ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿ 86 ಮನೆಗಳು ಹಾಗೂ ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ.

 

ಜೈಪುರ್, ಏಪ್ರಿಲ್ 23: ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಹಾಗೂ ದೆಹಲಿಯಲ್ಲಿ ಬುಲ್ಡೋಜರ್ ರಾಜಕಾರಣವನ್ನು ನಡೆಸಲಾಗುತ್ತಿದೆ ಎಂಬ ವಿವಾದದ ಮಧ್ಯೆ ಅಂಥದ್ದೇ ಮತ್ತೊಂದು ಘಟನೆಯು ರಾಜಸ್ಥಾನದಲ್ಲಿ ವರದಿಯಾಗಿದೆ.

ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿ ರಸ್ತೆಗಾಗಿ 300 ವರ್ಷಗಳ ಐತಿಹಾಸಿಕ ಶಿವನ ದೇವಸ್ಥಾನದ ಜೊತೆಗೆ 86 ಮನೆಗಳು ಹಾಗೂ ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ.

ಆ ಮೂಲಕ ಅಕ್ರಮ ತೆರವು ನೆಪದಲ್ಲಿ ಬುಲ್ಡೋಜರ್ ಕಾರ್ಯಾಚರಣೆ ನಡೆಸಿರುವ ಮೊದಲ ಕಾಂಗ್ರೆಸ್ ಸರ್ಕಾರವಿರುವ ರಾಜ್ಯವಾಗಿದೆ.

ಕೋಮು ಸಂಘರ್ಷಕ್ಕೆ ಉತ್ತೇಜನ ನೀಡುವ ಮತ್ತು ಗಲಭೆಗೆ ಪ್ರೇರೇಪಿಸುವುದಕ್ಕೆ ಸಂಬಂಧಿಸಿದಂತೆ ಒಂದು ಸಮುದಾಯವನ್ನೇ ಗುರಿಯಾಗಿಸಿಕೊಂಡು ಆರೋಪ ಮಾಡುತ್ತಿರುವ ಸಾಲಿನಲ್ಲಿ ಬಿಜೆಪಿ ಮುಂದಿತ್ತು. ಈಗ ಅದೇ ಸಾಲಿನಲ್ಲಿ ಕಾಂಗ್ರೆಸ್ ಕೂಡ ಸೇರಿಕೊಂಡಿದೆ ಎನ್ನುವುದರ ಮಧ್ಯೆ ಆರೋಪ-ಪ್ರತ್ಯಾರೋಪಗಳಿಗೆ ಎಡೆ ಮಾಡಿಕೊಟ್ಟಂತೆ ಆಗಿದೆ. ರಾಜಸ್ಥಾನದಲ್ಲಿ ನಡೆದಿರುವ ಬುಲ್ಡೋಜರ್ ಕಾರ್ಯಾಚರಣೆ ಹಾಗೂ ಅದರ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ಪರಸ್ಪರ ಕೆಸರೆರಚಾಟದ ಕುರಿತು ಈ ವರದಿಯಲ್ಲಿ ತಿಳಿಯೋಣ.

ಬಿಜೆಪಿ ವಿರುದ್ಧ ಕಾಂಗ್ರೆಸ್ ದೂಷಣೆ:

ರಾಜಸ್ಥಾನದಲ್ಲಿ ಈ ಹಿಂದೆ ವಸುಂಧರಾ ರಾಜೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಈ ಗೌರವ್ ಪಥ್ ಎಂಬ ರಸ್ತೆಯಲ್ಲಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಭರವಸೆ ನೀಡಿತ್ತು ಎಂದು ಕಾಂಗ್ರೆಸ್ ದೂಷಿಸುತ್ತಿದೆ. ರಾಜ್‌ಗಢ ಪಟ್ಟಣದ ಪುರಸಭೆಯು ಬಿಜೆಪಿ ಹಿಡಿತದಲ್ಲಿದ್ದ 2021ರ ಸೆಪ್ಟೆಂಬರ್‌ನಲ್ಲಿ ಅತಿಕ್ರಮಣ ತೆರವುಗೊಳಿಸಿ ರಸ್ತೆ ನಿರ್ಮಾಣ ಮಾಡುವ ನಿರ್ಣಯಕ್ಕೆ ಅಂಗೀಕಾರ ನೀಡಲಾಗಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ. ರಾಜ್‌ಗಢ ಮುನಿಸಿಪಲ್ ಕೌನ್ಸಿಲ್‌ನಲ್ಲಿ 35 ಸದಸ್ಯರಿದ್ದು, ಅದರಲ್ಲಿ 34 ಮಂದಿ ಬಿಜೆಪಿಯವರು ಎಂದು ಕಾಂಗ್ರೆಸ್ ಹೇಳುತ್ತಿದೆ.

