ಯುಗಾದಿ ಸಿಹಿ-ಕಹಿಗಳ ಹಬ್ಬ, ಬಿಜೆಪಿ ಸರ್ಕಾರ ಜನರಿಗೆ ಬರೀ ಕಹಿಯನ್ನೇ ನೀಡಿದೆ: ಸಿದ್ದರಾಮಯ್ಯ!

 

ಬೆಂಗಳೂರು, ಏ.3- ಯುಗಾದಿ ಸಿಹಿ-ಕಹಗಳ ಹಬ್ಬ, ಆದರೆ ಬಿಜೆಪಿ ಸರ್ಕಾರ ಜನರಿಗೆ ಬರೀ ಕಹಿಯನ್ನೇ ನೀಡಿದೆ. ಕೇಂದ್ರ ರಸಗೊಬ್ಬರ ಬೆಲೆಯನ್ನು ಎದ್ವಾತದ್ವಾ ಏರಿಕೆ ಮಾಡಿದೆ.

ಬಿಜೆಪಿಯವರು ವೈಫಲ್ಯಗಳನ್ನು ಮುಚ್ಚಿ ಹಾಕಲು ಹಿಜಾಬ್, ಕಾಶ್ಮೀರಿ ಫೈಲ್ಸ್, ಹಲಾಲ್, ಮುಸ್ಲಿಂ ವರ್ತಕರಿಗೆ ವ್ಯಾಪಾರ ನಿರ್ಬಂಧದಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಸಮಾಜದ ಸಾಮರಸ್ಯ ಹಾಳು ಮಾಡುತ್ತಿದೆ. ಇವರಿಗೆ ಮನುಷ್ಯತ್ವ ಇದೆಯೇ? ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ನಮ್ಮಲ್ಲೂ ಹಬ್ಬಗಳಲ್ಲಿ ಕುರಿ ಕಡಿದಾಗ ರಕ್ತ ಹೊರ ಹೋಗಲು ಬಿಡಲ್ವ? ಹಲಾಲ್ ಸಾವಿರಾರು ವರ್ಷಗಳಿಂದ ನಡೆದು ಬಂದ ಪದ್ಧತಿ, ಅವರ ಪದ್ಧತಿ ಅವರು ಅನುಸರಿಸಲಿ, ನಮ್ಮ ಪದ್ಧತಿ ನಾವು ಅನುಸರಿಸೋಣ. ಮನುಷ್ಯನ ಬದುಕಿಗೆ, ಜೀವನ ನಿರ್ವಹಣೆಗೆ ಸಂಬಂಧವಿಲ್ಲದ ವಿಷಯಗಳನ್ನು ಎತ್ತಿ ಸಮಾಜದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಇದರಿಂದ ಶಾಂತಿ, ಸುವ್ಯವಸ್ಥೆಗೆ ಧಕ್ಕೆಯಾಗಿ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತದೆ. ಇದನ್ನು ಸದನದಲ್ಲೂ ಪ್ರಸ್ತಾಪ ಮಾಡಿದ್ದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಲೆಯೇರಿಕೆ ಬಗ್ಗೆ ಮೊನ್ನೆ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದೇವೆ, ಬೆಲೆಯೇರಿಕೆಯನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿ, ಜನರ ಪರವಾಗಿ ಹೋರಾಟವನ್ನು ಮಾಡುತ್ತದೆ. ನಿರುದ್ಯೋಗ, ರೈತರ ಸಮಸ್ಯೆ, ಮಹಿಳೆಯರ ಸಮಸ್ಯೆಗಳ ಬಗ್ಗೆ ಇಂದು ಚರ್ಚೆಯಾಗಬೇಕು. ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆ ವಾಪಾಸು ಪಡೆದುಕೊಂಡರೂ ರಾಜ್ಯದಲ್ಲಿ ಏಕೆ ವಾಪಾಸು ಪಡೆದಿಲ್ಲ? ರಾಜ್ಯದ ಎಪಿಎಂಸಿ ಗಳು ಮುಳುಗಿ ಹೋಗುತ್ತಿವೆ. ವರ್ಷಕ್ಕೆ ರೂ. 600 ಕೋಟಿ ಆದಾಯ ಬರುತ್ತಿತ್ತು, ಕಳೆದ ವರ್ಷ ಈ ಆದಾಯ 200 ಕೋಟಿಗೆ ಬಂದು ನಿಂತಿದೆ ಎಂದು ವಿವರಿಸಿದರು.

ಈ ವರ್ಷ ನೂರು ಕೋಟಿ ರೂಪಾಯಿ ಆದಾಯ ಬಂದಿದೆ. ಹೀಗಾದರೆ ಎಪಿಎಂಸಿಗಳ ಕತೆ ಏನು? ಖಾಸಗಿಯವರು ಎಷ್ಟು ಬೇಕಾದರೂ ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡಿ ಬೆಲೆ ಏರುವಂತೆ ಮಾಡುತ್ತಿದ್ದಾರೆ. ಎಸ್ಮಾವನ್ನು ರದ್ದುಗೊಳಿಸಿರುವುದರಿಂದ ಅಕ್ರಮ ದಾಸ್ತಾನು ಮಾಡಿರುವವ ಮೇಲೆ ದಾಳಿ ಮಾಡಲು ಆಗುವುದಿಲ್ಲ ಎಂದರು.

