ಯು. ಆರ್. ಅನಂತಮೂರ್ತಿಕನ್ನಡ ಸಾಹಿತ್ಯಲೋಕದ ಮಹತ್ವದ ಲೇಖಕರಲ್ಲೊಬ್ಬರು.

ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡ ಸಾಹಿತ್ಯಲೋಕದ ಮಹತ್ವದ ಲೇಖಕರಲ್ಲೊಬ್ಬರು.
ಅನಂತಮೂರ್ತಿ ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21ರಂದು ರಾಜಗೋಪಾಲಾಚಾರ್ಯ-ಸತ್ಯಮ್ಮ ದಂಪತಿಗಳ ಹಿರಿಯ ಮಗನಾಗಿ ಜನಿಸಿದರು. ಅವರ ತಾತ ಪದ್ಮನಾಭಾಚಾರ್ಯ ಅಂಗಿ ತೊಡದೆ ಧೋತ್ರ ಹೊದೆದು ಜುಟ್ಟಿನಲ್ಲಿ ತುಳಸಿ ಮುಡಿಯುತ್ತಿದ್ದ ಶುದ್ಧ ವೈದಿಕ ಬ್ರಾಹ್ಮಣ, ಸಾಹಸಪ್ರಿಯ, ಅಲೆಮಾರಿ. ತಂದೆ ರಾಜಗೋಪಾಲಾಚಾರ್ಯರು ಆ ಕಾಲದಲ್ಲೇ ಲಂಡನ್ ಮೆಟ್ರಿಕ್ಯುಲೇಷನ್ ಹಾಗೂ ಕೇಂಬ್ರಿಡ್ಜ್ ಪರೀಕ್ಷೆ ಕಟ್ಟಿ ಉತ್ತೀರ್ಣರಾದವರು. ಅರ್ಚಕರಾಗಿ, ಶ್ಯಾನುಭೋಗರಾಗಿ, ಅಕೌಂಟೆಂಟ್ ಆಗಿ, ಪೋಸ್ಟ್ ಮಾಸ್ಟರ್, ಮಠದ ಪಾರುಪತ್ಯೇಗಾರ – ಹೀಗೆ ಹಲವು ಹುದ್ದೆಗಳಲ್ಲಿದ್ದು ವಿಶಿಷ್ಟ ವ್ಯಕ್ತಿತ್ವ ರೂಢಿಸಿಕೊಂಡವರು. ಗಾಂಧೀಜಿ, ರಾಜಾಜಿ ಅಂತಹವರ ಅಭಿಮಾನಿ. ಇಂಗ್ಲೀಷ್ ಸಾಹಿತ್ಯವನ್ನು ಸಾಕಷ್ಟು ಓದಿಕೊಂಡವರು. ಗಾಂಧೀಜಿಯವರ ‘ಹರಿಜನ’ ಪತ್ರಿಕೆ ತರಿಸುತ್ತಿದ್ದರು. ‘ಪುರುಷಸೂಕ್ತವನ್ನು’ ಪಠಿಸುತ್ತಿದ್ದರು. ಒಂದು ರೀತಿಯಲ್ಲಿ ರಾಜಗೊಪಾಲಾಚಾರ್ಯರು ಎರಡು ಪ್ರಪಂಚಗಳ ನಡುವೆ ಇದ್ದವರು. ಕೆಲವೊಮ್ಮೆ ಕ್ರಾಪು, ಮತ್ತೆ ಕೆಲವೊಮ್ಮೆ ಜುಟ್ಟು, ಇನ್ನು ಕೆಲವೊಮ್ಮೆ ಕ್ರಾಪು ಜುಟ್ಟು ಎರಡೂ ಇರೋದು. ಮುಂದೆ ಅನಂತಮೂರ್ತಿಯವರ ಕೃತಿಗಳಲ್ಲಿ ಪ್ರಧಾನವಾಗಿ ಕಂಡುಬರುವ conflictಗಳಿಗೆಲ್ಲ ಮೂಲವನ್ನು ನಾವು ಇಲ್ಲಿಯೇ ಗುರುತಿಸಬಹುದಾಗಿದೆ. ತಂದೆಯವರಿಗೆ ಮಗ ಅನಂತಮೂರ್ತಿ ಗಣಿತಶಾಸ್ತ್ರಜ್ಞನಾಗಬೇಕೆಂಬ ಆಸೆಯಿತ್ತು. ಆದರೆ ಮಗನ ಮನಸ್ಸು ಸಾಹಿತ್ಯದತ್ತ ಒಲಿದಾಗ ಅದಕ್ಕೆ ಅಡ್ಡಿಯುಂಟುಮಾಡಲಿಲ್ಲ.
