ಮುಲ್ಕ್ ರಾಜ್ ಆನಂದ್ ಭಾರತೀಯ ಪ್ರಧಾನ ಇಂಗ್ಲಿಷ್ ಕಥೆಗಾರ.

 

 

ಮುಲ್ಕ್ ರಾಜ್ ಆನಂದ್ ಭಾರತೀಯ ಪ್ರಧಾನ ಇಂಗ್ಲಿಷ್ ಕಥೆಗಾರರಲ್ಲಿ ಒಬ್ಬರು. ಭಾರತೀಯ ಸಮಾಜದಲ್ಲಿನ ಶೋಷಿತ ಬಡಜನರ ಜೀವನ ಚಿತ್ರಣ ಅವರ ಬರಹಗಳಲ್ಲಿ ಎದ್ದು ಕಾಣುವಂತದ್ದು.
ಮುಲ್ಕ್ ರಾಜ್ ಆನಂದ್ 1905ರ ಡಿಸೆಂಬರ್ 12ರಂದು ಪೆಶಾವರ್‌‌‌ನಲ್ಲಿ ಜನಿಸಿದರು. ಅಮೃತಸರದ ಖಾಲ್ಸಾ ಕಾಲೇಜಿನಲ್ಲಿ ಅಧ್ಯಯನ ಮಾಡಿದ ಆನಂದ್, ಲಂಡನ್‌‌ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು. ಅಲ್ಲಿ ತಮ್ಮ ಖರ್ಚು ವಹಿಸಲು ರೆಸ್ಟೊರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಮುಂದೆ 1929ರಲ್ಲಿ ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಗಳಿಸಿದರು. ಬರ್ಟ್ರೆಂಡ್ ರಸೆಲ್ ಮತ್ತು ಇಂಗ್ಲಿಷ್ ತತ್ವಶಾಸ್ತ್ರಜ್ಞರ ಕುರಿತಾದ ಅಧ್ಯಯನ ಅವರ ಓದಿನಲ್ಲಿತ್ತು. ಈ ಕಾಲಾವಧಿಯಲ್ಲಿ ಅವರು ಆ ಕಾಲದಲ್ಲಿನ ಪ್ರಸಿದ್ಧ ಬರಹಗಾರರು ಮತ್ತು ಚಿಂತನಶೀಲ ವ್ಯಕ್ತಿಗಳ ಸಮೂಹವಾಗಿದ್ದ ‘ಬ್ಲೂಮ್ಸ್‌ಬರಿ ತಂಡ‌’ದ ಸದಸ್ಯರೊಡನೆ ಬಾಂಧವ್ಯ ಬೆಳೆಸಿಕೊಂಡರು. ಕೆಲ ಕಾಲ ಜಿನೀವಾದಲ್ಲಿದ್ದ ಅವರು ಲೀಗ್‌ ಆಫ್‌ ನೇಷನ್ಸ್‌ ಒಕ್ಕೂಟದ ‘ಸ್ಕೂಲ್‌ ಆಫ್‌ ಇಂಟೆಲೆಕ್ಚುಯಲ್‌ ಕೋ-ಆಪರೇಷನ್’ ಒಕ್ಕೂಟದಲ್ಲಿ ಉಪನ್ಯಾಸ ನೀಡುವ ಹವ್ಯಾಸವನ್ನೂ ರೂಢಿಸಿಕೊಂಡಿದ್ದರು.
ಜಾತಿ ಪದ್ಧತಿಯ ನೆರಳಲ್ಲಿನ ಕರಾಳತೆಯ ಅಂಶಗಳು ಮುಲ್ಕ್ ರಾಜ್ ಅವರನ್ನು ಅಪಾರವಾಗಿ ಸಂವೇದಿಸಿದ್ದವು. ಓರ್ವ ಮುಸ್ಲಿಂ ಜೊತೆಯಲ್ಲಿ ಒಂದು ಊಟವನ್ನು ಹಂಚಿಕೊಂಡಿದ್ದಕ್ಕಾಗಿ ತಮ್ಮ ಕುಟುಂಬದ ವತಿಯಿಂದ ಜಾತಿಯಿಂದಲೇ ಹೊರಹಾಕಲ್ಪಟ್ಟಿದ್ದ ಓರ್ವ ಚಿಕ್ಕಮ್ಮನ ಆತ್ಮಹತ್ಯೆಗೆ ಪ್ರತಿಸ್ಪಂದನೆಯ ಸ್ವರೂಪದಲ್ಲಿ ಅವರ ಮೊದಲ ಗದ್ಯ ಪ್ರಬಂಧವು ಹೊರಹೊಮ್ಮಿತ್ತು.
ಮುಲ್ಕ್ ರಾಜ್ ಆನಂದ್ ಅವರ ಮೊದಲ ಪ್ರಮುಖ ಕಾದಂಬರಿಯಾದ ‘ಅನ್‌ಟಚಬಲ್’‌ 1935ರಲ್ಲಿ ಪ್ರಕಟಗೊಂಡಿತು. ಜಾತೀಯ ಹಿನ್ನೆಲೆಯಲ್ಲಿ ತುಳಿತಕ್ಕೊಳಗಾದವನ ವೇದನೆ, ಮಹಾತ್ಮಗಾಂಧೀ ಚಿಂತನ ಮತ್ತು ತತ್ವಜ್ಞಾನಗಳ ಮೇಳೈಕೆಯ ಹಲವು ಅಂಶಗಳು ಈ ಕಥಾನಕವನ್ನು ವ್ಯಾಪಿಸಿದೆ. ಪಂಜಾಬಿ ಮತ್ತು ಹಿಂದಿ ಭಾಷಾವೈಶಿಷ್ಟ್ಯಗಳನ್ನು ಇಂಗ್ಲಿಷಿನಲ್ಲಿ ಸೆರೆಹಿಡಿದ ಈ ಸರಳ ಪುಸ್ತಕವು ವ್ಯಾಪಕವಾಗಿ ಮೆಚ್ಚುಗೆಯನ್ನು ಪಡೆಯಿತು. ಈ ಕೃತಿಗೆ ಅವರ ಗೆಳೆಯರಾದ ಇ.ಎಮ್. ಫಾರ್ಸ್ಟರ್‌ ಮುನ್ನುಡಿ ಬರೆದಿದ್ದಾರೆ.
