Wheat Stock: ಜನರಿಗೆ ಮೋದಿ ಮತ್ತೊಂದು ಸಿಹಿ ಸುದ್ದಿ; ಗೋಧಿ ಬೆಲೆ ಇಳಿಕೆಗೆ ಮಹತ್ವದ ಕ್ರಮ

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಸಕಲ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಸಜ್ಜಾಗುತ್ತಿದ್ದು, ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆಯ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಅಡುಗೆ ಅನಿಲ ಸಿಲಿಂಡರ್‌ ಬೆಲೆ 200 ರೂ. ಇಳಿಕೆ (LPG Price Cut), ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆ ಇಳಿಕೆ, 75 ಲಕ್ಷ ಮನೆಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ಸೇರಿ ಹಲವು ಕ್ರಮ ತೆಗೆದುಕೊಂಡಿದ್ದಾರೆ.

ಇದರ ಬೆನ್ನಲ್ಲೇ, ಗೋಧಿ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ ದೇಶದಲ್ಲಿ ಗೋಧಿ ದಾಸ್ತಾನು ಮಿತಿಯನ್ನು (Wheat Stock) ಇಳಿಕೆ ಮಾಡಿದೆ.

ದೇಶದಲ್ಲಿ ಗೋಧಿ ಬೆಲೆ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳು ಗೋದಾಮುಗಳಲ್ಲಿ ಗರಿಷ್ಠ 3 ಸಾವಿರ ಟನ್‌ ಗೋಧಿ ದಾಸ್ತಾನು ಮಾಡುವ ಗರಿಷ್ಠ ಮಿತಿಯನ್ನು ಈಗ 2 ಸಾವಿರ ಟನ್‌ಗೆ ಇಳಿಕೆ ಮಾಡಲಾಗಿದೆ. ಇದರಿಂದಾಗಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಗೋಧಿ ಪೂರೈಕೆಯಾಗಿ, ಗೋಧಿಯ ಬೆಲೆ ನಿಯಂತ್ರಣ ಮಾಡಬೇಕು ಎಂಬುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ. ತಕ್ಷಣದಿಂದಲೇ ನಿಯಮ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ.

 

ಗೋಧಿ ಬೆಲೆ ಎಷ್ಟು ಏರಿಕೆ?

ಗೋಧಿ ಬೆಲೆಯು ಕಳೆದ ಹಲವು ತಿಂಗಳಿಂದ ನಿಧಾನವಾಗಿ ಏರಿಕೆಯಾಗುತ್ತಲೇ ಇದೆ. ಕಳೆದ ಒಂದು ತಿಂಗಳಲ್ಲಿಯೇ ಒಂದು ಕ್ವಿಂಟಾಲ್‌ ಗೋಧಿ ಬೆಲೆಯು ಶೇ.4ರಷ್ಟು ಏರಿಕೆಯಾಗಿ, ಒಂದು ಕ್ವಿಂಟಾಲ್‌ ಗೋಧಿಗೆ 2,550 ರೂ. ಆಗಿದೆ. ಇನ್ನು ಚಿಲ್ಲರೆ ಮಾರುಕಟ್ಟೆಯಲ್ಲಂತೂ ಒಂದು ವರ್ಷದಲ್ಲಿ ಕೆ.ಜಿ ಗೋಧಿ ಬೆಲೆಯಲ್ಲಿ ಶೇ.10ರಷ್ಟು ಏರಿಕೆಯಾಗಿ ಒಂದು ಕೆ.ಜಿ ಗೋಧಿಗೆ 30 ರೂ. ತೆರಬೇಕಾಗಿದೆ. ಇನ್ನು ಸಗಟು ಮಾರುಕಟ್ಟೆಯಲ್ಲಿ ಶೇ.4.2ರಷ್ಟು ಏರಿಕೆಯೊಂದಿಗೆ ಕ್ವಿಂಟಾಲ್‌ಗೆ 2,668 ರೂ. ಆಗಿದೆ. ಇದರಿಂದಾಗಿ ಕೇಂದ್ರ ಸರ್ಕಾರವು ಗೋಧಿ ದಾಸ್ತಾನು ಮಿತಿಯನ್ನು ಇಳಿಕೆ ಮಾಡಿದೆ.

ಕೇಂದ್ರ ಸರ್ಕಾರವು ಕಳೆದ ಫೆಬ್ರವರಿಯಲ್ಲಿ ಕೂಡ ಗೋಧಿ ಬೆಲೆ ಇಳಿಕೆಗೆ ಕ್ರಮ ತೆಗೆದುಕೊಂಡಿತ್ತು. ದಾಸ್ತಾನಿನಲ್ಲಿರುವ ಗೋಧಿಯನ್ನು ಮುಕ್ತಾ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಕ್ರಮ ತೆಗೆದುಕೊಂಡ ಕಾರಣ ಗೋಧಿ ಬೆಲೆಯಲ್ಲಿ ಶೇ.10ರಷ್ಟು ಇಳಿಕೆಯಾಗಿತ್ತು. ದೇಶದಲ್ಲಿ ಹೆಚ್ಚು ಗೋಧಿ ಬೆಳೆಯುವ ಪಂಜಾಬ್‌, ಗುಜರಾತ್‌, ಮಧ್ಯಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಮಳೆಯ ಕೊರತೆಯಿಂದಾಗಿ ಗೋಧಿ ಕೊರತೆ ಉಂಟಾಗಿದೆ ಎಂದು ತಿಳಿದುಬಂದಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್‌ಪಿಜಿ ಸಿಲಿಂಡರ್‌ ಜತೆಗೆ ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನೂ ಕಡಿಮೆ ಮಾಡಲಿದೆ ಎನ್ನಲಾಗುತ್ತಿದೆ. ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ಅಡಿಯಲ್ಲಿ ದೇಶದ ಕೋಟ್ಯಂತರ ರೈತರಿಗೆ ವಾರ್ಷಿಕವಾಗಿ ನೀಡುವ 6 ಸಾವಿರ ರೂ. ಸಹಾಯಧನದ ಮೊತ್ತವನ್ನು ಹೆಚ್ಚಿಸುವುದು ಕೂಡ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಆ ಮೂಲಕ ಮುಂದಿನ ಚುನಾವಣೆಯಲ್ಲಿ ಜನರ ವಿಶ್ವಾಸ ಗಳಿಸುವುದು ಸರ್ಕಾರದ ಗುರಿಯಾಗಿದೆ ಎಂದು ತಿಳಿದುಬಂದಿದೆ.

 

Please follow and like us:

tmadmin

Leave a Reply

Your email address will not be published. Required fields are marked *

Next Post

ತಮಿಳುನಾಡು: ಮಹಿಳೆಯರಿಗೆ ಮಾಸಿಕ 1,000 ರೂ. ಒದಗಿಸುವ ಯೋಜನೆಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಚಾಲನೆ

Fri Sep 15 , 2023
ಕರ್ನಾಟಕದಲ್ಲಿ ಜಾರಿಯಲ್ಲಿರುವಂತೆಯೇ ಮಹಿಳೆಯರಿಗೆ ಮಾಸಿಕ ಆರ್ಥಿಕ ನೆರವು ಯೋಜನೆ ಒದಗಿಸುವ ಯೋಜನೆ ನೆರೆಯ ತಮಿಳುನಾಡಿನಲ್ಲಿಯೂ ಚಾಲನೆಗೊಂಡಿದೆ. ದ್ರಾವಿಡ ಐಕಾನ್ ಸಿ ಎನ್ ಅಣ್ಣಾದೊರೈ ಅವರ ಜನ್ಮದಿನವಾದ ಇಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮಹಿಳೆಯರಿಗೆ ಮಾಸಿಕ 1,000 ರೂ. ಆರ್ಥಿಕ ನೆರವು ಒದಗಿಸುವ ಯೋಜನೆಗೆ ಚಾಲನೆ ನೀಡಿದರು. ಚೆನ್ನೈ: ಕರ್ನಾಟಕದಲ್ಲಿ ಜಾರಿಯಲ್ಲಿರುವಂತೆಯೇ ಮಹಿಳೆಯರಿಗೆ ಮಾಸಿಕ ಆರ್ಥಿಕ ನೆರವು ಯೋಜನೆ ಒದಗಿಸುವ ಯೋಜನೆ ನೆರೆಯ ತಮಿಳುನಾಡಿನಲ್ಲಿಯೂ ಚಾಲನೆಗೊಂಡಿದೆ. ದ್ರಾವಿಡ ಐಕಾನ್ ಸಿ […]

Advertisement

Wordpress Social Share Plugin powered by Ultimatelysocial