ರೋಟರಿ

‘ರೋಟರಿ’ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯನ್ನು 1905 ಫೆಬ್ರವರಿ 23ರಂದು ಶಿಕಾಗೋನಲ್ಲಿ ಪಾಲ್ ಹ್ಯಾರಿಸ್ ಮತ್ತು ಅವನ ಸಂಗಡಿಗರಾದ ಸಿಲ್ವೆಸ್ಟರ್ ಶೀಲೆ, ಗುಸ್ಟಾವಸ್ ಲೊಹ್ರೆ ಹಾಗೂ ಶೋರೆ ಹುಟ್ಟುಹಾಕಿದರು.
ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ರೋಟರಿ ಇದು ಇಂದು ಪ್ರಪಂಚದಾದ್ಯಂತ ಬೆಳೆದಿದೆ. ಇಂದು ಇದು ಜಗತ್ತಿನ 200ಕ್ಕೂ ದೇಶಗಳಲ್ಲಿ ಸುಮಾರು1.40 ದಶಲಕ್ಷ ಸದಸ್ಯತ್ವವನ್ನು ಹೊಂದಿದೆ. ಇದರಲ್ಲಿ ಪುರುಷರ ಹಾಗೂ ಮಹಿಳೆಯರ ಸಾಮೂಹಿಕ ಸಹಭಾಗಿತ್ವವಿದೆ. ಈ ಸಂಸ್ಥೆ ಮಾನವ ಹಿತವನ್ನು ಮುಖ್ಯ ಧ್ಯೇಯವನ್ನಾಗಿ ಹೊಂದಿದೆ. ಭಾರತದಲ್ಲಿ ಏಷ್ಯ ಖಂಡದ ಮೊತ್ತಮೊದಲ ಅಂತಾರಾಷ್ಟ್ರೀಯ ಸಂಸ್ಥೆಯಾಗಿ ಕಲ್ಕತ್ತ (ಕೊಲ್ಕತ್ತ)ದಲ್ಲಿ ಇದು ತನ್ನ ಶಾಖೆಯನ್ನು ಆರಂಭಿಸಿತು (1919-20).
ಪ್ರಸ್ತುತ ಪ್ರಪಂಚಾದ್ಯಂತ ರೋಟರಿ ಸಂಸ್ಥೆಯ 46,000ಕ್ಕೂ ಹೆಚ್ಚು ಶಾಖೆಗಳಿವೆ.
ವಿಶ್ವಾಸ, ಸ್ನೇಹ, ಪರಂಪರೆ, ಸಂಸ್ಕೃತಿ, ಜೀವನ ಮೌಲ್ಯ, ನೈತಿಕಮಟ್ಟ, ಪ್ರಾಮಾಣಿಕತೆ, ಸೌಹಾರ್ದ ಮುಂತಾದ ಅಂಶಗಳನ್ನು ಆದರ್ಶವಾಗಿಟ್ಟು ಕೊಂಡ ಆರಂಭಗೊಂಡ ಈ ಸಂಸ್ಥೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯೋನ್ಮುಖವಾಗಿ, ಸಾಮಾಜಿಕ ಸೇವಾ ಕಾರ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಪ್ರಪಂಚ ಶಾಂತಿಗಾಗಿನ ಪ್ರಯತ್ನದ ಧ್ಯೇಯ ಹೊಂದಿದೆ. ಜನರ ಆರೋಗ್ಯದ ಬಗ್ಗೆಯೂ ಇದು ಕಾಳಜಿ ವಹಿಸಿದೆ. ಪೋಲಿಯೋ ಮುಕ್ತ ಮಾನವ ಸಮಾಜ ನಿರ್ಮಾಣದ ದಿಸೆಯಲ್ಲಿ ಇದು ಅಗಾಧ ಯಶಸ್ಸು ಗಳಿಸಿದೆ. ಎಲ್ಲ ದೇಶಗಳಲ್ಲಿಯೂ ಪೋಲಿಯೋ ರೋಗ ನಿರ್ಮೂಲನಾ ಕಾರ್ಯ ಯೋಜನೆಯನ್ನು ಪೂರ್ಣಗೊಳಿಸಲು ನಿರಂತರವಾಗಿ ಶ್ರಮಿಸಿದೆ.
