ಸಿಂಪಿ ಲಿಂಗಣ್ಣನವರು ‘ಜಾನಪದ ರತ್ನ’ರೆಂದು ಖ್ಯಾತರಾದವರು.

 

ಸಿಂಪಿ ಲಿಂಗಣ್ಣ1905ರ ಫೆಬ್ರವರಿ 10ರಂದು ಬಿಜಾಪುರ ಜಿಲ್ಲೆಯ ಚಡಚಣ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಶಿವಯೋಗಿಗಳು ಬಯಲಾಟದ ಪಾತ್ರದಲ್ಲಿ ಪ್ರಸಿದ್ಧರು. ಅಣ್ಣ ಈರಪ್ಪ ಕರಡಿ ಮಜಲು ಬಾರಿಸುವುದರಲ್ಲಿ ನಿಸ್ಸೀಮ. ಹೀಗೆ ಕುಟುಂಬದಲ್ಲಿ ಜಾನಪದದ ಆಸಕ್ತಿ ಮೂಡಿಸುವ ಎಳೆಗಳು ಜೊತೆಗೂಡಿದ್ದವು. ಅಪ್ಪ ಅಮ್ಮ ಇಬ್ಬರೂ ಲಿಂಗಣ್ಣ ಐದು ವರ್ಷದವರಿರುವಾಗಲೇ ನಿಧನರಾಗಿ ಅಣ್ಣ ಸೀರೆ ನೇಯ್ದು ಮಾರುವ ಕೆಲಸ ಕೈಗೊಂಡರೆ, ಲಿಂಗಣ್ಣ ಬಿಡುವಿನ ವೇಳೆಯಲ್ಲಿ ಉಪ್ಪು ಮಾರಿ ಸ್ವತಃ ಅಡುಗೆ ಮಾಡಿಕೊಂಡು ಜೀವನ ಸಾಗಿಸುವ ಬದುಕು ಮೂಡಿತ್ತು. ನಂತರ ಅಣ್ಣ ಈರಣ್ಣ, ‘ಗುರಮ್ಮ’ ಎಂಬಾಕೆಯನ್ನು ಮದುವೆಯಾದಾಗ ಲಿಂಗಣ್ಣನವರಿಗೆ ಅಡುಗೆ ತಾಪತ್ರಯದಿಂದ ವಿಮುಕ್ತಿ ದೊರೆಯಿತು. ಈ ಅತ್ತಿಗೆ ‘ಗುರಮ್ಮ’ ಹೇಳುತ್ತಿದ್ದ ಗರತಿ ಹಾಡುಗಳು ಲಿಂಗಣ್ಣನವರಿಗೆ ಜನಪದ ಸಾಹಿತ್ಯದ ಹುಚ್ಚು ಹಿಡಿಸಿತು. ಸಿಂಪಿ ಲಿಂಗಣ್ಣನವರ ಮಕ್ಕಳಲ್ಲಿ ವೀರೇಂದ್ರ, ಸಿಂಪಿ, ಈಶ್ವರ ಸಿಂಪಿ ಹಾಗೂ ಭುವನೇಶ್ವರಿ ಅವರು ಕೂಡಾ ಸಾಹಿತ್ಯಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.
ಚಿಕ್ಕಂದಿನಲ್ಲೇ ಲಿಂಗಣ್ಣನವರ ಮನೆಯಲ್ಲಿ ಬಾಡಿಗೆಗಿದ್ದ ಮಧುರಚೆನ್ನರು ಲಿಂಗಣ್ಣನವರಿಗೆ ಪರಮಾಪ್ತರಾದರು. 1922ರಲ್ಲಿ ಲಿಂಗಣ್ಣ ಮುಲ್ಕೀ ಪರೀಕ್ಷೆಯಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದು ಪಾಸಾದರೂ ಮುಂದೆ ಓದಲು ಹಣವಿಲ್ಲದೆ, ಅಣ್ಣನ ಜೊತೆಯಲ್ಲಿ ಸೀರೆ ನೇಯುವ ಕಾಯಕಕ್ಕೆ ತೊಡಗಿದರು. ಓದುವ ಹವ್ಯಾಸ ಬತ್ತಲಿಲ್ಲ. ಗೆಳೆಯರ ಜೊತೆ ಸೇರಿ ‘ವಾಗ್ವಿಲಾಸ’ ಎಂಬ ವಾಚನಾಲಯ ತೆರೆದರು. ಊರಿನ ಜನರಿಂದ 800 ಗ್ರಂಥಗಳನ್ನು ಸಂಗ್ರಹಿಸಿ ಜನರಿಗೆ ಓದುವ ಹವ್ಯಾಸ ಹಚ್ಚಿದರು. ಹಲಸಂಗಿ ಮಲ್ಲಪ್ಪ ಮತ್ತು ಸಿಂಪಿ ಲಿಂಗಣ್ಣ ಜೊತೆಗೂಡಿ ‘ಹಲಸಂಗಿ’ ಗೆಳೆಯರ ಬಳಗ ನಿರ್ಮಿಸಿದರು. ಮುಂದೆ ಸಿಂಪಿ ಲಿಂಗಣ್ಣನವರು ಪ್ರಾಥಮಿಕ ಶಿಕ್ಷಕರ ತರಬೇತಿ ಪಡೆಯಲು ಧಾರವಾಡಕ್ಕೆ ಹೋದಾಗ ಶಂಭಾ, ಬೇಂದ್ರೆ, ಆಲೂರರ ಪರಿಚಯ ಮಾಡಿಕೊಂಡರು.ಸಿಂಪಿ ಲಿಂಗಣ್ಣನವರು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸುಮಾರು 35 ವರ್ಷ ಸೇವೆ ಸಲ್ಲಿಸಿದರು. ಸದಾ ಚಿಂತನಶೀಲರು, ಕ್ರಿಯಾಶೀಲ ವ್ಯಕ್ತಿತ್ವ. ವೈಚಾರಿಕ ಮನೋಧರ್ಮದವರು. ಆಧುನಿಕ ಸೌಲಭ್ಯಗಳಿಲ್ಲದ ಹಳ್ಳಿಗಳಲ್ಲಿ ಹಳ್ಳಿಗರಾಗಿ ಜನರೊಂದಿಗೆ ಹೊಂದಿಕೊಂಡು ಮಕ್ಕಳಿಗೆ ಜ್ಞಾನ ನೀಡಿದರು. ಶಾಲೆಗಳಲ್ಲಿ ನಾಡಹಬ್ಬ, ಗಣೇಶೋತ್ಸವಗಳನ್ನು ಆಚರಿಸಿ ಪ್ರಸಿದ್ಧ ಸಾಹಿತಿಗಳಿಂದ ಭಾಷಣ ಮಾಡಿಸಿ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸಿದರು. ‘ಕಮತಿಗ’ ವಾರಪತ್ರಿಕೆ ಹೊರಡಿಸಿ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡಿದರು. ರಾಷ್ತ್ರೀಯ ಲಾವಣಿ ರಚಿಸಿ, ಹಾಡಿಸಿ, ಸ್ವಾತಂತ್ರ ಚಳುವಳಿಗೆ ಕುಮ್ಮಕ್ಕು ನೀಡಿದರೆಂದು ಬೇರೆ ಊರಿಗೆ ವರ್ಗವಾದರು. ಅಸ್ಪೃಶ್ಯತೆಯನ್ನು ಎತ್ತಿ ತೋರಿಸುವ ‘ಮರೆ ಮುಚ್ಚಕ’ ನಾಟಕ ರಚಿಸಿ, ಆಡಿಸಿ, ಸಮಾಜದ ಬಹಿಷ್ಕಾರಕ್ಕೆ ಒಳಗಾದರು. ಯಾವ ಊರಿಗೆ ವರ್ಗವಾಗಿ ಹೋದರೂ ಸಿಂಪಿ ಲಿಂಗಣ್ಣನವರು ತಮ್ಮ ಕೆಲಸವನ್ನು ನಿಲ್ಲಿಸಿದವರಲ್ಲ. ಓದುವುದು ಓದಿಸುವುದು, ಬರೆಯುವುದು, ಆಡಿಸುವುದು, ಅವರ ನಿತ್ಯಕರ್ಮದಲ್ಲಿ ಒಂದಾಗಿತ್ತು. ಶುಭ್ರ ಖಾದಿಧೋತರ, ಖಾದಿಶರ್ಟು, ಮೇಲೊಂದು ಕೋಟು, ತಲೆಯಮೇಲೆ ಗಾಂಧೀ ಟೋಪಿ ಇವು ಅವರ ಪರಿಶುದ್ಧಜೀವನವನ್ನೇ ಪ್ರತಿಬಿಂಬಿಸುತ್ತಿದ್ದವು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ಪಕ್ಷ ತೊರೆದ 12 ಶಾಸಕರನ್ನು ಜನತಾ ನ್ಯಾಯಾಲಯದಲ್ಲಿ ಗಲ್ಲಿಗೇರಿಸಬೇಕು:

