆರಾಧಿಸುವಂತೆ ಮಾಡುತ್ತಿತ್ತು. ಅವರ ಮಾತನ್ನೊಮ್ಮೆ ಕೇಳಿಬಿಟ್ಟರೆ ಸಾಕು ನಾವು ಸ್ವಾಭಾವಿಕವಾಗಿ ಕನ್ನಡದ ಬಗ್ಗೆ ಪ್ರೀತಿಯನ್ನು ಗಳಿಸಿಕೊಂಡುಬಿಡುವಂತಿತ್ತು. ನಾಲ್ಕು ವರ್ಷದ ಹಿಂದೆ ಕಸಾಪದ ಅಧ್ಯಕ್ಷರು ನನ್ನ ಪರಿಚಯ ಮಾಡಿಕೊಟ್ಟಾಗ ಮೂಲ ಊರು ಕೇಳಿದರು, ಮತ್ತು ತಾವು ಕರ್ನಾಟಕದ ಎಲ್ಲ ಗ್ರಾಮಗಳಲ್ಲೂ ಅಲೆದಿದ್ದೇನೆ ಎಂದರು. ಅವರ ಕನ್ನಡ ನಾಡಿನ ಇಂಚಿಂಚಿನ ಅನುಭವವೂ ನೇರ ಪಡೆದದ್ದು.
ಕನ್ನಡದ ಬಗ್ಗೆ ಹೇಳುವಾಗ ಪಾಪು ಅವರಲ್ಲಿ ಮಗುವಿನ ಬಗೆಗಿನ ಪ್ರೀತಿ, ಕನ್ನಡದ ಕುರಿತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಒಳನೋಟ, ಅಪಾರವಾದ ಪಾಂಡಿತ್ಯ, ಕನ್ನಡದ ಕುರಿತಾದ ಯಾವುದೇ ಅಸಡ್ಡೆಯ ವಿರುದ್ಧದ ಚಡಿಯೇಟು, ಅನನ್ಯ ಸಂಘಟನಾ ಶಕ್ತಿ ಇವೆಲ್ಲಾ ಒಟ್ಟೊಟ್ಟಿಗೆ ಅಧ್ಯಾತ್ಮ ಶಕ್ತಿ ಒಂದುಗೂಡಿದ ಹಾಗೆ ಕೆಲಸ ಮಾಡುತ್ತಿತ್ತು. ಸಾಂಸ್ಕೃತಿಕ ವೇದಿಕೆಗಳಲ್ಲಿ, ಪತ್ರಿಕಾರಂಗದಲ್ಲಿ, ವಿಧಾನಸಭೆಯಲ್ಲಿ, ಕನ್ನಡದ ಬಗೆಗಿನ ಹೋರಾಟಗಳಲ್ಲಿ ಹೀಗೆ ಒಟ್ಟಾರೆ ಕನ್ನಡ ಡಿಂಡಿಮವನ್ನು ಅವರಂತೆ ಎಲ್ಲೆಡೆ ಮೊಳಗಿದ ವ್ಯಕ್ತಿ ಇನ್ನೊಬ್ಬರಿಲ್ಲ. ಆದರೆ ಇವೆಲ್ಲವೂ ಕನ್ನಡದ ಅಂತರಾಳದಲ್ಲಿ ಪ್ರೀತಿಯ ಪಾಕವಾಗಿ ಮೊಳೆತು ಸೊಬಗಿನ ಹೊಂಗಿರಣವಾಗಿ ಅರಳಿತೇ ವಿನಃ ವ್ಯರ್ಥಪ್ರಲಾಪದ ಡಂಭಾಚಾರವಾಗಿ ಎಂದೂ ಮೂಡಲಿಲ್ಲ.
1989ರ ಆಗಸ್ಟ್ ತಿಂಗಳು 6ನೆ ತಾರೀಖು ಸಂಚಿಕೆಯಲ್ಲಿ ಮಹಾರಾಷ್ಟ್ರದ ಅಗ್ರಪಂಕ್ತಿಯ ಮರಾಠಿ ದೈನಿಕ ‘ಲೋಕಸತ್ತಾ’ ತನ್ನ ಸಂಪಾದಕೀಯದಲ್ಲಿ ಹೀಗೆ ಬರೆಯಿತು…..” ಮರಾಠಿ ಮಾತೆಯೂ ಸಹ ಇಂದು ಮರಾಠಿ ಪುಟ್ಟಪ್ಪನ ಅವತಾರದ ಮಾರ್ಗ ನಿರೀಕ್ಷಿಸುತ್ತಿದ್ದಾಳೆ”. ಪಕ್ಕದ ಮರಾಠಿ ಜನ ಸಹ ತಮ್ಮೊಳಗೊಬ್ಬ ಕನ್ನಡ, ಕನ್ನಡಿಗ ಕರ್ನಾಟಕ ತತ್ವಕ್ಕಾಗಿ ಹೋರಾಡುವ ಡಾ. ಪಾಟೀಲ ಪುಟ್ಟಪ್ಪನವರಂತಹ ನಾಯಕ ಮಹಾರಾಷ್ಟ್ರದಲ್ಲಿ ಮರಾಠಿಗರಾಗಿ ಜನ್ಮವೆತ್ತಬಾರದೆ ಎಂದು ಹಂಬಲಿಸುವಷ್ಟರ ಮಟ್ಟಿಗೆ ಡಾ. ಪಾಟೀಲ ಪುಟ್ಟಪ್ಪ ಹೆಸರುವಾಸಿ.
ಒಮ್ಮೆ ಅವರು ಒಂದು ಮಾತು ಹೇಳಿದ್ದರು. ಕನ್ನಡಕ್ಕಿಂತ ಮುಖ್ಯಮಂತ್ರಿ ದೊಡ್ದವರೇನಲ್ಲ. ಅದು ಇನ್ನಾರಾದರೂ ಹೇಳಿದರೆ ರಾಜಕೀಯದ ಹೇಳಿಕೆ ಎನಿಸಬಹುದು. ಆದರೆ ಪಾಪು ಅವರು ಹೇಳಿದರೆ ಅಲ್ಲೊಂದು ಘನತೆ ಇದೆ. ಮುಖ್ಯಮಂತ್ರಿ ಓಡಿಹೋಗಿ ಅವರ ಬಳಿ ಕುಳಿತು ಅಸಮಾಧಾನಕ್ಕೆ ಕಾರಣ ಕೇಳುವಂತೆ ವಾತಾವರಣ ನಿರ್ಮಾಣವಾಗುತ್ತದೆ. ಅದು ಪಾಟೀಲ ಪುಟ್ಟಪ್ಪನವರ ಶಕ್ತಿ.
