ಸಿದ್ದರಾಮಯ್ಯ ಗೆದ್ದರೆ ಕೈಗೆ ಸಿಗಲ್ಲ.

 

 

ಕೋಲಾರ: ‘ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಅನುಮಾನ. ಆದರೆ, ಅವರನ್ನು ಗೆಲ್ಲಿಸಿ ಕಳುಹಿಸಿದರೆ ಮತ್ತೆ ಕೈಗೆ ಸಿಗಲ್ಲ. ಶ್ರೀನಿವಾಸಪುರದಲ್ಲಿ ತಮ್ಮ ಸೋಲಿನ ಭೀತಿಯಿಂದ ಅವರನ್ನು ಇಲ್ಲಿಗೆ ರಮೇಶ್‌ ಕುಮಾರ್‌ ಕರೆ ತರುತ್ತಿದ್ದಾರೆ.

ಧೈರ್ಯವಿದ್ದರೆ ಕೆ.ಶ್ರೀನಿವಾಸಗೌಡ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿ’ ಎಂದು ಜೆಡಿಎಸ್ ರಾಜ್ಯ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಸವಾಲು
ಹಾಕಿದರು.

ತಾಲ್ಲೂಕು ಜೆಡಿಎಸ್‌ ಪಕ್ಷದಿಂದ ಸೋಮವಾರ ನಗರದ ಸಿಎಂಆರ್ ಮಂಡಿ ಬಳಿ ಕೋಲಾರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ಹಾಗೂ ರೈತ ಸಂಕ್ರಾಂತಿ ಉದ್ಘಾಟಿಸಿ ಅವರು ಮಾತನಾಡಿದರು.

‘ಮೊದಲ ಬಾರಿ ಶಾಸಕರಾಗುವ ವೇಳೆಯಲ್ಲಿ ಶ್ರೀನಿವಾಸಗೌಡ ಅವರು ಮನೆಯಲ್ಲಿ ಮುದ್ದೆ ತಿನ್ನಲು ತಟ್ಟೆಯೂ ಇರಲಿಲ್ಲ. ಆಗ ಅವರನ್ನು ನಾವೆಲ್ಲಾ ಗೆಲ್ಲಿಸಿದ್ದೆವು. ಆದರೆ, ಅವರಿಗೆ ನಿಯತ್ತು ಎಂಬುದೇ ಇಲ್ಲ’ ಎಂದು ಅವರು ಕೋಲಾರ ಕ್ಷೇತ್ರದ ಹಾಲಿ ಶಾಸಕರನ್ನು ಟೀಕಿಸಿದರು.

‘ಬೆಂಗಳೂರಿನಿಂದ ಕೋಲಾರಕ್ಕೆ ಬರುತ್ತಿರುವ ಕೊಳಚೆ ನೀರು ತೆಗೆದು ಶುದ್ಧ ನೀರು ಹರಿಸುತ್ತೇವೆ. ಎಕರೆಗೆ ಬೀಜ ಖರೀದಿಸಲು ₹ 10 ಸಾವಿರ ಕೊಡುತ್ತೇವೆ. ಬೀಜ, ಗೊಬ್ಬರಕ್ಕೆ ರೈತರು ಪರದಾಡಬಾರದು. ಸ್ತ್ರೀಶಕ್ತಿ ಸಂಘಗಳ ಸಾಲ ತೀರಿಸುತ್ತೇವೆ. 250 ಯುನಿಟ್ ಕೊಡುವುದಾಗಿ ನಾವು ಕಾಂಗ್ರೆಸ್‌ಗಿಂತ ಮೊದಲೇ ಘೋಷಿಸಿದ್ದೇವೆ’ ಎಂದರು.

