ಕನ್ನಡ ಚಿತ್ರರಂಗದ ಬಗ್ಗೆ ಬಾಲಿವುಡ್‌ ಅಸಡ್ಡೆ ವಿರುದ್ಧ ತಾರಾ ಮಾಡಿದ್ದ ಪ್ರತಿಭಟನೆ

 

ದಕ್ಷಿಣ ಭಾರತದ ಮೂರು ಸಿನಿಮಾಗಳು ಬಾಲಿವುಡ್ ಪ್ರದೇಶದಲ್ಲಿ ದೊಡ್ಡ ಹಿಟ್ ಆಗಿದ್ದೇ ತಡ ಬಾಲಿವುಡ್ ಸ್ಟಾರ್ ನಟರಿಗೆ ಅಸೂಯೆ ಶುರುವಾಗಿದೆ. ಇಷ್ಟು ದಿನ ಗುಪ್ತಗಾಮಿನಿಯಂತಿದ್ದ ಅಸೂಯೆ ಅಜಯ್ ದೇವಗನ್‌ರ ನಿನ್ನೆಯ ಟ್ವೀಟ್‌ ಮೂಲಕ ಬಹಿರಂಗಗೊಂಡಿದೆ.

”ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನು ಹಿಂದಿಗೆ ಏಕೆ ಡಬ್ ಮಾಡಿ ಬಿಡುಗಡೆ ಮಾಡುತ್ತೀರಿ?” ಎಂದು ನೇರವಾಗಿ ಪ್ರಶ್ನೆ ಮಾಡಿದ್ದಾರೆ ಅಜಯ್ ದೇವಗನ್.

ಈ ರೀತಿಯ ಅಸೂಯೆಗೆ ಕಾರಣ, ಬಾಲಿವುಡ್ಡಿಗರ ಶ್ರೇಷ್ಠತೆಯ ವ್ಯಸನ. ಬಾಲಿವುಡ್ಡಿಗರು ದಶಕಗಳಿಂದಲೂ ನಮ್ಮದು ದೊಡ್ಡ ಚಿತ್ರರಂಗ ಎಂಬ ಭ್ರಮೆಯಲ್ಲಿಯೇ ಬದುಕುತ್ತಾ ಬಂದಿದ್ದಾರೆ. ಆದರೆ ಈಗ ಹಠಾತ್ತನೆ ಅವರ ದಕ್ಷಿಣದ ಸಿನಿಮಾಗಳು ಅವರನ್ನು ಓವರ್‌ಟೇಕ್ ಮಾಡುತ್ತಿರುವುದು ಅವರಿಗೆ ಸಹಿಸಲಾಗುತ್ತಿಲ್ಲ.

ಅಸಲಿಗೆ ಬಾಲಿವುಡ್‌ ಎಂದೂ ಸಹ ದಕ್ಷಿಣ ಭಾರತ ಚಿತ್ರರಂಗವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಹೀಗೆ ಸತತ ನಿರ್ಲಕ್ಷ್ಯಕ್ಕೆ ಒಳಗಾಗಿ ಈಗ ಅವರನ್ನು ದಾಟಿ ನಾವು ಮುಂದೆ ಹೋಗುತ್ತಿರುವುದನ್ನು ಸ್ಪಷ್ಟವಾಗಿ ಸುದೀಪ್ ಹೇಳಿದರು. ಅದು ಸಹಜವೂ ಹೌದು, ಸರಿಯೂ ಹೌದು. ಆದರೆ ಸುದೀಪ್ ಹೇಳಿದ ಸತ್ಯ ಅಜಯ್ ದೇವಗನ್‌ಗೆ ಸಹ್ಯವಾಗಲಿಲ್ಲ.

ದಕ್ಷಿಣ ಭಾರತದ ನಟ-ನಟಿಯರು, ತಂತ್ರಜ್ಞರು ಬಾಲಿವುಡ್‌ನಿಂದ ಅನುಭವಿಸಿದ್ದ ಅಪಮಾನ ಒಂದೆರಡಲ್ಲ. ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಾರಾ ರಾಷ್ಟ್ರೀಯ ಸಿನಿಮೋತ್ಸವದಲ್ಲಿ ಇದೇ ಕಾರಣಕ್ಕೆ ಮಾಡಿದ್ದ ಪ್ರತಿಭಟನೆಯ ಬಗ್ಗೆ ಹಿಂದೊಮ್ಮೆ ಮಾತನಾಡಿದ್ದರು.

