ಶಾಲೆಗಳ ಬಳಿಕ ಕಾಲೇಜುಗಳಲ್ಲೂ ಮುಂದುವರೆಯುತ್ತಿದೆ ಹಿಜಾಬ್‌ ವಿವಾದ;

 

ಶಿವಮೊಗ್ಗ : ಹಿಜಾಬ್‌-ಕೇಸರಿ ಶಾಲು ವಿವಾದ ಬಳಿಕ ಬುಧವಾರ ಕಾಲೇಜುಗಳು ಆರಂಭಗೊಂಡಿದ್ದು, ಇದರ ಬೆನ್ನಲ್ಲೆ ಹಿಜಾಬ್‌ ವಿವಾದ ಮುಂದುವರಿದಿದೆ.

ನಗರದ ಡಿವಿಎಸ್ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದಿದ್ದ ಅನೇಕ ವಿದ್ಯಾರ್ಥಿನಿಯರು ಕಾಲೇಜು ಸಿಬ್ಬಂದಿ ಮನವೊಲಿಕೆ ನಂತರ ಹಿಜಾಬ್‌ ತೆಗೆದು ತರಗತಿಗೆ ಹಾಜರಾಗಿದ್ದಾರೆ. ಹಿಜಾಬ್‌ ತೆಗೆಯಲು ಒಪ್ಪದ ಕೆಲ ವಿದ್ಯಾರ್ಥಿಗಳು ಮನವೊಲಿಕೆಗೂ ಬಗ್ಗದೆ ಕಾಲೇಜಿನಿಂದ ವಾಪಸ್‌ ತೆರಳಿದ್ದಾರೆ. ಇನ್ನೂ ಹಲವರು ಕಾಲೇಜಿಗೆ ಗೈರಾಗಿದ್ದರು. ಅನೇಕ ಶಾಲೆಗಳ ಬಳಿಕ ಕಾಲೇಜುಗಳಲ್ಲೂ ಹಿಜಾಬ್‌ ವಿವಾದ ಮುಂದುವರಿದಿದೆ.

‘ಹಿಜಾಬ್ ನಮ್ಮ ಜನ್ಮಸಿದ್ಧ ಹಕ್ಕು. ಸಾಂವಿಧಾನಿಕ ಹಕ್ಕಾಗಿದ್ದು, ಹೈಕೋರ್ಟ್ ಆದೇಶ ಏನೇ ಇರಲಿ. ನಮಗೆ ಹಿಜಾಬ್ ಬೇಕು, ಶಿಕ್ಷಣವೂ ಬೇಕು ಎಂದು ಪಟ್ಟುಹಿಡಿದರು. ಕೋರ್ಟ್ ಆದೇಶ ಇನ್ನು ಬಂದಿಲ್ಲ. ಹಾಗಾಗಿ ನಾವು ಹಿಜಾಬ್ ಧರಿಸಿಯೇ ತರಗತಿಯೊಳಗೆ ಕೂರುವುದಕ್ಕೆ ಬಿಡಬೇಕು. ಇದೆಲ್ಲ ತಾರಾತಮ್ಯ ಯಾಕೆ ಎಂದು ಕಾಲೇಜು ಸಿಬ್ಬಂದಿ ವಿರುದ್ಧ ಕೆಲ ವಿದ್ಯಾರ್ಥಿನಿಯರು ಆಕ್ರೋಶ ಹೊರಹಾಕಿದರು.

ವಿದ್ಯಾರ್ಥಿನಿಯರೊಂದಿಗೆ ಕಾಲೇಜಿಗೆ ಬಂದಿದ್ದ ಪೋಷಕರು ಕೂಡ ಪ್ರವೇಶ ನಿರಾಕರಿಸಿದ ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದರು. ಕಾಲೇಜು ಪ್ರವೇಶದ ಸಂದರ್ಭದಲ್ಲಿ ಅದು, ಇದು ಅಂತೆಲ್ಲ ಲಕ್ಷಗಟ್ಟಲೆ ಶುಲ್ಕ ತೆಗೆದುಕೊಳ್ಳುತ್ತೀರಿ. ಈಗ ಅದು ಬೇಡ, ಇದು ಬೇಡ ಅಂತ ವಿದ್ಯಾರ್ಥಿಗಳ ನಡುವೆ ನೀವೆ ತಾರತಮ್ಯ ಸೃಷ್ಟಿ ಮಾಡುತ್ತಿದ್ದೀರಿ. ನೀವು ಸರಿಯಾದ ಕ್ರಮ ತೆಗೆದುಕೊಂಡರೆ ಇದೆಲ್ಲ ಆಗುತ್ತಾ ಎಂದು ಕಿಡಿಕಾರಿದರು. ಇಷ್ಟಾಗಿಯೂ ಪ್ರವೇಶ ನೀಡದ ಹಿನ್ನೆಲೆಯಲ್ಲಿ ಡಿವಿಎಸ್ ಪಿಯು ಕಾಲೇಜಿನಲ್ಲಿ ಹಿಜಾಬ್ ಧರಿಸಿದ್ದ ಹಲವು ವಿದ್ಯಾರ್ಥಿನಿಯರು ವಾಪಸ್ ಮನೆಗೆ ತೆರಳಿದರು.

