ಸ್ಮಾರ್ಟ್ ಸಿಟಿ ಯೋಜನೆ: ಮಲೇಷ್ಯಾದಿಂದ ಹುಬ್ಬಳ್ಳಿಗೆ ಟ್ರಿಣ್… ಟ್ರಿಣ್… ಸೈಕಲ್

ಸ್ಮಾರ್ಟ್ ಸಿಟಿ ಯೋಜನೆ: ಮಲೇಷ್ಯಾದಿಂದ ಹುಬ್ಬಳ್ಳಿಗೆ ಟ್ರಿಣ್... ಟ್ರಿಣ್... ಸೈಕಲ್
ಹುಬ್ಬಳ್ಳಿ: ಪರಿಸರ ಸ್ನೇಹಿ ಸಾರಿಗೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಜಾರಿಗೆ ತಂದಿರುವ ಬೈಸಿಕಲ್ ಯೋಜನೆಯ 340 ಸೈಕಲ್‌ಗಳು ಮಲೇಷ್ಯಾದಿಂದ ಹುಬ್ಬಳ್ಳಿಗೆ ಬಂದಿವೆ.

₹ 6 ಕೋಟಿ ವೆಚ್ಚದಲ್ಲಿ ಬೈಸಿಕಲ್‌ಗಳನ್ನು ತರಿಸಲಾಗಿದ್ದು, ಅವುಗಳ ನಿಲುಗಡೆಗಾಗಿ 34 ಕಡೆಗಳಲ್ಲಿ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ.ಈಗಾಗಲೇ ಏಳು ನಿಲ್ದಾಣಗಳ ನಿರ್ಮಾಣ ಪೂರ್ಣಗೊಂಡಿದೆ.ವಾಯು ಮಾಲಿನ್ಯಕ್ಕೆ ಕಾರಣವಾಗುವ ಇಂಧನ ಚಾಲಿತ ವಾಹನಗಳನ್ನು ಬಿಟ್ಟು ಸೈಕಲ್‌ ಬಳಸಲಿ ಎನ್ನುವುದು ಇದರ ಹಿಂದಿನ ಉದ್ದೇಶ. ಟೆಂಡರ್‌ಶ್ಯೂರ್‌ನ ತೋಳನಕೆರೆಯಿಂದ ವಿದ್ಯಾನಗರದ ಮುಖ್ಯ ರಸ್ತೆಯವರೆಗೆ ಬೈಸಿಕಲ್‌ಗಾಗಿಯೇ ಪ್ರತ್ಯೇಕ ಪಥ ನಿರ್ಮಿಸಲಾಗಿದೆ.

ಪ್ರತ್ಯೇಕ ಕಾರಿಡಾರ್‌ ನಿರ್ಮಿಸಲು ಸಾಧ್ಯವಾಗದಿದ್ದ ಕಡೆ, ರಸ್ತೆ ಚಿಕ್ಕದಿದ್ದಾಗ ಅದರ ಒಂದು ಭಾಗದಲ್ಲಿ ಬಣ್ಣ ಬಳಿದು ಗುರುತು ಹಾಕಲಾಗಿದೆ. ಒಟ್ಟಾರೆಯಾಗಿ 30 ಕಿ.ಮೀ. ರಸ್ತೆಯಲ್ಲಿ ಸೈಕಲ್‌ ಯೋಜನೆ ಜಾರಿಗೊಳಿಸಲಾಗಿದೆ. ಈ ಪಥದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯ ವಿಶೇಷ ಸೈಕಲ್‌ಗಳಷ್ಟೇ ಅಲ್ಲದೇ ಸಾಮಾನ್ಯ ಸೈಕಲ್‌ಗಳನ್ನೂ ಓಡಿಸಲು ಅವಕಾಶ ನೀಡಲಾಗುತ್ತದೆ.

ಸೈಕಲ್‌ಗಳ ವಿಶೇಷ: ಸಾಮಾನ್ಯ ಸೈಕಲ್‌ಗಳಿಗಿಂತ ಸ್ಮಾರ್ಟ್ ಸಿಟಿ ಯೋಜನೆಯ ಸೈಕಲ್‌ಗಳು ಹಗುರವಾಗಿರಲಿವೆ. ಅಗತ್ಯಕ್ಕೆ ತಕ್ಕಂತೆ ಸೀಟು ಹಾಗೂ ಹ್ಯಾಂಡಲ್‌ಗಳ ಎತ್ತರವನ್ನು ಹೊಂದಿಸಿಕೊಳ್ಳಬಹುದು. ಇದರಲ್ಲಿ ಆರ್‌ಎಫ್‌ಐಡಿ ಚಿಪ್‌ ಅಳವಡಿಸಲಾಗಿರುತ್ತದೆ. ಇದರಿಂದಾಗಿ ಸೈಕಲ್‌ ಎಲ್ಲಿದೆ ಎನ್ನುವುದನ್ನು ಪತ್ತೆ ಹಚ್ಚಲು ಸುಲಭವಾಗುತ್ತದೆ.