“ನೀವು ಸ್ಪೀಕರ್ ಎಂದು ನಿಮ್ಮ ಸ್ಥಾನ ದೊಡ್ಡದು, ಅದು ನಿಸ್ಸಂದೇಹ. ಸದನದ ಸಭೆಯಲ್ಲಿ ನಿಮಗಿಂತ ಹೆಚ್ಚಿನವರು ಯಾರೂ ಇಲ್ಲ. ಆದರೆ ಸಭೆಯ ಒಳಗೆ ಮತ್ತು ಹೊರಗೆ ನೀವು ಕೂಡ ಒಬ್ಬ ಕನ್ನಡಿಗರು. ಕನ್ನಡಕ್ಕಿಂತ ನೀವು ದೂಡ್ಡವರೇನೂ ಅಲ್ಲ. ರಾಜ್ಯದ ಗವರ್ನರ್ ಇರಲಿ. ಮುಖ್ಯಮಂತ್ರಿ ಇರಲಿ, ಸ್ಪೀಕರ್ ಇರಲಿ, ಯಾರೇ ಇದ್ದರೂ ಅವರು ಕನ್ನಡಕ್ಕೆ ಅಧೀನರೇ ಹೊರತು ಕನ್ನಡಕ್ಕೆ ಮೇಲಿನವರು ಅಲ್ಲ. ಕನ್ನಡವನ್ನು ಉಪಯೋಗಿಸಬೇಕು ಎಂದು ಹೇಳುವುದನ್ನೇ ಒಂದು ಅಪರಾಧವೆಂದು ನಮ್ಮ ಶಾಸನಸಭೆ ಖಂಡಿತವಾಗಿಯೂ ತೀರ್ಮಾನಿಸಲಾರದು. ನೀವು ಪದೇ ಪದೇ ಹಕ್ಕುಬಾಧ್ಯತೆ ಉಲ್ಲಂಘನೆಯಾಯಿತು ಎಂದು ನನಗೆ ಹೆದರಿಕೆ ಹಾಕಬೇಕಾದ ಅವಶ್ಯಕತೆಯಿಲ್ಲ – ಸಾರ್ವಜನಿಕ ಪ್ರಶ್ನೆಗಳ ಪ್ರತಿಪಾದನೆ ಮಾಡುವಾಗ ನಾನು ಯಾರ ಹೆದರಿಕೆ, ಬೆದರಿಕೆಗಳಿಗೂ ಮಣಿಯುವುದಿಲ್ಲ. ಹೆದರಿಕೆ ಎನ್ನುವ ಮಾತು ನನ್ನ ಶಬ್ಧಕೋಶದಲ್ಲಿಯೇ ಇಲ್ಲ”. ಡಾ. ಪಾಟೀಲ ಪುಟ್ಟಪ್ಪ ಕರ್ನಾಟಕ ಸರ್ಕಾರದ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದರು. ಕನ್ನಡ ಅನುಷ್ಠಾನದ ವಿಷಯದಲ್ಲಿ ಯಾರು ಎಷ್ಟೇ ಉನ್ನತ ಅಧಿಕಾರದಲ್ಲಿದ್ದರೂ ಅವರನ್ನು ತಡವಿಕೊಳ್ಳುತ್ತಿದ್ದರು. ಇದನ್ನು ಸಹಿಸದ ಕೆಲವರು ಡಾ. ಪಾಟೀಲ ಪುಟ್ಟಪ್ಪನವರಿಂದ ಹಕ್ಕು ಚ್ಯುತಿಯಾಗಿದೆ ಎಂದು ಆರೋಪಿಸಿದಾಗ ವಿಧಾನಸಭಾಧ್ಯಕ್ಷರಿಗೆ ಬರೆದ ಪತ್ರದ ಸಾಲುಗಳಿವು. ಇಂತಹ ಮಾತನ್ನು ಪಾಪು ಅಂತಹ ಧೀಮಂತ ಮಾತ್ರ ಹೇಳಲು ಸಾಧ್ಯ. ಭಾಷೆಯ ಹೆಸರಿನಲ್ಲಿ ಕೇವಲ ಪುಂಡುತನ ಮೆರೆದು ಸ್ವಲಾಭ ಮಾಡಿಕೊಳ್ಳುವ ಜನರಿಗೆ ಇದು ಸಾಧ್ಯವಾದುದಲ್ಲ.
1962ರಿಂದ 1974ರವರೆಗೆ ಪಾಟೀಲ ಪುಟ್ಟಪ್ಪನವರು ರಾಜ್ಯಸಭೆಯ ಸದಸ್ಯರಾಗಿದ್ದರು. ಡಾ. ಪಾಟೀಲ ಪುಟ್ಟಪ್ಪ ಚರ್ಚೆ ಆರಂಭಿಸಿದರೆಂದರೆ ನೆಹರೂ ಕೂಡಾ ಏಕಾಗ್ರತೆಯಿಂದ ಆಲಿಸುತ್ತಿದ್ದರು. ಪಾರ್ಲಿಮೆಂಟಿನ ಸೆಂಟ್ರಲ್ ಹಾಲ್ನಲ್ಲಿ ಚರ್ಚೆ ಮಾಡಲಿಕ್ಕಿರುವ ಡಾ. ಪಾಟೀಲ ಪುಟ್ಟಪ್ಪನವರ ಸುತ್ತ ಇನ್ನುಳಿದ ಪಾರ್ಲಿಮೆಂಟಿನ ಸದಸ್ಯರು ಪಾಠ ಹೇಳಿಸಿಕೊಳ್ಳುವ ವಿದ್ಯಾರ್ಥಿಗಳಂತೆ ನೆರೆಯುತ್ತಿದ್ದರೆಂಬುದು ಅವರ ಸಮಕಾಲೀನರ ಮಾತು. ಚಲಿಸುವ ಜ್ಞಾನಕೋಶವೆಂದೇ ಹೆಸರಾದ ಡಾ. ಪಾಟೀಲ ಪುಟ್ಟಪ್ಪನವರು ಹೊಸ ಪೀಳಿಗೆಯವರಿಗಂತೂ ವಿಸ್ಮಯ.