2005 ರಲ್ಲಿ ‘ಹಸೀನಾ’ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ
2005ರಲ್ಲಿ ‘ಹಸೀನಾ’ ಸಿನಿಮಾದ ನಟನೆಗೆ ತಾರಾಗೆ ರಾಷ್ಟ್ರಪ್ರಶಸ್ತಿ ನೀಡಲಾಗಿತ್ತು. ಅದೇ ವರ್ಷ ಅಥವಾ ಅದರ ಮರುವರ್ಷ ನಡೆದ ರಾಷ್ಟ್ರೀಯ ಸಿನಿಮೋತ್ಸವದಲ್ಲಿ ನಟಿ ತಾರಾ ಅವರನ್ನು ‘ಆರತಿ ಗರ್ಲ್’ ಆಗಿ ಆಹ್ವಾನಿಸಲಾಗಿತ್ತು. ಅವರೊಟ್ಟಿಗೆ ನಟಿ ಬಿಪಾಷಾ ಬಸು ಅವರನ್ನೂ ಸಹ ಕರೆಯಲಾಗಿತ್ತು.

ಕನ್ನಡ ಸಿನಿಮಾಗಳ ಪೋಸ್ಟರ್‌ಗಳನ್ನು ಹಾಕಿರಲಿಲ್ಲ

ಆ ಸಿನಿಮೋತ್ಸದಲ್ಲಿ ತಾರಾ ಅವರ ಸಿನಿಮಾ ಸೇರಿದಂತೆ ಕನ್ನಡದ ಕೆಲವು ಸಿನಿಮಾಗಳ ಪ್ರದರ್ಶನ ಆಯೋಜಿಸಲಾಗಿತ್ತು. ಇಷ್ಟು ದೊಡ್ಡ ಸಿನಿಮೋತ್ಸವದಲ್ಲಿ ತಮ್ಮ ಸಿನಿಮಾಕ್ಕೆ ಜನ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲದಿಂದ ತಾರಾ ಸಹ ಸಿನಿಮಾ ಪ್ರದರ್ಶನವಾಗುವ ಕಡೆ ಹೋದರೆ ಅವರಿಗೆ ಅಚ್ಚರಿ, ಕನ್ನಡದ ಸಿನಿಮಾ ಪ್ರದರ್ಶನವಾಗುತ್ತಿರುವ ಬಗ್ಗೆ ಅಲ್ಲಿ ಪ್ರಚಾರವೇ ಇರಲಿಲ್ಲ. ಹಿಂದಿ ಸಿನಿಮಾ ಪ್ರದರ್ಶನಕ್ಕೆ ಭಾರಿ ಪೋಸ್ಟರ್‌ಗಳು, ಪ್ರಚಾರ ಮಾಡಿದ್ದ ಆಯೋಜಕರು ಕನ್ನಡ ಸಿನಿಮಾಗಳ ಒಂದೂ ಪೋಸ್ಟರ್ ಹಾಕಿಸಿರಲಿಲ್ಲ.

ಆಯೋಜಕರ ಬಳಿ ದೂರು ಹೇಳಿದ್ದ ತಾರಾ

ಇದನ್ನು ಕಂಡು ತಾರಾ ಆಯೋಜಕರ ಬಳಿ ಹೋಗಿ ದೂರು ಹೇಳಿದರು ಅವರಿಂದ ತೀರ ಅಸಡ್ಡೆಯ ಉತ್ತರವೇ ಬಂತು. ತಾರಾ ಸತತ ಪ್ರತಿಭಟನೆ ಮಾಡಿದ ಬಳಿಕ ಕನ್ನಡ ಸಿನಿಮಾದ ಕೆಲವು ಪೋಸ್ಟರ್‌ಗಳನ್ನಷ್ಟೆ ಹಾಕಲಾಯಿತು. ಸ್ವತಃ ತಾರಾ, ಕನ್ನಡ ಚಿತ್ರಗಳು ಪ್ರದರ್ಶನವಾಗುತ್ತಿದ್ದ ಸ್ಕ್ರೀನ್‌ಗಳ ಹೊರಗೆ ನಿಂತು ಜನರನ್ನು ಸಿನಿಮಾ ನೋಡುವಂತೆ ಆಹ್ವಾನಿಸಿದರು. ತಾವೇ ಕೈಯ್ಯಾರೆ ಸಿನಿಮಾಗಳ ಹೆಸರು ಬರೆದು ಅಲ್ಲೆಲ್ಲ ಮೆತ್ತಿಸಿದ್ದಾಗಿ ಸಹ ತಾರಾ ಹೇಳಿಕೊಂಡಿದ್ದರು.