ಅಕ್ರಮ ತೆರವು ಕಾರ್ಯಾಚರಣೆಗೆ ಬಿಜೆಪಿ ಆದೇಶ:

ರಾಜ್‌ಗಢ್ ಪಟ್ಟಣದ ಮುನ್ಸಿಪಲ್ ಕೌನ್ಸಿಲ್ ಸಂಪೂರ್ಣವಾಗಿ ಬಿಜೆಪಿ ಅಧಿಕಾರದಲ್ಲಿದೆ. ಇದು ನಗರ ಯೋಜನೆ ಸಮಸ್ಯೆಗಳನ್ನು ನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ತೆರವು ಕಾರ್ಯಾಚರಣೆಗೆ ಬಿಜೆಪಿಯೇ ಆದೇಶಿಸಿದೆ ಎಂದು ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಹೇಳುತ್ತದೆ.

“ಇದು ಪುರಸಭೆಯ ನಿರ್ಧಾರ. ರಾಜ್ಯ ಸರ್ಕಾರಕ್ಕೂ ಈ ತೆರವು ಕಾರ್ಯಾಚರಣೆಗೂ ಯಾವುದೇ ಸಂಬಂಧವಿಲ್ಲ. ಅವರು ಸರ್ಕಾರದಿಂದ ಯಾವುದೇ ನಿರ್ದೇಶನ ಕೇಳಲಿಲ್ಲ. ನಮ್ಮಿಂದ ಯಾವುದೇ ನಿರ್ದೇಶನವನ್ನು ಪಡೆದಿಲ್ಲ” ಎಂದು ರಾಜಸ್ಥಾನದ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ ಸಚಿವ ಶಾಂತಿ ಧರಿವಾಲ್ ತಿಳಿಸಿದ್ದಾರೆ. “ವಿಶೇಷವಾಗಿ ದೇವಾಲಯವನ್ನು ತೆರವುಗೊಳಿಸುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಆದರೆ ರಾಜ್‌ಗಡ್ ಮುನ್ಸಿಪಲ್ ಕೌನ್ಸಿಲ್ ಈ ವಿಷಯದಲ್ಲೂ ಸರ್ಕಾರದಿಂದ ಯಾವುದೇ ನಿರ್ದೇಶನಗಳನ್ನು ಕೇಳಲಿಲ್ಲ; ಬಿಜೆಪಿಯೇ ಅದರ ಸಂಪೂರ್ಣ ಆಳ್ವಿಕೆಯನ್ನು ನಡೆಸುತ್ತಿದ್ದು, ದೇವಾಲಯ ಧ್ವಂಸಗೊಳಿಸುವ ನಿರ್ಣಯವನ್ನು ಅಂಗೀಕರಿಸಿದೆ,” ಎಂದು ಸಚಿವ ಧರಿವಾಲ್ ಹೇಳಿದರು. ಈ ಮಧ್ಯೆ ಏಪ್ರಿಲ್‌ನಲ್ಲಿ ಮುನ್ಸಿಪಲ್ ಕೌನ್ಸಿಲ್‌ನಿಂದ ಸಂತ್ರಸ್ತ ನಿವಾಸಿಗಳಿಗೆ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.

