SANDALWOOD:’ಕನ್ನಡಿಗ’ ಎನ್ನುವುದೇ ಒಂದು ಪವರ್‌ಫುಲ್‌ ಟೈಟಲ್‌;

ಕನ್ನಡದ ‘ಕನ್ನಡಿಗ’ ಸಿನಿಮಾ ಓಟಿಟಿಯಲ್ಲಿ ರಿಲೀಸ್‌ ಆಗಿದೆ. ಕನ್ನಡಿಗನ ಪಾತ್ರದಲ್ಲಿ ನಟ ರವಿಚಂದ್ರನ್ ಅಭಿನಯಿಸಿದ್ದಾರೆ. ‘ಕನ್ನಡಿಗ’ ಕೇವಲ ಒಬ್ಬ ಹೀರೋಗೆ ಸಂಬಂಧಪಟ್ಟ ಕಥೆ ಅಲ್ಲ.

ಅಥವಾ ಅದು ಒಂದು ಕತೆಗೆ ಸೀಮಿತ ಆಗುವ ಟೈಟಲ್‌ ಕೂಡ ಅಲ್ಲ. ‘ಕನ್ನಡಿಗ’ ಎಲ್ಲಾ ಕನ್ನಡಿಗರನ್ನು ಪ್ರತಿ ಬಿಂಬಿಸುವ, ಕನ್ನಡವನ್ನು ಪ್ರತಿಬಿಂಬಿಸುವ ಕನ್ನಡಿ. ಹಾಗಿದ್ದರೆ ಕನ್ನಡಿಗ ಸಿನಿಮಾದಲ್ಲಿ ಏನಿದೆ. ಸಿನಿಮಾ ಹೇಗಿದೆ ಎನ್ನುವ ವಿಮರ್ಶೆ ಇಲ್ಲಿದೆ ಮುಂದೆ ಓದಿ…

ಕನ್ನಡ ಭಾಷೆಯ ಲಿಪಿಕಾರ ವಂಶದ ಕೊನೆ ಕುಡಿಯ ಕಥೆ, ವ್ಯಥೆಯೇ ‘ಕನ್ನಡಿಗ’. 300 ವರ್ಷದ ಹಿಂದೆ ಚೆನ್ನಭೈರಾದೇವಿ ಎಂಬ ರಾಣಿಯು ಸಮಂಥ ಭದ್ರ(ರವಿಚಂದ್ರನ್)ನಿಗೆ ಒಂದು ದ್ವೀಪ ಕೊಟ್ಟು ಅಲ್ಲಿ ಕನ್ನಡದ ಗುಡಿಯನ್ನು ಕಟ್ಟಿ, ಲಿಪಿಗಳ ಮೂಲಕ ಕನ್ನಡವನ್ನು ರಕ್ಷಿಸುವ ಜವಾಬ್ದಾರಿ ಕೊಡುತ್ತಾಳೆ. ಹೀಗೆ ಸಿನಿಮಾ ಆರಂಭ ಆಗುತ್ತದೆ. ಸಮಂಥ ಭದ್ರನ ನಂತರ ಈ ಜವಾಬ್ದಾರಿ ಮಗ ಗುಣಭದ್ರ(ರವಿಚಂದ್ರನ್) ಹೆಗಲು ಏರುತ್ತೆ. ಗುಣಭದ್ರ ಲಿಪಿಕಾರ ವಂಶ ಕೊನೆಯ ಗಂಡು ಸಂತಾನ ಹಾಗಾಗಿ ರಾಣಿ ಕೊಟ್ಟ ಜವಾಬ್ದಾರಿಯನ್ನು ಉಳಿಸಿ ಕೊಳ್ಳುವುದು. ಪರಕೀಯರ ವಶದಲ್ಲಿ ಇದ್ದ ದ್ವೀಪವನ್ನು ಹಿರಿಯರು ಸಾಲ ಮಾಡಿ ಕೊಂಡಿರುತ್ತಾರೆ. ಋಣ ತೀರಿಸಲು ಗುಣಭದ್ರ ಒದ್ದಾಡುತ್ತಿರುತ್ತಾನೆ.

