ಭಾವುಕ ಕ್ಷಣಕ್ಕೆ ಬೆಂಗ್ಳೂರು ಏರ್​ಪೋರ್ಟ್​ ಸಾಕ್ಷಿ: ಯೂಕ್ರೇನ್​ನಿಂದ ಬಂದ ಮಕ್ಕಳನ್ನು ಬಾಚಿ ತಬ್ಬಿಕೊಂಡ ಪಾಲಕರು

ಬೆಂಗಳೂರು: ಮಕ್ಕಳು ಹಾಗೂ ಪಾಲಕರ ಮಿಲನದ ಭಾವುಕ ಕ್ಷಣವೊಂದಕ್ಕೆ ಭಾನುವಾರ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸಾಕ್ಷಿಯಾಯಿತು.

ಯೂಕ್ರೇನ್ ರಣಾಂಗಣದಲ್ಲಿ ಮಕ್ಕಳು ಜೀವಂತವಾಗಿ ಉಳಿಯುತ್ತಾರೋ ಇಲ್ಲವೋ ಎಂಬ ಆತಂಕಕ್ಕೀಡಾಗಿದ್ದ ಪಾಲಕರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ಮಕ್ಕಳನ್ನು ಕಣ್ಣೆದುರು ಕಂಡು ಕಣ್ಣಾಲಿಗಳು ತೇವಗೊಂಡವು.

ಬಂದೊಡನೆ ಬಾಚಿ ತಬ್ಬಿಕೊಂಡು ಮುತ್ತಿನ ಮಳೆಗರೆದ ದೃಶ್ಯ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಜನರನ್ನು ಕೆಲಕಾಲ ಮೂಕರನ್ನಾಗಿಸಿತು.

ಮಕ್ಕಳ ಮೈದವಡಿ, ತಲೆ ನೇವರಿಸಿ ಮುದ್ದಾಡಿದ ಪಾಲಕರು ಒಂದೆಡೆಯಾದರೆ ಮತ್ತೊಂದೆಡೆ ಪಾಲಕರನ್ನು ಕಂಡು ಉಕ್ಕಿಬರುತ್ತಿದ್ದ ಆನಂದಬಾಷ್ಪವನ್ನು ಅದಮಿಕೊಂಡು ಕೆಲಕಾಲ ಮೌನವಾಗಿದ್ದ ಮಕ್ಕಳು ಸಂತಸದ ನಗೆ ಬೀರಿದರು.

ತಾಯ್ನಾಡು ಸ್ಪರ್ಷಿಸಿದ ವಿದ್ಯಾರ್ಥಿಗಳು:
ಯೂಕ್ರೇನ್ ನ ಪಶ್ಚಿಮ ಭಾಗದ ಚರ್ನೆವೆಸ್ಟ್ ಯೂನಿವರ್ಸಿಟಿಯ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ರಾಜ್ಯದ 12 ವಿದ್ಯಾರ್ಥಿಗಳ ಮೊದಲ ತಂಡವನ್ನು ಹೊತ್ತ ವಿಮಾನ ಭಾನುವಾರ ಮುಂಜಾನೆ 8.45 ಕ್ಕೆ ಅಂತಾರಾಷ್ಟ್ರೀಯ ವಿಮಾನಕ್ಕೆ ಬಂದಿಳಿಯಿತು. ಮಕ್ಕಳ ಸ್ವಾಗತಕ್ಕೆ ದಾವಣಗೆರೆ, ಚಿತ್ರದುರ್ಗ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಪಾಲಕರು, ಸ್ನೇಹಿತರು ಹಾಗೂ ಬಂಧುಗಳು ಕಾಯುತ್ತಿದ್ದರು. 9 ಗಂಟೆಗೆ ಕಂದಾಯ ಸಚಿವ ಆರ್.ಆಶೋಕ್ ವಿದ್ಯಾರ್ಥಿಗಳ ತಂಡವನ್ನು ಕರೆತಂದು ಪಾಲಕರಿಗೊಪ್ಪಿಸಿದರು. ಪಾಲಕರನ್ನು ಎದುರುಗೊಳ್ಳುವ ಮುನ್ನ ಎಲ್ಲರೂ ರಾಷ್ಟ್ರ ಧ್ವಜ ಪ್ರದರ್ಶಿಸಿ ಭಾರತಾಂಬೆಗೆ ಜೈಕಾರ ಹಾಕಿದರು.