ಸೈಕಲ್‌ ಪಡೆಯಲು ಕಡ್ಡಾಯವಾಗಿ ಆಧಾರ್‌ ಕಾರ್ಡ್‌ ಹಾಗೂ ಮೊಬೈಲ್‌ ಸಂಖ್ಯೆ ನೀಡಿ ಹೆಸರು ನೋಂದಾಯಿಸಬೇಕು. ಶುಲ್ಕವನ್ನು ಆನ್‌ಲೈನ್‌ ನಲ್ಲಿಯೇ ಪಾವತಿಸಬೇಕು.

34 ಕಡೆ ನಿಲ್ದಾಣ: ಹುಬ್ಬಳ್ಳಿಯಲ್ಲಿ 34 ಕಡೆ ಸೈಕಲ್‌ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು. ಸಾರ್ವಜನಿಕರು ಇಲ್ಲಿಂದ ಸೈಕಲ್‌ಗಳನ್ನು ಪಡೆದು, ತಾವು ಬಯಸಿದ ಸ್ಥಳಗಳಿಗೆ ಹೋಗಬಹುದು. ಅಲ್ಲಿಗೆ ಹತ್ತಿರದಲ್ಲಿರುವ ನಿಲ್ದಾಣಕ್ಕೆ ಸೈಕಲ್‌ಗಳನ್ನು ಒಪ್ಪಿಸಬೇಕು. ಸೈಕಲ್‌ಗಳನ್ನು ಪೂರೈಸುವುದು, ನಿಲ್ದಾಣಗಳನ್ನು ನಿರ್ಮಿಸುವುದು ಹಾಗೂ ಅವುಗಳ ನಿರ್ವಹಣೆ ಸೇರಿದಂತೆ ಒಟ್ಟಾರೆ ಯೋಜನೆಯನ್ನು ಬೆಂಗಳೂರಿನ ಟ್ರಿನಿಟಿ ಟೆಕ್ನಾಲಜೀಸ್‌ ಸಾಫ್ಟ್‌ವೇರ್‌ ಸಲ್ಯೂಷನ್ಸ್ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ವಹಿಸಲಾಗಿದೆ. ₹ 8.5 ಕೋಟಿ ಮೊತ್ತದ ಟೆಂಡರ್ ನೀಡಲಾಗಿದೆ.

ಬೈಸಿಕಲ್ ಬಳಕೆ ಹೆಚ್ಚಾದರೆ ಪೆಟ್ರೋಲ್, ಡೀಸೆಲ್‌ನಿಂದ ಸಂಚರಿಸುವ ವಾಹನಗಳ ಬಳಕೆಯೂ ಕಡಿಮೆಯಾಗಲಿದೆ. ಇದರಿಂದ ವಾಯು ಮಾಲಿನ್ಯ ತಡೆಗಟ್ಟಬಹುದು. ಜನರು ಸೈಕಲ್ ತುಳಿಯುವುದರಿಂದ ಒಳ್ಳೆಯ ವ್ಯಾಯಾಮ ಆಗುತ್ತದೆ. ಯಾವುದೇ ವಾಹನಗಳನ್ನು ಅವಲಂಬಿಸದೆ, ಬೈಕ್, ಇತರೆ ವಾಹನಗಳನ್ನು ಕೊಳ್ಳಲು ಹಣ ತೊಡಗಿಸದೆ ಕಡಿಮೆ ಖರ್ಚಿನಲ್ಲಿ ಸಂಚರಿಸಲು ಸಹಕಾರಿಯಾಗಲಿದೆ.

15 ದಿನಗಳಲ್ಲಿ ಮೊದಲ ಹಂತದಲ್ಲಿ ವಿದ್ಯಾನಗರ ಭಾಗದ ಎಂಟು ಬೈಸಿಕಲ್‌ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಹಾಗೂ ಇನ್ನುಳಿದ ಸೈಕಲ್‌ ನಿಲ್ದಾಣಗಳಲ್ಲಿ ನಂತರ ಸೈಕಲ್‌ಗಳ ಸಂಚಾರ ಆರಂಭಿಸಲಾಗುವುದು ಎಂದು ಹುಬ್ಬಳ್ಳಿ-ಧಾರವಾಡದ ಸ್ಮಾರ್ಟ್‌ ಸಿಟಿ ಯೋಜನೆ
ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಧ್ರುವ ಸರ್ಜಾ ಮುಂದೆ ಈ ಪುಟ್ಟ ಹುಡುಗಿ ಕೊಟ್ಟ ಫೋಸ್ ಹೇಗಿದೆ ನೋಡಿ | Dhruva Sarja | Gym | Speed News Kannada |

Sun Jan 2 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial