ವಿಧಾನಸಭೆ ಚುನಾವಣೆ, ಕಾಂಗ್ರೆಸ್ ಪದಾಧಿಕಾರಿಗಳ ನೇಮಕ,

 

ಬೆಂಗಳೂರು, ಫೆ.23- ವಿಧಾನಸಭೆ ಚುನಾವಣೆ, ಕಾಂಗ್ರೆಸ್ ಪದಾಧಿಕಾರಿಗಳ ನೇಮಕ, ಕೇಂದ್ರಿಯ ತನಿಖಾ ಸಂಸ್ಥೆಗಳ ದುರುಪಯೋಗದ ಮುನ್ಸೂಚನೆ, ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮು ಹಾಗೂ ಮತೀಯ ಶಕ್ತಿಗಳ ಹಿಂಸಾಚಾರ ಕುರಿತು ದೆಹಲಿಯಲ್ಲಿ ನಾಳೆ ಕಾಂಗ್ರೆಸ್ ನಾಯಕರ ಮಹತ್ವದ ಸಭೆ ನಡೆಯಲಿದೆ.ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ನಾಯಕರು ನಾಳೆ ಬೆಳಗ್ಗೆ 9.30ಕ್ಕೆ ದೆಹಲಿಗೆ ತೆರಳಲಿದ್ದು, ಸಂಜೆ 4.30ಕ್ಕೆ ಸಭೆ ನಡೆಯಲಿದೆ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜವಾಲ, ಕೆ.ಸಿ.ವೇಣುಗೋಪಾಲ್ ಸೇರಿದಂತೆ ಅನೇಕ ನಾಯಕರು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ನಡೆಸುವ ಪಾದಯಾತ್ರೆ ಕುರಿತು ನಾಳೆಯ ಸಭೆಯಲ್ಲಿ ಚರ್ಚೆ ನಡೆಯಲಿದೆ. ರಾಜ್ಯ ಮತ್ತು ಕೆಂದ್ರ ಸರ್ಕಾರಗಳ ವೈಪಲ್ಯದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಬೇಕಾದ ಪ್ರತಿಭಟನೆ, ಹೋರಾಟಗಳು, ರಾಜ್ಯದಲ್ಲಿ ಪಕ್ಷ ಸಂಘಟನೆ ಚುರುಕುಗೊಳಿಸುವುದು, ಸದಸ್ಯತ್ವ ನೋಂದಣಿ ಅಭಿಯಾನದ ಪ್ರಗತಿ ಸೇರಿದಂತೆ ಹಲವು ವಿಷಯಗಳು ನಾಳೆ ಚರ್ಚೆಯಾಗಲಿವೆ.ಪ್ರದೇಶ ಕಾಂಗ್ರೆಸ್ ಸಮಿತಿಗೆ ಕಳೆದ ನಾಲ್ಕು ವರ್ಷಗಳಿಂದಲೂ ಪದಾಧಿಕಾರಿಗಳಿಲ್ಲ. ಪಕ್ಷದ ವರಿಷ್ಠರು ಸಂಚಾಲಕರನ್ನು ನೇಮಿಸಿಕೊಂಡು ಕೆಲಸ ಮಾಡಿಸುತ್ತಿದ್ದಾರೆ. ಪಕ್ಷದಲ್ಲಿ ಸ್ಪಷ್ಟವಾದ ಸ್ಥಾನ ಮಾನ ಇಲ್ಲದೆ ಬಹುತೇಕ ಮಂದಿ ನಿರುತ್ಸಾಹಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಪಟ್ಟಿಗೆ ಅಂಗೀಕಾರ ನೀಡುವಂತೆ ಹೈಕಮಾಂಡ್ ನಾಯಕರಿಗೆ ಮನವಿ ಮಾಡುವ ಸಾಧ್ಯತೆ ಇದೆ.ರಾಜ್ಯದ ಕರಾವಳಿ ಭಾಗದಲ್ಲಿ ಕಿಡಿಯಾದ ಹಿಜಾಬ್ ವಿವಾದ ಜ್ವಾಲಾಮುಖಿಯಾಗಿ ದೇಶಾದ್ಯಂತ ವ್ಯಾಪಿಸಿದೆ. ಅಂತರ ರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ. ವಿವಾದದ ಹಿನ್ನೆಲೆಯಲ್ಲೂ ಕಾಂಗ್ರೆಸ್ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರದ ಸಿಬಿಐ, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಸೇರಿದಂತೆ ಅನೇಕ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಅದರ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂಬ ಮಾಹಿತಿಯನ್ನು ಹೈಕಮಾಂಡ್ ಈ ಮೊದಲೇ ರಾಜ್ಯ ನಾಯಕರಿಗೆ ತಿಳಿಸಿತ್ತು.ಕೇಂದ್ರ ಸರ್ಕಾರದ ಪಟ್ಟಿಯಲ್ಲಿ ಯಾವೇಲ್ಲಾ ನಾಯಕರ ಹೆಸರುಗಳಿವೆ ಎಂಬ ಮಾಹಿತಿ ಹೈಕಮಾಂಡ್‍ಗೆ ಸಿಕ್ಕಿದ್ದು, ಆ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ರಾಜ್ಯ ಕಾಂಗ್ರೆಸಿಗರನ್ನು ದೆಹಲಿಗೆ ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಬಹಳ ವರ್ಷಗಳ ನಂತರ ಹೈಕಮಾಂಡ್ ರಾಜ್ಯದ ಪ್ರಮುಖ ನಾಯಕರ ನಿಯೋಗದ ಜೊತೆ ದೆಹಲಿಯಲ್ಲಿ ಸಭೆ ನಡೆಸುತ್ತಿದೆ.ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಕಾರದಲ್ಲಿದ್ದಾಗ ದೆಹಲಿಯಿಂದ ಆಗಮಿಸುವ ನಾಯಕರು ಬೆಂಗಳೂರಿನಲ್ಲಿ ಪ್ರಮುಖ ನಾಯಕರ ಜೊತೆ ಸಮಾಲೋಚನೆ ನಡೆಸುತ್ತಿದ್ದರು. ಬಳಿಕ ಸರ್ಕಾರ ಪತನವಾದ ಮೇಲೆ ಈ ರೀತಿಯ ಸಭೆಗಳು ನಿಂತೇ ಹೋಗಿದ್ದವು. ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ಎಲ್ಲನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಹೈಕಮಾಂಡ್ ಸಮ್ಮುಖದಲ್ಲಿ ಸಭೆ ನಡೆಸಲು ಬಹಳಷ್ಟು ಬಾರಿ ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ.ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಜೊತೆ ಹೈಕಮಾಂಡ್ ಸಮಾಲೋಚನೆ ನಡೆಸಿತ್ತು. ಉಳಿದ ನಾಯಕರ ಸಭೆ ನಡೆದಿರಲಿಲ್ಲ. ಬಹಳ ದಿನಗಳ ನಂತರ ಇದೇ ಮೊದಲ ಬಾರಿಗೆ ರಾಜ್ಯ ಕಾಂಗ್ರೆಸ್ ನಾಯಕರ ನಿಯೋಗ ಹೈಕಮಾಂಡ್ ಜೊತೆ ಚರ್ಚೆ ನಡೆಸಲಿದೆ. ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದ್ದು, ಕೈ ಪಡೆ ಈಗಿನಿಂದಲೇ ಪೂರ್ವ ತಯಾರಿ ಆರಂಭಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್ನಿಂದ ದೆಹಲಿಗೆ ಬಂದಿಳಿದ ವಿದ್ಯಾರ್ಥಿಗಳು !