ಕನ್ನಡದ ಕೆಚ್ಚೆದೆಯ ಹೋರಾಟಗಾರ, ಪತ್ರಿಕೋದ್ಯಮಿ, ಕಥೆಗಾರ, ಸಾಹಿತಿ, ಚಿಂತಕ, ಪ್ರಬುದ್ಧ ರಾಜಕಾರಣಿ, ಆಡಳಿತಗಾರ ಎಂಬ ಹಲವಾರು ವಿಶೇಷಣಗಳನ್ನು ಅಭಿಮಾನದಿಂದ ಸೇರಿಸಬಹುದಾದ ಧೀಮಂತಿಕೆಯ ವ್ಯಕ್ತಿ ಶ್ರೀ ಪುಟ್ಟಪ್ಪ ಸಿದ್ಧಲಿಂಗಗೌಡ ಪಾಟೀಲರು 1921 ಜನವರಿ 14ರಂದು ಸಂಕ್ರಮಣದ ದಿನ ಸ್ವಾತ್ರಂತ್ರ್ಯ ಹೋರಾಟಗಾರರ ನೆಲವೀಡು ಹಾವೇರಿ ತಾಲೂಕಿನ ಕುರುಬಗೊಂಡದ ಸಾಮಾಜಿಕ ಅಂತಃಕರಣವೇ ಪ್ರಮುಖವಾಗಿದ್ದ ಕುಟುಂಬದಲ್ಲಿ ಹುಟ್ಟಿದರು. ವಿದ್ಯಾರ್ಥಿಯಾಗಿದ್ದಾಗಲೇ 1942ರ ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಕರ್ನಾಟಕ ಕಾಲೇಜಿನ ಮುಖಂಡರಾಗಿ ಬ್ರಿಟಿಷ್ ಅಧ್ಯಾಪಕರಿಗೆ ಬಲವಂತವಾಗಿ ಗಾಂಧೀ ಟೋಪಿ ಹಾಕಿ ಆ ಕಾರಣಕ್ಕೆ ಕಾಲೇಜಿನಿಂದ ಹೊರಹಾಕಲ್ಪಟ್ಟಿದ್ದರು. ಧಾರವಾಡದ ಮುರುಘಾ ಮಠದಲ್ಲಿದ್ದು ಕರ್ನಾಟಕ ಕಾಲೇಜಿನಲ್ಲಿ ಪದವಿ, ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಎಂ.ಎಂ.ಬಿ ವ್ಯಾಸಂಗ ಮಾಡಿದರು. ಆನಂತರದಲ್ಲಿ ಮುಂಬೈ ಮತ್ತು ಹುಬ್ಬಳ್ಳಿಗಳಲ್ಲಿ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಡಾ. ಪುಟ್ಟಪ್ಪ 1949ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಎಂ.ಎಫ್.ಪಿ ಪದವಿ ಪಡೆದರು.
ತಮ್ಮ ಶತಮಾನವನ್ನು ದಾಟಿದ ಬದುಕಿನುದ್ದಗಲಕ್ಕೂ ಕ್ರಿಯಾಶೀಲರಾಗಿದ್ದ ಪಾಪು ಅವರು ಕರ್ನಾಟಕದ ಸಾಕ್ಷಿಪ್ರಜ್ಞೆಯಾಗಿ ಉಳಿದವರು. ಸಾಹಿತ್ಯ ಹೋರಾಟ, ಕರ್ನಾಟಕ ಏಕೀಕರಣ, ಗೋಕಾಕ್ ಚಳುವಳಿಗಳ ನೇತೃತ್ವ ವಹಿಸಿದರು. ಮೂರು ದಶಕಗಳ ಕಾಲ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ಸರ್ಕಾರದ ಕಾವಲು ಸಮಿತಿಯ ಅಧ್ಯಕ್ಷರಾಗಿ, ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ ಬದುಕಿನ ವಿವಿಧ ಕ್ಷೇತ್ರಗಳಲ್ಲಿ ಸಮರ್ಥ ರೀತಿಯಿಂದ ಕಾರ್ಯ ನಿರ್ವಹಿಸಿದ ಡಾ. ಪಾಟೀಲ ಪುಟ್ಟಪ್ಪ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಪ್ರವಾಸ ಮಾಡಿ ಲೋಕಾನುಭವ ಪಡೆದವರು. ಪತ್ರಿಕೋದ್ಯಮ ಸೇವೆಗೆ ಸಂದ ಪ್ರಶಸ್ತಿಗಳು, ರಾಜ್ಯೋತ್ಸವ ಪಶಸ್ತಿ, ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪದವಿ ಹೀಗೆ ಹಲವಾರು ವಿಶಿಷ್ಟ ಗೌರವಗಳು ಅವರಿಗೆ ಸಂದಿದ್ದವು.
1945ರ ಸುಮಾರಿಗೆ ಮುಂಬೈಗೆ ವಕೀಲಿವೃತ್ತಿ ಮಾಡಲೆಂದು ಹೋಗಿದ್ದ ಡಾ. ಪಾಟೀಲ ಪುಟ್ಟಪ್ಪ ಅಲ್ಲಿ ಕೋರ್ಟಿಗಿಂತ ಹೆಚ್ಚು ಪತ್ರಿಕೆಗಳ ಕಚೇರಿಗಳಿಗೆ ಭೇಟಿ ನೀಡಿದರು. ಇಪ್ಪತ್ತೈದರ ಹರೆಯದಲ್ಲೇ ‘ಫ್ರೀ ಪ್ರೆಸ್ ಜರ್ನಲ್’ಗಳಿಗೆ ಆಹ್ವಾನಿತರಾಗಿ ಬರೆಯುವಷ್ಟು ಆಂಗ್ಲ ಪತ್ರಿಕೋದ್ಯಮದಲ್ಲಿ ಮನ್ನಣೆ ಗಳಿಸಿಕೊಂಡಿದ್ದರು. ಕೆ. ಎಚ್. ಪಾಟೀಲರು ಅವರನ್ನು ಹುಬ್ಬಳ್ಳಿಗೆ ಕರೆಸಿ ಹೊಸದಾಗಿ ಪ್ರಾರಂಭಗೊಂಡ ‘ವಿಶಾಲ ಕರ್ನಾಟಕ’ ಪತ್ರಿಕೆಯ ಸಂಪಾದಕತ್ವ ನೀಡಿದರು. ಆ ಕಾಲದಲ್ಲಿ ವಿಶಾಲ ಕರ್ನಾಟಕ ಜನಪ್ರಿಯತೆ ಪಡೆದದ್ದೇ ಅಲ್ಲದೆ ರಾಷ್ಟ್ರೀಯ ಚಳುವಳಿಗೆ ಮತ್ತು ಕರ್ನಾಟಕದ ಏಕೀಕರಣಕ್ಕೆ ಐತಿಹಾಸಿಕ ವೇದಿಕೆಯಾಗಿತ್ತು.