ಆದರೆ ಅವನು ಋಣ ಮುಕ್ತನಾಗಿ, ಆ ದ್ವೀಪವನ್ನು ಪಡೆಯುವುದು ಕನ್ನಡ ಭಾಷೆಯಿಂದಲೆ. ಅದು ಹೇಗೆ ಎನ್ನುವುದನ್ನು ಸಿನಿಮಾದಲ್ಲಿ ನೋಡ ಬೇಕು. ಸಿನಿಮಾ ಆರಂಭದಲ್ಲಿ ಕನ್ನಡ ಭಾಷೆಯ ಬಗ್ಗೆಯೇ ಹೆಚ್ಚಾಗಿ ಹೇಳಲಾಗುತ್ತದೆ. ಫರ್ಡಿನೆಂಡ್ ಕಿಟೆಲ್‌ ಜರ್ಮನಿಯಿಂದ ಕನ್ನಡ ಕಲಿಯಲು ಗುಣಭದ್ರನ ಮೊರೆ ಹೋಗುತ್ತಾನೆ. ಇವರು ಕನ್ನಡ ಕಲಿಯುವ ಸನ್ನಿವೇಷಗಳಲ್ಲಿ ಕನ್ನಡದ ಮಹತ್ವ ಮತ್ತು ವಿಶೇಷತೆಯನ್ನು ಹೇಳಲಾಗಿದೆ.

ಕನ್ನಡ ಲಿಪಿಕಾರ ಗುಣಭದ್ರನಾಗಿ ಡಾ.ವಿ. ರವಿಚಂದ್ರನ್!
ಕನ್ನಡ ಲಿಪಿಗಳ ಬಗ್ಗೆ, ಭಾಷೆಯ ಬಗ್ಗೆ ಆರಂಭ ಆಗುವ ಸಿನಿಮಾ, ಕ್ರಮೇಣ ಗುಣಭದ್ರನ ವೈಯಕ್ತಿಕ ಜೀವನದತ್ತ ಸಾಗುತ್ತದೆ. ಗುಣಭದ್ರನ ಹೆಂಡತಿ ಸಾಂಕಮ್ಮಬ್ಬೆ(ಪಾವನ). ಗುಣಭದ್ರನಿಗೆ ಮದುವೆ ವಯಸ್ಸಿನ ಮಗಳು ಇದ್ದಾಳೆ. ಗುಣಭದ್ರನ ಹೆಂಡತಿ ಮಗಳ ಸುತ್ತಾ ಕಥೆಯನ್ನು ಕಟ್ಟಿ ಕೊಡಲಾಗಿದೆ. ಗಂಡು ಮಗು ಇಲ್ಲ ವಂಶವನ್ನು ಮುಂದುವರೆಸುವ ವಾರಸುದಾರ ಇಲ್ಲ ಎನ್ನುವ ಚಿಂತೆ ಗುಣ ಭದ್ರನಿಗೆ ಇರುವುದಿಲ್ಲ. ಹೆಂಡತಿ ಮಗಳ ಜೊತೆಗೆ ಅರಾಮಾಗಿರುವ ಗುಣಭದ್ರನ ಬದುಕಲ್ಲಿ ಕಹಿ ಬಿರುಗಾಳಿ ಎಬ್ಬಿಸುತ್ತಾಳೆ ಜರ್ಮನ್ ಮಹಿಳೆ ಆಯನಾ. ಈ ಆಯನಾ ಫರ್ಡಿನೆಂಡ್‌ ಕಿಟೆಲ್‌ ಜೊತೆಗೆ ಕನ್ನಡ ಲಿಪಿ ಕಲಿಯಲು ಗುಣ ಭದ್ರನ ಬಳಿ ಬಂದಿರುತ್ತಾಳೆ. ಈಕೆಯಿಂದ ದೊಡ್ಡ ಅಪವಾದ ಹೊತ್ತುಕೊಂಡು, ಹೆಂಡತಿ ಕೋಪಕ್ಕೆ ಗುರಿ ಆಗಿ, ಮಗಳನ್ನು ಕಳೆದುಕೊಳ್ಳುತ್ತಾನೆ ಗುಣಭದ್ರ.

ಬಲವಂತವಾಗಿ ಹಲವು ಸನ್ನಿವೇಶಗಳನ್ನು ತುರುಕಲಾಗಿದೆ!

ಇನ್ನು ಗುಣ ಭದ್ರನಿಗೆ ಇರುವ ಸಮಸ್ಯೆಗಳು ಸಾಲದು ಎಂಬಂತೆ ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಅವನ ಕಿರಿಯ ಸಹೋದರ ಮತ್ತೆ ಮನೆಗೆ ಮರಳುತ್ತಾನೆ. ಆಗ ಆತ ಎಲ್ಲಿದ ಹಲವು ವರ್ಷಗಳ ಬಳಿಕ ಮತ್ತೆ ಯಾಕೆ ಮನೆ ಬಂದ ಎನ್ನುವ ಫ್ಲ್ಯಾಶ್‌ ಬ್ಯಾಕ್‌ ತೆರೆದುಕೊಳ್ಳುತ್ತದೆ. ಫ್ಲ್ಯಾಶ್‌ ಬ್ಯಾಕ್‌ನಲ್ಲಿ ಪೋರ್ಚುಗೀಸರ ದಬ್ಬಾಳಿಕೆಯ ಬಗ್ಗೆ ವರ್ಣಿಸಲಾಗಿದೆ. ಗುಣಭದ್ರನಿಗೆ ತೊಂದರೆ ಕೊಡಲೆಂದೇ ಈ ತಮ್ಮ ಪಾತ್ರವನ್ನು ತುರುಕಲಾಗಿದೆ.

ಕನ್ನಡದಿಂದ ಆರಂಭ: ಗುಣಭದ್ರನ ಜೀವನದೊಂದಿಗೆ ಅಂತ್ಯ!

ಕನ್ನಡದಿಂದ ಶುರುವಾಗಿ ಗುಣಭದ್ರನ ಜೀವನದೊಂದಿಗೆ ಈ ಕಥೆ ಕೊನೆ ಆಗುತ್ತೆ. ಗುಣಭದ್ರನ ಮೇಲೆ ಇರುವ ಅಪವಾದಗಳು ಹೇಗೆ ಕರಗುತ್ತವೆ. ಎದುರಾಗುವ ತೊಂದರೆಗಳಿಂದ ಗುಣಭದ್ರ ತನ್ನ ಜೀವನದ ಜೊತೆಗೆ ಕನ್ನಡ ಲಿಪಿಗಳನ್ನು ಹೇಗೆ ಕಾಪಾಡಿದ ಎನ್ನುವುದು ಕ್ಲೈಮ್ಯಾಕ್ಸ್ ನಲ್ಲಿ ರಿವೀಲ್‌ ಆಗುತ್ತದೆ. ಆದರೆ ಅಲ್ಲಿ ತನಕ ತಾಳ್ಮೆ ಇಂದ ಸಿನಿಮಾ ನೋಡಬೇಕು ಅಷ್ಟೇ. ಕಥೆಯಲ್ಲಿ ಬರುವ ಕೆಲವು ತಿರುವುಗಳು ಮುಂದೇನು ಎನ್ನುವ ಕುತೂಹಲದೊಂದಿಗೆ ಕರೆದುಕೊಂಡು ಹೋಗುತ್ತದೆ. ಆದರೆ ಕ್ಲೈಮ್ಯಾಕ್ಸ್ ತುಂಬ ಸರಳವಾಗಿದೆ. ಇಡೀ ಸಿನಿಮಾ ನೋಡಿದಾಗ ಅಂತ್ಯದಲ್ಲಿ ಇನ್ನು ಏನೋ ಇರಬೇಕಿತ್ತು ಅನಿಸುತ್ತದೆ.

ಸಿದ್ದ ಸೂತ್ರಗಳನ್ನು ಮೀರಿದ ಕನ್ನಡಿಗ!

ನಿರ್ದೇಶಕ ಬಿ.ಎಂ ಗಿರಿರಾಜ್‌ ಈ ಚಿತ್ರದ ಮೂಲಕ ಭಿನ್ನ ಪ್ರಯತ್ನ ಮಾಡಿದ್ದಾರೆ. ‘ಕನ್ನಡಿಗ’ ಎಂದರೆ ಆ ಭಾಷೆಯನ್ನು ಕಾಪಾಡಿಕೊಂಡು, ರಕ್ಷಿಸಿಕೊಂಡು ಬಂದವನು ಎನ್ನುವುದನ್ನು ಹೇಳಲಾಗಿದೆ. ಹಾಗಂತ ಈ ಚಿತ್ರದಲ್ಲಿ ಕನ್ನಡ ಬಗ್ಗೆ ಉದ್ದುದ್ದ ಮಾಸ್ ಡೈಲಾಗ್‌ಗಳು ಇಲ್ಲ. ಇಡೀ ಚಿತ್ರ ಸೌಮ್ಯವಾಗಿ ಸಾಗುತ್ತದೆ. ಇನ್ನು ಭಾವನಾತ್ಮಕವಾಗಿ ಹಿಡಿದಿಡುವ ನಿರ್ದೇಶಕರ ಕಲೆಯನ್ನು ಮೆಚ್ಚಲೇಬೇಕು. ಹಲವು ಸನ್ನಿವೇಷಗಳು ಪ್ರೇಕ್ಷಕರ ಕಣ್ಣು ಒದ್ದೆ ಮಾಡುತ್ತದೆ. ಕನ್ನಡ ಲಿಪಿಯ ಬಗ್ಗೆ ಎಂದ ಮಾತ್ರಕ್ಕೆ ಸಿನಿಮಾದಲ್ಲಿ ಪುರಾಣವನ್ನು ಹೇಳಿಲ್ಲ. ಸಿನಿಮ್ಯಾಟಿಕ್‌ ಆಗಿಯೇ ಚಿತ್ರವನ್ನು ಕಟ್ಟಿ ಕೊಡಲಾಗಿದೆ.

ಅತ್ಯುತ್ತಮವಾದ ಕಲಾವಿದರು: ಆಯ್ಕೆಯಲ್ಲಿ ಎಡವಿಲ್ಲ ನಿರ್ದೇಶಕ!

