ಕನ್ನಡ ಸಾಹಿತ್ಯಲೋಕಕ್ಕೆ ಮುಂಬೈ ನಿವಾಸಿ ಕನ್ನಡಿಗರ ಕೊಡುಗೆ ಮಹತ್ವವಾದದದ್ದು.

ಕನ್ನಡ ಸಾಹಿತ್ಯಲೋಕಕ್ಕೆ ಮುಂಬೈ ನಿವಾಸಿ ಕನ್ನಡಿಗರ ಕೊಡುಗೆ ಮಹತ್ವವಾದದದ್ದು. ಪ್ರಸಕ್ತ ತಲೆಮಾರಿನಲ್ಲಿ ಈ ಸಾಲಿಗೆ ಸೇರಿದವರಲ್ಲಿ ಡಾ. ಜಿ.ಎನ್. ಉಪಾಧ್ಯ ಮುಖ್ಯರಾಗಿದ್ದಾರೆ.ಜಿ.ಎನ್. ಉಪಾಧ್ಯ ಎಂದು ಪ್ರಸಿದ್ಧರಾಗಿರುವ ಗಣೇಶ ನಾಗೇಂದ್ರ ಉಪಾಧ್ಯ ಅವರು 1967ರ ಫೆಬ್ರವರಿ 7ರಂದು ಜನಿಸಿದರು. ತಂದೆ ನಾಗೇಂದ್ರ ಉಪಾಧ್ಯ. ತಾಯಿ ಇಂದಿರಾ. ಉಪಾಧ್ಯರು ಮೂಲತಃ ಉಡುಪಿ ತಾಲೂಕಿನ ಕೋಟದವರು. ಹುಬ್ಬಳ್ಳಿಯಲ್ಲಿದ್ದು ಹಲವಾರು ವೃತ್ತಿಗಳನ್ನು ಮಾಡಿ ಕಷ್ಟಪಟ್ಟು ವಿದ್ಯಾಭ್ಯಾಸವನ್ನು ನಡೆಸಿದ ಉಪಾಧ್ಯರು ಕರ್ನಾಟಕ ವಿಶ್ವವಿದ್ಯಾಲಯದಿಂದ ಪದವಿ ಪಡೆದು ಮುಂದೆ ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ವರದರಾಜ ಆದ್ಯ ಬಂಗಾರದ ಪದಕ ಹಾಗೂ ಮೊದಲ ರ್ಯಾಂಕ್ ಸಾಧನೆಯೊಂದಿಗೆ ಗಳಿಸಿಕೊಂಡರು. ಜೊತೆಗೆ ಮಹಾರಾಷ್ಟ್ರದ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಎಂಬ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ ಪದವಿ ಪಡೆದರು.ಡಾ.ಜಿ.ಎನ್. ಉಪಾಧ್ಯ ಅವರು ಮುಂಬೈ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇರಿ, ಮುಂದೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಸಾಂಸ್ಕೃತಿಕ ಅಧ್ಯಯನ, ವಿಮರ್ಶೆ, ಭಾಷಾ ವಿಜ್ಞಾನ ಮತ್ತು ಪತ್ರಿಕೋದ್ಯಮ ಉಪಾಧ್ಯ ಅವರ ಆಸಕ್ತಿಯ ಕ್ಷೇತ್ರಗಳು. ಅವರು ‘ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಕೆಲ ಕಾಲ ಉಪಸಂಪಾದಕರಾಗಿ ಕೆಲಸ ಮಾಡಿದ್ದರಲ್ಲದೆ, ಕೆಲಕಾಲ ಸಂಯುಕ್ತ ಕರ್ನಾಟಕ ಪತ್ರಿಕೆಯ ಪುಸ್ತಕ ಅವಲೋಕನ ವಿಭಾಗದ ವಿಮರ್ಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು.ಮಹಾರಾಷ್ಟ್ರ ಸರಕಾರದ ಶಿಕ್ಷಣ ಇಲಾಖೆ, ರಾಜ್ಯ ಪಠ್ಯಪುಸ್ತಕ ಮಂಡಳಿ, ಮಹಾರಾಷ್ಟ್ರ ಸರಕಾರದ ಗುಪ್ತಚರ ಇಲಾಖೆ ಮೊದಲಾದ ಉನ್ನತ ಸಂಸ್ಥೆಗಳಲ್ಲಿ ವಿಷಯ ತಜ್ಞರಾಗಿ, ಮಾರ್ಗದರ್ಶಕರಾಗಿ ಸಹಾ ಉಪಾಧ್ಯ ಅವರ ಸೇವೆ ಸಂದಿದೆ.ಜಿ.ಎನ್. ಉಪಾಧ್ಯ ಅವರು ಸೊಲ್ಲಾಪುರ ಒಂದು ಸಾಂಸ್ಕೃತಿಕ ಅಧ್ಯಯನ, ಮಹಾರಾಷ್ಟ್ರದ ಕನ್ನಡ ಶಾಸನಗಳ ವರ್ಣಾನಾತ್ಮಕ ಸೂಚಿ, ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು, ಮಹಾರಾಷ್ಟ್ರ ಕರ್ನಾಟಕ ಸಾಂಸ್ಕೃತಿಕ ಬಾಂಧವ್ಯ ಮೊದಲಾದ ಸಂಶೋಧನ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಮುಂಬೈಯಲ್ಲಿ ಅಭಿಜಿತ್ ಪ್ರಕಾಶನವನ್ನು ಆರಂಭಿಸಿ, ಬೇರೆ ಬೇರೆ ಲೇಖಕರ ನೂರಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ. ಡಾ. ಉಪಾಧ್ಯ ಅವರದ್ದೇ ಅರವತ್ತಕ್ಕೂ ಹೆಚ್ಚು ಕೃತಿಗಳು ಬೆಳಕು ಕಂಡಿದ್ದು ಅವುಗಳಲ್ಲಿ ‘ಮಹಾರಾಷ್ಟ್ರದ ಕನ್ನಡ’ ಶಾಸನ ಸಂಪುಟ, ‘ಗೋದಾವರಿವರಂ ಇರ್ದ ಕನ್ನಡ ನಾಡು’, ‘ಸಿದ್ಧರಾಮನ ಸೊನ್ನಲಿಗೆ’, ‘ಕನ್ನಡ ಮನಸ್ಸುಗಳೊಂದಿಗೆ’, ‘ವ್ಯಾಖ್ಯಾನ ಭಾಸ್ಕರ ಮತ್ತೂರು ಕೃಷ್ಣಮೂರ್ತಿ’, ‘ಡಾ. ಬಿ. ಎಸ್. ಸನದಿ : ಬದುಕು ಬರಹ, ವಿಚಾರದ ಬೆಳಕು’, ‘ನಿಜದ ನಿಲುವು’, ‘ ‘ಅನುಭಾವ ಸಾಹಿತ್ಯದ ಅನನ್ಯತೆ’, ‘ವಿನೋದಸೌಧದ ಸಾಹಿತಿ ಡುಂಡಿರಾಜ್’, ‘ಶಂಕರ ಮೊಕಾಶಿ ಪುಣೇಕರ’ ಮುಂತಾದ ವೈವಿಧ್ಯಪೂರ್ಣ ಕೃತಿಗಳು ಸೇರಿವೆ.ಅವರ ಮಾರ್ಗದರ್ಶನದಲ್ಲಿ ಅನೇಕ ಮಂದಿ ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿ ಪಡೆದಿದ್ದಾರೆ.ಉಪಾಧ್ಯ ಅವರಿಗೆ ಚಿತ್ರದುರ್ಗದ ಮುರುಘಾಮಠದ ‘ಶಿಕ್ಷಣ ವಿಭೂಷಣ’ ಪ್ರಶಸ್ತಿ , ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ‘ಶಾಂತಿಲಾಲ್ ಪ್ರಶಸ್ತಿ’, ಮಹಾರಾಷ್ಟ್ರ ಕರ್ನಾಟಕ ಆದಾನ ಪ್ರದಾನ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ರತ್ನಾಕರವರ್ಣಿ ಮುದ್ದಣ ಅನಾಮಿಕ ದತ್ತಿ ಬಹುಮಾನ’, ಬೆಂಗಳೂರಿನಲ್ಲಿ ನಡೆದ 77ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸನ್ಮಾನ, ಬಿಲ್ಲವರ ಸಂಘದ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.ಕರ್ನಾಟಕದಿಂದ ಹೊರಗೆ ಕನ್ನಡದ ಜ್ಯೋತಿ ಬೆಳಗುತ್ತಿರುವ ಡಾ. ಜಿ. ಎನ್. ಉಪಾಧ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಹೇಳೋಣ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