ದೇಶದ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಲ್ಲಿ ನೋಟು ರದ್ದತಿ, ಜಿಎಸ್‍ಟಿ ಜಾರಿ ಮೊದಲು 11 ಕೋಟಿ ಉದ್ಯೋಗಗಳು ಇದ್ದವು, ಈಗದು 2.5 ಕೋಟಿಗೆ ಇಳಿದಿದೆ. ಅಬಕಾರಿ ಸುಂಕ ಏರಿಕೆ ಮಾಡಿದ್ದರಿಂದ ಕೇಂದ್ರ ಸರ್ಕಾರಕ್ಕೆ 26 ಲಕ್ಷ ಕೋಟಿ ರೂ. ಆದಾಯ ಬಂದಿದೆ. ಕೇವಲ 2 ಲಕ್ಷದ 20 ಸಾವಿರ ಕೋಟಿ ತೈಲ್ ಬಾಂಡ್ ಸಾಲವನ್ನು ತೋರಿಸಿ ಜನರನ್ನು ಯಾಮಾರಿಸುತ್ತಿದ್ದಾರೆ. ನಾನು ಹೇಳಿರುವ ಲೆಕ್ಕ ಸುಳ್ಳಾಗಿದ್ದರೆ ಬಿಜೆಪಿಯವರು ಲೆಕ್ಕ ಕೊಡಲಿ ಎಂದು ಸವಾಲು ಹಾಕಿದರು.

ನನ್ನ ಪ್ರಕಾರ ರಾಜ್ಯ ಸರ್ಕಾರ ಕೊರೊನಾ ನಿರ್ವಹಣೆಗೆ ಖರ್ಚು ಮಾಡಿರುವುದು 8,300 ಕೋಟಿ ರೂ. ಮುಖ್ಯಮಂತ್ರಿಗಳು 15,000 ಕೋಟಿ ಖರ್ಚು ಮಾಡಿದ್ದೇವೆ ಎನ್ನುತ್ತಿದ್ದಾರೆ. ಸರಿ ಅವರ ಮಾತನ್ನೇ ನಂಬೋಣ, ಕೇರಳ ಎರಡು ವರ್ಷಗಳಲ್ಲಿ ಕೊರೊನಾ ನಿರ್ವಹಣೆಗೆ 40,000 ಕೋಟಿ ಖರ್ಚು ಮಾಡಿದ್ದಾರೆ, ತಮಿಳುನಾಡಿನವರು 30,000 ಕೋಟಿ ಖರ್ಚು ಮಾಡಿದ್ದಾರೆ. ಆ ರಾಜ್ಯಗಳೆಲ್ಲಾ ಹಾಳಾಗಿ ಹೋಗಿವೆಯಾ? ಕೇರಳದ ಬಜೆಟ್ ಗಾತ್ರ ನಮಗಿಂತ ಚಿಕ್ಕದು.

ಇವೆಲ್ಲ ಆಧಾರ ರಹಿತ ಹೇಳಿಕೆಗಳು, ಕಳೆದ ವರ್ಷ ರಾಜ್ಯದ ಬಜೆಟ್ 2.42 ಲಕ್ಷ ಕೋಟಿ ರೂ. ಈ ಸಾಲಿನ ಬಜೆಟ್ ಗಾತ್ರ ರೂ. 2.65 ಕೋಟಿ. ಇದರಲ್ಲಿ ರೂ. 15,000 ಕೋಟಿ ಹೋದರೆ ಎಷ್ಟು ಉಳಿಯುತ್ತದೆ? ಈ ಹಣದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ. ಇವರ ಯೋಗ್ಯತೆಗೆ ಒಂದು ಮನೆ ಕಟ್ಟಿಕೊಡೋಕೆ ಆಗಿಲ್ಲ, ರಸ್ತೆ ಗುಂಡಿ ಮುಚ್ಚೋಕೆ ಆಗಿಲ್ಲ. ನಾಚಿಕೆಯಾಗಬೇಕು ಈ ಸರ್ಕಾರಕ್ಕೆ ಎಂದು ಛಾಟಿ ಬೀಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮನೆಯಲ್ಲಿ ಒಂಟಿಯಾಗಿದ್ದ ಹುಡುಗಿ ಅಪಹರಿಸಿ ಮೂವರಿಂದ ಗ್ಯಾಂಗ್ ರೇಪ್,

Sun Apr 3 , 2022
      ಚಾರ್ಖಿ ದಾದ್ರಿ: ಮೂವರು ಯುವಕರು ತನ್ನ ಮೇಲೆ ಅತ್ಯಾಚಾರ ಎಸಗಿದ ನಂತರ 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರ ಪ್ರಕಾರ, ಬಾಲಕಿ ಪರಿಶಿಷ್ಟ ಜಾತಿಗೆ ಸೇರಿದವಳು ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗೆ ಓದುತ್ತಿದ್ದಳು. ಶುಕ್ರವಾರ, ಹುಡುಗಿ ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿಗಳು ನುಗ್ಗಿ, ಅವಳನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದ್ದು, ಗಂಟೆಗಳ ನಂತರ ಆಕೆಯ ಮನೆಯ […]

Advertisement

Wordpress Social Share Plugin powered by Ultimatelysocial