ದೇವಾಲಯ ತೆರವಿಗೂ ಮುನ್ನ ವಿಗ್ರಹ ತೆಗೆಯಲು ಮನವಿ:

ಶಿವ ದೇವಾಲಯ ಸೇರಿದಂತೆ ಎರಡು ದೇವಾಲಯಗಳು ಅತಿಕ್ರಮಣ ವಿರೋಧಿ ಅಭಿಯಾನದ ಭಾಗವಾಗಿದ್ದವು. ದೇವಸ್ಥಾನ ತೆರವುಗೊಳಿಸುವುದಕ್ಕೂ ಮೊದಲು ಅದರಲ್ಲಿನ ದೇವರ ವಿಗ್ರಹಣಗಳನ್ನು ತೆಗೆಯುವಂತೆ ಅರ್ಚರಿಕೆ ಕೇಳಲಾಗಿತ್ತು ಎಂದು ಅಧಿಕಾರಿಗಳ ಹೇಳಿದ್ದಾರೆ. ಇನ್ನು ನಾಗರಿಕ ಸಂಸ್ಥೆಯು ಪೊಲೀಸ್ ಪಡೆಗಳು ಮತ್ತು ಆಡಳಿತದಿಂದ ಇತರ ಸಹಾಯ ಪಡೆಯಲಾಗಿದೆ ಎಂದು ವರದಿಯಾಗಿದೆ.

ಮುನ್ಸಿಪಲ್ ಕೌನ್ಸಿಲ್‌ಗೆ ಸರ್ಕಾರದಿಂದ ನೋಟಿಸ್:

ರಾಜಸ್ಥಾನ ಸರ್ಕಾರವು ಅತಿಕ್ರಮಣ ವಿರೋಧಿ ಅಭಿಯಾನಕ್ಕಾಗಿ ಮುನ್ಸಿಪಲ್ ಕೌನ್ಸಿಲ್‌ಗೆ ನೋಟಿಸ್ ಕಳುಹಿಸಿದೆ. ಬಿಜೆಪಿಯು ತೊಂದರೆಯನ್ನು ಉಂಟು ಮಾಡಲು ಪ್ರಯತ್ನಿಸುತ್ತಿದೆ ಎಂದು ಸರ್ಕಾರ ಆರೋಪಿಸಿದೆ. ಕಳೆದ ಭಾನುವಾರ ನಡೆದ ತೆರವು ಕಾರ್ಯಾಚರಣೆ ವೇಳೆ ಸ್ಥಳೀಯ ಕಾಂಗ್ರೆಸ್ ಶಾಸಕ ಜೋಹರಿ ಲಾಲ್ ಮೀನಾ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ವಿರುದ್ಧ ಬೊಟ್ಟು ಮಾಡುತ್ತಿರುವ ಬಿಜೆಪಿ:

ರಾಜ್ಯದದಲ್ಲಿ ಪ್ರತಿಪಕ್ಷವಾಗಿರುವ ಬಿಜೆಪಿ ಕಾಂಗ್ರೆಸ್ ಸರ್ಕಾರವು ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದೆ. “ರಾಜ್‌ಗಢದ ಆಳ್ವಾರ್ ಪ್ರದೇಶದಲ್ಲಿ ಶಿವನ ದೇವಸ್ಥಾನದ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವುದಕ್ಕಾಗಿ ಐವರು ಸದಸ್ಯರ ಸಮಿತಿ ರಚಿಸಿದ್ದೇನೆ. ಈ ಸಮಿತಿಯು ಸ್ಥಳಕ್ಕೆ ತೆರಳಿ ವಾಸ್ತವಿಕ ವರದಿಯನ್ನು ಸಿದ್ಧಪಡಿಸಿ ವರದಿ ಸಲ್ಲಿಸಲಿದೆ ಎಂದು ರಾಜಸ್ಥಾನ ಬಿಜೆಪಿ ಮುಖ್ಯಸ್ಥ ಸತೀಶ್ ಪೂನಿಯಾ ಹೇಳಿದ್ದಾರೆ.

‘2013ರಲ್ಲಿ ನಗರಸಭೆಯು ನಿರ್ದೇಶನ ನೀಡಿ ಮತ್ತೊಮ್ಮೆ ಠರಾವು ಅಂಗೀಕರಿಸಿದ್ದರೂ ಸರ್ಕಾರ ಹಾಗೂ ಜಿಲ್ಲಾಡಳಿತ ಅತಿಕ್ರಮಣಗಳನ್ನು ಗುರುತಿಸಲಾಗಿತ್ತು. ಆದರೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು. ಅವರು ದೇವಸ್ಥಾನವನ್ನು ನೋಡಿದಾಗ ಅವರು ಜಾಗರೂಕರಾಗಿರಬೇಕು. ನಾವು ಈ ವಿಷಯದ ಬಗ್ಗೆ ನ್ಯಾಯಾಂಗ ತನಿಖೆ ಬಯಸುತ್ತೇವೆ,” ಎಂದು ರಾಜಸ್ಥಾನ ವಿರೋಧ ಪಕ್ಷದ ಉಪನಾಯಕ ರಾಜೇಂದ್ರ ರಾಥೋಡ್ ಹೇಳಿದರು.