ಇಷ್ಟೇ ಅಲ್ಲದೆ ರೋಟರಿ ಶಿಕ್ಷಣ, ಕೈಗಾರಿಕೆ ಹಾಗೂ ಸೇವಾ ಕ್ಷೇತ್ರಗಳಲ್ಲಿ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ವೃತ್ತಿ ಧರ್ಮ, ವೃತ್ತಿಮೂಲಕ ಸೇವೆ, ರಕ್ತ ನಿಧಿ ಸ್ಥಾಪನೆ, ಆಸ್ಪತ್ರೆಗಳ ನಿರ್ಮಾಣ, ಯುವಶಕ್ತಿಗೆ ಮಾರ್ಗದರ್ಶನ, ಅಂತಾರಾಷ್ಟ್ರೀಯ ತಿಳಿವಳಿಕೆ ಮತ್ತು ವಿಶ್ವಾಸ ಬೆಳೆಯಲು ಸಮಂಜಸ ಕಾರ್ಯಗಳ ಅನುಸರಣೆ ಈ ಸಂಸ್ಥೆಯ ಧ್ಯೇಯಗಳಾಗಿವೆ. ಬಡತನ ನಿರ್ಮೂಲನೆ ಸಂಸ್ಥೆಯ ಮತ್ತೊಂದು ಮುಖ್ಯ ಆಶಯ.
ರೋಟರಿ ಸಂಸ್ಥೆಯ ಸದಸ್ಯತ್ವಕ್ಕೆ ಕೆಲವು ನಿಯಮಗಳಿವೆ. ಸದಸ್ಯತ್ವ ಬಯಸುವ ಮಹಿಳೆ ಅಥವಾ ಪುರುಷ ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಯಾಗಿರಬೇಕು; ಉದ್ಯೋಗ ಕ್ಷೇತ್ರದಲ್ಲಿ ಖ್ಯಾತಿವಂತರಾಗಿರಬೇಕು, ಇತರರಿಗೆ ಮಾರ್ಗದರ್ಶನ ಮಾಡುವಂತಿರಬೇಕು. ಪ್ರತಿ ವರ್ಷ ಜುಲೈ 1 ರಂದು ಪ್ರಪಂಚದಾದ್ಯಂತ ರೋಟರಿ ಪದಗ್ರಹಣ ಅಥವಾ ಪದವಿ ಪ್ರದಾನ ಸಮಾರಂಭಗಳು ನಡೆಯುತ್ತವೆ.
ಚುನಾಯಿತ ಪ್ರತಿನಿಧಿಗಳಿಗೆ ಈ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಇರುತ್ತದೆ. ಪ್ರತಿವರ್ಷ ಅಂತಾರಾಷ್ಟ್ರೀಯ ಸಂಸ್ಥೆಯ ಅಧ್ಯಕ್ಷರು ಒಂದು ಘೋಷಣೆಯನ್ನು ಹೊರಡಿಸಿ, ಇದರ ಮಹತ್ತ್ವವನ್ನು ತಿಳಿಸಿ ಸದಸ್ಯರು ಇದನ್ನು ಕಾರ್ಯರೂಪಕ್ಕೆ ತರುವಂತೆ ಪ್ರೇರೇಪಿಸುತ್ತಾರೆ. ಇಂದಿನ ದಿನಗಳಲ್ಲಿ ಮಾನವ ಅಗತ್ಯಗಳ ಅಗಾಧತೆ ಎಷ್ಟಿದೆ ಎಂಬುದನ್ನು ಸಂಸ್ಥೆಯ ದಶಮಾನಗಳ ಸೇವೆ ತೋರಿಸುವ ಯತ್ನ ಮಾಡಿದೆ. ಆಹಾರ, ನೀರಿನಂಥ ಪ್ರಾಥಮಿಕ ಅಗತ್ಯಗಳು, ನೈರ್ಮಲ್ಯ, ರೋಗಿಗಳಿಗೆ ಒಳ್ಳೆಯ ಚಿಕಿತ್ಸೆ ಮುಂತಾದ ವಿಷಯಗಳಲ್ಲಿ ಸೇವಎ ಮಾಡಿದೆ.