‘ದೇವೇಗೌಡ ಅವರನ್ನು ಮನೆದೇವರು ಎಂಬುದಾಗಿ ರಾಜ್ಯದ ಜನ ಸ್ವೀಕರಿಸಿದ್ದಾರೆ. ಸಿಎಂಆರ್‌ ಶ್ರೀನಾಥ್ ಅವರಂಥ ಮತ್ತೊಬ್ಬ ಅಭ್ಯರ್ಥಿ ನಮಗೆ ಈ ಕ್ಷೇತ್ರದಲ್ಲಿ ಸಿಗಲ್ಲ. ಈ ಬಾರಿ ಜೆಡಿಎಸ್‌ ಅಧಿಕಾರ ಹಿಡಿಯಲಿದ್ದು, ಮೇ-ಜೂನ್‌ನಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಸೋನಿಯಾ ಗಾಂಧಿ ಮಗ ರಾಹುಲ್ ಗಾಂಧಿ ಪ್ರಧಾನಿಯಾಗಬಹುದು. ದೇವೇಗೌಡರ ಮಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬಾರದೇ’ ಎಂದು
ಪ್ರಶ್ನಿಸಿದರು.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ‘ನಮ್ಮದು ರೈತರ ಪಕ್ಷ. ನಮ್ಮ ಭಾವಿ ಮುಖ್ಯಮಂತ್ರಿ ಕುಮಾರಸ್ವಾಮಿ. ನಮ್ಮ ಪಕ್ಷ ಕೋಲಾರದಲ್ಲಿ ಈಗಾಗಲೇ ಗೆದ್ದಾಗಿದೆ’ ಎಂದರು.

‘ಹೊರಗಿನವರು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರೆ ಜನರ ಕೈಗೆ ಸಿಗಲ್ಲ. ಸೋತರೆ ತಿರುಗಿಯೂ ನೋಡಲ್ಲ. ಸಿಎಂಆರ್‌ ಶ್ರೀನಾಥ್‌ ರಾಜಕೀಯಕ್ಕೆ ಅಷ್ಟೇ ಸೀಮಿತ ಅಲ್ಲ; ಅವರು ವರ್ಷಗಳಿಂದ ರೈತರ ಪರವಾಗಿ ನಿಂತಿದ್ದಾರೆ. ಕೋವಿಡ್ ಕಾಲದಲ್ಲಿ 4 ಸಾವಿರ ಔಷಧ ಕಿಟ್, 20 ಸಾವಿರ ಆಹಾರ ಕಿಟ್‌ ನೀಡಿದ್ದಾರೆ’ ಎಂದು ಹೇಳಿದರು.

‘ರೈತರ ಮಕ್ಕಳಿಗೆ ಜಾತಿ ಇಲ್ಲ‌. ಮುಸ್ಲಿಮರು, ಕುರುಬರು ಸೇರಿದಂತೆ ಹಲವಾರು ಕುಟುಂಬದವರು ಈ ಕ್ಷೇತ್ರದಲ್ಲಿ ಇದ್ದಾರೆ. ರೈತರಿಗೆ ಕಷ್ಟ ಬಂದಾಗ ಯಾವುದೇ ಪಕ್ಷ ನೆರವಿಗೆ ಬರಲಿಲ್ಲ. ಮಂಡ್ಯ ಸೇರಿದಂತೆ ಹಲವೆಡೆ ರೈತರು ಆತ್ಮಹತ್ಯೆ ಮಾಡಿಕೊಂಡರು. ಆಗ ರೈತರಿಗೆ ಸ್ಪಂದಿಸಿದ್ದು ಕುಮಾರಸ್ವಾಮಿ. ₹ 50 ಸಾವಿರ ಮೊತ್ತದ ಚೆಕ್ ನೀಡಿದರು. ಅಧಿಕಾರಕ್ಕೆ ಬಂದ ಮೇಲೆ ಸಾಲಮನ್ನಾ ಮಾಡಿದರು. ಕಾಂಗ್ರೆಸ್‌ನಿಂದ ಈಗ ಇಲ್ಲಿ ಸ್ಪರ್ಧಿಸಲಿರುವ ವ್ಯಕ್ತಿ ಮುಖ್ಯಮಂತ್ರಿ ಆಗಿದ್ದರು‌. ಅವರು ಯಾವುದೇ ಕಾಳಜಿ ತೋರಲಿಲ್ಲ. ಮುಂದೆ ಅಧಿಕಾರಕ್ಕೆ ಬಂದರೆ ಜನರಿಗಾಗಿ ಏನು ಮಾಡುತ್ತೇವೆ ಎಂದು ಹೇಳುವ ಗಂಡು ಯಾರೂ ಇಲ್ಲಿ. ರಾಹುಲ್ ಗಾಂಧಿ ಸುಮ್ಮನೇ ಸುಳ್ಳು ಹೇಳಿ ಕೊಂಡು ಓಡುತ್ತಿದ್ದಾರೆ. ಬಿಜೆಪಿ ಸರ್ಕಾರ ಖಂಡಿತ ಮತ್ತೆ ಬರಲ್ಲ’ ಎಂದರು.