ಕಲಾವಿದರ ಆಯ್ಕೆ ಪರ್ಫೆಕ್ಟ್‌ ಆಗಿದೆ. ಗುಣಭದ್ರನ ಪಾತ್ರವನ್ನು ರವಿಚಂದ್ರನ್ ಅವರಷ್ಟು ಅಚ್ಚು ಕಟ್ಟಾಗಿ ಮತ್ತೊಬ್ಬರು ಅಭಿನಯಿಸಲು ಸಾಧ್ಯ ಇಲ್ಲ ಎನ್ನುವಷ್ಟರ ಮಟ್ಟಿಗೆ ರವಿಚಂದ್ರನ್‌ ಅಭಿನಯಿಸಿದ್ದಾರೆ. ರವಿಚಂದ್ರನ್‌ ಅವರಿಗೆ ಅವರದ್ದೇ ಆದ ಒಂದು ಸ್ಟೈಲ್‌ ಇದೆ. ಆದರೆ ಇಲ್ಲಿ ಕ್ರೇಜಿಸ್ಟಾರ್ ಛಾಯೆ ಕಾಣುವುದಿಲ್ಲ. ಗುಣಭದ್ರನ ಪಾತ್ರದಲ್ಲಿ ವಿಭಿನ್ನವಾಗಿ ಕಾಣುತ್ತಾರೆ. ಇನ್ನು ಸಂಕಮ್ಮಬ್ಬೆಯ ಪಾತ್ರಕ್ಕೆ ನಟಿ ಪಾವನಾ ಜೀವತುಂಬಿ ಅಭಿಯಿಸಿದ್ದಾರೆ. ಅಚ್ಚುತ್‌ ಕುಮಾರ್, ಬಾಲಾಜಿ ಮನೋಹರ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ರಾಕ್‌ಲೈನ್‌ ವೆಂಕಟೇಶ್, ಚಿ.ಗುರುದತ್, ಜಯಶ್ರೀ ಆರಾಧ್ಯ ಸೇರಿದಂತೆ ಹಲವರು ಪಾತ್ರವರ್ಗದಲ್ಲಿ ಇದ್ದಾರೆ. ಚಿತ್ರಕ್ಕೆ ಜಿ.ಎಸ್‌ವಿ ಸೀತಾರಾಮ್‌ ಛಾಯಾಗ್ರಹ, ರವಿ ಬಸ್ರೂರು ಸಂಗೀತ ಉತ್ತಮ ಕೊಡುಗೆ ನೀಡಿವೆ.

ಹೊಸ ಪ್ರಯತ್ನ ಮಾಡಿ ಗೆದ್ದ ನಿರ್ದೇಶಕ!

ಕನ್ನಡ ಚಿತ್ರರಂಗದಲ್ಲಿ ಇಂಥಹ ಕಥೆಯನ್ನು ಇನ್ನೂ ಯಾರು ಮುಟ್ಟಿಲ್ಲ. ಈ ಚಿತ್ರ ಹಲವಾರು ಹೊಸ ಯೋಚನೆಗಳಿಗೆ ದಾರಿ ಮಾಡಿ ಕೊಟ್ಟಿದೆ. ಒಬ್ಬ ಲಿಪಿಕಾರನ ಬದುಕನ್ನು ಹೀಗೂ ಸಿನಿಮಾ ಮೂಲಕ ಹೇಳಬಹುದು ಎನ್ನುವುದನ್ನು ನಿರ್ದೇಕ ಸಾಬೀತು ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

PARLIAMENT:ಸಂಸತ್ತಿನ 875 ಸಿಬ್ಬಂದಿಗೆ ಕೊರೋನಾ ಸೋಂಕು ;

Sun Jan 23 , 2022
ನವದೆಹಲಿ:Covid ಮೂರನೇ ಅಲೆ ಪ್ರಾರಂಭವಾದಾಗಿನಿಂದ ಜನವರಿ 20 ರವರೆಗೆ ಭಾರತೀಯ ಸಂಸತ್ತಿನಲ್ಲಿ ಕನಿಷ್ಠ 875 ಸಿಬ್ಬಂದಿ covid -19 ಗೆ ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ವರದಿಯ ಪ್ರಕಾರ, ಸಂಸತ್ತಿನ ಬಜೆಟ್ ಅಧಿವೇಶನವನ್ನು ಸುಗಮವಾಗಿ ನಡೆಸಲು ಸಂಸತ್ತಿನಲ್ಲಿ 2,847 covid ಪರೀಕ್ಷೆಗಳನ್ನು ನಡೆಸಲಾಗಿದೆ.ಇವುಗಳಲ್ಲಿ ಜನವರಿ 20 ರವರೆಗೆ 875 ಮಾದರಿಗಳು ಕೋವಿಡ್ ಪಾಸಿಟಿವ್(covid positive) ಎಂದು ತಿಳಿದುಬಂದಿದೆ.ಏತನ್ಮಧ್ಯೆ, ಬಜೆಟ್ ಅಧಿವೇಶನವು ಜನವರಿ 31 […]

Advertisement

Wordpress Social Share Plugin powered by Ultimatelysocial