Sat Feb 11 , 2023
ಹೈದರಾಬಾದ್: ಕಾಂಗ್ರೆಸ್ ಪಕ್ಷದಿಂದ ಪಕ್ಷಾಂತರಗೊಂಡ 12 ಕಾಂಗ್ರೆಸ್ ಶಾಸಕರನ್ನು ಜನತಾ ನ್ಯಾಯಾಲಯದಲ್ಲಿ ಗಲ್ಲಿಗೇರಿಸುವುದರಲ್ಲಿ ತಪ್ಪೇನಿಲ್ಲ ಎಂದು ಹೇಳುವ ಮೂಲಕ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ(ಟಿಪಿಸಿಸಿ) ಮುಖ್ಯಸ್ಥ ರೇವಂತ್ ರೆಡ್ಡಿ ಅವರು ಮತ್ತೊಮ್ಮೆ ವಿವಾದ ಹುಟ್ಟುಹಾಕಿದ್ದಾರೆ. ಹಾತ್ ಸೇ ಹಾತ್ ಜೋಡೋ ಯಾತ್ರೆಯ ಅಂಗವಾಗಿ ಕಾಮೆಪಲ್ಲಿ ಮಂಡಲದ ಲಚ್ಚತಂಡಾದಿಂದ ಕೋತಲಿಂಗಲ ವರೆಗೆ 11 ಕಿ.ಮೀ ಪಾದಯಾತ್ರೆ ನಡೆದ ನಂತರ ಕೋತಲಿಂಗಲದಲ್ಲಿ ನಡೆದ ಸಭೆಯನ್ನುದ್ದೇಶಿಸಿ ರೇವಂತ್ ರೆಡ್ಡಿ ಮಾತನಾಡಿದರು. ಪಕ್ಷ ತೊರೆದಿರುವ 12 ಕಾಂಗ್ರೆಸ್ […]

Advertisement

Wordpress Social Share Plugin powered by Ultimatelysocial