ಸದಾಶಿವಯ್ಯನವರು ಚಿತ್ರರಂಗ, ರಂಗಭೂಮಿ ಮತ್ತು ಸಾಹಿತ್ಯಲೋಕದ ಮಹಾನ್ ಸಾಧಕರು.

ಕನ್ನಡ ಚಿತ್ರರಂಗದ ಮಹಾನ್ ಚಿತ್ರಕಥಾ ಸಾಹಿತಿ ಮತ್ತು ಗೀತರಚನಕಾರರಾದ ಚಿ. ಸದಾಶಿವಯ್ಯನವರು 1908ರ ಏಪ್ರಿಲ್ 8ರಂದು ಜನಿಸಿದರು. ಬಾಲ್ಯದಲ್ಲೇ ಸಾಹಿತ್ಯ ಮತ್ತು ನಾಟಕದ ಗೀಳು ಹಚ್ಚಿಕೊಂಡರು. ಅ.ನ.ಕೃ ಅವರ ಆಪ್ತ ಮಿತ್ರರಾಗಿದ್ದ ಸದಾಶಿವಯ್ಯನವರು ಹಲವಾರು ನಾಟಕ ಹಾಗೂ ಕಾದಂಬರಿಗಳನ್ನೂ ಬರೆದರು. ಕನ್ನಡ ಚಿತ್ರರಂಗದ ಮಹಾನ್ ಸಾಹಿತಿ ಚಿ. ಉದಯಶಂಕರ್ ಹಾಗೂ ಪ್ರಸಿದ್ಧ ಚಿತ್ರ ನಿರ್ಮಾಪಕ ದತ್ತುರಾಜ್ ಚಿ. ಸದಾಶಿವಯ್ಯನವರ ಮಕ್ಕಳು. ನಲವತ್ತರ ದಶಕದಲ್ಲಿ ಸದಾಶಿವಯ್ಯನವರು ರಚಿಸಿದ ‘ಮಾಂಗಲ್ಯ’ ನಾಟಕವು ರಾಜ್ಯದ ಅನೇಕ ಕಡೆ ಯಶಸ್ವಿ ಪ್ರದರ್ಶನ ಕಂಡಿತ್ತು. ಬಿ.ಎ. ಅಯ್ಯಂಗಾರರ ಅಮೆಚೂರ್ ಡ್ರಮಾಟಿಕ್ ಅಸೋಸಿಯೇಷನ್ ಸಂಸ್ಥೆಯ ಒಡನಾಟ ಹೊಂದಿದ್ದ ಸದಾಶಿವಯ್ಯನವರು ತೆನಾಲಿ ರಾಮಕೃಷ್ಣ ನಾಟಕದಲ್ಲಿ ಕೃಷ್ಣದೇವರಾಯನ ಪಾತ್ರಕ್ಕೆ ಪ್ರಸಿದ್ಧರಾಗಿದ್ದರು. ಆ ದಿನಗಳಲ್ಲಿ ಅವರು ಕಲಾ ಕುಸುಮ ಎಂಬ ಹವ್ಯಾಸಿ ನಾಟಕ ಸಂಸ್ಥೆಯನ್ನೂ ಸ್ಥಾಪಿಸಿದ್ದರು. ಜೀವನ ನಿರ್ವಹಣೆಗಾಗಿ ಬೆಂಗಳೂರಿನ ದೇಶೀಯ ವಿದ್ಯಾಶಾಲೆಯಲ್ಲಿ ಗಣಿತ ಮತ್ತು ಕನ್ನಡ ಅಧ್ಯಾಪಕರಾಗಿದ್ದ ಸದಾಶಿವಯ್ಯನವರು ತಾವು ಕಲಿಸುತ್ತಿದ್ದ ಶಾಲೆಯಲ್ಲಿಯೂ ಕನ್ನಡ ರಂಗಭೂಮಿಯ ವಾತಾವರಣವನ್ನು ನಿರ್ಮಿಸಿದ್ದರು. ಶಾಲೆಯಲ್ಲಿಯೇ ಕನ್ನಡ ರಂಗಮಂದಿರ ಎಂಬ ಹವ್ಯಾಸಿ ತಂಡವನ್ನು ಕಟ್ಟಿ ‘ಮಕ್ಕಳೇ ದೇವರು’, ‘ಶಿವಾಜಿಯ ಬಾಲ್ಯ’, ‘ಶಿವಮಂಗಳ’ ಮೊದಲಾದ ಪ್ರಸಿದ್ಧ ನಾಟಕಗಳನ್ನು ಬರೆದು ರಂಗದ ಮೇಲೆ ಪ್ರಸ್ತುತಪಡಿಸಿದ್ದರು. ಕೆ. ಸದಾಶಿವಯ್ಯನವರಿಗೆ ಆ ದಿನಗಳಲ್ಲಿ ಬಿ.ಎಸ್. ಗರುಡಾಚಾರ್ ಮತ್ತು ಬಿ.ಆರ್.ಪಂತುಲು ಆತ್ಮೀಯರಾಗಿದ್ದರು. ಪಂತುಲು ಅವರು ತಮ್ಮ ‘ಮೊದಲ ತೇದಿ’ ಚಿತ್ರದಲ್ಲಿ ಸದಾಶಿವಯ್ಯನವರಿಗೆ ಚಿತ್ರಸಾಹಿತಿಯಾಗುವ ಅವಕಾಶ ಕಲ್ಪಿಸಿದರು. ಆರು ತಿಂಗಳು ಶಾಲೆಯ ಕೆಲಸಕ್ಕೆ ರಜೆ ಹಾಕಿ, ಚಿತ್ರದ ಸಾಹಿತ್ಯ ರಚನೆ ಮತ್ತು ಸಹ-ನಿರ್ದೇಶನದ ಹೊಣೆಗಳನ್ನು ಅವರು ನಿರ್ವಹಿಸಿದರು. ಚಿತ್ರಗಳಲ್ಲಿ ಹೆಚ್ಚಿನ ಅವಕಾಶ ದೊರಕಿತಾದರೂ, ಕುಟುಂಬದ ಜವಾಬ್ದಾರಿಯ ನಿರ್ವಹಣೆಗಾಗಿ ಅವರು ಶಿಕ್ಷಕ ವೃತ್ತಿಗೇ ಹಿಂತಿರುಗಿದರು. ಗರುಡಾಚಾರ್ಯರ ತಮ್ಮ ಬಿ.ಎಸ್.ರಂಗಾ ಅವರು ತಮ್ಮ ಭಕ್ತ ಮಾರ್ಕಾಂಡೇಯ ಚಿತ್ರದಲ್ಲಿ ಸದಾಶಿವಯ್ಯನವರಿಗೆ ಅವಕಾಶ ಕೊಟ್ಟರು. ಈ ಬಾರಿ ಜೀವನಕ್ಕೆ ಅಗತ್ಯವಾದ ಕೆಲಸವನ್ನು ಚಿತ್ರರಂಗದಿಂದಲೇ ತಾವು ಒದಗಿಸುವುದಾಗಿ ಹೇಳಿ ಬಲವಂತದಿಂದ ಶಿಕ್ಷಕ ವೃತ್ತಿಗೆ ರಾಜೀನಾಮೆ ಕೊಡಿಸಿದರು. ಬಿ.ಎಸ್.ರಂಗಾ ಅವರು ನಿರ್ಮಿಸಿದ ಅಮರಶಿಲ್ಪಿ ಜಕಣಾಚಾರಿ ಸದಾಶಿವಯ್ಯನವರಿಗೆ ಪ್ರಸಿದ್ಧಿ ತಂದು ಕೊಟ್ಟ ಚಿತ್ರ. ಈ ಚಿತ್ರದ ಗೀತೆಗಳೆಲ್ಲ ಜನಪ್ರಿಯವಾದವು. ‘ಒಂದರಿಂದ ಇಪ್ಪತ್ತರವರೆಗೂ ಉಂಡಾಟ, ಉಂಡಾಟ; ಇಪ್ಪತ್ತೊಂದರಿಂದ ಮೂವತ್ತರವರೆಗೂ ಭಂಡಾಟ, ಭಂಡಾಟ’ ಎಂದು ‘ಮೊದಲ ತೇದಿ’ ಚಿತ್ರದಲ್ಲಿ ಚಿ. ಸದಾಶಿವಯ್ಯನವರು ಬರೆದ ಹಾಡು ಅಂದು ಕನ್ನಡಿಗರೆಲ್ಲರ ಮನೆ ಮನೆ ಮಾತಾಗಿ ಹೋಗಿತ್ತು. ಇಪ್ಪತ್ತರ ಶತಮಾನದಲ್ಲಿ ಹಲವು ರೀತಿಯ ಸಂಬಳಗಳ ಕೆಲಸ ಮಾಡಿ ಕೈಗೆ ಹತ್ತದ ಸಂಬಳದ ಇತಿ ಮಿತಿಗಳಲ್ಲಿ ಬದುಕಿನ ಬವಣೆ ಸಾಗಿಸಿದ ಪ್ರತಿಯೋರ್ವರಿಗೂ ಈ ಹಾಡಿನ ಸಾಹಿತ್ಯ ನಮ್ಮದು ಎಂದು ಆಪ್ತವಾಗಿದ್ದರಲ್ಲಿ ಯಾವುದೇ ಅಚ್ಚರಿಯಿಲ್ಲ.