‘ಕುಮಾರಸ್ವಾಮಿ ಮುಖ್ಯಮಂತ್ರಿ
ಯಾಗಿದ್ದಾಗ ಟೊಮೆಟೊ ಹಾಗೂ ಮಾವಿನ ಹಣ್ಣಿಗೆ ಬೆಂಬಲ ಘೋಷಿಸಿದ್ದರು. ನಮ್ಮ ತಂದೆ ನಂದಿನಿ ಕಟ್ಟಿದರು.‌ ಆದರೆ, ಬಿಜೆಪಿಯವರು ಅದನ್ನು ಮಾರಲು ಹೊರಟಿದ್ದಾರೆ’ ಎಂದು ದೂರಿದರು.

ಸಂಜೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ವರ್ಚುವಲ್‌ ವೇದಿಕೆ ಮೂಲಕ ಸಂವಾದ ನಡೆಸಿದರು.

ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು, ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಜೆಡಿಎಸ್‌ ಕೋಲಾರ ಅಭ್ಯರ್ಥಿ ಸಿಎಂಆರ್‌ ಇಬ್ರಾಹಿಂ, ಹರೀಶ್‌, ಜೆಡಿಎಸ್‌ ತಾಲ್ಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ಹಿರಿಯ ವಕೀಲ ಕೆ.ವಿ.ಶಂಕರಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ, ಕೆಜಿಎಫ್ ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು, ಮಂಜುನಾಥ್, ವಕ್ಕಲೇರಿ ರಾಮು, ಬಣಕನಹಳ್ಳಿ ನಟರಾಜ್, ಅಬ್ದುಲ್ಲಾ, ಖಲೀಲ್, ಆನಂದ್, ಶಬರೀಶ್, ಅಂಜುಮಾನ್ ಅಧ್ಯಕ್ಷ ಜಮೀರ್ ಅಹ್ಮದ್,‌ ಮುಸ್ತಾಫ ಇತರರು ಇದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶೀಲ ಶಂಕಿಸಿ ಉಸಿರುಗಟ್ಟಿಸಿ ಪತ್ನಿ ಕೊಲೆಗೈದ ಪತಿ ಪರಾರಿ

Tue Jan 17 , 2023
ತನ್ನ ಪತ್ನಿಯ ಶೀಲ ಶಂಕಿಸಿ, ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ತಾವರೆಕೆರೆಯ ಸುಭಾಷ್ ನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ನಡೆದಿದೆ. ಸುಭಾಷ್ ನಗರದ ನಾಜ್ಹ್ (22) ಕೊಲೆಯಾದವರು, ಆಕೆಯನ್ನು ಉಸಿರು ಗಟ್ಟಿಸಿಕೊಲೆ ಮಾಡಿದ ಪತಿರಾಯ ನಾಸಿರ್ ಬಾಮೈದನಿಗೆ ಮೆಸೇಜ್ ಕಳುಹಿಸಿ ಪರಾರಿಯಾಗಿದ್ದಾನೆ. ದಂಪತಿಯು ಕಳೆದ 6 ತಿಂಗಳಿನಿಂದ ಫ್ಲ್ಯಾಟ್ ನಲ್ಲಿ ವಾಸವಿದ್ದು, ಸಂಸಾರ ಚೆನ್ನಾಗಿತ್ತು. ಆದರೆ ನಾಸಿರ್ ಹುಸೇನ್ ಇತ್ತೀಚೆಗೆ ಪತ್ನಿಯ ಶೀಲ ಶಂಕಿಸಿ ಗಲಾಟೆ ಮಾಡುವುದಕ್ಕೆ ಶುರು ಮಾಡಿಕೊಂಡಿದ್ದ. […]

Advertisement

Wordpress Social Share Plugin powered by Ultimatelysocial