ರಾಜಸ್ಥಾನ ಘಟನೆ ವಿಡಿಯೋ ಶೇರ್:

ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ರಾಜಸ್ಥಾನದಲ್ಲಿ ಶಿವನ ದೇವಸ್ಥಾನ ತೆರವಿಗೆ ಸಂಬಂಧಿಸಿದ ಘಟನೆಯ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಯಾವುದೇ ನೋಟಿಸ್ ನೀಡದೇ 85 ಹಿಂದೂಗಳ ಮನೆ ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. “ಏಪ್ರಿಲ್ 18ರಂದು ಯಾವುದೇ ಸೂಚನೆ ನೀಡದೆ, ಆಡಳಿತವು ರಾಜಸ್ಥಾನದ ರಾಜ್‌ಗಢ ಪಟ್ಟಣದಲ್ಲಿ 85 ಹಿಂದೂಗಳ ಮನೆ ಮತ್ತು ಅಂಗಡಿಗಳ ಮೇಲೆ ಬುಲ್ಡೋಜರ್‌ಗಳನ್ನು ಹರಿಸಿದೆ. ಕರೌಲಿ ಮತ್ತು ಜಹಾಂಗೀರಪುರಿಯಲ್ಲಿ ಕಣ್ಣೀರು ಸುರಿಸಿ ಹಿಂದೂಗಳ ನಂಬಿಕೆಗೆ ಧಕ್ಕೆ ತರುತ್ತಿರುವುದು ಕಾಂಗ್ರೆಸ್‌ನ ಜಾತ್ಯತೀತತೆಯಾಗಿದೆ,” ಎಂದು ಶ್ರೀ ಮಾಳವಿಯಾ ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟ ಯಶ್ ಪ್ರಸ್ತುತ 'ಕೆಜಿಎಫ್ 2' ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ.

Sat Apr 23 , 2022
   ಸತತ ಎಂಟು ವರ್ಷ ‘ಕೆಜಿಎಫ್’ ಸಿನಿಮಾ ಸರಣಿಗಾಗಿ ಅವರು ಕಷ್ಟಪಟ್ಟಿದ್ದಾರೆ, ಆ ಶ್ರಮದ ಪ್ರತಿಫಲ ಬಾಕ್ಸ್ ಆಫೀಸ್‌ನಲ್ಲಿ ಕಾಣುತ್ತಿದೆ. ‘ಕೆಜಿಎಫ್ 2’ ಸಿನಿಮಾಕ್ಕಾಗಿಯೂ ನಟ ಯಶ್ ಬಹಳ ಕಷ್ಟಪಟ್ಟಿದ್ದರು, ಸತತ ಮೂರು ವರ್ಷಕ್ಕೂ ಹೆಚ್ಚು ಸಮಯವನ್ನು ಕೆಜಿಎಫ್‌ಗಾಗಿ ಯಶ್ ಮೀಸಲಿಟ್ಟಿದ್ದರು. ಈ ಅವಧಿಯಲ್ಲಿ ಕುಟುಂಬಕ್ಕೆ ಹೆಚ್ಚು ಸಮಯ ನೀಡಲಾಗಿರಲಿಲ್ಲ. ಕೋವಿಡ್ ಸಮಯದಲ್ಲಿ ಶೂಟಿಂಗ್ ಮಾಡುವಾಗಂತೂ ಮನೆಗೇ ಹೋಗಿರಲಿಲ್ಲ ಯಶ್. ಆದರೆ ಈಗ ಎಲ್ಲವೂ ಮುಗಿದಿದೆ, ‘ಕೆಜಿಎಫ್ 2’ ಬಹಳ […]

Advertisement

Wordpress Social Share Plugin powered by Ultimatelysocial