1949ರಲ್ಲಿ ಅಮೆರಿಕಕ್ಕೆ ಪತ್ರಿಕೋದ್ಯಮ ವಿದ್ಯಾಥಿಯಾಗಿ ಹೋಗಿ ಬಂದ ನಂತರ ‘ನವಯುಗ’ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಪುಟ್ಟಪ್ಪ 1954ರಲ್ಲಿ ಸಂಯುಕ್ತ ಕರ್ನಾಟಕದ ಡಿ. ಮೊಹರೆ ಹನುಮಂತರಾಯರ ಪ್ರೋತ್ಸಾಹದೊಂದಿಗೆ ಪ್ರಪಂಚ ಪತ್ರಿಕೆ ಹುಟ್ಟು ಹಾಕಿದರು. ಹಾಗೆ ಹುಟ್ಟಿಕೊಂಡ ‘ಪ್ರಪಂಚ’ ಆ ಕಾಲದ ಪತ್ರಿಕೋದ್ಯಮದ ವಿಸ್ಮಯಗಳಲ್ಲೊಂದಾಗಿತ್ತು. ‘ಪ್ರಪಂಚ’ದ ಅಂತಃಶಕ್ತಿ ಮತ್ತು ಸಾರ್ವಜನಿಕ ಜೀವನದ ಶಿಷ್ಟಾಚಾರ ಉಲ್ಲಂಘನೆ ಮಾಡುವ ಯಾರನ್ನೇ ಆದರೂ ಎದುರಿಸಿ ನಿಲ್ಲುವ ದಿಟ್ಟತನದಿಂದಾಗಿ ಪಾಟೀಲ ಪುಟ್ಟಪ್ಪ ತಮ್ಮ 33ರ ಹರಯದಲ್ಲೇ ಕರ್ನಾಟಕದ ಮನೆಮಾತಾಗತೊಡಗಿದರು. “ಪತ್ರಿಕೆ ಹಾಗೂ ಸರಕಾರ ಎರಡೂ ಜನರನ್ನು ಕೇಂದ್ರವಾಗಿ ಮಾಡಿಕೊಂಡಿವೆ. ಜನರಿಗೆ ಪತ್ರಿಕೆ ಹಾಗೂ ಸರ್ಕಾರ ಎರಡೂ ಬೇಕು. ಅನಿಷ್ಟವೇ ಆಗಿದ್ದರೂ ಅವೆರಡೂ ಅನಿವಾರ್ಯ. ಅವುಗಳಿಗಿಂತ ಉತ್ತಮದ ಸಂಸ್ಥೆಗಳನ್ನು ಮಾನವ ನಿರ್ಮಿಸಿಲ್ಲ” ಎಂಬುದು ಪಾಟೀಲ ಪುಟ್ಟಪ್ಪನವರ ಅಭಿಮತ. ಬರವಣಿಗೆಯಲ್ಲಿ ತೂಕಬದ್ಧತೆ, ಆಕ್ರೋಶ ತುಂಬಿದರೂ ಅಪದ್ಧ ಪದ ತುಳುಕದೆ ಎಂದಿನಿಂದ ಕಾಯ್ದುಕೊಂಡ ಬರವಣಿಗೆಯ ಘನತೆ ಡಾ. ಪಾಟೀಲ ಪುಟ್ಟಪ್ಪನವರನ್ನು ಸಾಹಿತಿ, ಪತ್ರಿಕೋದ್ಯಮಿ ಎಂಬ ಸೀಮಿತ ಚೌಕಟ್ಟನ್ನು ಮೀರಿ ನಿಲ್ಲುವಂತೆ ಮಾಡಿದ್ದವು.
ಡಾ. ಪಾಟೀಲ ಪುಟ್ಟಪ್ಪನವರ ಬರವಣಿಗೆ ಹಲವು ಮಾದರಿಗಳಲ್ಲಿ ಹರಿದುಬಂದಿತ್ತು. ವಿಶೇಷವಾಗಿ ಪ್ರಬಂಧಗಳಲ್ಲಿ ಅಪ್ರತಿಮ ಪಾಂಡಿತ್ಯ ಪ್ರದರ್ಶಿಸಿರುವ ಡಾ. ಪುಟ್ಟಪ್ಪನವರ ಬರಹಗಳೆಲ್ಲ ಹೆಚ್ಚೂ ಕಡಿಮೆ ಪ್ರಬಂಧಗಳೇ. ಇದು ಅವರ ಪತ್ರಿಕಾ ಬರಹಗಳಿಗಷ್ಟೇ ಅನ್ವಯವಾಗದೆ ರಾಜ್ಯದ, ರಾಷ್ಟ್ರದ ಸಮಸ್ಯೆಗಳ ಕುರಿತಂತೆ ಪ್ರಧಾನಮಂತ್ರಿ ಸಹಿತ ಇನ್ನುಳಿದ ಅಧಿಕಾರಸ್ಥರಿಗೆ ಬರೆದ ಪತ್ರಗಳೂ ಕೂಡ ಮಾಹಿತಿಯ ದೃಷ್ಟಿಯಿಂದ ಪ್ರಬಂಧವೆನಿಸುವ ಲಕ್ಷಣವನ್ನೇ ಪಡೆದಿವೆ. ಅವರ ಯಾವ ಬರಹವೂ ಕೇವಲ ಸಾಂದರ್ಭಿಕ ತುರ್ತಿಗೆ ಬಂದದ್ದೆನಿಸುವುದಿಲ್ಲ.