ರೋಟರಿಯಲ್ಲಿ ರಾಯಭಾರಿಗಳು, ವಿದ್ವಾಂಸರು, ಯುವಕರಿಗಾಗಿಯೇ ಮಾಡಿರುವ ರೋಟರ್ಯಾಕ್ಟ್, ಇಂಟರ್ ಆ್ಯಕ್ಟ್, ಯುವ ವಿನಿಮಯ, ಜಿ.ಎಸ್.ಇ ಮುಂತಾದುವು ಸಂಸ್ಥೆಯ ವಿವಿಧ ಉದ್ದೇಶಗಳನ್ನು ಈಡೇರಿಸುವ ಅಂಗಗಳಾಗಿವೆ. ದಿ ರೊಟರಿಯನ್ ಎಂಬುದು ಈ ಸಂಸ್ಥೆಯ ಅಧಿಕೃತ ನಿಯತಕಾಲಿಕೆ. ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯ ಪ್ರಧಾನ ಕಚೇರಿ ಇಲಿನಾಯ್ಸ್ನ ಇವಾನ್ಸ್ಟನ್ನಲ್ಲಿದೆ.
ರೋಟರಿ ಅಂತಹ ಸಂಸ್ಥೆಗಳು ವಿಶಿಷ್ಟ ಧ್ಯೇಯಗಳನ್ನು ಹೊಂದಿ ಸಾಕಷ್ಟು ಕಾರ್ಯಮಾಡಿವೆ ಎಂಬುದರಲ್ಲಿ ಸಂದೇಹವಿಲ್ಲ. ಅಂತೆಯೇ ನಾನು ರೋಟರಿಯನ್ ಆಗಿದ್ದೇನೆ, ನಾನು ಪದಾಧಿಕಾರಿ ಎಂಬುದೇ ಪ್ರತಿಷ್ಠೆಯನ್ನಾಗಿ ಮಾಡಿಕೊಂಡು ಹೆಸರು ಮತ್ತು ಇನ್ನೇನಕ್ಕೊ ಇಂತಹವನ್ನು ಮೆಟ್ಟಿಲು ಮಾಡಿಕೊಳ್ಳುವ ಜನಕ್ಕೇನೂ ಕಡಿಮೆ ಇಲ್ಲ. ಉತ್ತಮ ಸದಭಿರುಚಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವವರೂ ಇದ್ದಾರೆ.
ಒಳ್ಳೆಯದು ಏನಿದೆಯೊ ಅದನ್ನು ಗೌರವಿಸಿ ಅಭಿನಂದಿಸೋಣ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಧುಬಾಲಾ

Fri Feb 25 , 2022
ಭಾರತೀಯ ಚಲನಚಿತ್ರರಂಗವನ್ನು ತನ್ನ ಅಪೂರ್ವ ಪ್ರತಿಭೆ ಮತ್ತು ಸೌಂಧರ್ಯಗಳಿಂದ ಬೆಳಗಿನ ಕಲಾವಿದರಲ್ಲಿ ಮಧುಬಾಲಾ ಪ್ರಮುಖ ಹೆಸರು. ಇಂದು ಅವರ ಸಂಸ್ಮರಣೆ ದಿನ. ಮಧುಬಾಲಾ 1933ರ ಫೆಬ್ರುವರಿ 14ರಂದು ಜನಿಸಿದರು. ಇಂದಿನ ಪಾಕಿಸ್ಥಾನದ ಭಾಗವಾಗಿರುವ ಪ್ರದೇಶದಿಂದ ಬದುಕನ್ನು ಅರಸಿ ಮುಂಬೈಗೆ ಬಂದ ಕುಟುಂಬಕ್ಕೆ ಸೇರಿದ ಮಧುಬಾಲಾ, ಸಂಸಾರ ನಿರ್ವಹಣೆಯ ಸಲುವಾಗಿ ಪುಟ್ಟ ವಯಸ್ಸಿನಿಂದಲೇ ಚಲನಚಿತ್ರಗಳಲ್ಲಿ ಅಭಿನಯಿಸತೊಡಗಿದರು. ಆ ಕಾಲದ ಎಲ್ಲ ಪ್ರಸಿದ್ಧ ನಟರಾದ ಅಶೋಕ್ ಕುಮಾರ್, ಭರತ್ ಭೂಷಣ್, ದಿಲೀಪ್ ಕುಮಾರ್, […]

Advertisement

Wordpress Social Share Plugin powered by Ultimatelysocial