ಕನ್ನಡ ಚಿತ್ರಗೀತೆಗಳಲ್ಲಿನ ಕಾವ್ಯಮಯ ಗುಣಗಳನ್ನು ಅಭ್ಯಸಿಸುವವರು ಒಮ್ಮೆ ‘ಅಮರಶಿಲ್ಪಿ ಜಕಣಾಚಾರಿ’ ಚಿತ್ರಕ್ಕಾಗಿ ಸದಾಶಿವಯ್ಯನವರು ರಚಿಸಿದ ಹಾಡುಗಳ ಬಗ್ಗೆ ಇಣುಕಬೇಕು. ಬದುಕು, ಪರಿಸರ, ಕಲೆ ಇವುಗಳ ಸಮ್ಮೇಳವನ್ನು ಚಿತ್ರದ ಚೌಕಟ್ಟಿಗೆ ಮೋಹಕವಾಗಿಯೋ ಎಂಬಂತೆ ಕಳೆಕಟ್ಟಿಕೊಡುವ ‘ಚೆಲುವಾಂತ ಚೆನ್ನಿಗನೆ ನಲಿದಾಡು ಬಾ, ಈ ಶೃಂಗಾರ ಶಿಲೆಯೊಡನೆ ಕುಣಿದಾಡು ಬಾರಾ’ ಗೀತೆ ಕನ್ನಡದ ಅಪೂರ್ವ ಚಿತ್ರಗೀತೆಗಳಲ್ಲೊಂದು. ಅಮರಶಿಲ್ಪಿ ಜಕಣಾಚಾರಿ ಚಿತ್ರದ ಈ ಗೀತೆಯಲ್ಲದೆ ‘ನಿಲ್ಲು ನೀ ನಿಲ್ಲು ನೀ ನೀಲವೇಣಿ’, ‘ಏನೋ ಎಂತೋ ಜುಮ್ಮೆಂದಿತು ತನುವು’ ಅಂತಹ ಗೀತೆಗಳು ಮತ್ತು ಚಿತ್ರಕಥೆ ಕೂಡಾ ಚಿ. ಸದಾಶಿವಯ್ಯನವರದ್ದೇ. ‘ಕನಸಿನಾ ದೇವಿಯಾಗಿ ಮನಸಿನಾ ನಲ್ಲೆಯಾಗಿ ಅಂದವೇ ರೂಪಗೊಂಡ ತರುಣಿ ಯಾರಿದು?’, ‘ಬೇಡ ಕೃಷ್ಣ ರಂಗಿನಾಟ ಸೀರೆ ನೆನೆವುದು ಮಧ್ಯರಾತ್ರಿ ತುಂಬು ಚಳಿಯ ತುಂಬುತಿರುವುದು’ ಎಂಬಂತಹ ವಿಶಿಷ್ಟ ನೆಲೆಯ ಚಿತ್ರಗೀತೆಗಳನ್ನು ಕೂಡಾ ಸದಾಶಿವಯ್ಯನವರು ಬರೆದರು. ಮಹಿಷಾಸುರ ಮರ್ಧಿನಿ ಚಿತ್ರದಲ್ಲಿ ಎಸ್. ಜಾನಕಿ ಮತ್ತು ಚಿತ್ರರಂಗದಲ್ಲಿ ಪ್ರಪ್ರಥಮವಾಗಿ ರಾಜ್ ಕುಮಾರ್ ಅವರು ಹಾಡಿದ ‘ತುಂಬಿತು ಮನವ ತಂದಿತು ಸುಖವ’ ಗೀತೆಯಲ್ಲಿ ‘ಹುಣ್ಣಿಮೆ ಚಂದಿರ ತಾ ನಗಲು ಉಕ್ಕುವುದೇತಕೆ ಆ ಕಡಲು’ ಎಂಬಂತಹ ಸುಂದರ ಉಪಮೆಗಳನ್ನು ರಾರಾಜಿಸುವಂತೆ ಮಾಡಿದ ಕವಿವರೇಣ್ಯರು ಚಿ. ಸದಾಶಿವಯ್ಯನವರು. ‘ಭಕ್ತ ಮಾರ್ಕಂಡೇಯ’ ಚಿತ್ರದ ‘ಹರ ಹರ ಸುಂದರ ಸಾಂಬ ಸದಾಶಿವ’, ಮೂರೂವರೆ ವಜ್ರಗಳು ಚಿತ್ರದ ‘ಕೃಷ್ಣ ಎಂದರೆ ಭಯವಿಲ್ಲ’, ‘ಮಾಯಾ ಬಜಾರ್’ ಚಿತ್ರದ ‘ಆಹಾ ನನ್ನ ಮದ್ವೆಯಂತೆ’, ‘ಜಗದೇಕವೀರನ ಕಥೆ’ ಚಿತ್ರದ ‘ಶಿವಶಂಕರಿ ಶಿವಾನಂದನ ಲಹರಿ’, ‘ಕನ್ಯಾರತ್ನ’ ಚಿತ್ರದ ‘ಎಲ್ಲಿಹರೋ ನಲ್ಲೋ’, ‘ಪ್ರತಿಜ್ಞೆ’ಯ ‘ಕಾಯೇ ದೀನ ಶರಣ್ಯೇ’ ಮುಂತಾದ ನೂರಾರು ಸವಿಗೀತೆಗಳನ್ನು ಸದಾಶಿವಯ್ಯನವರು ಕನ್ನಡ ಚಿತ್ರರಸಿಕರ ಹೃದಯಾಳದಲ್ಲಿ ಉಳಿಯುವಂತೆ ಮತ್ತು ಕನ್ನಡಿಗರು ಸಂತಸದಿಂದ ಉಲಿಯುವಂತೆ ಮಾಡಿದ್ದಾರೆ. ಆ ಕಾಲದ ಹಲವಾರು ಚಿತ್ರಗಳ ಯಶಸ್ಸಿಗೆ ತಮ್ಮ ಚಿತ್ರಕಥೆ ಮತ್ತು ಹಾಡುಗಳ ಮೂಲಕ ಚಿ. ಸದಾಶಿವಯ್ಯನವರು ಅಪಾರವಾದ ಕೊಡುಗೆ ನೀಡಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುದರ್ಶನ ದೇಸಾಯಿ ಖ್ಯಾತ ಪತ್ತೇದಾರಿ ಕಾದಂಬರಿಕಾರರಾಗಿ ಹೆಸರಾಗಿದ್ದವರು. ಖ್ಯಾತ ಪತ್ತೇದಾರಿ ಕಾದಂಬರಿಕಾರರಾಗಿ ಹೆಸರಾಗಿದ್ದವರು.

Sat Jan 14 , 2023
ಸಾಹಿತ್ಯ ಕ್ಷೇತ್ರದಲ್ಲಿ ‘ಸುದರ್ಶನ ದೇಸಾಯಿ’ ಎಂದೇ ಚಿರಪರಿಚಿತರಾದ ಸುದರ್ಶನ ಕೃಷ್ಣರಾವ್‌ ಮುತಾಲಿಕ ದೇಸಾಯಿ, 1945ರ ಜವವರಿ 14ರಂದು ಕೃಷ್ಣರಾವ್‌ ಹಾಗೂ ರಾಧಾಬಾಯಿ ದೇಸಾಯಿ ದಂಪತಿಗಳ ಎರಡನೇ ಮಗನಾಗಿ ಜನಿಸಿದರು. ಧಾರವಾಡದಲ್ಲಿಯೇ ತಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಟಿ.ಸಿ.ಎಚ್‌. ತರಬೇತಿ ಮುಗಿಸಿ, ‘ಹಿಂದಿ ವಿಶಾರದ’ ಪದವಿ ಪಡೆದರು. ಸುದರ್ಶನ ದೇಸಾಯಿ ಧಾರವಾಡ ವಲಯದ ಗುಲಗಂಜಿಕೊಪ್ಪದ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಆರಂಭಿಸಿ 39 ವರ್ಷ ಸೇವೆ ಸಲ್ಲಿಸಿ, ಹುಬ್ಬಳ್ಳಿ ಉಣಕಲ್ಲ […]

Advertisement

Wordpress Social Share Plugin powered by Ultimatelysocial