ಪ್ರಜಾವಾಣಿಯಲ್ಲಿ ಪ್ರತಿ ವಾರ ಪ್ರಕಟಗೊಂಡು ನಂತರ ಪುಸ್ತಕರೂಪ ಪಡೆದುಕೊಂಡ ಅವರ ‘ನಮ್ಮದು ಈ ಭರತಭೂಮಿ’ಯಲ್ಲಿ ಅವರು ಕಂಡ ಭಾರತದ ಪ್ರಮುಖ ಪಟ್ಟಣಗಳ ಪ್ರದೇಶಗಳ ಪರಿಚಯವಿದೆ. ‘ಶತಮಾನಗಳ ಚೆಲುವೆ, ಚಿರಯುವತಿ’ ಎಂದು ದೆಹಲಿಗೆ ನಾಮಕರಣ ಮಾಡುವ ಪುಟ್ಟಪ್ಪ ಸಂಸ್ಕೃತಿಯಿಂದ ಸಂಸ್ಕೃತಿಗೆ ಪಲ್ಲಟಗೊಳ್ಳುತ್ತಲೇ ಅನಾದಿಕಾಲದಿಂದ ಉಳಿದುಕೊಂಡು ಬಂದ ದೆಹಲಿ ಇಟಲಿಯ ರೋಮ್ ರಾಜಧಾನಿಗಿಂತಲೂ ಪ್ರಾಚೀನವೆಂದು ಸಾಧಿಸುವಲ್ಲಿ ಯಾವುದೂ ಉತ್ಪ್ರೇಕ್ಷೆ ಎನಿಸುವುದಿಲ್ಲ. ದೆಹಲಿಯ ರೂಪ, ವಿರೂಪ ಹೇಳಿದಂತೆಯೇ ಗೋವೆಯ ಪುರಾಣಕಾಲದ ಪರಶುರಾಮ, ಅಶೋಕ, ಕದಂಬರು, ಅರಬ್ಬರು, ಪೋರ್ಚುಗೀಸರ ಕಾಲದಿಂದ ಇಂದಿನವರೆಗೆ ಐತಿಹ್ಯಗಳ ಪಾತ್ರಗಳನ್ನು ಮನದಟ್ಟು ಮಾಡುತ್ತಲೇ ಸ್ಥಳದರ್ಶನ ಮಾಡಿಸುತ್ತಾರೆ. ಪಾಂಡಿಚೇರಿ, ಅಂಡಮಾನ್, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್ನಿಂದ ಹಿಡಿದು ದೇಶದ ಬಹುತೇಕ ಭಾಗಗಳು ಪುಟದಿಂದ ಎದ್ದು ನಿಲ್ಲುತ್ತವೆ. ಪುಟದಿಂದ ಪುಟಕ್ಕೆ ನಡೆದಂತೆ ಓದುಗನೆದೆಯೊಳಗೆ ಅಕ್ಷರಗಳು ದೃಷ್ಟಿರೂಪ ಪಡೆದು ಜೀವಂತ ಭಾರತ ದರ್ಶನವಾಗುತ್ತದೆ.
‘ನಮ್ಮ ದೇಶ ನಮ್ಮ ಜನ’ ಸಂಕಲನದ ಮೂವತ್ತು ಪ್ರಬಂಧಗಳಲ್ಲಿ ಅವರು ಕೇವಲ ರಾಷ್ಟ್ರೀಯ ಅಭಿಮಾನದ ಹುರುಪಿನಿಂದ ಕಾಣಿಸಿಕೊಳ್ಳದೆ, ದೇಶದ ಅಂತರ್ಯುಗದಲ್ಲಿ ಹಣಿಕಿಕ್ಕಿ, ಕುಸಿದು ಬೀಳುತ್ತಿರುವ ರಾಷ್ಟ್ರೀಯತೆಯ ಭಾವನೆಗಳು, ಭಿನ್ನಗೊಂಡ ರಾಷ್ಟ್ರೀಯ ಏಕತೆಯ ಸೂತ್ರಗಳನ್ನು ಕಂಡು ದುಗುಡಮನದಿಂದ ದೇಶದ ಐಕ್ಯತೆಯ ಬಗ್ಗೆ ಚಿಂತಿಸಿದ್ದಾರೆ. ‘ಕರ್ನಾಟಕದ ಕಥೆ’ ಕರ್ನಾಟಕ ಭಾಷೆ, ಚರಿತ್ರೆ ಹಾಗೂ ಕನ್ನಡದ ಜನತೆಗೆ ಸಂಬಂಧಿಸಿದ್ದು. ಕರ್ನಾಟಕದ ಐತಿಹಾಸಿಕ ಪರಂಪರೆ ಇತಿಹಾಸವನ್ನು ವಿಶ್ಲೇಷಿಸಿದ್ದಾರೆ. ‘ಕರ್ನಾಟಕ ಕತ್ತಲೆಯಿಂದ ಬೆಳಕಿಗೆ’ ಎಂಬ ಅಧ್ಯಯನದಲ್ಲಿ ಕಳೆದೆರಡು ಶತಮಾನಗಳ ಕನ್ನಡ ಇತಿಹಾಸವೇ ಅಡಗಿದೆ. ಕನ್ನಡ – ನೆಲ – ಜಲ ಭಾಗದಲ್ಲಿ ಕನ್ನಡದ ಮಹನೀಯರೂ ಸ್ಮರಣೆಗೊಳಗಾಗಿದ್ದಾರೆ. ಹಾಗೆಯೇ ಕರ್ನಾಟಕದ ಪ್ರಾಕೃತಿಕ ಚೆಲುವನ್ನು ಅಕ್ಷರದಲ್ಲಿ ಹಿಡಿದಿಡುತ್ತಾರೆ.
‘ಈಗ ಹೊಸದನ್ನು ಕಟ್ಟೋಣ ನಾವು’ ಸಂಕಲನದ ನಲವತ್ತು ಲೇಖನಗಳಲ್ಲಿ ದೇಶದ ಜನತೆಯ ಇತಿಹಾಸ, ವರ್ತಮಾನಗಳೆರಡನ್ನೂ ನಿಖರ ಪ್ರಜ್ಞೆಯಿಂದ ಬರೆಯುತ್ತಿದ್ದ ಡಾ. ಪುಟ್ಟಪ್ಪ ಬರುವ ನೆಮ್ಮದಿಯ ನಾಳೆಗಾಗಿ ಈ ವೇಳೆಗೆ ಮಾಡಬೇಕಾದ್ದೇನು ಎಂದು ವಿಚಾರಪೂರ್ಣವಾಗಿ ವಿಶ್ಲೇಷಣೆಗಿಳಿಯುತ್ತಿದ್ದರು.
‘ಕನ್ನಡ ಪ್ರಭ’ ಪತ್ರಿಕೆಯಲ್ಲಿ ಪ್ರತಿವಾರ ಪ್ರಕಟಗೊಂಡ ಲೇಖನಗಳ ಮೂಲಕ ‘ನನ್ನದು ಈ ಕನ್ನಡ ನಾಡು’ ಪುಸ್ತಕದಲ್ಲಿ ಕರ್ನಾಟಕದ ಬೇರೆ ಬೇರೆ ಭಾಗಗಳ ಪರಿಚಯದಲ್ಲಿ ಧಾರವಾಡ ಜಿಲ್ಲೆಯ ಕುರಿತಾದ ವಿಷಯಗಳಿಗೆ ಹೆಚ್ಚಿನ ಮಹತ್ವವಿದೆ. ಕರ್ನಾಟಕ ಏಕೀಕರಣದಲ್ಲಿ ಪ್ರಮುಖ ಪಾತ್ರವಹಿಸಿದ ಧಾರವಾಡ ಜಿಲ್ಲೆಯನ್ನು ‘ಕರ್ನಾಟಕವನ್ನು ಕಟ್ಟಿದ ಕೈ’ ಎಂದು ಕರೆದಿರುವುದಕ್ಕೆ ಇಡೀ ನಾಡಿನ ಒಪ್ಪಿಗೆ ಸಂದಿದೆ. ಕೇವಲ ಗತ ಸಾಂಸ್ಕೃತಿಕ ಹಿರಿಮೆಗೇ ನಿಲ್ಲದ ಅವರು ಪಂಪ ಕುಮಾರವ್ಯಾಸನಿಂದ ಹಿಡಿದು ಆಧುನಿಕ ಬೇಂದ್ರೆ, ಕಣವಿಯವರ ಸಾಹಿತ್ಯಕ ಹಿರಿಮೆಯನ್ನು ಪರಿಚಯಿಸುತ್ತಾರೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ಸೃಷ್ಟಿ ಸೌಂದರ್ಯಗಳ ಸೊಬಗು ಮನನವಾದರೆ, ಚಿತ್ರದುರ್ಗ ಸಾಹಸಿಗರ ನಾಡಾಗಿ ಕಾಣುತ್ತದೆ. ಬಳ್ಳಾರಿ ಕಳೆದುಕೊಂಡದ್ದೆನ್ನೆಲ್ಲ ಪಟ್ಟಿಮಾಡಿ ಕಳವಳ ಪಡುವ ಪುಟ್ಟಪ್ಪ ಮೈಸೂರನ್ನು ಇತಿಹಾಸದ ಕನಸೆಂದು ಬಣ್ಣಿಸುತ್ತಾರೆ. ಜಿಲ್ಲೆಗಳ ಪರಿಚಯದೊಂದಿಗೆ ಸಮಗ್ರ ಕನ್ನಡನಾಡಿನ ಸಾಂಸ್ಕೃತಿಕ ಸಾಮಾಜಿಕ ಇತಿಹಾಸದ ಸುಂದರ ಹಂದರವೊಂದು ಓದುಗರ ಕಣ್ಣೆದುರು ಬಿಡಿಸಿಕೊಳ್ಳತೊಡಗುತ್ತದೆ.
ಪ್ರಕಾಶಕರ ವಿನಂತಿಗಾಗಿ ಬರೆದುಕೊಟ್ಟ ‘ಕರ್ನಾಟಕ ಕಥೆ’ಯಲ್ಲಿ ಹದಿಮೂರು ಪ್ರಬಂಧಗಳಿವೆ. ಪಾಪು ಅವರ ಚಿಂತನೆಯಲ್ಲಿ ‘ಬಸವೇಶ್ವರ’ ಎಂಬ ಸಾಮಾಜಿಕ ಪ್ರತಿಮೆ ಪವಾಡ ಮಾದರಿಯ ಉತ್ಪ್ರೇಕ್ಷಿತ ಕಥೆಯಾಗಿ ಕಾಣದೆ, ಬಸವಣ್ಣನವರ ವ್ಯಕ್ತಿತ್ವದ ಆಳ ನೋಟಕ್ಕೆ ಸ್ಪಂದನೆ ಮೂಡುವಂತೆ ಆ ಪಾತ್ರಕ್ಕೆ ವಿಶಿಷ್ಟ ಮಹತ್ವ ಒದಗಿಸಿದ್ದಾರೆ.