CRICKET:ವಿರಾಟ್ ಕೊಹ್ಲಿಯ "ಕಳಪೆ ಫಾರ್ಮ್" ಕುರಿತು ರೋಹಿತ್ ಶರ್ಮಾ, ಅತುಲ್ ವಾಸನ್ !!

Wed Feb 16 , 2022
ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ T20I ಸ್ಪರ್ಧೆಯ ಮೊದಲು ಕೋಲ್ಕತ್ತಾದಲ್ಲಿ ನಡೆದ ಪೂರ್ವ-ಸರಣಿ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿಯ ಬಗ್ಗೆ ಟೀಕೆ ಮಾಡಿದ ಸಮಯಕ್ಕಾಗಿ ಭಾರತದ ಮಾಜಿ ಕ್ರಿಕೆಟಿಗ ಅತುಲ್ ವಾಸನ್ ಮಂಗಳವಾರ ಭಾರತದ ವೈಟ್ ಬಾಲ್ ನಾಯಕ ರೋಹಿತ್ ಶರ್ಮಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತೀಯ ಕ್ರಿಕೆಟ್‌ನ ಇಬ್ಬರು ಕ್ರಿಕೆಟ್ ದಿಗ್ಗಜರ ನಡುವಿನ ಭಿನ್ನಾಭಿಪ್ರಾಯದ ವದಂತಿಗಳ ಮಧ್ಯೆ ವಿರಾಟ್ ಕೊಹ್ಲಿಯ ಬ್ಯಾಟ್‌ನಿಂದ ಕಡಿಮೆಯಾದ ಆದಾಯದ ಕುರಿತು ಪತ್ರಕರ್ತರಿಗೆ ನಾಯಕ […]

Advertisement

Wordpress Social Share Plugin powered by Ultimatelysocial