ಮುಲ್ಕ್ ರಾಜ್ ಆನಂದ್‌‌ ಭಾರತದ ಸ್ವಾತಂತ್ರ್ಯ ಹೋರಾಟದೆಡೆಗೂ ಸೆಳೆಯಲ್ಪಟ್ಟು, ವಿ. ಕೆ. ಕೃಷ್ಣಮೆನನ್ ಅವರೊಂದುಗೂಡಿ ಲಂಡನ್ನಿನಿಂದ ಭಾರತದ ಸ್ವಾತಂತ್ರ್ಯದ ಪರವಾದ ಅನೇಕ ಲೇಖನಗಳನ್ನು ಬರೆದರು. ವಿಶ್ವದ ಇತರೆಡೆಗಳಲ್ಲಿನ ಸ್ವಾತಂತ್ರ್ಯದ ಕೂಗನ್ನೂ ಅವರು ಬೆಂಬಲಿಸಿದರು. ಸ್ಪೇನಿನ ನಾಗರಿಕ ಯುದ್ಧದಲ್ಲಿ ಸ್ವಯಂಸೇವಕರಾಗಿ ದುಡಿದರು. ಲಂಡನ್‌ನಲ್ಲಿನ ಬಿಬಿಸಿಗಾಗಿ ಓರ್ವ ಲೇಖಕನಾಗಿ ಕೆಲಸ ಮಾಡುವ ಮೂಲಕ ಎರಡನೇ ಮಹಾಯುದ್ದದ ಅವಧಿಯನ್ನು ಲಂಡನ್ನಿನಲ್ಲಿ ಕಳೆದರು. ಇಲ್ಲಿಯೇ ಅವರಿಗೆ ಜಾರ್ಜ್‌ ಆರ್ವೆಲ್‌ ಜೊತೆಗೆ ಸ್ನೇಹ ಬೆಳೆಯಿತು. 1942ರಲ್ಲಿ ಪ್ರಕಟಗೊಂಡ ‘ದ ಸ್ವೋರ್ಡ್ ಅಂಡ್ ದ ಸಿಕ್ಕಲ್’ ಕೃತಿಯ ಕುರಿತು ಆರ್ವೆಲ್ ಮೆಚ್ಚುಗೆಯ ವಿಮರ್ಶೆ ಬರೆದರು. ಆರ್ವೆಲ್ ಪಿಕಾಸೊನ ಓರ್ವ ಸ್ನೇಹಿತನಾಗಿದ್ದು ತಮ್ಮ ಸಂಗ್ರಹದಲ್ಲಿ ಪಿಕಾಸೊ ರಚಿಸಿದ್ದ ಹಲವಾರು ಕಲಾಕೃತಿಗಳನ್ನು ಹೊಂದಿದ್ದರು.
1947ರಲ್ಲಿ ಮುಲ್ಕ್ ರಾಜ್ ಆನಂದ್‌‌ ಭಾರತಕ್ಕೆ ಹಿಂದಿರುಗಿ ತಮ್ಮ ಸಾಹಿತ್ಯಿಕ ಸೃಷ್ಟಿಯನ್ನು ಮುಂದುವರಿಸಿದರು. ಒಂದು ವ್ಯಾಪಕ ಶ್ರೇಣಿಯ ವಸ್ತುವಿಷಯಗಳ ಕುರಿತಾದ ಕಾವ್ಯ ಮತ್ತು ಪ್ರಬಂಧಗಳೇ ಅಲ್ಲದೇ, ಆತ್ಮಕಥೆಗಳು ಹಾಗೂ ಕಾದಂಬರಿಗಳೂ ಸಹ ಅವರ ಕೃತಿಗಳಲ್ಲಿ ಸೇರಿವೆ.
ಮುಲ್ಕ್ ರಾಜ್ ಆನಂದ್ ಅವರ ಇತರ ಕಾದಂಬರಿಗಳಲ್ಲಿ ದಿ ವಿಲೇಜ್‌ (1939), ಅಕ್ರಾಸ್‌ ದಿ ಬ್ಲ್ಯಾಕ್‌ ವಾಟರ್ಸ್‌ (1940), ದ ಲಾಸ್ಟ್ ಚೈಲ್ಡ್ (1934), ಕೂಲೀ (1936), ದಿ ಪ್ರೈವೇಟ್‌ ಲೈಫ್‌ ಆಫ್‌ ಆನ್ ಇಂಡಿಯನ್‌ ಪ್ರಿನ್ಸ್‌ (1953), ದ ಓಲ್ಡ್ ಉಮನ್ ಅಂಡ್ ದ ಕೌ (1960), ದ ರೋಡ್ (1961) ಸೇರಿವೆ. ‘ಮಾರ್ಗ್‌’ ಎಂಬ ಹೆಸರಿನ ಒಂದು ಸಾಹಿತ್ಯಿಕ ನಿಯತಕಾಲಿಕವನ್ನೂ ಅವರು ಪ್ರಾರಂಭಿಸಿದರು. ಹಲವಾರು ವಿಶ್ವವಿದ್ಯಾಲಯಗಳಲ್ಲಿ ಬೋಧಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಮಲ್ಪೆ ಶಂಕರನಾರಾಯಣ ಸಾಮಗ ಯಕ್ಷಗಾನ ಪಟುವಾಗಿ, ಹರಿಕಥಾ ದಾಸರಾಗಿ, ಗಾಂಧಿವಾದಿಯಾಗಿ, ಜನಾನುರಾಗಿಗಳಾಗಿ ಪ್ರಸಿದ್ಧರಾಗಿದ್ದವರು.

Sun Dec 25 , 2022
    ಮಲ್ಪೆ ಶಂಕರನಾರಾಯಣ ಸಾಮಗರು ಯಕ್ಷಗಾನ ಪಟುವಾಗಿ, ಹರಿಕಥಾ ದಾಸರಾಗಿ, ಗಾಂಧಿವಾದಿಯಾಗಿ, ಜನಾನುರಾಗಿಗಳಾಗಿ ಪ್ರಸಿದ್ಧರಾಗಿದ್ದವರು. ಶಂಕರನರಾಯಣ ಸಾಮಗರು 1911ರ ಡಿಸೆಂಬರ್ 11ರಂದು ಉಡುಪಿಯ ಬಳಿಯ ಮಲ್ಪೆಯಲ್ಲಿ ಜನಿಸಿದರ. ತಂದೆ ಲಕ್ಷ್ಮೀನಾರಾಯಣ ಸಾಮಗ. ತಾಯಿ ಲಕ್ಷ್ಮೀ ಅಮ್ಮ. ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ.ವರೆಗೆ ಓದಿದರು. ಶಂಕರನರಾಯಣ ಸಾಮಗರು ಸ್ವಾತಂತ್ರ್ಯ ಚಳುವಳಿಯ ಗಾಳಿ ಬೀಸತೊಡಗಿದಾಗ ಗಾಂಧೀಜಿಯವರ ವಿಚಾರಧಾರೆಗೆ ಮನಸೋತು ಚಳುವಳಿ ದಾರಿ ಹಿಡಿದರು. ಹರಿದಾಸ ವೃತ್ತಿ ಆರಂಭಿಸಿ ಗಾಂಧೀಜಿ ವಿಚಾರಧಾರೆಯನ್ನು ಹರಿಕಥೆಯ […]

Advertisement

Wordpress Social Share Plugin powered by Ultimatelysocial