ತಮ್ಮ ಚಿಕ್ಕವಾಕ್ಯ ಸರಣಿಯಿಂದಾಗಿಯೇ ಸಮರ್ಥ ಚಿತ್ರಕಶಕ್ತಿ ಪಡೆದಿರುವ ಡಾ. ಪುಟ್ಟಪ್ಪನವರಿಗೆ ಅದೇ ಕಥೆ ಕಟ್ಟುವ ಪ್ರಮುಖ ಪೂರಕ ಸಂಗತಿಯಾಗಿದೆ. ‘ಶಿಲಾಬಾಲಿಕೆ ನುಡಿದಳು’ ಕಥೆಯೇ ಆ ಪರಿಣತಿಗೆ ಸಾಕ್ಷಿ. ಈ ಕಥೆಯಲ್ಲಿ ದೇವಯ್ಯ ಕಲಾರಾಧಕನಾಗಿ ಶಿಲೆ ಶಿಲೆಯಲ್ಲೂ ಜೀವ ಭಾವಗಳನ್ನು ಕಾಣುವ ರೀತಿ, ಅವನು ಇಂಥ ಸುಂದರ ಕಥೆಯನ್ನು ತಾನು ಕಂಡೆನೆಂಬತೆ ಚಿತ್ರಿಸಿರುವ ರೀತಿ ಮೋಹಕವಾದದ್ದು. ‘ಇರಲಿಲ್ಲದ ಮನುಷ್ಯ’ದಲ್ಲಿ ಮನುಷ್ಯನ ಘನತೆ ಕ್ರೌರ್ಯ, ‘ಲಕ್ಷ್ಮಿ ಕೈ ತೋರಿಸಿದಳು’ ಕಥೆಯಲ್ಲಿ ವ್ಯಕ್ತಿಯೊಬ್ಬ ದುರ್ಜನರ ಸಹವಾಸ ಮಾಡಿ ಹಣದಾಶೆಯಿಂದ ಹಾಳಾಗುವ ನೈತಿಕ ಅಧಃಪತನ ಮಹತ್ವದ ಪರಿಣಾಮ, ‘ಪೂರ್ವ-ಪಶ್ಚಿಮ’ ಕಥೆಯಲ್ಲಿ ಆಧುನಿಕ ಭಾರತದ ಯುವಜನಾಂಗ ಭಾರತೀಯ ಸಂಸ್ಕಾರಗಳಿಂದ ವಿಮುಖಗೊಂಡು ಪಾಶ್ಚಿಮಾತ್ಯ ಸಂಸ್ಕೃತಿಯೆಡೆಗೆ ಆಕರ್ಷಿತರಾಗುತ್ತಿದ್ದರೆ, ಸ್ವತಃ ಪಾಶ್ಚಿಮಾತ್ಯರೇ ಭಾರತೀಯತೆಯೆಡೆಗೆ ಆಕರ್ಷಕರಾಗುವ ಬಣ್ಣನೆ ಇದೆ. ಜೀವನ ಜೋಕಾಲಿ, ಮಗಳ ಮದುವೆ, ಮಮತೆಯ ಮಗಳು, ಕೋಡಿಹಳ್ಳಿ ಜಮೀನುದಾರರು, ತಬ್ಬಲಿ, ಕಾಡುಹೇಳಿದ ಕಥೆ ಸಂಕಲನದ ಪ್ರಮುಖ ಕಥೆಗಳು.
ಹದಿನಾರು ಕಥೆಗಳಿರುವ ‘ಗವಾಕ್ಷ ತೆರೆಯಿತು’ ಅವರ ಮತ್ತೊಂದು ಮಹತ್ವದ ಕಥಾಸಂಕಲನ. ವಿದ್ಯಾರ್ಥಿ ಹಂತದ ಆದರ್ಶ ಕಲ್ಪನೆಯಲ್ಲಿ ಮೂಡಿದೆ ‘ಸಾವಿನ ಮೇಜವಾನಿ’ ಸಂಕಲನದಲ್ಲಿನ ಆರು ಕಥೆಗಳು.
ತಮ್ಮ ಪ್ರಬಂಧಗಳಲ್ಲಿ ಪಾಂಡಿತ್ಯ ಆಳದ ಅಧ್ಯಯನ, ವರ್ತಮಾನದ ಕುರಿತ ತೀವ್ರ ವಿಮರ್ಶೆ ಪ್ರಕಟಪಡಿಸುವ ಡಾ. ಪಾಟೀಲ ಪುಟ್ಟಪ್ಪ ಕಥೆಗಳಲ್ಲಿ ಮಾತ್ರ ಸುಕೋಮಲರಾಗಿ ಕಾಣುತ್ತಾರೆ. ಬಹುಶಃ ಕಥೆ ಬರೆದ ದಿನಗಳ ಅವರ ತಾರುಣ್ಯ, ಭಾವುಕತೆಯೇ ಪ್ರಮುಖ ಆಶಯವಾಗಿದ್ದ ಆ ಕಾಲದ ಸಾಮಾಜಿಕ ಚಿಂತನೆಗಳು ಅವರನ್ನು ಪ್ರಭಾವಿಸಿರಬೇಕು. ರಮ್ಯತೆಯೇ ಪ್ರಾಶಸ್ತ್ಯದ ಅಂಗಳವಾಗಿದ್ದ ಆ ದಿನಮಾನಗಳಲ್ಲಿ ಬರೆದ ನಲವತ್ತು ಕತೆಗಳು ತೀವ್ರ ಸಾಮಾಜಿಕ ಕಳಕಳಿಯನ್ನೂ ಪ್ರಕಟಿಸುತ್ತದೆ. ಯಾವುದನ್ನು ನಾವು ಈಚೆಗೆ ಬಂಡಾಯವೆಂದು ಕರೆಯುತ್ತೇವೆಯೋ ಅದರ ಮೂಲ ಲಕ್ಷಣಗಳು ಆ ಕಥೆಗಳಲ್ಲಿವೆ.
‘ಅನುಭವ ಇರುವಲ್ಲಿ ಅಮೃತತ್ವ ಇದೆ’, ‘ಬದುಕುವುದಕ್ಕೆ ಬೇಕು ಬದುಕುವ ಈ ಮಾತು’ ಎರಡೂ ಅವರ ಸಂಪಾದಕತ್ವದ ಪ್ರಪಂಚ ಪತ್ರಿಕೆಯ ಶಾಶ್ವತ ಅಂಕಣಗಳು. ಬದುಕಿನ ಅನನ್ಯತೆಗಳು, ಬದುಕು ಬೆಳಗಿಕೊಳ್ಳಲು, ಭವಗಳು ತಿಳಿಗೊಳ್ಳಲು ಈ ಎರಡೂ ಅಂಕಣದ ಬರಹಗಳು ಎಷ್ಟೋಜನರ ಬದುಕಿಗೆ ಗತಿಯನ್ನೇ ಬದಲಿಸಿದ ದೃಷ್ಟಾಂತಗಳಿವೆ. ಎಲ್ಲ ಕಾಲಕ್ಕೂ ಪ್ರಪಂಚ ಪತ್ರಿಕೆಯ ಬಹಳಷ್ಟು ಪುಟಗಳು ಸಂಗ್ರಾಹ್ಯವಾಗಿಯೇ ಉಳಿದಿವೆ. ಅವೇ ಪುಸ್ತಕ ರೂಪ ಕೂಡ ಪಡೆದು ಮಾರ್ಗಸೂಚಿಗಳಂತೆ ಪಾತ್ರ ನಿರ್ವಹಿಸುತ್ತಿವೆ.