ನಮ್ಮ ಮಕ್ಕಳು ನಮ್ಮ ಮನೆಗೆ ಬಂದರು:
ನಮ್ಮ ಮಕ್ಕಳು ನಮ್ಮ ಮನೆಗೆ ಬಂದಿದ್ದಾರೆ, ಇದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ. ಹಂತಹಂತವಾಗಿ ಯೂಕ್ರೇನ್ ನಲ್ಲಿರುವ ಎಲ್ಲ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುವುದು ಯಾರೂ ಆತಂಕಪಡಬೇಕಿಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇದಕ್ಕೆ ಬದ್ದವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಮೊದಲ ತಂಡವಾಗಿ 12 ವಿದ್ಯಾರ್ಥಿಗಳನ್ನು ಮುಂಬೈ ವಿಮಾನ ನಿಲ್ದಾಣದಿಂದ ಕರೆತರಲಾಗಿದೆ. ದೇಶಕ್ಕೆ ಬಂದಿಳಿಯುವ ರಾಜ್ಯದವರನ್ನು ಆಯಾ ವಿಮಾನ ನಿಲ್ದಾಣಗಳಿಂದ ಸರ್ಕಾರದ ವತಿಯಿಂದ ಉಚಿತ ಟಿಕೆಟ್​ ಕೊಡಿಸಿ ಕರೆತರಲಾಗುವುದು ಎಂದು ಮಾಹಿತಿ ನೀಡಿದರು.

ಯುದ್ದದ ಮುನ್ಸೂಚನೆ ಇದ್ದರೂ ಯೂಕ್ರೇನ್ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಆಗಲೇ ನಮ್ಮ ಮಕ್ಕಳನ್ನು ಕಳುಹಿಸಿಕೊಡಬಹುದಿತ್ತು. ಈಗ ನೋಡಿ ಪರಿಸ್ಥಿತಿ ಹೇಗಿದೆ. ನನ್ನ ಮಗ ಇನ್ನು ಬಂದಿಲ್ಲ, ಯಾವಾಗ ಬರುತ್ತಾನೆ ಎಂಬ ಮಾಹಿತಿಯೂ ಇಲ್ಲ. ಇಲ್ಲಿ ನಾವು ಹೇಗೆ ಇರೋದು. ನನ್ನ ಮಗ ಬಂದಿಲ್ಲ. ಆದರೂ ಬಂದಿರುವ ಇನ್ನಿತರ ಮಕ್ಕಳನ್ನು ಕಾಣಲು ಬಂದಿದ್ದೇವೆ ಎನ್ನುತ್ತಾರೆ ಚೌಡಯ್ಯ ಮತ್ತು ಶೀಲಾ ದಂಪತಿ.

ನಾವು ಕನ್ನಡಿಗರು ಎನ್ನುವುದಕ್ಕಿಂತ ನಾವೆಲ್ಲ ಭಾರತೀಯರು ಎನ್ನಲು ಹೆಮ್ಮೆ ಎನಿಸುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವಿನಿಂದ ನಾವು ಸುರಕ್ಷಿತವಾಗಿ ಬಂದಿದ್ದೇವೆ. ನಮ್ಮಂತೆ ಮಿಕ್ಕ ಎಲ್ಲರೂ ಸುರಕ್ಷಿತವಾಗಿ ಬರಬೇಕೆಂಬುದು ನನ್ನ ಪ್ರಾರ್ಥನೆ. ನಮ್ಮ ದೇಶದ ಬಗ್ಗೆ ನಂಬಿಕೆ ಇತ್ತು ಆದ್ದರಿಂದ ನಾವು ಸೇಫ್ ಆಗಿದ್ದೇವೆ ಎಂದು ಕನಕಪುರ ವಿದ್ಯಾರ್ಥಿ ಇಂಚರ ಸಂತಸ ವ್ಯಕ್ತಪಡಿಸಿದರು.