ಪೊಲೀಸರ ಪ್ರಯತ್ನ ವಿಫಲ:

ನಗರದ ಎಟಿಎಸ್ ಸಿಸಿ ಕಾಲೇಜಿನಲ್ಲೂ ಹಿಜಾಬ್ ಧರಿಸಿ ಕಾಲೇಜಿಗೆ ಬಂದ 20 ಮಂದಿ ವಿದ್ಯಾರ್ಥಿನಿಯರನ್ನು ಒಳಗೆ ಬಿಟ್ಟುಕೊಳ್ಳಲಾಯಿತು. ಆದರೆ, ಕಾಲೇಜಿನ ತರಗತಿ ಒಳಗೆ ಪ್ರವೇಶಿಸುವಾಗ ಹಿಜಾಬ್ ತೆಗೆಯುವಂತೆ ಕಾಲೇಜಿನ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನ ವಾಗಲಿಲ್ಲ. ಪ್ರವೇಶ ನಿರಾಕರಿಸಿದ ಕಾರಣ ಅವರೆಲ್ಲರೂ ತರಗತಿಗಳಿಂದ ಹೊರ ನಡೆದರು.

ಕಾಲೇಜು ಆರಂಭದ ನಿಮಿತ್ತ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ಷ್ಮ ವಲಯ ಎಂದು ಗುರುತಿಸಲಾಗಿರುವ ಬಾಪೂಜಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸೈನ್ಸ್ ಮೈದಾನದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಕಾಲೇಜಿನೊಳಗೆ ಮಾಧ್ಯಮದವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಕಾಲೇಜುಗಳು, ಶಾಲೆಗಳ ಬಳಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.

ಹಿಜಾಬ್ ನಮ್ಮ ಧರ್ಮದ ಹೆಮ್ಮೆ

ಶಿವಮೊಗ್ಗ: ‘ನಾವೇನೂ ಕೊಲೆ ಮಾಡೋದಕ್ಕೆ ಹೋಗ್ತಿದಿವಾ, ಓದೋಕೆ ಹೋಗುತ್ತಿದ್ದೇವೆ. ಹಿಜಾಬ್‌ ನಮ್ಮ ಧರ್ಮದ ಹೆಮ್ಮೆ, ಅದನ್ನ ಹಾಕಿದ್ರೆ ಕಾಲೇಜಿನ ಒಳಗೆ ಏಕೆ ಬಿಡುತ್ತಿಲ್ಲ…’

– ಇದು ಬುಧವಾರ ಕಾಲೇಜು ಪ್ರವೇಶ ತಡೆದ ಉಪನ್ಯಾಸಕರ ವಿರುದ್ಧ ಮುಸ್ಲಿಂ ವಿದ್ಯಾರ್ಥಿನಿಯರು ಆಕ್ರೋಶ ಹೊರಹಾಕಿದ ಪರಿ .

ನಗರದ ಅನುದಾನಿತ ಖಾಸಗಿ ಕಾಲೇಜು ವಿದ್ಯಾರ್ಥಿನಿಯೊಬ್ಬರು ಹಿಜಾಬ್‌ ಧರಿಸಿಯೇ ಬಂದಿದ್ದರು. ಈ ವೇಳೆ ಹಿಜಾಬ್‌ ತೆಗೆದು ಕಾಲೇಜು ಒಳಗೆ ಪ್ರವೇಶ ಮಾಡುವಂತೆ ಉಪನ್ಯಾಸಕರು ಸೂಚಿಸಿದರು. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿನಿ ನಾನು ಕೊಲೆ ಮಾಡುವುದಕ್ಕೆ ಬಂದಿಲ್ಲ. ಓದುವುದಕ್ಕೆ ಬಂದಿರೋದು ಎಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಹಿಜಾಬ್‌ ತೆಗೆಯಲು ಒಪ್ಪದ ಹಲವು ವಿದ್ಯಾರ್ಥಿನಿಯರು ಮನೆಗೆ ಮರಳಿದರು. ರಿಪ್ಪನ್‌ಪೇಟೆಯಲ್ಲೂ ಹಲವು ವಿದ್ಯಾರ್ಥಿನಿಯರು ಕಾಲೇಜಿಗೆ ಗೈರಾಗಿದ್ದರು.

ಭದ್ರಾವತಿಯ ಸಂಚಿಹೊನ್ನಮ್ಮ ಪ್ರೌಢಶಾಲೆಯ 70 ವಿದ್ಯಾರ್ಥಿನಿಯರು ಹಿಜಾಬ್‌ ತೆಗೆಯಲು ನಿರಾಕರಿಸಿ ಶಾಲಾ ಆವರಣದಲ್ಲೇ ಸಮಯ ಕಳೆದರು.

ಹಿಜಾಬ್‌, ಕೇಸರಿ ಶಾಲು ಸಂಘರ್ಷ ಬಳಿಕ ಕಾಲೇಜುಗಳು ಪುನರಾರಂಭಗೊಂಡಿವೆ. ಹೈಕೋರ್ಟ್‌ ಆದೇಶ ಇಟ್ಟುಕೊಂಡು ಕಾಲೇಜು ಆಡಳಿತ ಮಂಡಳಿಗಳು ಹಿಜಾಬ್‌ ಹಾಗೂ ಕೇಸರಿ ಶಾಲು ಹಾಕಿ ಬಂದ ವಿದ್ಯಾರ್ಥಿಗಳಿಗೆ ಕಾಲೇಜಿನ ಒಳಗೆ ಪ್ರವೇಶ ನೀಡುತ್ತಿಲ್ಲ.

ಕಾಲೇಜು ಆವರಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಪಹರೆ ನಿಯೋಜಿಸಲಾಗಿತ್ತು. ಅತಿ ಸೂಕ್ಷ್ಮ ವಲಯದಲ್ಲಿರುವ ಮೂರು ಕಾಲೇಜುಗಳಿಗೆ ಫೆ.16ರಂದು ಒಂದು ದಿನ ರಜೆ ನೀಡಲಾಗಿತ್ತು. ಫೆ.17ರಿಂದ ಎಲ್ಲ ಕಾಲೇಜುಗಳೂ ಆರಂಭವಾಗಲಿವೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮಾಹಿತಿ ನೀಡಿದರು.‌

‘ಪದವಿ ಕಾಲೇಜುಗಳು ಸುಸೂತ್ರ’

ಕಾಲೇಜು ಪುನಾರಂಭದ ಮೊದಲ ದಿನ ಪದವಿ ಕಾಲೇಜುಗಳು ಸುಸೂತ್ರವಾಗಿ ಆರಂಭವಾಗಿದೆ. ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ಮಾಡಿಕೊಡಲು ಆಗ್ರಹಿಸಿದರು. ಅವರ ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ಈ ಸಂಬಂಧ ಯಾವುದೇ ಗೊಂದಲಗಳು ಸೃಷ್ಟಿಯಾಗಿಲ್ಲ. ಒಟ್ಟಾರೆ ನಗರದಲ್ಲಿ 11 ಮಂದಿ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ವಾಪಸ್ ಹೋಗಿದ್ದಾರೆ. ಗೊಂದಲ ಆಗಿರುವ ಕಡೆಗಳಲ್ಲಿ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲಿಸುವಂತೆ ಸೂಚಿಸಿದ್ದೇನೆ’ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ತಿಳಿಸಿದರು.

‘ಯಾವುದೇ ಅಹಿತಕರ ಘಟನೆ ನಡೆದಿಲ್ಲ’

‘ಹಿಜಾಬ್‌ ವಿವಾದ ಮಧ್ಯೆ ಪದವಿ ಕಾಲೇಜುಗಳು ಆರಂಭವಾಗಿದ್ದು, ಎಲ್ಲ ಕಾಲೇಜಿನಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ನ್ಯಾಯಲಯದ ಆದೇಶವನ್ನು ಪಾಲಿಸಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಕಾಲೇಜು ಮುಗಿದ ಬಳಿಕ, ಕಾಲೇಜು ಆವರಣದಲ್ಲಿ ಯಾರು ನಿಲ್ಲಲೂ ಅವಕಾಶವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆದಿತ್ಯನಾಥ್ ಅವರು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ 'ಯುಪಿ, ಬಿಹಾರ ಕೆ ಭಯ್ಯಾ' ಹೇಳಿಕೆಗೆ ಸಂಬಂಧಿಸಿದಂತೆ ವಾಗ್ದಾಳಿ ನಡೆಸಿದರು

Thu Feb 17 , 2022
ಲಕ್ನೋ ಫೆಬ್ರವರಿ 17: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ‘ಯುಪಿ, ಬಿಹಾರ ಕೆ ಭಯ್ಯಾ’ ಹೇಳಿಕೆಗೆ ಸಂಬಂಧಿಸಿದಂತೆ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಮತ್ತು ಪಂಜಾಬ್ ಸಿಎಂ ಮತಕ್ಕಾಗಿ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಅವರು ‘ಉತ್ತರ ಪ್ರದೇಶ, ಬಿಹಾರ ಜನರನ್ನು ಪಂಜಾಬ್ ಪ್ರವೇಶಿಸಲು ಬಿಡಬೇಡಿ’ ಎಂದು ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ […]

Advertisement

Wordpress Social Share Plugin powered by Ultimatelysocial