ಕನ್ನಡದ ನಟರ ಚಿತ್ರಗಳೇ ಹಾಕಿರಲಿಲ್ಲ

ಅದು ಮಾತ್ರವೇ ಅಲ್ಲ, ಭಾರತೀಯ ಚಿತ್ರರಂಗದ ಇತಿಹಾಸ ಸಾರುವ ಚಿತ್ರಭಿತ್ತಿಯಲ್ಲಿ ಕನ್ನಡದ ನಟರ ಚಿತ್ರಗಳೇ ಇರಲಿಲ್ಲವೆಂದು, ಅದರ ಬಗ್ಗೆಯೂ ತಾವು ಆಯೋಜಕರ ಬಳಿ ಪ್ರಶ್ನೆ ಮಾಡಿದ್ದಾಗಿಯೂ ನಟಿ ತಾರಾ ಆಗ ಹೇಳಿದ್ದರು. ಇದು ಕೇವಲ ಒಬ್ಬರ ಉದಾಹರಣೆಯಷ್ಟೆ, ಇಂಥಹಾ ಸಾಕಷ್ಟು ಉದಾಹರಣೆಗಳು ಇವೆ. ಬಾಲಿವುಡ್‌ ತಮ್ಮ ಸಿನಿಮಾಗಳಲ್ಲಿ ಸಹ ದಕ್ಷಿಣ ಭಾರತದವರನ್ನು ತಮಾಷೆಯ ಪಾತ್ರಗಳಂತೆ ಅಥವಾ ವಿಲನ್‌ಗಳಂತೆ ಚಿತ್ರಿಸಿದ್ದಾರೆಯೇ ವಿನಃ ನಾಯಕರಂತೆ, ತಮ್ಮ ಸಮಾನರಂತೆ ಅಲ್ಲ. ಆದರೆ ಈಗ ದಕ್ಷಿಣ ಭಾರತ ಚಿತ್ರರಂಗದವರು ತಮ್ಮ ಸ್ವ ಪ್ರತಿಭೆಯಿಂದ ಬಾಲಿವುಡ್‌ ಅನ್ನು ಮೀರುತ್ತಿರುವಾಗ ಒಮ್ಮೆಲೆ ಅಸಹನೆ, ಅಸೂಯೆಗಳನ್ನು ಪ್ರದರ್ಶಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಅಜಯ್‌ಗೆ ಕನ್ನಡಿಗರೆಲ್ಲ ಒಟ್ಟಾಗಿ ಬುದ್ಧಿ ಹೇಳುತ್ತಿದ್ದಾರೆ.

Thu Apr 28 , 2022
  ಸುದೀಪ್‌ರ ಹಿಂದಿ ಭಾಷೆ ಕುರಿತಾದ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್ ಮಾಡಿರುವ ಟ್ವೀಟ್ ಭಾರಿ ವಿವಾದ ಎಬ್ಬಿಸಿದೆ. ಹಿಂದಿ ರಾಷ್ಟ್ರಭಾಷೆ ಎಂದು ಬುದ್ಧಿ ಹೇಳಲು ಬಂದ ಅಜಯ್‌ಗೆ ಕನ್ನಡಿಗರೆಲ್ಲ ಒಟ್ಟಾಗಿ ಬುದ್ಧಿ ಹೇಳುತ್ತಿದ್ದಾರೆ. ಸುದೀಪ್‌ ಮಾತಿಗೆ ಕೇವಲ ಚಿತ್ರರಂಗದವರು ಮಾತ್ರವೇ ಅಲ್ಲದೆ ರಾಜಕಾರಣಿಗಳು ಸಹ ಬೆಂಬಲ ನೀಡಿದ್ದಾರೆ. ಅಜಯ್ ದೇವಗನ್‌ ಟ್ವೀಟ್‌ಗೆ ಮಾಜಿ ಸಿಎಂ ಸಿದ್ದರಾಮಯ್ಯ ನಿನ್ನೆ ಪ್ರತಿಕ್ರಿಯೆ ನೀಡಿ, ಹಿಂದಿ ಎಂದೂ ನಮ್ಮ ರಾಷ್ಟ್ರಭಾಷೆ ಆಗಿರಲಿಲ್ಲ, […]

Advertisement

Wordpress Social Share Plugin powered by Ultimatelysocial