‘ದಿ ಹಿಂದೂ’ ಪತ್ರಿಕೆಯ ಸುಪ್ರಸಿದ್ಧ ಅಂಕಣಕಾರ ಸಿ.ಎಚ್. ಪ್ರಹ್ಲಾದರಾವ್ ‘ಸಮಗ್ರ ಪಾಪು ಪ್ರಪಂಚ’ದ ಮುನ್ನುಡಿಯ ಕೊನೆಯಲ್ಲಿ ಹೇಳುತ್ತಾರೆ “ ಈ ಬದುಕು ಸಾರ್ಥಕವಾಗಲು ಕಾಶಿಗೆ ಹೋಗುತ್ತಾರೆ, ರಾಮೇಶ್ವರಕ್ಕೆ ಹೋಗುತ್ತಾರೆ. ಗುಡಿಗಳನ್ನು ಕಟ್ಟಿಸುತ್ತಾರೆ, ಭಗವದ್ಗೀತೆ ಓದುತ್ತಾರೆ. ನನ್ನ ಮಟ್ಟಿಗೆ ‘ಪಾಪು ಪ್ರಪಂಚ’ದಂತಹ ಒಂದು ಪುಸ್ತಕ ಮೇಜಿನ ಮೇಲಿದ್ದರೆ ಸಾಕು ಅದನ್ನು ಅಲ್ಲಿ, ಇಲ್ಲಿ ಇಣುಕಿ ನೋಡಿದರೆ ಬದುಕು ಸಾರ್ಥಕವಾಗುವ ದಾರಿ ತೆರೆದುಕೊಳ್ಳುತ್ತದೆ. 1214 ಪುಟಗಳ ಹೊತ್ತಿಗೆಯಲ್ಲಿ ದಾಖಲಾದ ಲೇಖನಗಳೆಲ್ಲ ಅವರು ‘ತರಂಗ’ ವಾರಪತ್ರಿಕೆಯ ಪಾಪು ಪ್ರಪಂಚ ಅಂಕಣಕ್ಕೆ ಬರೆದವು’. ಡಾ. ಪಾಟೀಲ ಪುಟ್ಟಪ್ಪನವರ ಆಲೋಚನೆಯ ಹರವು ದೇಶ, ಕೋಶ, ಗಡಿಗಳ ಮಿತಿಯನ್ನು ದಾಟಿ ಪ್ರಪಂಚದೆಲ್ಲೆಡೆ ವಿಹರಿಸುತ್ತದೆ. ಈ ಪುಸ್ತಕಗಳ ಒಳನೋಟ ಅದೊಂದು ಪ್ರತ್ಯೇಕ ಪಾಪು ಲೋಕ!
ಕನ್ನಡಿಗರಿಗೆ ಹೀಗೆ ಸಮರ್ಥ ವಿಶ್ವದರ್ಶನ ತೋರುತ್ತ, ಸ್ವಾಭಿಮಾನ, ಕನ್ನಡಾಭಿಮಾನ ಬೋಧಿಸುವುದರ ಜೊತೆಗೆ ಅವರನ್ನು ಕಾಯುವ ಕಾವಲುಗಾರನಾಗಿ ನಿಂತ ಪಾಟೀಲ್ ಪುಟ್ಟಪ್ಪನವರು ಈ ಲೋಕದಲ್ಲಿಲ್ಲದಿರುವುದು ತುಂಬಲಾರದ ನಷ್ಟ ಎಂಬುದು ಬರಿಯ ಮಾತಲ್ಲಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೌಹಾರ್ದತೆ ಕದಡಲು ಕಾಣದ ಕೈಗಳು ಕೆಲಸ ಮಾಡುತ್ತಿವೆ: ಹಿಜಾಬ್ ವಿಚಾರದಲ್ಲಿ ಹೈಕೋರ್ಟ್

Wed Mar 16 , 2022
ಕರ್ನಾಟಕ ಹೈಕೋರ್ಟ್ ಹಿಜಾಬ್ ವಿಷಯದ ಕುರಿತು 100 ಪುಟಗಳಿಗಿಂತ ಹೆಚ್ಚಿನ ಆದೇಶದಲ್ಲಿ, ಅದು ಹೇಗೆ ಇದ್ದಕ್ಕಿದ್ದಂತೆ ಶೈಕ್ಷಣಿಕ ಅವಧಿಯ ಮಧ್ಯದಲ್ಲಿ, ಹಿಜಾಬ್ ಸಮಸ್ಯೆಯನ್ನು ಸೃಷ್ಟಿಸುತ್ತದೆ ಮತ್ತು ಪ್ರಮಾಣದಿಂದ ಹೊರಹಾಕಲ್ಪಟ್ಟಿದೆ ಎಂದು ದಿಗ್ಭ್ರಮೆಗೊಂಡಿತು. ಅಧಿಕಾರಗಳು. ಹಿಜಾಬ್ ಇಂಬ್ರೊಗ್ಲಿಯೊ ತೆರೆದುಕೊಂಡ ರೀತಿಯಲ್ಲಿ ಸಾಮಾಜಿಕ ಅಶಾಂತಿ ಮತ್ತು ಅಸಂಗತತೆಯನ್ನು ಎಂಜಿನಿಯರ್ ಮಾಡಲು ಕೆಲವು ‘ಕಾಣದ ಕೈಗಳು’ ಕೆಲಸ ಮಾಡುತ್ತಿವೆ ಎಂಬ ವಾದಕ್ಕೆ ಅವಕಾಶ ನೀಡುತ್ತದೆ. ಹೆಚ್ಚಿನದನ್ನು ನಿರ್ದಿಷ್ಟಪಡಿಸುವ ಅಗತ್ಯವಿಲ್ಲ. ನಡೆಯುತ್ತಿರುವ ಪೊಲೀಸ್ ತನಿಖೆಯ ಮೇಲೆ […]

Advertisement

Wordpress Social Share Plugin powered by Ultimatelysocial