Wed Feb 23 , 2022
ಮಂಗಳವಾರ ರಾತ್ರಿ ದೆಹಲಿಯಿಂದ ಗುಜರಾತ್‌ಗೆ ಬಂದಿರುವ ಭಾರತೀಯ ವಿದ್ಯಾರ್ಥಿಗಳು, ಹೆಚ್ಚಾಗಿ ಮೆಡಿಸಿನ್ ಓದುತ್ತಿರುವವರು ಉಕ್ರೇನ್‌ನಿಂದ ಇಲ್ಲಿಗೆ ಆಗಮಿಸಿದರು ಮತ್ತು ರಷ್ಯಾ ಮತ್ತು ಪೂರ್ವ ಯುರೋಪಿಯನ್ ದೇಶದ ನಡುವಿನ ಉದ್ವಿಗ್ನತೆಯ ನಡುವೆ ತಮ್ಮ ತಾಯ್ನಾಡಿಗೆ ಮರಳಲು ಸಂತೋಷವಾಗಿದೆ ಎಂದು ಹೇಳಿದರು. ಹೆಚ್ಚಿನ ವಿದ್ಯಾರ್ಥಿಗಳು, ಪಿಟಿಐ ಅವರು ಆಗಮಿಸಿದ ಕೂಡಲೇ ಮಾತನಾಡುತ್ತಾ, ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ನೀಡಿದ ಸಲಹೆಯನ್ನು ಅನುಸರಿಸಿದ್ದೇವೆ ಎಂದು ಹೇಳಿದರು. 22 ವರ್ಷದ ಅನಿಲ್ ರಪ್ರಿಯಾ, ಖಾರ್ಕಿವ್ ನಗರದ […]

Advertisement

Wordpress Social Share Plugin powered by Ultimatelysocial