ಮಾಧ್ಯಮಗಳಲ್ಲಿ ಯುದ್ದದ ಮಾಹಿತಿ ಕಂಡ ದಿನದಿಂದಲೂ ನಾವು ನಿದ್ರೆ ಮಾಡಿಲ್ಲ. ಪ್ರತಿ ಕ್ಷಣ ಮಗನದ್ದೆ ಚಿಂತೆ. ಅಲ್ಲಿ ಬಾಂಬ್ ದಾಳಿ ನಡೆಯುತ್ತಿದ್ದರೆ ನಮಗೆ ಜೀವವೇ ಬಾಯಿಗೆ ಬಂದಾಗುತ್ತಿತ್ತು. ಸದ್ಯ ಈಗ ನಿರಾಳವಾಗಿದೆ. ನನ್ನ ಮಗನಂತೆ ಅಲ್ಲಿ‌ ಸಿಲುಕಿರುವ ಪ್ರತಿಯೊಬ್ಬರು ಸುರಕ್ಷಿತವಾಗಿ ಬರಲಿ ಎಂದು ಆಶಿಸುತ್ತೇನೆ ದಾವಣಗೆರೆಯ ಮಹಮ್ ಶೌಕತ್ ಅಲಿ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Ola S1 Pro vs ಬಜಾಜ್ ಚೇತಕ್: ಯಾವ ಎಲೆಕ್ಟ್ರಿಕ್ ಸ್ಕೂಟರ್ ನಿಮಗೆ ಸೂಕ್ತವಾಗಿದೆ?

Sun Feb 27 , 2022
ಎರಡೂ ಬ್ರ್ಯಾಂಡ್‌ಗಳು ಬಲವಾಗಿ ಭಾರತೀಯವಾಗಿದ್ದರೂ, Ola S1 Pro ಡಚ್ ವಂಶಾವಳಿಯನ್ನು ಪಡೆಯುತ್ತದೆ ಆದರೆ ಬಜಾಜ್ ಚೇತಕ್ ಮೂಲಭೂತವಾಗಿ ಸ್ವದೇಶಿಯಾಗಿದೆ. ಆದಾಗ್ಯೂ, ಈ ಎರಡೂ ಬ್ರ್ಯಾಂಡ್‌ಗಳು ಮತ್ತು ಅವುಗಳ ಕೊಡುಗೆಗಳು ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ವಾಸಿಸುತ್ತವೆ, ಇದರಿಂದಾಗಿ ಅವುಗಳು ಪರಸ್ಪರರ ವಿರುದ್ಧ ಹೇಗೆ ಜೋಡಿಸಲ್ಪಟ್ಟಿವೆ ಎಂಬುದನ್ನು ಪರಿಶೀಲಿಸುವುದು ಸಂಪೂರ್ಣವಾಗಿ ಅವಶ್ಯಕವಾಗಿದೆ. 2020 ರಲ್ಲಿ ಐಕಾನಿಕ್ ಬ್ರ್ಯಾಂಡ್‌ನ ಪುನರುಜ್ಜೀವನದೊಂದಿಗೆ ಆಸಕ್ತಿಯನ್ನು ಹೆಚ್ಚಿಸುವ ಮೂಲಕ ಬಜಾಜ್ ಚೇತಕ್‌ನ ಖ್ಯಾತಿಯ ಕೀಲಿಯು ಭಾರತೀಯ […]

Advertisement

Wordpress Social Share Plugin powered by Ultimatelysocial