ಸಂಪ್ರದಾಯವಾದಿಯ ಕರ್ಮಠತನದ ಹಠಮಾರಿತನವಾಗಲೀ, ಪರಂಪರೆಯ ಅರಿವಿಲ್ಲದ ಆಧುನಿಕತೆಯ ಸಿನಿಕತನವಾಗಲೀ ತಿರಸ್ಕಾರಯೋಗ್ಯ ಎಂದು ಪ್ರತಿಪಾದಿಸುತ್ತಾ ಕನ್ನಡ ಸಾಹಿತ್ಯಲೋಕದಲ್ಲಿ ನಮ್ಮ ಕಾಲದ ಸೃಜನಶೀಲ ಚಿಂತಕರು ಎಂದು ಹೆಸರು ಪಡೆದಿದ್ದವರು ಡಾ. ಯು. ಆರ್. ಅನಂತಮೂರ್ತಿಗಳು. ಅವರು ತಮ್ಮ ಕೃತಿಗಳ ಮೂಲಕ ನಮ್ಮನ್ನು ನಾವೇ ಒಳಹೊಕ್ಕು ನೋಡುವಂತೆ ಮಾಡುವ, ಸಮಕಾಲೀನ ವಾಸ್ತವ ದ್ವಂದ್ವಗಳಿಗೆ ನಮ್ಮನ್ನು ಕೈಹಿಡಿದು ಕರೆದೊಯ್ಯುವ ಸಂಗಾತಿಯಾಗುತ್ತಿದ್ದರು. ಏಕಕಾಲದಲ್ಲಿ ಒಳಗಿನವರಂತೆ ಆಪ್ತವಾಗಿಯೂ, ಹೊರಗಿನವರಂತೆ ವಿಶ್ಲೇಷಣಾತ್ಮಕ ಸಮಕಾಲೀನ ಸಮಸ್ಯೆಗಳ ಬಗ್ಗೆ ಚಿಂತಿಸುವವರಾಗಿಯೂ ಮೂಡುತ್ತಿದ್ದ ಅನಂತಮೂರ್ತಿ ಕನ್ನಡಸಂಸ್ಕೃತಿ ಕಂಡ ವಿಶಿಷ್ಟಪ್ರತಿಭೆ.
ಒಂದು ಕಡೆ ಮಠದ ಪರಿಸರ, ಅಲ್ಲಿನ ಪೂಜೆ ಪುನಸ್ಕಾರಗಳು, ಮತ್ತೊಂದೆಡೆ ಬರ್ನಾಡ್ ಷಾ, ಮತ್ತು ನಿರೀಶ್ವರವಾದಿ ಇಂಗರ್ ಸಾಲ್ ಬಗ್ಗೆ ಹೇಳುತ್ತಿದ್ದ ಸಿನ್ಹಾ ಮೇಷ್ಟರು, ದಾಳಿಂಬೆ ಮರದಡಿ ಕುಳಿತು ಕತೆ ಹೇಳುತ್ತಿದ್ದ ಅಬ್ಬಕ್ಕ, ಸಂಸ್ಕೃತ ಪಾಠ ಹೇಳುತ್ತಿದ್ದ ನಿಷ್ಠ ಸದಾಶಿವ ಭಟ್ಟರು, ಇಡೀ ಊರನ್ನು ಆಕ್ರಮಿಸಿ ಬಲಿ ತೆಗೆದುಕೊಳ್ಳುತ್ತಿದ್ದ ಪ್ಲೇಗ್ ಈ ಎಲ್ಲವೂ ಅನಂತಮೂರ್ತಿಯವರ ವ್ಯಕ್ತಿತ್ವವನ್ನು ಬಾಲ್ಯದಲ್ಲಿ ರೂಪಿಸಿದ ಸಂಗತಿಗಳು.
ಅನಂತಮೂರ್ತಿಯವರ ಪ್ರಾಥಮಿಕ ವಿದ್ಯಾಭ್ಯಾಸ ಮೇಳಿಗೆ, ಕೋಣಂದೂರು, ತೀರ್ಥಹಳ್ಳಿ ಶಾಲೆಗಳಲ್ಲಿ ನಡೆಯಿತು. ನಂತರ ಇಂಟರ್ ಮೀಡಿಯಟ್ ಓದಲು ಶಿವಮೊಗ್ಗದ ಸರ್ಕಾರಿ ಕಾಲೇಜು ಸೇರಿದರು. ಶಿವಮೊಗ್ಗದಲ್ಲಿದ್ದಾಗಲೇ ಕಾಗೋಡು ಸತ್ಯಾಗ್ರಹದಲ್ಲಿ ಅನಂತಮೂರ್ತಿ ಭಾಗಿಯಾಗಿದ್ದರು. ಇದು ಅವರ ಜೀವನದ ದಿಕ್ಕನ್ನೇ ಬದಲಿಸಿದ ಮಹತ್ವದ ಘಟನೆ. ಡಾಕ್ಟರ್ ಲೋಹಿಯಾರ ಕ್ರಾಂತಿಕಾರಕ ವೈಚಾರಿಕತೆ, ಶಾಂತವೇರಿ ಗೋಪಾಲಗೌಡರ ಆತ್ಮೀಯ ಒಡನಾಟ, ರಮಾನಂದ ಮಿಶ್ರ ಎಂಬ ಬಿಹಾರದ ರೈತ ನಾಯಕನ ಭಾಷಣ – ಇವೆಲ್ಲ ಅನಂತಮೂರ್ತಿಯ ಒಳಗಿನ ಚಿಂತಕನನ್ನು, ಬರಹಗಾರನನ್ನು ಬಡಿದೆಬ್ಬಿಸಿದ ಪ್ರೇರಣೆಗಳು.
ಮುಂದೆ ಅನಂತಮೂರ್ತಿ ಮೈಸೂರಿನಲ್ಲಿ ಬಿ.ಎ (ಆನರ್ಸ್) ಹಾಗೂ ಎಂ.ಎ (ಇಂಗ್ಲೀಷ್) ಪದವಿ ಪಡೆದು ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್ ವಿಶ್ವ ವಿದ್ಯಾಲಯದಿಂದ ಪಿಎಚ್.ಡಿ. ಪಡೆದರು. 1956ರಲ್ಲಿ ಹಾಸನದ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿದ ಅನಂತಮೂರ್ತಿ ನಂತರ ಮೈಸೂರಿನ ಮಹಾರಾಜ ಕಾಲೇಜು, ರೀಜನಲ್ ಕಾಲೇಜುಗಳಲ್ಲಿ ಕೆಲಕಾಲ ಕೆಲಸಮಾಡಿ ನಂತರ ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗ ಸೇರಿದರು. ರೀಡರ್ ಆಗಿ, ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ, ಕೇರಳದ ಕೊಟ್ಟಾಯಂ ಮಹಾತ್ಮಗಾಂಧಿ ವಿಶ್ವವಿದ್ಯಾಲಯದಲ್ಲಿ 1987ರಿಂದ 91ರವರೆಗೆ ಕುಲಪತಿಗಳಾಗಿ ಕಾರ್ಯನಿರ್ವಹಿಸಿದರು. ಅಮೆರಿಕದ ಅಯೋವಾ ವಿಶ್ವ ವಿದ್ಯಾಲಯ, ಟಫ್ಟ್ಸ್ ವಿಶ್ವವಿದ್ಯಾಲಯ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯ, ದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯ – ಮೊದಲಾದ ಕಡೆ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಅನಂತಮೂರ್ತಿ ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಅನಂತಮೂರ್ತಿಯವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ರವೀಂದ್ರಭಾರತೀ ವಿಶ್ವವಿದ್ಯಾಲಯ ಗೌರವ ಡಿಲಿಟ್ ಪ್ರಶಸ್ತಿ, ಹಿಮಾಚಲ ಪ್ರದೇಶ ಸರಕಾರದ ಶಿಖರ್ ಸನ್ಮಾನ್ ಪ್ರಶಸ್ತಿ, ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ – ಮೊದಲಾದ ಅನೇಕ ಪ್ರಶಸ್ತಿಗಳು ಸಂದಿದ್ದವು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಪತಿ ವಿಘ್ನೇಶ್ ಶಿವನ್‌ಗಾಗಿ ರೂಲ್ಸ್ ಬ್ರೇಕ್ ಮಾಡಿದ ನಟಿ ನಯನತಾರಾ!

Thu Dec 22 , 2022
  ನಟಿ ನಯನತಾರಾ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 20 ವರ್ಷಗಳಾಗುತ್ತಿವೆ. ಅದರಲ್ಲೂ ಕಳೆದ ವರ್ಷಗಳಲ್ಲಿ ಅವರಿಗೆ ಬೇರೆಯದೇ ಮನ್ನಣೆ ಸಿಕ್ಕಿದೆ. ದಕ್ಷಿಣ ಭಾರತದಲ್ಲಿ ಅವರನ್ನು ‘ಲೇಡಿ ಸೂಪರ್ ಸ್ಟಾರ್‌’ ಎಂದೇ ಕರೆಯುತ್ತಾರೆ. ಒಂದು ಸಿನಿಮಾಗೆ 4 ರಿಂದ 5 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಆದರೆ ಕೆಲ ವರ್ಷಗಳಿಂದೀಚೆಗೆ ಅವರು ಒಂದು ನಿಮಯವನ್ನು ಹಾಕಿಕೊಂಡಿದ್ದರು. ಅದನ್ನು ಅವರು ಬಹಳ ಮುತುವರ್ಜಿಯಿಂದ ಪಾಲಿಸುತ್ತಿದ್ದರು. ಆದರೆ ಇದೀಗ ಅದನ್ನು ಅವರು ಬ್ರೇಕ್ ಮಾಡಿದ್ದಾರೆ. […]

Advertisement

Wordpress Social Share Plugin powered by Ultimatelysocial